Monday 14 March 2011

ಬಸ್ ಚಾರ್ಜ್ ಯಾಕೆ? "ಹಾಸಲು" ಸಾಲದೆ?


ನಾವು ದೈನಂದಿನ ಮಾತಿನಲ್ಲಿ "ಬಸ್ ಚಾರ್ಜ್" ಎಂಬ ಶಬ್ದವನ್ನು ಹಲವಾರು ಬಾರಿ ಬಳಸುತ್ತೇವೆ. ಇದಕ್ಕೆ ಕನ್ನಡ ಶಬ್ದ ಇಲ್ಲವೇ? 


ಇದೆ;ಆದರೆ ನಾವು ಬಳಸುವುದಿಲ್ಲ, ಅಷ್ಟೆ!.  "ಬಸ್ ಚಾರ್ಜ್" ಎಂಬುದಕ್ಕೆ ಶುದ್ಧ ದೇಸೀ ಪದ "ಹಾಸಲು" ಎಂಬುದು. ಸಹಕಾರೀ ಸಂಘಗಳ ಲೆಕ್ಕ ಪತ್ರಗಳಲ್ಲಿ ಇಂದಿಗೂ ಹಾಸಲು ವೆಚ್ಚವನ್ನು ತೋರಿಸುವ ಒಂದು ಅಂಕಣವೇ ಇದೆ. 


ಹಾಸು ಎಂಬ ಶಬ್ದವನ್ನು ಅಲ್ಲಲ್ಲಿ ಬಳಸುತ್ತೇವೆ. "ಹಾಸು" ಹೊಕ್ಕಾಗಿದೆ; "ಹಾಸು" ಬಂಡೆ; ಹುಲ್ಲು "ಹಾಸು"; ಹೂ "ಹಾಸು" ಮುಂತಾದ ಕಡೆಗಳಲ್ಲಿ "ಹಾಸು" ಎಂಬ ಶಬ್ದವಿದೆ. "ಹಾಸು" ಎಂದರೆ ನಡಿಗೆಯ ಹಾದಿ ಎಂದರ್ಥ. ಹಾಸಲು ಎಂಬ ಕೃದಂತ ರೂಪವು ಹಾದಿಯ ವೆಚ್ಚ ಎಂಬರ್ಥದಲ್ಲಿ ಹಿಂದೆ ಬಳಕೆಯಾಗುತ್ತಿತ್ತು. ಅಪರೂಪಕ್ಕೊಮ್ಮೆ 'ಹಾಸಲು ವೆಚ್ಚ' ಎಂಬ ಪ್ರಯೋಗ ಹಳ್ಳಿಗಳಲ್ಲಿ ಇಂದಿಗೂ ಕಾಣದೊರೆಯುತ್ತದೆ. 


ನಾವು ಕೂಡ, ಬಸ್ ಚಾರ್ಜ್ ಎಂಬುದಕ್ಕೆ 'ಹಾಸಲು' ಎಂಬ ಈ ಅಚ್ಚಗನ್ನಡ ಶಬ್ದವನ್ನು ಮತ್ತೆ ಯಾಕೆ ಬಳಕೆಗೆ ತರಬಾರದು?

No comments:

Post a Comment