Monday, 6 February 2012

ಒಂದು ಸಾಹಿತ್ಯ ವಿಚಾರಸಂಕಿರಣ 


ಪುತ್ತೂರಿನ ಕರ್ನಾಟಕ ಸಂಘವು ತನ್ನ ವಾರ್ಷಿಕ ಸಾಹಿತ್ಯ-ಸಂಸ್ಕೃತಿ ಸಲ್ಲಾಪದ ಅಂಗವಾಗಿ ನಿನ್ನೆ  ಫೆಬ್ರವರಿ ೫ ರಂದು ಸಾಹಿತ್ಯ ಗೋಷ್ಠಿಯನ್ನು ಹಮ್ಮಿಕೊಂಡಿತ್ತು. 'ಮೂರು ಗಮನಾರ್ಹ ಕೃತಿಗಳು' ಎಂಬ ಶೀರ್ಷಿಕೆಯಲ್ಲಿ ಡಿ.ಕೆ.ಚೌಟರ ಮಿತ್ತಬೈಲು ಯಮುನಕ್ಕೆ, ಗುರುರಾಜ ಮಾರ್ಪಳ್ಳಿಯವರ ಖ್ಯಾಲ್ ಖಯಾಲುಗಳು ಮತ್ತು ನಾಗವೇಣಿಯವರ ಗಾಂಧಿ ಬಂದ ಕೃತಿಗಳನ್ನು ಚರ್ಚೆಗೆ ಎತ್ತಿಕೊಳ್ಳಲಾಗಿತ್ತು. ಡಾ.ರಾಜಶ್ರೀ, ಆನಂದ ಕೊಡಿಮ್ಬಳ ಮತ್ತು ಅನುಪಮಾ ಪ್ರಸಾದ್ ಅವರು ಕೃತಿ ವಿಮರ್ಶೆ ನಡೆಸಿಕೊಟ್ಟರು.



ನಾನು ಸಭೆಯ ಅಧ್ಯಕ್ಷತೆ ವಹಿಸಿದ್ದೆ. ಸಾಹಿತ್ಯ ಕೃತಿಗಳನ್ನು ವಿಮರ್ಶಕರು ಮತ್ತು ಸಾಹಿತ್ಯಪ್ರಿಯರು ಚರ್ಚಿಸಿದರೆ ಅವುಗಳ ಶಕ್ತಿ ಮತ್ತು ಮಿತಿಗಳನ್ನು ಅರಿತಂತಾಗುತ್ತದೆ, ಸಾಹಿತ್ಯೇತರರು ಚರ್ಚೆಗೆ ಎತ್ತಿಕೊಂಡಾಗ ಅದು ಚೌಕಟ್ಟಿನಿಂದ ಆಚೆಗೆ ನಿಂತು ತಪ್ಪು ತಿಳಿವಳಿಕೆಗಳಿಗೆ ಕಾರಣವಾಗುತ್ತದೆ, ಈ ವಿಚಾರಸಂಕಿರಣ ಒಂದು ಒಳ್ಳೆಯ ಪ್ರಯತ್ನ ಎಂದು ನಾನು ಹೇಳಿದೆ. 
ಒಂದು ಸಾಹಿತ್ಯ ವಿಚಾರಸಂಕಿರಣ 


ಪುತ್ತೂರಿನ ಕರ್ನಾಟಕ ಸಂಘವು ತನ್ನ ವಾರ್ಷಿಕ ಸಾಹಿತ್ಯ-ಸಂಸ್ಕೃತಿ ಸಲ್ಲಾಪದ ಅಂಗವಾಗಿ ಮೊನ್ನೆ ಫೆಬ್ರವರಿ ೫ ರಂದು ಸಾಹಿತ್ಯ ಗೋಷ್ಠಿಯನ್ನು ಹಮ್ಮಿಕೊಂಡಿತ್ತು. 'ಮೂರು ಗಮನಾರ್ಹ ಕೃತಿಗಳು' ಎಂಬ ಶೀರ್ಷಿಕೆಯಲ್ಲಿ ಡಿ.ಕೆ.ಚೌಟರ ಮಿತ್ತಬೈಲು ಯಮುನಕ್ಕೆ, ಗುರುರಾಜ ಮಾರ್ಪಳ್ಳಿಯವರ ಖ್ಯಾಲ್ ಖಯಾಲುಗಳು ಮತ್ತು ನಾಗವೇಣಿಯವರ ಗಾಂಧಿ ಬಂದ ಕೃತಿಗಳನ್ನು ಚರ್ಚೆಗೆ ಎತ್ತಿಕೊಳ್ಳಲಾಗಿತ್ತು. ಡಾ.ರಾಜಶ್ರೀ, ಆನಂದ ಕೊಡಿಮ್ಬಳ ಮತ್ತು ಅನುಪಮಾ ಪ್ರಸಾದ್ ಅವರು ಕೃತಿ ವಿಮರ್ಶೆ ನಡೆಸಿಕೊಟ್ಟರು.



ನಾನು ಸಭೆಯ ಅಧ್ಯಕ್ಷತೆ ವಹಿಸಿದ್ದೆ. ಸಾಹಿತ್ಯ ಕೃತಿಗಳನ್ನು ವಿಮರ್ಶಕರು ಮತ್ತು ಸಾಹಿತ್ಯಪ್ರಿಯರು ಚರ್ಚಿಸಿದರೆ ಅವುಗಳ ಶಕ್ತಿ ಮತ್ತು ಮಿತಿಗಳನ್ನು ಅರಿತಂತಾಗುತ್ತದೆ, ಸಾಹಿತ್ಯೇತರರು ಚರ್ಚೆಗೆ ಎತ್ತಿಕೊಂಡಾಗ ಅದು ಚೌಕಟ್ಟಿನಿಂದ ಆಚೆಗೆ ನಿಂತು ತಪ್ಪು ತಿಳಿವಳಿಕೆಗಳಿಗೆ ಕಾರಣವಾಗುತ್ತದೆ, ಈ ವಿಚಾರಸಂಕಿರಣ ಒಂದು ಒಳ್ಳೆಯ ಪ್ರಯತ್ನ ಎಂದು ನಾನು ಹೇಳಿದೆ. 

Thursday, 2 February 2012



                                                ತಿರೂರಿನ ಕುಂಜನ್ ಮಹೋತ್ಸವದಲ್ಲಿ ನಾನು 


 ಸುಮಾರು ೧೫ನೆ ಶತಮಾನದಲ್ಲಿ ಜೀವಿಸಿದ್ದ ಎಳುತ್ತಚ್ಚನ್ ಕುಂಜನ್ ಮಲಯಾಳಂ ಭಾಷೆ ಮತ್ತು ಸಾಹಿತ್ಯದ ಪಿತಾಮಹನೆಂದು ಕರೆಸಿಕೊಂಡ ಮಹಾನುಭಾವ. ದೇಸೀಯ ಸಂಪನ್ನತೆಯಿಂದ ಕೂಡಿ ಸಹಜ ಕವಿಯಾಗಿದ್ದ ಈತ ಮಲಯಾಳಂನ ಜಾನಪದ ಧಾರೆಯ ಪ್ರವರ್ತಕನೂ ಹೌದು. 
ಕುಂಜನ್  ಹುಟ್ಟಿದನೆಂದು ಭಾವಿಸಲಾಗಿರುವ ಜಾಗದಲ್ಲಿ ನಿರ್ಮಿಸಿರುವ ಆತನ ಸ್ಮಾರಕ 

ಈ ಮಹಾಕವಿಯ ನೆನಪಿಗೆ ಆತನ ಹುಟ್ಟೂರು ಕೇರಳದ ತಿರೂರಿನಲ್ಲಿ ಕುಂಜನ್ ಸ್ಮಾರಕ ಟ್ರಸ್ಟ್ ಅನ್ನು ಹುಟ್ಟು ಹಾಕಿ ಪ್ರತಿ ವರ್ಷ ದೊಡ್ಡ ಮಟ್ಟದ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್ ಈಗ ಆ ಟ್ರಸ್ಟ್ ನ ಅಧ್ಯಕ್ಷರು. ಈ ವರ್ಷ ಕುಂಜನ್ ಉತ್ಸವ ನಿನ್ನೆ ಫೆಬ್ರವರಿ ೧ ರಿಂದ ಆರಂಭಗೊಂಡು ೫ರ ವರೆಗೆ ನಡೆಯುತ್ತಿದೆ.
ಬಹುಭಾಷಾ ಕವಿಗೂಷ್ಟಿಯಲ್ಲಿ ಕವಿತೆ ಮಂಡಿಸುತ್ತಿರುವ  ನಾನು 

ದಕ್ಷಿಣ ಮಧ್ಯ ಸಂಸ್ಕೃತಿ ಇಲಾಖೆಯ ವತಿಯಿಂದ ನಿನ್ನೆ ದಿ.೧ ರಂದು ದಕ್ಷಿಣ ಭಾರತ ಮಟ್ಟದ ವಿವಿಧ ಭಾಷೆಗಳ ಕವಿಗೋಷ್ಟಿಯೊಂದನ್ನು ಆಯೋಜಿಸಲಾಗಿತ್ತು. ಕನ್ನಡವನ್ನು ಪ್ರತಿನಿಧಿಸಿ ನಾನು ಕವಿತೆಗಳನ್ನು ವಾಚಿಸಿದೆ. ಕನ್ನಡ ಭಾಷೆ-ಸಾಹಿತ್ಯದ ಸಂಕ್ಷಿಪ್ತ ಚರಿತ್ರೆ, ಕನ್ನಡ ಕಾವ್ಯದ ಪ್ರಸ್ತುತ ದಿಕ್ಕುದೆಸೆ ಇತ್ಯಾದಿಗಳನ್ನು ವಿವರಿಸಿ ಕವಿತೆಗಳ ಇಂಗ್ಲಿಷ್ ಅನುವಾದಗಳನ್ನೂ ಓದಿದೆ. ಕುಂಜನ್ ಮಹೋತ್ಸವವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಿದರು. 

ಡಾ.ಚಂದ್ರಶೇಖರ  ಕಂಬಾರರೊಂದಿಗೆ  ನಾನು  ಪಕ್ಕದಲ್ಲಿ ಮಾತಾದುತ್ತಿರುವವರು  ಮಲಯಾಳಂ ಕವಿ ಗೋಪಿ 

ಮಲಯಾಳಂನ ಪ್ರಸಿದ್ಧ ಕವಿ ಅಕ್ಕಿತ್ತ್ಹಾನ್ ಕವಿಗೊಷ್ಟಿಯನ್ನು ಉದ್ಘಾಟಿಸಿ ಮಾತಾಡಿದರು. ಮೂರು ಗಂಟೆಗಳ ಕಾಲ ನಡೆದ ಕವಿಗೋಷ್ಠಿಯನ್ನು ಸಾವಿರಾರು ಮಂದಿ ಪ್ರೇಕ್ಷಕರು ಕೂತು ಆಲಿಸಿ ಆನಂದಿಸಿದ್ದು ಮರೆಯಲಾರದ ಒಂದು ಅನುಭವ.  
ಮಲಯಾಳಂ ಸಾಹಿತಿ ಎಂ. ಟಿ. ವಾಸುದೇವನ್ ನಾಯರ್  ಜೊತೆ ನಾನು 
   

Wednesday, 4 January 2012

ಬರಹಗಾರರ ಸಮ್ಮೇಳನ 


ಮೊನ್ನೆ ಹೊಸವರ್ಷದ ಮೊದಲ ದಿನ ಕುಂದಾಪುರದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬರಹಗಾರರ ಸಮ್ಮೇಳನ ಜರುಗಿತು.  ಅದೇ ದಿನ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿತ್ತು.  ಉದ್ಘಾಟನೆ ಮಾಡಿದ ಬಳಿಕ ನಾನು ಮಾಧ್ಯಮ ಸಾಹಿತ್ಯದ ಬಗ್ಗೆ ಮಾತಾಡಿದೆ. ಕೇವಲ ಇನ್ನೂರು ವರ್ಷಗಳ ಇತಿಹಾಸವಿರುವ ಮುದ್ರಣ ಮಾಧ್ಯಮ ಈ ಎಲೆಕ್ಟ್ರೋನಿಕ್ ಯುಗದಲ್ಲಿ ಬದಲಾವಣೆಯ ಸಂಧಿ ಘಟ್ಟದಲ್ಲಿದೆಯೆಂದು ನಾನು ಪ್ರತಿಪಾದಿಸಿದೆ. ಚಿತ್ರದಲ್ಲಿ ಸಾಹಿತಿ  ಕೆ .ವಿ.ಕೃಷ್ಣಯ್ಯ, ಲೇಖಕ ಎನ್.ಜಿ.ಪಟವರ್ಧನ್, ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್.ಸಾಮಗ ಮತ್ತು 'ಕುಂದಪ್ರಭ' ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಅವರನ್ನು ಕಾಣಬಹುದು.

Monday, 2 January 2012

ಕವನ ಸಂಕಲನಗಳ ಬಿಡುಗಡೆ



ಮಂಗಳೂರು ತಾಲೂಕು ಚುಟಕ ಸಾಹಿತ್ಯ ಪರಿಷತ್ ವತಿಯಿಂದ ನಿನ್ನೆ ನಗರದಲ್ಲಿ ಶೈಲಜಾ ಪುದುಕೋಳಿ ಅವರ "ಕಣಿವೆಯಾಳದ ಕಾವ್ಯ" ಹಾಗೂ ಶಶಿಕಲಾ ಕದ್ರಿಯವರ "ಇಳಿಹೊತ್ತಿನ ಕೈ ತುತ್ತು" ಕವನ ಸಂಕಲನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದೆ. ಅಧ್ಯಕ್ಷತೆಯನ್ನು ಸುರತ್ಕಲ್ ಗೋವಿಂದದಾಸ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ. ಕೃಷ್ಣಮೂರ್ತಿ ಪಿ. ವಹಿಸಿದ್ದರು. ಭಾವದಿಂದ ಧ್ವನಿ, ಧ್ವನಿಯಿಂದ ಸೂಚ್ಯತೆ, ಸೂಚ್ಯತೆಯಿಂದ ಅರ್ಥವಿಪುಲತೆ- ಆಗ ಮಾತ್ರ ಒಳ್ಳೆಯ ಕಾವ್ಯ ಮೂಡಿಬರುತ್ತದೆ ಎಂಬುದು ನನ್ನ ಮಾತಿನ ಮುಖ್ಯಾಂಶವಾಗಿತ್ತು. ಪುಸ್ತಕ ಬಿಡುಗಡೆಯ ಬಳಿಕ ವಿವಿದ ಕವಿಗಳ ಭಾಗವಹಿಸುವಿಕೆಯಲ್ಲಿ ಕವಿಗೋಷ್ಠಿ ಆಯೋಜಿಸಲಾಗಿತ್ತು.


Saturday, 17 December 2011

ಒಂದು ಸಂದರ್ಶನ 

ಪ್ರಸ್ತುತ ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿ ಮತ್ತು ಸಂಸದರಾಗಿ  ಮಂಗಳೂರು ಲೋಕಸಭಾ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಶ್ರೀ ವಿ. ಧನಂಜಯಕುಮಾರ್ ಅವರು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ವೇನೂರಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿಗಾಗಿ ಅವರನ್ನು ಸಂದರ್ಶಿಸಿದೆ. ಪಕ್ಕದಲ್ಲಿ ನನ್ನ ಸಹೋದ್ಯೋಗಿ ಕೆ.ಅಶೋಕ್ ಧ್ವನಿಮುದ್ರಿಸುತ್ತಿದ್ದಾರೆ.

Monday, 12 December 2011

ಗಂಗಾವತಿಯಲ್ಲಿ ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ 

"ರಾಜ ಎಲ್ಲ ಗೆದ್ದ ಗಜದಂತೆ ಸಿಂಹಾಸನದ ಬಳಿಗೆ ಬಂದ..."
ಅಖಿಲ ಭಾರತ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೊನ್ನೆ ದಿನಾಂಕ ೯,೧೦ ಹಾಗೂ ೧೧ ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್ ಅವರ ಅಧ್ಯಕ್ಷತೆಯಲ್ಲಿ  ಜರುಗಿತು.  ೧೧ ರಂದು ಬೆಳಗ್ಗೆ ೯.೩೦ ಕ್ಕೆ ಪ್ರಧಾನ ಕವಿಗೋಷ್ಠಿ ಏರ್ಪಾಟಾಗಿತ್ತು. ಕವಿಗೋಷ್ಠಿಯಲ್ಲಿ ಭಾಗವಹಿಸಲು ನಾನು ಆಹ್ವಾನಿತನಾಗಿದ್ದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಡಾ. ಬುದ್ದಣ್ಣ  ಹಿಂಗಮಿರೆ ವಹಿಸಿದ್ದರು. ನಾನು ನನ್ನ "ಭೋಜರಾಜನ ಸಿಂಹಾಸನ" ಎಂಬ ಕವಿತೆ ಓದಿದೆ. ಪ್ರೇಕ್ಷಕರಿಗೆ ಅದು ತಲಪಿತು ಎಂಬುದು ಕರತಾಡನದಿಂದ ತಿಳಿಯಿತು. ಕವಿತೆ ಓದುತ್ತಿರುವ ಎರಡು ದೃಶ್ಯಗಳನ್ನು ನನ್ನ ಬ್ಲಾಗ್ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇನೆ.

"ರಾಜ ಒಂದೇ ಒಂದು ಹೆಜ್ಜೆ ಸಿಂಹಾಸನದತ್ತ ಎತ್ತಿಡಬೇಕು... ಅಷ್ಟರಲ್ಲಿ ಶತ್ರುಗಳು ದಾಳಿಯಿಟ್ಟ ಸುದ್ದಿ ಬಂತು!"

Friday, 9 December 2011

ನನ್ನ ಬ್ಲಾಗ್ ಓದುಗರಿಗಾಗಿ ಇವತ್ತು ಒಂದು ಕವನ ಕೊಡ್ತಾ ಇದೇನೆ. ಕೆತ್ತುವುದರಲ್ಲೇ ತಲ್ಲೀನನಾದ ನನ್ನ ಕುರಿತು ಶಿಲೆ ನನ್ನನ್ನೇ ಮಾತಾಡಿಸಿತು. 

                                                            ಕೆತ್ತಲು ಹೋದೆ 

ಕೆತ್ತಲು ಹೋದೆ 
ಕೆತ್ತುತ್ತ ಕೆತ್ತುತ್ತ ಕೆತ್ತುತ್ತಲೇ ಕುಳಿತೆ 
ಮೊದಲು ತಲೆ 
ಆಮೇಲೆ ಕಣ್ಣು ಮೂಗು ಕಿವಿ ಬಾಯಿ 
ಕುತ್ತಿಗೆ 
ಭುಜ ಹೊಟ್ಟೆ ಹೊಕ್ಕುಳ 
ತೊಡೆ ಕಾಲು 
ಕೊನೆಗೆ ಪಾದ 
ತಲೆಯೆತ್ತಿ ನಿಲ್ಲಬೇಕು 
ಅದಕ್ಕೆ ಬೆಂಬಲಕ್ಕಾಗಿ ಬೆನ್ನು 
ಹೀಗೆ ಮಾಡುತ್ತಾ ಮಾಡುತ್ತಾ ಇರುವಾಗ 

ಮೂರ್ತಿ ಕೇಳಿತು:
ನೀನೇನು ಮಾಡುತ್ತಿರುವೆ?
ನಾನು ಒಂದು ಕ್ಷಣ ಸ್ತಬ್ಧ 
ಅಪ್ಪನನ್ನೇ ಮಗು ಕೇಳಿದಂತೆ ಪ್ರಶ್ನೆ 
ಮೂರ್ತಿ ಹೇಳಿತು- 
ನೀನು ಮಾಡುತ್ತಿಲ್ಲ ನನ್ನ 
ನಾನು ಮೊದಲು ಇದ್ದೆ 
ಈಗಲೂ ಇದ್ದೇನೆ 
ನಾಳೆಯೂ ಇರುತ್ತೇನೆ 
ನೀನು ಮಾಡುತ್ತಿರುವೆ ನಿನ್ನನ್ನೆ
ಎಚ್ಚರ,
ಒಂದೊಂದು ಪೆಟ್ಟನ್ನು ಜಾಗ್ರತೆಯಿಂದ ಹಾಕು!

Sunday, 4 December 2011

ಸೀಮಾ ಸುಂಕ ಇಲಾಖೆಯ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ



ಮಂಗಳೂರಿನ ಪಣಂಬೂರಿನಲ್ಲಿರುವ ಸೀಮಾ ಸುಂಕ (ಕಸ್ಟಮ್ಸ್) ಕಛೇರಿಯಲ್ಲಿ ನವೆಂಬರ‍್ ದಿನಾಂಕ ೩೦ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಆಯುಕ್ತರಾದ ವಿ.ಎಸ್.ಎನ್.ಚೌಧರಿ ಅಧ್ಯಕ್ಷತೆ ವಹಿಸಿದ್ದರು. ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕನ್ನಡ ಭಾಷೆಯ ಚರಿತ್ರೆ ಮತ್ತು ಅದರ ಇವತ್ತಿನ ಸ್ಥಿತಿಗತಿಯ ಬಗ್ಗೆ ಮಾತನಾಡಿದೆ. ಕನ್ನಡಿಗರು ಸಾರ್ವಜನಿಕ ಸಭೆಸಮಾರಂಭಗಳಲ್ಲಿ ಮಾತಾಡುವಾಗ ನಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತಾಡುತ್ತಾರೆ ಅಲ್ಲದೆ ಇತರ ಭಾಷಿಕರೊಂದಿಗೆ ಹೋಲಿಸಿ ನಮ್ಮ ದೌರ್ಬಲ್ಯಗಳನ್ನು ಎತ್ತಿ ಆಡುತ್ತಾರೆ. ಇದರಿಂದ ಕನ್ನಡಿಗರ ನೈತಿಕತೆ ಕುಂದುವುದಲ್ಲದೆ ಇತರ ಭಾಷಿಕರ ಮುಂದೆ ಹಾಸ್ಯಾಸ್ಪದವಾಗಬೇಕಾಗುತ್ತದೆ. ಈ ಪರಿಸ್ಥಿತಿ ತಪ್ಪಬೇಕು, ನಾವು ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಎತ್ತಿ ಆಡುವಂತಾಗಬೇಕು ಎಂದು ನಾನು ಉಪನ್ಯಾಸದಲ್ಲಿ ಹೇಳಿದೆ.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವಿತ್ತು. ಶ್ರೀ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಶ್ರೀ ಮಹೇಶ ಭಟ್ ಕಾರ್ಯಕ್ರಮ ನಿರೂಪಿಸಿದರು. ಮನೋರಂಜನಾ ಸಂಘದ ಕಾರ್ಯದರ್ಶಿ ಎಚ್.ಎನ್. ರವಿಶಂಕರ್ ವಂದನಾರ್ಪಣೆಗೈದರು. 
ಉಡುಪಿಯಲ್ಲಿ ಮಕ್ಕಳ ಗಮಕ ಸಮ್ಮೇಳನ

ಮೊನ್ನೆ ನವಂಬರ‍್ ದಿನಾಂಕ ೨೬ ಹಾಗು ೨೭ರಂದು ಉಡುಪಿಯ ರಾಜಾಂಗಣದಲ್ಲಿ ಅಖಿಲ ಕರ್ನಾಟಕ ಎರಡನೆಯ ಮಕ್ಕಳ ಗಮಕ ಸಮ್ಮೇಳನ ಜರುಗಿತು. ಸಮಾರೋಪ ಸಮಾರಂಭಕ್ಕೆ ನನ್ನನ್ನು ಮುಖ್ಯಅತಿಥಿಯಾಗಿ ಆಹ್ವಾನಿಸಿದ್ದರು. ಸಮಾರಂಭದ ಮೂರು ದೃಶ್ಯಗಳನ್ನು ಕಾಣಬಹುದು...

ಕರ್ನಾಟಕ ಗಮಕಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಆರ‍್. ಸತ್ಯನಾರಾಯಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ  ಅಧ್ಯ ಕ್ಷರಾದ
ಶ್ರೀ ಪ್ರದೀಪ್ ಕುಮಾರ‍್ ಕಲ್ಕೂರ ಸ್ಮರಣಿಕೆಯನ್ನು ನೀಡುತ್ತಿದ್ದಾರೆ.

Wednesday, 16 November 2011

ಮಕ್ಕಳ ದಿನಾಚರಣೆಯ ಅಂಗವಾಗಿ

ಆಗಮನ ಶಾಲೆಯಲ್ಲಿ ಛದ್ಮವೇಷ ಸ್ಫರ್ಧೆ




ಆಗಮನ ಶಾಲೆಯಲ್ಲಿ ನಿನ್ನೆ ಛದ್ಮವೇಷ ಸ್ಪರ್ಧೆ ಜರುಗಿತು. ಸುಮಾರು ನಲವತ್ತೈದು ಮಂದಿ ಮಕ್ಕಳು ಭಾಗವಹಿಸಿದ್ದರು. ಆಗಮ ಪುರೋಹಿತರ ವೇಷ ಧರಿಸಿ ಪೂಜೆ ಮಾಡಿ ಪ್ರಸಾದ ವಿತರಣೆಯನ್ನೂ ಮಾಡಿದ. ಕೊನೆಯಲ್ಲಿ ಫಲಿತಾಂಶ ಘೋಷಿಸಿದಾಗ ಅವನಿಗೆ ಮೊದಲ ಸ್ಥಾನ ಬಂದಿತ್ತು. ಈ ಎರಡು ಭಾವಚಿತ್ರಗಳು ಛದ್ಮವೇಷ ಸ್ಫರ್ಧೆಯ ಸನ್ನಿವೇಶಗಳನ್ನು ತೋರಿಸುತ್ತವೆ.

Friday, 11 November 2011

"ಮಂಗಳೂರು" ಸ್ಥಳನಾಮದ ವ್ಯುತ್ಪತ್ತಿ

"ಮಂಗಳೂರು" ಎನ್ನುವ ಸ್ಥಳನಾಮ ಮೇರ್ಕಳ ಎನ್ನುವ ಶಬ್ದದಿಂದ ನಿಷ್ಪನ್ನಗೊಂಡಿರಬೇಕೆಂದು ತೋರುತ್ತದೆ. ಮೇರರ+ಕಳ ಮೇರ್ಕಳ. ಮೇರರು ವಾಸಿಸುತ್ತಿದ್ದ ಸ್ಥಳ ಎಂದು ಇದರ ಅರ್ಥ (ಭಟ್ಟರ+ಕಳ>ಭಟ್ಕಳ ಆದಂತೆ). ಕರಾವಳಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಬ್ಯಾರಿಗಳು ಮಂಗಳೂರನ್ನು ಇವತ್ತಿಗೂ ತಮ್ಮ ಬ್ಯಾರಿ ಭಾಷೆಯಲ್ಲಿ ’ಮೈಕ್ಕಲ’ ಎಂದೇ ಕರೆಯುತ್ತಾರೆ. ಮೇರ್ಕಳ ಎಂಬುದು ಬ್ಯಾರಿ ಭಾಷೆಯಲ್ಲಿ ಅಪಭ್ರಂಶಗೊಂಡು ಮೈಕ್ಕಲ ಆಗಿರಬೇಕು : ಮೇರ್ಕಳ>ಮೈಕ್ಕಲ.

ಕರಾವಳಿಯಲ್ಲಿ ಕನ್ನಡದ ಪ್ರಾದುರ್ಭಾವದ ಬಳಿಕ ಮೇರ್ಕಳ ಅಥವಾ ಮೈಕ್ಕಲ ಸಂಸ್ಕೃತೀಕರಣಗೊಂಡು ’ಮಂಗಲ’ ಆಗಿರುವ ಸಾಧ್ಯತೆ ಇದೆ : ಮೇರ್ಕಳ>ಮೈಕ್ಕಲ>ಮಂಗಲ. ಕ್ರಮೇಣ ಮಂಗಲಕ್ಕೆ ’ಊರು’ ಸೇರಿ ಮಂಗಳೂರು ಆಗಿರಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೈರ್ಕಳ, ಕುಡಾಲ ಮೇರ್ಕಳ ಎಂಬ ಊರುಗಳು ಇವತ್ತಿಗೂ ಇವೆ. ಪರಿಶಿಷ್ಟ ಜಾತಿಯ ಮೇರರು ಕರಾವಳಿಯ ಮೂಲನಿವಾಸಿಗರೂ ಆಗಿದ್ದಾರೆ.

Saturday, 20 August 2011

ರಾಷ್ಟ್ರೀಯ ಕವಿಗೋಷ್ಟಿ



ರವೀಂದ್ರನಾಥ ಟಾಗೋರರ ೧೫೦ ನೇ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಇದೇ ದಿನಾಂಕ ೮ರ ಸೋಮವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಸಭಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಸರ್ವಭಾಷಾ ಕವಿಸಮ್ಮೇಳನ ಏರ‍್ಪಡಿಸಿತ್ತು. ತುಳು ಭಾಷೆಯನ್ನು ಪ್ರತಿನಿಧಿಸಿ ನಾನು, ತುಳುಭಾಷೆ, ಸಾಹಿತ್ಯದ ಸಂಕ್ಷಿಪ್ತ ಚರಿತ್ರೆಯನ್ನು ತಿಳಿಸಿ ಸುಮಾರು ಹತ್ತು ನಿಮಿಷ ಸ್ವರಚಿತ ಕವನಗಳನ್ನು ವಾಚಿಸಿದೆ. ಹಿರಿಯ ಕನ್ನಡ ಕವಿಗಳಾದ ಪ್ರೊ| ಜಿ. ಎಸ್. ಸಿದ್ಧಲಿಂಗಯ್ಯ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು.


Tuesday, 16 August 2011

ಕಾಸರಗೋಡಿನಲ್ಲಿ ಅರ್ಥಾಳ ಸಂಗೀತ ಕಛೇರಿ


ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೋತ್ಸವದ ಅಂಗವಾಗಿ ದಿನಾಂಕ ೧೫ರ ಸೋಮವಾರದಂದು  ಕಾಸರಗೋಡಿನ ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯುವ ಕಲಾವಿದೆ ಅರ್ಥಾ ಪೆರ್ಲ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ಜರುಗಿತು. ಪಕ್ಕವಾದ್ಯದಲ್ಲಿ ಬಳ್ಳಪದವು ವಿದ್ವಾನ್ ಶ್ರೀ ಯೋಗೀಶ ಶರ್ಮ (ಮೃದಂಗ) ಹಾಗೂ ಶ್ರೀ ಪ್ರಭಾಕರ ಕುಂಜಾರು (ಪಿಟೀಲು) ಸಹಕರಿಸಿದರು.

ಉಡುಪಿ ಪರ‍್ಯಾಯ ಸ್ವಾಮೀಜಿಯವರ ಸಂದರ್ಶನ


ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿ ಪರ‍್ಯಾಯ ಮಠಾಧೀಶರ ಚಿಂತನವನ್ನು ಮಂಗಳೂರು ಆಕಾಶವಾಣಿಯು ಪ್ರಸಾರ ಮಾಡುತ್ತ ಬಂದಿದೆ. ನಾಡಿದ್ದು ದಿನಾಂಕ ೨೨ರ ಸೋಮವಾರದಂದು ಶ್ರೀಕೃಷ್ಣ ಜನ್ಮಾಷ್ಟಮಿ. ಪರ‍್ಯಾಯ ಶಿರೂರು ಮಾಠಾಧೀಶರ ಸಂದೇಶವನ್ನು ಧ್ವನಿಮುದ್ರಿಸಲು ಇಂದು ಉಡುಪಿಗೆ ಹೋಗಿದ್ದೆವು. ಧ್ವನಿಮುದ್ರಣದ ಬಳಿಕ ಸ್ವಾಮೀಜಿ ಫಲಮಂತ್ರಾಕ್ಷತೆ ನೀಡಿ ನಮ್ನನ್ನು ಹರಸಿದರು. ಪಕ್ಕದಲ್ಲಿ ಪ್ರಸಾರ ನಿರ್ವಾಹಕ ಡಾ|| ಬಿ. ಎಂ. ಶರಭೇಂದ್ರಸ್ವಾಮಿ ಇದ್ದಾರೆ.

Tuesday, 19 July 2011

ವರದಿ

ಬೆಳಗಾವಿಯಲ್ಲಿ ಸಾಹಿತ್ಯ ವಿಚಾರ ಸಂಕಿರಣ

ಜಿನದತ್ತ ದೇಸಾಯಿಯವರು ಕನ್ನಡದ ಹಿರಿಯ ಕವಿಗಳಲ್ಲಿ ಒಬ್ಬರು. ಸುಮಾರು ೬೦ ವರ್ಷಗಳಿಂದ ಕಾವ್ಯ ವ್ಯವಸಾಯ ಮಾಡುತ್ತ ಬಂದಿರುವ ಅವರು ಜಿ ಎಸ್ ಎಸ್, ಕಣವಿ ಮೊದಲಾದವರ ಸಮಕಾಲೀನರು. ಅವರ ಮೊದಲ ಕವನ ಸಂಕಲನ "ನೀಲಾಂಜನ" ೧೯೫೪ರಲ್ಲಿ ಪ್ರಕಟವಾಯಿತು. ಅವರ ಸಾಹಿತ್ಯ ಗುರುಗಳಾದ ವಿ.ಕೃ.ಗೋಕಾಕರು ಆ ಸಂಕಲನಕ್ಕೆ ಮುನ್ನುಡಿ ಬರೆದಿದ್ದರು.

ಕಾರಣಾಂತರದಿಂದ ಕನ್ನಡ ಸಾಹಿತ್ಯ ಅಧ್ಯಯನ ಕೈಬಿಟ್ಟು, ಅವರು ಕಾನೂನು ಪದವಿ ಓದಬೇಕಾಯಿತು. ಅನಂತರ ವಕೀಲಿ ವೃತ್ತಿ ಕೈಗೊಂಡು, ಬಳಿಕ ನ್ಯಾಯಾಧೀಶರಾದರು. ಹೀಗಾಗಿ ಅವರ ಸಾಹಿತ್ಯ ವ್ಯವಸಾಯ ಹಿಂದೆ ಬಿತ್ತು. ಆದರೂ ಅವರ ಆಂತರ‍್ಯದೊಳಗೆ ಒಬ್ಬ ಕವಿ ತುಡಿಯುತ್ತಲೇ ಇದ್ದ.

ಈ ಬ್ಲಾಗಿಗ ಉಪನ್ಯಾಸ ನೀಡುತ್ತಿರುವುದು.

ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ನಿವೃತ್ತರಾಗಿ, ಮತ್ತೆ ಕಾವ್ಯ ವ್ಯವಸಾಯಕ್ಕೆ ಇಳಿದರು. ಇದುವರೆಗೆ ಆರು ಸಂಕಲನಗಳನ್ನು ತಂದಿರುವ ಅವರ "ಸಮಗ್ರ ಕಾವ್ಯ"ವು ಇತ್ತೀಚೆಗೆ ಬಿಡುಗಡೆಯಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮೊನ್ನೆ ದಿನಾಂಕ ೧೭ರಂದು ಬೆಳಗಾವಿಯ ಸಾಹಿತ್ಯ ಭವನದಲ್ಲಿ ದೇಸಾಯರ ಸಾಹಿತ್ಯದ ಕುರಿತು ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಿತ್ತು. "ಜಿನದತ್ತ ದೇಸಾಯಿಯವರ ಕಾವ್ಯದಲ್ಲಿ ಪ್ರತಿಮಾ ವಿನ್ಯಾಸ" ಎಂಬ ವಿಷಯದ ಕುರಿತು ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದರು. ಕಾರ್ಯಕ್ರಮ ತುಂಬ ಚೆನ್ನಾಗಿ, ಅಚ್ಚುಕಟ್ಟಾಗಿ ನಡೆಯಿತು. ಚಂದ್ರಕಾಂತ ಕುಸನೂರ, ನಾ.ಮೊಗಸಾಲೆ, ಬಸವರಾಜ ವಕ್ಕುಂದ, ಸರಜೂ ಕಾಟ್ಕರ‍್, ರಾಮಕೃಷ್ಣ ಮರಾಠೆ, ಎಚ್. ಬಿ. ಕೋಲ್ಕಾರ‍್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿನದತ್ತ ದೇಸಾಯಿಯವರು ಕಾರ್ಯಕ್ರಮ ಪೂರ್ತಿ ಉಪಸ್ಥಿತರಿದ್ದು ಆನಂದಿಸಿದರು.

Friday, 15 July 2011

ಕವಿ ಎಚ್. ಎಸ್. ವಿ. ಅವರೊಂದಿಗೆ ಒಂದು ಸಂಜೆ

ಹಿರಿಯ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ದಾಸ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದರು. ಬಹುಕಾಲದ ಆತ್ಮೀಯ ಗೆಳೆಯ ಎಂಬ ಪ್ರೀತಿಯಿಂದ ಕರೆದ ಕೂಡಲೇ ಆಕಾಶವಾಣಿಗೆ ಬಂದರು. ನಮ್ಮೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸಾಹಿತ್ಯ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಆಕಾಶವಾಣಿಗಾಗಿ ಮಾತಾಡಿಸುವ ಆಲೋಚನೆ ಬಂದಿತು. ನೇರವಾಗಿ ಅವರನ್ನು ಸ್ಟುಡಿಯೋಗೆ ಆಹ್ವಾನಿಸಿದೆವು. ಸಮಕಾಲೀನ ಸಾಹಿತ್ಯ, ಕಾವ್ಯ ಮತ್ತು ಕಾವ್ಯವನ್ನು ಬಗೆವ ಬಗೆ ಮುಂತಾದವುಗಳ ಕುರಿತು ಅರ್ಧ ಗಂಟೆ ಗಂಭೀರ ಚರ್ಚೆ ಸಾಗಿತು.

"  ಕಾವ್ಯವೆಂದರೆ ಒಂದು ನದಿಯ ಹಾಗೆ. ನದಿಯಲ್ಲಿ ಬೆರಳಿಟ್ಟರೆ  ಇಡೀ ನದಿ ಅನುಭವಕ್ಕೆ ಬರುವ ಹಾಗೆ ಒಂದು ಕವಿತೆ ಓದಿದರೆ ಕಾವ್ಯಚರಿತ್ರೆಯೇ ಅನಾವರಣವಾಗಬೇಕು. ಈ ಸಾತತ್ಯ ಕಂಡು ಬಂದರೆ ಮಾತ್ರ ಕಾವ್ಯದ  ಭಾರ ಮನವರಿಕೆಯಾಗುವುದು"
(ಚಿತ್ರದಲ್ಲಿ ಡಾ. ವಸಂತಕುಮಾರ ಪೆರ್ಲ ಮತ್ತು ಡಾ. ಎಚ್. ಎಸ್. ವಿ.)
ವಾರದ ಅತಿಥಿಯಾಗಿ ಶ್ರೀ ಆಸ್ಕರ‍್  ಫೆರ್ನಾಂಡಿಸ್

ಮಂಗಳೂರು ಆಕಾಶವಾಣಿಯಲ್ಲಿ "ವಾರದ ಅತಿಥಿ" ಎಂಬ ಕಾರ್ಯಕ್ರಮವೊಂದನ್ನು ನಾವು ಪ್ರಸಾರ ಮಾಡುತ್ತಿದ್ದು, ಈ ವಾರ ನಮ್ಮ ಅತಿಥಿಯಾಗಿ ಆಗಮಿಸಿದವರು ರಾಜ್ಯ ಸಭಾ ಸದಸ್ಯರಾದ ಶ್ರೀ ಆಸ್ಕರ‍್ ‌ಫೆರ್ನಾಂಡಿಸ್ ಅವರು.  ಅವರ ಬದುಕು ಮತ್ತು ಸಾಧನೆಯ ಕುರಿತು ಸುಮಾರು ಒಂದು ಗಂಟೆ ಅವಧಿಯ ಸಂದರ್ಶನ ಧ್ವನಿಮುದ್ರಿಸಿಕೊಂಡೆವು. ತಮ್ಮ ಬಾಲ್ಯ , ಶಿಕ್ಷಣ ಹಾಗೂ ಸಾಧನೆಯ ಕುರಿತು ಅವರು ಮಾತಾಡಿದರು. ಅವರು ನಿಲಯಕ್ಕೆ ಬಂದಾಗಿನ ಕೆಲವು ಸನ್ನಿವೇಶಗಳನ್ನು ಸಹೋದ್ಯೋಗಿ ಗೆಳೆಯ ಕೆ. ಅಶೋಕ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು.

ಶ್ರೀ ಆಸ್ಕರ‍್ ಫೆರ್ನಾಂಡಿಸ್, ಡಾ. ಸದಾನಂದ ಪೆರ್ಲ, ಶ್ರೀ ಸದಾನಂದ ಹೊಳ್ಳ ಹಾಗೂ ಡಾ. ವಸಂತಕುಮಾರ ಪೆರ್ಲ

ಸ್ಟುಡಿಯೋದಲ್ಲಿ ಶ್ರೀ ಆಸ್ಕರ‍್  ಅವರನ್ನು ಸಂದರ್ಶಿಸುತ್ತಿರುವ ಈ ಬ್ಲಾಗಿಗ 

ಸಂದರ್ಶನದ ಇನ್ನೊಂದು ಸನ್ನಿವೇಶ

Sunday, 3 July 2011

ಸಂದರ್ಶನ

                           ನೃತ್ಯಗುರುಗಳೊಂದಿಗೆ ಅರ್ಧ ದಿನ 

ಮಾಸ್ಟರ್ ವಿಠಲ್ ಕರಾವಳಿ ಕರ್ನಾಟಕದ ಹಿರಿಯ ನೃತ್ಯಗುರುಗಳಲ್ಲಿ ಒಬ್ಬರು. ೮೪ ವರ್ಷ ವಯಸ್ಸಿನ ಅವರು ಈಗ ರಂಗದಿಂದ ಹಿಂದೆ ಸರಿದಿದ್ದರೂ, ಭರತನಾಟ್ಯವೆಂದರೆ ಇವತ್ತಿಗೂ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಭರತನಾಟ್ಯದ ಶಾಸ್ತ್ರೀಯತೆ ಮತ್ತು ಪ್ರದರ್ಶನದ ವಿಚಾರ ಬಂದಾಗ ಉದಾಹರಣೆ ಮತ್ತು ಪ್ರಾತ್ಯಕ್ಷಿಕೆ ಸಹಿತ ವಿವರಿಸುತ್ತಾರೆ. ಶುದ್ಧ ಶಾಸ್ತ್ರೀಯವಾದ ಈ ಕಲೆ ಅದರ ಸಂವಿಧಾನದಲ್ಲೇ ಇರಬೇಕು, ಆದರೆ ಕಾಲಿಕವಾದ ಕೆಲವು ಪ್ರಭಾವಗಳು ತಲೆದೋರಿದರೆ ಅದರಿಂದ ತಪ್ಪೇನೂ ಇಲ್ಲ ಎನ್ನುತ್ತಾರೆ.  ಬಹುಶ: ಅವರ ಮಾತಿನಲ್ಲಿ ಇದನ್ನು 'ಶೈಲಿ' ಎಂದು ಕರೆಯಬಹುದು.    

ಅರ್ಥಾ ಪೆರ್ಲ, ಮಾಸ್ಟರ್ ವಿಠಲ್ ಮತ್ತು ಈ ಬ್ಲಾಗಿಗ 

ಕರ್ನಾಟಕ ಕಲಾಶ್ರೀ, ನಾಟ್ಯ ಚಕ್ರವರ್ತಿ, ನಾಟ್ಯ ಕಲಾನಿಧಿ, ನಾಟ್ಯ ಕಲಾವಿಶಾರದ, ನಾಟ್ಯ ಕಲಾಸಿಂಧು, ನಾಟ್ಯಕೌಸ್ತುಭ ಮೊದಲಾದ ಪ್ರಶಸ್ತಿ-ಬಿರುದುಗಳು ಅವರಿಗೆ ಸಂದಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಭರತನೃತ್ಯ ಕಲಿಸಿ ಸಾರ್ಥಕತೆ ಅನುಭವಿಸಿದ್ದಾರೆ ('ಭರತ' ಎಂಬ ಶಬ್ದವು  ಭಾವ, ರಾಗ, ತಾಳ ಎಂಬ ಮೂರು ಶಬ್ದಗಳಿಂದ ವ್ಯುತ್ಪನ್ನಗೊಂಡಿದೆ ಎನ್ನುತ್ತಾರೆ ಅವರು).  ಚಲನಚಿತ್ರ ಅಭಿನೇತ್ರಿ ದಿ.ಕಲ್ಪನಾ, ಮೂಡಬಿದ್ರೆಯ ಡಾ. ಎಂ.ಮೋಹನ ಆಳ್ವ ಮೊದಲಾದವರು ವಿಠಲ್  ಅವರ ಶಿಷ್ಯರಲ್ಲಿ ಕೆಲವರು. ನೃತ್ಯರೂಪಕಗಳ ರಚನೆ ಮತ್ತು ಪ್ರದರ್ಶನಗಳಿಗಾಗಿ ಹೆಸರಾಗಿರುವ ಅವರು ೧೯೮೧ರಲ್ಲಿ ಸ್ವೀಡನ್ ದೇಶಕ್ಕೆ ಹೋಗಿ ಸುಮಾರು ಮೂರು ತಿಂಗಳ ಕಾಲ ಅಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿ ದೇಶಕ್ಕೆ ಕೀರ್ತಿ ತಂದರು. 

ಮಾಸ್ಟರ್ ವಿಠಲ್ ಅವರನ್ನು ಸಂದರ್ಶಿಸುತ್ತಿರುವ ಅರ್ಥಾ ಪೆರ್ಲ 

ಇವತ್ತು ನನ್ನ ಮಗಳು ಅರ್ಥಾಳೊಂದಿಗೆ ಮಂಗಳೂರಿನ ಕಾವೂರಿನಲ್ಲಿರುವ ವಿಠಲ್ ಅವರ ಮನೆಗೆ ಹೋಗಿದ್ದೆ. ಮಗಳು ಪತ್ರಿಕೆಯೊಂದಕ್ಕೆ ಅವರ ಸಂದರ್ಶನ ನಡೆಸಬೇಕಾಗಿತ್ತು. ಅವಳು ಭರತನಾಟ್ಯದಲ್ಲಿ ವಿದ್ವತ್ ಮಾಡುತ್ತಿದ್ದಾಳೆ (ಬೇರೆ ಗುರುಗಳ ಬಳಿ).  ಇಬ್ಬರೂ ಭರತನಾಟ್ಯದ ಕುರಿತು ಮಾತಾಡುವಾಗ ನನಗೇನು ಕೆಲಸ? ಸುಮ್ಮನೆ ಕುಳಿತು ಕೇಳುತ್ತಿದ್ದೆ.  ಸುಮಾರು ಎರಡು ಗಂಟೆ ಹೊತ್ತು ವಿಠಲ್ ಅವರು ಶಾಸ್ತ್ರೀಯ ನೃತ್ಯದ ಆಳ ಅಗಲಗಳ ಕುರಿತು  ಮಾತಾಡುವಾಗ ನೃತ್ಯಲೋಕಕ್ಕೆ ಹೋದ ಅನುಭವ ಆಯಿತು.
   
 (ಚಿತ್ರಗಳು: ಕೆ.ಎಸ್.ವೇಣುವಿನೋದ).

Sunday, 26 June 2011

ಪ್ರಕೃತಿವಿಶೇಷ

ಬ್ರಹ್ಮಕಮಲದ ಸೊಗಸು 

ನಮ್ಮ ಮನೆಯಲ್ಲಿರುವ ಬ್ರಹ್ಮಕಮಲದ ಗಿಡದಲ್ಲಿ  ಈ ಬಾರಿ ಹದಿನಾರು ಮೊಗ್ಗುಗಳು ಮೂಡಿದವು. 'ಅವು ಒಂದೇ ದಿನ ರಾತ್ರಿ ಹೊತ್ತು ಅರಳುತ್ತವೆ, ಈ ಬಾರಿ ತುಂಬಾ ಚೆನ್ನಾಗಿ ಕಾಣಬಹುದು' ಅಂದಿದ್ದಳು ನನ್ನ ಪತ್ನಿ. ಕೆಲವು ದಿನ ಹಿಂದೆ ನಾಲ್ಕೈದು ಎಳೆಯ ಮೊಗ್ಗುಗಳು ಉದುರಿದ್ದವು. ಕಳೆದ ವಾರ ಒಂದು ಮದುವೆ ನಿಮಿತ್ತ ನಾವು ಮೂರು ದಿನ ಮನೆಯಿಂದ ಹೊರಗಿದ್ದೆವು. ಮಳೆಯಿಲ್ಲದೆ ಬಿಸಿಲು ಬಿದ್ದಿತ್ತು. ಮೊನ್ನೆ ಜೋರಾಗಿ ಮಳೆ ಹೊಡೆಯಿತು. ಮರುದಿನ ಬೆಳಗ್ಗೆ ನೋಡಿದಾಗ ದೊಡ್ಡದಾದ ಐದಾರು ಮೊಗ್ಗುಗಳು ನೆಲಕ್ಕೆ ಉರುಳಿದ್ದವು. 



ಉಳಿದ ಮೊಗ್ಗುಗಳು ಇಂದು ಸಂಜೆ ಹೊತ್ತು ತೀರ ದೊಡ್ಡದಾಗಿದ್ದವು. ಈ ರಾತ್ರಿ ಅರಳುತ್ತವೆ ಅಂದೆ. ಹಾಗೇ ಆಯಿತು. ರಾತ್ರಿ ಎಂಟು ಗಂಟೆಗೆ ಆರು ಮೊಗ್ಗುಗಳು ಅರಳಿ ನಿಂತವು.  ಮಗ ಆಗಮನಿಗೆ ಸಂಭ್ರಮ. ವರ್ಷದಲ್ಲಿ ಒಂದು ದಿನ ಈ  ಗಿಡ ಹೂ ಬಿಡುತ್ತದೆ.  ಎಲೆಯಿಂದ ಮೊಗ್ಗಿನ ದಂಟೊಡೆದು ಹೂ ಮೂಡುವ ಪರಿ ಅದ್ಭುತವಾದದ್ದು. ಗಾತ್ರ, ಪರಿಮಳ, ತನ್ನ ಶುಭ್ರಶ್ವೇತ  ಬಣ್ಣ ಮತ್ತು ಸೌಂದರ‍್ಯಗಳಿಗಾಗಿ ಈ ಹೂ ಪ್ರಸಿದ್ಧವಾಗಿದೆ. ಅಷ್ಟೇ ಪ್ರಮಾಣದಲ್ಲಿ ಅದು ಕೀಟಗಳನ್ನೂ ಆಕರ್ಷಿಸುತ್ತದೆ. ಒಂದು ರಾತ್ರಿ ಮಾತ್ರ ಇದ್ದು ಮರುದಿನ  ಮುದುಡುತ್ತದೆ. ರಾತ್ರಿ ಅರಳುವುದರಿಂದ  ಇದಕ್ಕೆ  'ರಾತ್ರಿರಾಣಿ’ ಎಂಬ ಹೆಸರೂ ಇದೆ. ವರ್ಣಿಸಲು ಸಾಧ್ಯವಿಲ್ಲದಷ್ಟು ಪರಿಮಳದ ಹೂ ಇದು. ಹೂಗಳಲ್ಲಿ ಇದು ನಿಜವಾಗಿ ರಾತ್ರಿ ಹೊತ್ತಿನ ರಾಣಿಯೇ ಹೌದು.