"ಬತ್ತ" ಎಂಬ ಶಬ್ದವನ್ನು "ಭತ್ತ" ಎಂದು ಬರೆಯುವವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ವಾಸ್ತವವಾಗಿ ಅದು "ಭತ್ತ" ಅಲ್ಲ, "ಬತ್ತ" ಎಂದಾಗಬೇಕು.
ಬಾಳಿದುದು (ಎರಚಲ್ಪಟ್ಟದ್ದು) ಎಂಬ ಶಬ್ದದಿಂದ "ಬತ್ತ" ಎಂಬ ಶಬ್ದ ನಿಷ್ಪನ್ನಗೊಂಡಿದೆ. ಬಾಳಿದ > ಬಾಳ್ ತ > ಬಳ್ತ > ಬತ್ತ ಆಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಇವತ್ತಿಗೂ 'ಬತ್ತವನ್ನು ಬಾಳುವದು' ಎಂಬ ಪದಪ್ರಯೋಗ ರೂಢಿಯಲ್ಲಿದೆ.
ಮನುಷ್ಯ ಬೇಟೆಸಂಸ್ಕೃತಿಯಿಂದ ಕೃಷಿಸಂಸ್ಕೃತಿಯಲ್ಲಿ ನೆಲೆಗೊಂಡ ಕಾಲಘಟ್ಟದಲ್ಲಿ ಬಯಲು ಭೂಮಿಯನ್ನು ಒಂದೆರಡು ಬಾರಿ ಉತ್ತು ಬತ್ತವನ್ನು ಬಾಳುತ್ತಿದ್ದರು. ಕೆಸರುಮಡಿ ಮಾಡಿ ನೆಡುವ ಸಂಪ್ರದಾಯ ಆಗಿನ್ನೂ ಬಂದಿರಲಿಲ್ಲ. ತುಳುವಿನ 'ಬಾರ್' ಎಂಬ ಶಬ್ದ ಕೂಡ ಎರಚುವ ಅರ್ಥವುಳ್ಳ ಬಾಳುವದು ಎಂಬುದರಿಂದಲೇ ಬಂದಿರುವದನ್ನು ಗಮನಿಸಬಹುದು.
ಬತ್ತಕ್ಕೆ 'ನೆಲ್ಲು' ಎಂಬ ಅಚ್ಚ ಕನ್ನಡದ ಒಂದು ನಾಮಪದ ರೂಪವೂ ಇದೆ. ಹಳಗನ್ನಡದಲ್ಲಿ ಈ ಶಬ್ದ ಬಳಕೆಯಾಗುತ್ತಿತ್ತು. ಮಲಯಾಳದಲ್ಲಿ 'ನೆಲ್ಲ್' ಎಂಬ ಶಬ್ದವೇ ಬಳಕೆಯಾಗುತ್ತಿದೆ. ಹವ್ಯಕ ಕನ್ನಡದಲ್ಲಿ 'ನೆಲ್ಲು' ಎಂಬ ಶಬ್ದಪ್ರಯೋಗ ಇದೆ. 'ನೆಲ್ಲು ಮೆರಿವದು' (ಬತ್ತ ಕುಟ್ಟುವುದು), 'ನೆಲ್ಲು ಮೆರಿವಲೆ ಕೆಲಸದವು ಬಯಿಂದವೋ?' (ಬತ್ತ ಕುಟ್ಟಲು ಕೆಲಸದವರು ಬಂದಿದ್ದಾರೆಯೇ?) ಮುಂತಾದ ಮಾತುಗಳಲ್ಲಿ 'ನೆಲ್ಲು' ಪದ ಬಳಕೆಯಾಗುತ್ತದೆ.