Tuesday 19 July 2011

ವರದಿ

ಬೆಳಗಾವಿಯಲ್ಲಿ ಸಾಹಿತ್ಯ ವಿಚಾರ ಸಂಕಿರಣ

ಜಿನದತ್ತ ದೇಸಾಯಿಯವರು ಕನ್ನಡದ ಹಿರಿಯ ಕವಿಗಳಲ್ಲಿ ಒಬ್ಬರು. ಸುಮಾರು ೬೦ ವರ್ಷಗಳಿಂದ ಕಾವ್ಯ ವ್ಯವಸಾಯ ಮಾಡುತ್ತ ಬಂದಿರುವ ಅವರು ಜಿ ಎಸ್ ಎಸ್, ಕಣವಿ ಮೊದಲಾದವರ ಸಮಕಾಲೀನರು. ಅವರ ಮೊದಲ ಕವನ ಸಂಕಲನ "ನೀಲಾಂಜನ" ೧೯೫೪ರಲ್ಲಿ ಪ್ರಕಟವಾಯಿತು. ಅವರ ಸಾಹಿತ್ಯ ಗುರುಗಳಾದ ವಿ.ಕೃ.ಗೋಕಾಕರು ಆ ಸಂಕಲನಕ್ಕೆ ಮುನ್ನುಡಿ ಬರೆದಿದ್ದರು.

ಕಾರಣಾಂತರದಿಂದ ಕನ್ನಡ ಸಾಹಿತ್ಯ ಅಧ್ಯಯನ ಕೈಬಿಟ್ಟು, ಅವರು ಕಾನೂನು ಪದವಿ ಓದಬೇಕಾಯಿತು. ಅನಂತರ ವಕೀಲಿ ವೃತ್ತಿ ಕೈಗೊಂಡು, ಬಳಿಕ ನ್ಯಾಯಾಧೀಶರಾದರು. ಹೀಗಾಗಿ ಅವರ ಸಾಹಿತ್ಯ ವ್ಯವಸಾಯ ಹಿಂದೆ ಬಿತ್ತು. ಆದರೂ ಅವರ ಆಂತರ‍್ಯದೊಳಗೆ ಒಬ್ಬ ಕವಿ ತುಡಿಯುತ್ತಲೇ ಇದ್ದ.

ಈ ಬ್ಲಾಗಿಗ ಉಪನ್ಯಾಸ ನೀಡುತ್ತಿರುವುದು.

ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ನಿವೃತ್ತರಾಗಿ, ಮತ್ತೆ ಕಾವ್ಯ ವ್ಯವಸಾಯಕ್ಕೆ ಇಳಿದರು. ಇದುವರೆಗೆ ಆರು ಸಂಕಲನಗಳನ್ನು ತಂದಿರುವ ಅವರ "ಸಮಗ್ರ ಕಾವ್ಯ"ವು ಇತ್ತೀಚೆಗೆ ಬಿಡುಗಡೆಯಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮೊನ್ನೆ ದಿನಾಂಕ ೧೭ರಂದು ಬೆಳಗಾವಿಯ ಸಾಹಿತ್ಯ ಭವನದಲ್ಲಿ ದೇಸಾಯರ ಸಾಹಿತ್ಯದ ಕುರಿತು ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಿತ್ತು. "ಜಿನದತ್ತ ದೇಸಾಯಿಯವರ ಕಾವ್ಯದಲ್ಲಿ ಪ್ರತಿಮಾ ವಿನ್ಯಾಸ" ಎಂಬ ವಿಷಯದ ಕುರಿತು ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದರು. ಕಾರ್ಯಕ್ರಮ ತುಂಬ ಚೆನ್ನಾಗಿ, ಅಚ್ಚುಕಟ್ಟಾಗಿ ನಡೆಯಿತು. ಚಂದ್ರಕಾಂತ ಕುಸನೂರ, ನಾ.ಮೊಗಸಾಲೆ, ಬಸವರಾಜ ವಕ್ಕುಂದ, ಸರಜೂ ಕಾಟ್ಕರ‍್, ರಾಮಕೃಷ್ಣ ಮರಾಠೆ, ಎಚ್. ಬಿ. ಕೋಲ್ಕಾರ‍್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿನದತ್ತ ದೇಸಾಯಿಯವರು ಕಾರ್ಯಕ್ರಮ ಪೂರ್ತಿ ಉಪಸ್ಥಿತರಿದ್ದು ಆನಂದಿಸಿದರು.

Friday 15 July 2011

ಕವಿ ಎಚ್. ಎಸ್. ವಿ. ಅವರೊಂದಿಗೆ ಒಂದು ಸಂಜೆ

ಹಿರಿಯ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ದಾಸ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದರು. ಬಹುಕಾಲದ ಆತ್ಮೀಯ ಗೆಳೆಯ ಎಂಬ ಪ್ರೀತಿಯಿಂದ ಕರೆದ ಕೂಡಲೇ ಆಕಾಶವಾಣಿಗೆ ಬಂದರು. ನಮ್ಮೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸಾಹಿತ್ಯ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಆಕಾಶವಾಣಿಗಾಗಿ ಮಾತಾಡಿಸುವ ಆಲೋಚನೆ ಬಂದಿತು. ನೇರವಾಗಿ ಅವರನ್ನು ಸ್ಟುಡಿಯೋಗೆ ಆಹ್ವಾನಿಸಿದೆವು. ಸಮಕಾಲೀನ ಸಾಹಿತ್ಯ, ಕಾವ್ಯ ಮತ್ತು ಕಾವ್ಯವನ್ನು ಬಗೆವ ಬಗೆ ಮುಂತಾದವುಗಳ ಕುರಿತು ಅರ್ಧ ಗಂಟೆ ಗಂಭೀರ ಚರ್ಚೆ ಸಾಗಿತು.

"  ಕಾವ್ಯವೆಂದರೆ ಒಂದು ನದಿಯ ಹಾಗೆ. ನದಿಯಲ್ಲಿ ಬೆರಳಿಟ್ಟರೆ  ಇಡೀ ನದಿ ಅನುಭವಕ್ಕೆ ಬರುವ ಹಾಗೆ ಒಂದು ಕವಿತೆ ಓದಿದರೆ ಕಾವ್ಯಚರಿತ್ರೆಯೇ ಅನಾವರಣವಾಗಬೇಕು. ಈ ಸಾತತ್ಯ ಕಂಡು ಬಂದರೆ ಮಾತ್ರ ಕಾವ್ಯದ  ಭಾರ ಮನವರಿಕೆಯಾಗುವುದು"
(ಚಿತ್ರದಲ್ಲಿ ಡಾ. ವಸಂತಕುಮಾರ ಪೆರ್ಲ ಮತ್ತು ಡಾ. ಎಚ್. ಎಸ್. ವಿ.)
ವಾರದ ಅತಿಥಿಯಾಗಿ ಶ್ರೀ ಆಸ್ಕರ‍್  ಫೆರ್ನಾಂಡಿಸ್

ಮಂಗಳೂರು ಆಕಾಶವಾಣಿಯಲ್ಲಿ "ವಾರದ ಅತಿಥಿ" ಎಂಬ ಕಾರ್ಯಕ್ರಮವೊಂದನ್ನು ನಾವು ಪ್ರಸಾರ ಮಾಡುತ್ತಿದ್ದು, ಈ ವಾರ ನಮ್ಮ ಅತಿಥಿಯಾಗಿ ಆಗಮಿಸಿದವರು ರಾಜ್ಯ ಸಭಾ ಸದಸ್ಯರಾದ ಶ್ರೀ ಆಸ್ಕರ‍್ ‌ಫೆರ್ನಾಂಡಿಸ್ ಅವರು.  ಅವರ ಬದುಕು ಮತ್ತು ಸಾಧನೆಯ ಕುರಿತು ಸುಮಾರು ಒಂದು ಗಂಟೆ ಅವಧಿಯ ಸಂದರ್ಶನ ಧ್ವನಿಮುದ್ರಿಸಿಕೊಂಡೆವು. ತಮ್ಮ ಬಾಲ್ಯ , ಶಿಕ್ಷಣ ಹಾಗೂ ಸಾಧನೆಯ ಕುರಿತು ಅವರು ಮಾತಾಡಿದರು. ಅವರು ನಿಲಯಕ್ಕೆ ಬಂದಾಗಿನ ಕೆಲವು ಸನ್ನಿವೇಶಗಳನ್ನು ಸಹೋದ್ಯೋಗಿ ಗೆಳೆಯ ಕೆ. ಅಶೋಕ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು.

ಶ್ರೀ ಆಸ್ಕರ‍್ ಫೆರ್ನಾಂಡಿಸ್, ಡಾ. ಸದಾನಂದ ಪೆರ್ಲ, ಶ್ರೀ ಸದಾನಂದ ಹೊಳ್ಳ ಹಾಗೂ ಡಾ. ವಸಂತಕುಮಾರ ಪೆರ್ಲ

ಸ್ಟುಡಿಯೋದಲ್ಲಿ ಶ್ರೀ ಆಸ್ಕರ‍್  ಅವರನ್ನು ಸಂದರ್ಶಿಸುತ್ತಿರುವ ಈ ಬ್ಲಾಗಿಗ 

ಸಂದರ್ಶನದ ಇನ್ನೊಂದು ಸನ್ನಿವೇಶ

Sunday 3 July 2011

ಸಂದರ್ಶನ

                           ನೃತ್ಯಗುರುಗಳೊಂದಿಗೆ ಅರ್ಧ ದಿನ 

ಮಾಸ್ಟರ್ ವಿಠಲ್ ಕರಾವಳಿ ಕರ್ನಾಟಕದ ಹಿರಿಯ ನೃತ್ಯಗುರುಗಳಲ್ಲಿ ಒಬ್ಬರು. ೮೪ ವರ್ಷ ವಯಸ್ಸಿನ ಅವರು ಈಗ ರಂಗದಿಂದ ಹಿಂದೆ ಸರಿದಿದ್ದರೂ, ಭರತನಾಟ್ಯವೆಂದರೆ ಇವತ್ತಿಗೂ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಭರತನಾಟ್ಯದ ಶಾಸ್ತ್ರೀಯತೆ ಮತ್ತು ಪ್ರದರ್ಶನದ ವಿಚಾರ ಬಂದಾಗ ಉದಾಹರಣೆ ಮತ್ತು ಪ್ರಾತ್ಯಕ್ಷಿಕೆ ಸಹಿತ ವಿವರಿಸುತ್ತಾರೆ. ಶುದ್ಧ ಶಾಸ್ತ್ರೀಯವಾದ ಈ ಕಲೆ ಅದರ ಸಂವಿಧಾನದಲ್ಲೇ ಇರಬೇಕು, ಆದರೆ ಕಾಲಿಕವಾದ ಕೆಲವು ಪ್ರಭಾವಗಳು ತಲೆದೋರಿದರೆ ಅದರಿಂದ ತಪ್ಪೇನೂ ಇಲ್ಲ ಎನ್ನುತ್ತಾರೆ.  ಬಹುಶ: ಅವರ ಮಾತಿನಲ್ಲಿ ಇದನ್ನು 'ಶೈಲಿ' ಎಂದು ಕರೆಯಬಹುದು.    

ಅರ್ಥಾ ಪೆರ್ಲ, ಮಾಸ್ಟರ್ ವಿಠಲ್ ಮತ್ತು ಈ ಬ್ಲಾಗಿಗ 

ಕರ್ನಾಟಕ ಕಲಾಶ್ರೀ, ನಾಟ್ಯ ಚಕ್ರವರ್ತಿ, ನಾಟ್ಯ ಕಲಾನಿಧಿ, ನಾಟ್ಯ ಕಲಾವಿಶಾರದ, ನಾಟ್ಯ ಕಲಾಸಿಂಧು, ನಾಟ್ಯಕೌಸ್ತುಭ ಮೊದಲಾದ ಪ್ರಶಸ್ತಿ-ಬಿರುದುಗಳು ಅವರಿಗೆ ಸಂದಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಭರತನೃತ್ಯ ಕಲಿಸಿ ಸಾರ್ಥಕತೆ ಅನುಭವಿಸಿದ್ದಾರೆ ('ಭರತ' ಎಂಬ ಶಬ್ದವು  ಭಾವ, ರಾಗ, ತಾಳ ಎಂಬ ಮೂರು ಶಬ್ದಗಳಿಂದ ವ್ಯುತ್ಪನ್ನಗೊಂಡಿದೆ ಎನ್ನುತ್ತಾರೆ ಅವರು).  ಚಲನಚಿತ್ರ ಅಭಿನೇತ್ರಿ ದಿ.ಕಲ್ಪನಾ, ಮೂಡಬಿದ್ರೆಯ ಡಾ. ಎಂ.ಮೋಹನ ಆಳ್ವ ಮೊದಲಾದವರು ವಿಠಲ್  ಅವರ ಶಿಷ್ಯರಲ್ಲಿ ಕೆಲವರು. ನೃತ್ಯರೂಪಕಗಳ ರಚನೆ ಮತ್ತು ಪ್ರದರ್ಶನಗಳಿಗಾಗಿ ಹೆಸರಾಗಿರುವ ಅವರು ೧೯೮೧ರಲ್ಲಿ ಸ್ವೀಡನ್ ದೇಶಕ್ಕೆ ಹೋಗಿ ಸುಮಾರು ಮೂರು ತಿಂಗಳ ಕಾಲ ಅಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿ ದೇಶಕ್ಕೆ ಕೀರ್ತಿ ತಂದರು. 

ಮಾಸ್ಟರ್ ವಿಠಲ್ ಅವರನ್ನು ಸಂದರ್ಶಿಸುತ್ತಿರುವ ಅರ್ಥಾ ಪೆರ್ಲ 

ಇವತ್ತು ನನ್ನ ಮಗಳು ಅರ್ಥಾಳೊಂದಿಗೆ ಮಂಗಳೂರಿನ ಕಾವೂರಿನಲ್ಲಿರುವ ವಿಠಲ್ ಅವರ ಮನೆಗೆ ಹೋಗಿದ್ದೆ. ಮಗಳು ಪತ್ರಿಕೆಯೊಂದಕ್ಕೆ ಅವರ ಸಂದರ್ಶನ ನಡೆಸಬೇಕಾಗಿತ್ತು. ಅವಳು ಭರತನಾಟ್ಯದಲ್ಲಿ ವಿದ್ವತ್ ಮಾಡುತ್ತಿದ್ದಾಳೆ (ಬೇರೆ ಗುರುಗಳ ಬಳಿ).  ಇಬ್ಬರೂ ಭರತನಾಟ್ಯದ ಕುರಿತು ಮಾತಾಡುವಾಗ ನನಗೇನು ಕೆಲಸ? ಸುಮ್ಮನೆ ಕುಳಿತು ಕೇಳುತ್ತಿದ್ದೆ.  ಸುಮಾರು ಎರಡು ಗಂಟೆ ಹೊತ್ತು ವಿಠಲ್ ಅವರು ಶಾಸ್ತ್ರೀಯ ನೃತ್ಯದ ಆಳ ಅಗಲಗಳ ಕುರಿತು  ಮಾತಾಡುವಾಗ ನೃತ್ಯಲೋಕಕ್ಕೆ ಹೋದ ಅನುಭವ ಆಯಿತು.
   
 (ಚಿತ್ರಗಳು: ಕೆ.ಎಸ್.ವೇಣುವಿನೋದ).