ಬೆಳಗಾವಿಯಲ್ಲಿ ಸಾಹಿತ್ಯ ವಿಚಾರ ಸಂಕಿರಣ
ಜಿನದತ್ತ ದೇಸಾಯಿಯವರು ಕನ್ನಡದ ಹಿರಿಯ ಕವಿಗಳಲ್ಲಿ ಒಬ್ಬರು. ಸುಮಾರು ೬೦ ವರ್ಷಗಳಿಂದ ಕಾವ್ಯ ವ್ಯವಸಾಯ ಮಾಡುತ್ತ ಬಂದಿರುವ ಅವರು ಜಿ ಎಸ್ ಎಸ್, ಕಣವಿ ಮೊದಲಾದವರ ಸಮಕಾಲೀನರು. ಅವರ ಮೊದಲ ಕವನ ಸಂಕಲನ "ನೀಲಾಂಜನ" ೧೯೫೪ರಲ್ಲಿ ಪ್ರಕಟವಾಯಿತು. ಅವರ ಸಾಹಿತ್ಯ ಗುರುಗಳಾದ ವಿ.ಕೃ.ಗೋಕಾಕರು ಆ ಸಂಕಲನಕ್ಕೆ ಮುನ್ನುಡಿ ಬರೆದಿದ್ದರು.
ಕಾರಣಾಂತರದಿಂದ ಕನ್ನಡ ಸಾಹಿತ್ಯ ಅಧ್ಯಯನ ಕೈಬಿಟ್ಟು, ಅವರು ಕಾನೂನು ಪದವಿ ಓದಬೇಕಾಯಿತು. ಅನಂತರ ವಕೀಲಿ ವೃತ್ತಿ ಕೈಗೊಂಡು, ಬಳಿಕ ನ್ಯಾಯಾಧೀಶರಾದರು. ಹೀಗಾಗಿ ಅವರ ಸಾಹಿತ್ಯ ವ್ಯವಸಾಯ ಹಿಂದೆ ಬಿತ್ತು. ಆದರೂ ಅವರ ಆಂತರ‍್ಯದೊಳಗೆ ಒಬ್ಬ ಕವಿ ತುಡಿಯುತ್ತಲೇ ಇದ್ದ.
ಈ ಬ್ಲಾಗಿಗ ಉಪನ್ಯಾಸ ನೀಡುತ್ತಿರುವುದು. |
ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ನಿವೃತ್ತರಾಗಿ, ಮತ್ತೆ ಕಾವ್ಯ ವ್ಯವಸಾಯಕ್ಕೆ ಇಳಿದರು. ಇದುವರೆಗೆ ಆರು ಸಂಕಲನಗಳನ್ನು ತಂದಿರುವ ಅವರ "ಸಮಗ್ರ ಕಾವ್ಯ"ವು ಇತ್ತೀಚೆಗೆ ಬಿಡುಗಡೆಯಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮೊನ್ನೆ ದಿನಾಂಕ ೧೭ರಂದು ಬೆಳಗಾವಿಯ ಸಾಹಿತ್ಯ ಭವನದಲ್ಲಿ ದೇಸಾಯರ ಸಾಹಿತ್ಯದ ಕುರಿತು ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಿತ್ತು. "ಜಿನದತ್ತ ದೇಸಾಯಿಯವರ ಕಾವ್ಯದಲ್ಲಿ ಪ್ರತಿಮಾ ವಿನ್ಯಾಸ" ಎಂಬ ವಿಷಯದ ಕುರಿತು ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದರು. ಕಾರ್ಯಕ್ರಮ ತುಂಬ ಚೆನ್ನಾಗಿ, ಅಚ್ಚುಕಟ್ಟಾಗಿ ನಡೆಯಿತು. ಚಂದ್ರಕಾಂತ ಕುಸನೂರ, ನಾ.ಮೊಗಸಾಲೆ, ಬಸವರಾಜ ವಕ್ಕುಂದ, ಸರಜೂ ಕಾಟ್ಕರ‍್, ರಾಮಕೃಷ್ಣ ಮರಾಠೆ, ಎಚ್. ಬಿ. ಕೋಲ್ಕಾರ‍್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿನದತ್ತ ದೇಸಾಯಿಯವರು ಕಾರ್ಯಕ್ರಮ ಪೂರ್ತಿ ಉಪಸ್ಥಿತರಿದ್ದು ಆನಂದಿಸಿದರು.