ಕನ್ನಡಕ್ಕೆ ಎಚ್ಚರಿಕೆಯ ಗಂಟೆ
ಮುಂದಿನ ಐವತ್ತು ವರ್ಷಗಳ ಅವಧಿಯಲ್ಲಿ ಕಣ್ಮರೆಯಾಗಲಿರುವ ಸಣ್ಣ ಭಾಷೆಗಳಲ್ಲಿ ತುಳು ಕೂಡ ಒಂದು ಎಂದು ಈಗ್ಗೆ ಎರಡು ವರ್ಷಗಳ ಹಿಂದೆ ಬಂದ ಯುನೆಸ್ಕೋದ ಅಧ್ಯಯನ ವರದಿಯೊಂದು ಎಚ್ಚರಿಕೆಯ ಗಂಟೆ ಬಾರಿಸಿತ್ತು. ಇದರಿಂದ ತುಳುವರಿಗೆ ಮತ್ತು ತುಳು ಭಾಷೆಯ ಬಗ್ಗೆ ಪ್ರೀತಿ ಹೊಂದಿದವರಿಗೆ ಗಾಬರಿ ಆಯಿತು.
'ಊರಿಗೆ ಬಂದವಳು ನೀರಿಗೆ ಬಾರದಿದ್ದಾಳೆಯೇ?' ಎಂಬ ಗಾದೆಯಂತೆ, ಈ ಭವಿಷ್ಯವಾಣಿಯಿಂದ ನಿಜವಾಗಿ ಎಚ್ಚರಗೊಳ್ಳಬೇಕಾದವರು ಕನ್ನಡಿಗರು. ತುಳು, ಕನ್ನಡದ ಜನಪದವೇ ತಾನೆ? ತುಳು ಸೊರಗುವುದೆಂದರೆ ಕನ್ನಡವೂ ಸೊರಗಿದ ಹಾಗೆಯೇ. ತುಳುವಿನ ಜೊತೆಗೆ ಕನ್ನಡವೂ ನಿಧಾನವಾಗಿ ಸೊರಗುತ್ತಿರುವ ಸೂಚನೆ ಕಣ್ಣಮುಂದೆಯೇ ಸಿಗುತ್ತಿದೆ.
ಇವತ್ತು ಪೇಟೆ-ಪಟ್ಟಣಗಳ ಮಕ್ಕಳಿಗೆ ಕನ್ನಡದಲ್ಲಿ ಸರಿಯಾಗಿ ವ್ಯವಹರಿಸಲು ಬರುವುದಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ, ಕಲಿಯುತ್ತಿರುವ ಈ ಮಕ್ಕಳಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ. ಮಾತಾಡುವ ಕನ್ನಡದಲ್ಲಿ ಅರ್ಧ ಭಾಗ ಇಂಗ್ಲಿಷ್ ತುಂಬಿ ಹೋಗಿದೆ.
ನಾವು ಭಾಷೆ ಮತ್ತು ಕಲಿಕಾ ಮಾಧ್ಯಮಗಳ ನಡುವೆ ಸ್ಪಷ್ಟವಾದ ನೀತಿಯೊಂದನ್ನು ಕಲ್ಪಿಸದೇ ಹೋದರೆ ಮುಂದಿನ ತಲೆಮಾರುಗಳಲ್ಲಿ ಕನ್ನಡ ಎಂಬ ಸಂಪದ್ಭರಿತ ಭಾಷೆಯೊಂದನ್ನು ಕಳೆದುಕೊಳ್ಳಲಿದ್ದೇವೆ.
ಇಂಗ್ಲಿಷ್ ಒಂದು ಭಾಷೆಯಾಗಿ ಇರಲಿ; ಕಲಿಕಾ ಮಾಧ್ಯಮವಾಗಿ ಬೇಡ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಒಂದನೇ ತರಗತಿಯಿಂದಲೇ ಕಲಿಸಲಿ. ಆದರೆ ಕಲಿಕಾಮಾಧ್ಯಮವಾಗಿ ಪ್ರೌಢಶಿಕ್ಷಣದ ವರೆಗೆ ಕನ್ನಡವೇ ಇರಲಿ. ಇದರಿಂದ ಮಕ್ಕಳಿಗೆ ತಮ್ಮ ಮಾತೃಭಾಷೆಯ ಬಗ್ಗೆ ಪ್ರೀತಿಯೂ ಅಭಿಮಾನವೂ ಮೂಡುತ್ತದೆ ಮತ್ತು ನಮ್ಮ ಪರಂಪರೆಯ ಸಾತತ್ಯ ಮುಂದುವರಿಯಲು ಸಾಧ್ಯವಾಗುತ್ತದೆ. ಬಹುದೊಡ್ಡ ಜ್ಙಾನನಿಧಿ ಅಡಗಿರುವ ಭಾಷೆಯೊಂದು ಮುಂದುವರಿದುಕೊಂಡು ಹೋಗುತ್ತದೆ.
ಇವತ್ತಿನ ಪ್ರಮುಖ ಸಂವಹನ ಮಾಧ್ಯಮವಾಗಿರುವ ಮೊಬೈಲ್ ಮತ್ತು ಕಂಪ್ಯೂಟರ್ ನಲ್ಲಿ ಕನ್ನಡದ ಬಳಕೆ ತುಂಬ ಹೆಚ್ಚಾಗಬೇಕು. ಇರುವ ತಾಂತ್ರಿಕತೆ ಸುಲಭವಾಗಿಲ್ಲ; ಕ್ಲಿಷ್ಟವಾಗಿದೆ. ಮುಂದಿನ ತಲೆಮಾರಿನವರ ಪ್ರಮುಖ ಮಾಧ್ಯಮವಾಗಲಿರುವ ಕಂಪ್ಯೂಟರ್ ಅನ್ನು ಕನ್ನಡಮಯ ಮಾಡದಿದ್ದರೆ ಕನ್ನಡಕ್ಕೆ ಅಪಾಯ ಕಾದಿದೆ ಎಂದೇ ಅರ್ಥ. ಇವತ್ತು ಸಾಫ್ಟ್ ವೇರ್ ತಂತ್ರಜ್ಙಾನ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕಂಪ್ಯೂಟರ್ ಮತ್ತು ಮೊಬೈಲ್ ನಲ್ಲಿ ಕನ್ನಡವನ್ನು ಸುಲಭವಾಗಿ ಬಳಸಲು ಬೇಕಾದ ತಾಂತ್ರಿಕತೆಯ ಕುರಿತು ತುರ್ತಾಗಿ ಗಮನ ಹರಿಸಬೇಕಾಗಿದೆ.
ಹಳಗನ್ನಡವನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳುವ ಮತ್ತು ಅದರೊಂದಿಗೆ ಸಾವಯವ ಸಂಬಂಧ ಹೊಂದಿರುವವರ ಕಾಲ ಕಳೆದ ತಲೆಮಾರಿನೊಂದಿಗೆ ಆಗಿಹೋಯಿತು. ಈಗ ತೀರಾ ಆಸಕ್ತಿ ಇರುವ ಕೆಲವರು ಗ್ರಂಥಾಲಯದಲ್ಲಿ ಕುಳಿತು ಸಂಶೋಧನೆ ಮಾಡುವ ಹಂತಕ್ಕೆ ಹಳಗನ್ನಡ ಬಂದು ತಲಪಿದೆ. ನಮ್ಮ ಪಾಠ-ಪಠ್ಯಗಳಿಂದ ಹಳಗನ್ನಡ ಕಾವ್ಯ ಭಾಗಗಳು ಮಾಯವಾಗಿ ಎಷ್ಟೋ ವರ್ಷ ಆಯಿತು. ವಿಶ್ವ ವಿದ್ಯಾಲಯಗಳಲ್ಲಿ ಹಳಗನ್ನಡ ಪಾಠ ಮಾಡುವ ಅಧ್ಯಾಪಕರೇ ಇಲ್ಲವಂತೆ. ಯಾವುದನ್ನು ಓದುವವರು ಬಳಸುವವರು ಇಲ್ಲವೋ ಆಗ ಅದಕ್ಕೆ ಸಂಶೋಧನೆಯ ದೃಷ್ಟಿಯಿಂದ 'ಶಾಸ್ತ್ರೀಯ ಭಾಷೆ'ಯ ಪಟ್ಟ ಬರುತ್ತದೆ!
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಎಷ್ಟೊಂದು ಅರ್ಹವಾಗಿ ಸಿಕ್ಕಿದೆ, ಅಲ್ಲವೇ?
ಹಳಗನ್ನಡಕ್ಕೆ ಈಗಲೇ ಈ ಸ್ಥಿತಿಯಾದರೆ ಮುಂದಿನ ಮೂವತ್ತು ವರ್ಷಗಳಲ್ಲಿ ಅದು ಪ್ರಯೋಗಾಲಯದಲ್ಲಿ ಕುಳಿತುಕೊಳ್ಳುವುದು ಖಂಡಿತ. ಇನ್ನು ಈ ಆಧುನಿಕ ಕನ್ನಡದ ಸ್ಥಿತಿ ಹೇಗಿದ್ದೀತು? ಊಹಿಸಲೂ ಸಾಧ್ಯವಿಲ್ಲ.
ಕನ್ನಡದ ಉದ್ಧಾರವಾಗಬೇಕಾದರೆ ಪ್ರತಿಯೊಂದು ಕುಟುಂಬವೂ ಮನೆಯಲ್ಲಿ ಮಕ್ಕಳಿಗೆ ಕನ್ನಡಪ್ರೀತಿಯನ್ನು ಕಲಿಸುವ ಆವಶ್ಯಕತೆ ಇದೆ. ಇದೊಂದು ಸಾಮೂಹಿಕ ಕೆಲಸ. ಕನ್ನಡ ಬಲ್ಲ ಕೆಲವರು ಸಾರ್ವಜನಿಕವಾಗಿ ವೇದಿಕೆಯಿಂದ 'ನನಗೆ ಸರಿಯಾಗಿ ಕನ್ನಡ ಮಾತಾಡಲು ಬರುವುದಿಲ್ಲ. ಇಂಗ್ಲಿಷ್ ನಲ್ಲಿ ಮಾತಾಡುತ್ತೇನೆ' ಎಂದು ಅರ್ಧಂಬರ್ಧ ಇಂಗ್ಲಿಷ್ ನಲ್ಲಿ ಮಾತಾಡುವುದನ್ನು ಕೇಳಿದ್ದೇನೆ! ಮಾತೃಭಾಷೆಯಲ್ಲಿ ಮತ್ತು ತಾನು ಬದುಕಿ ಬಾಳುತ್ತಿರುವ ಪರಿಸರದ ಭಾಷೆಯಲ್ಲಿ ಒಬ್ಬಮನುಷ್ಯನಿಗೆ ಮಾತಾಡಲಾಗದ ಇಂತಹ ಸ್ಥಿತಿ ಬರಬಾರದು. ಸಾರ್ವಜನಿಕವಾಗಿ ಕನ್ನಡವನ್ನು ಹೀಗೆ ನಮ್ಮ ಜನರೇ ಹೀನೈಸಿದರೆ ಗತಿ ಏನು?
ಕನ್ನಡವನ್ನು ಉಳಿಸುವುದು ಕೇವಲ ಕವಿ ಸಾಹಿತಿಗಳ ಕೆಲಸವಲ್ಲ. ಅದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಅನ್ನ-ನೀರಿನಷ್ಟೇ ಕನ್ನಡದ ದಾಹವೂ ಪ್ರತಿಯೊಬ್ಬನ ಆದ್ಯತೆ ಆಗಬೇಕು. ಇಲ್ಲದಿದ್ದರೆ ನಾಳೆ ಇನ್ನೊಬ್ಬರ ಮನೆಮುಂದೆ ಹೋಗಿ ಅಂಗಲಾಚುವ ದಯನೀಯ ಪರಿಸ್ಥಿತಿ ಬಂದೀತು.
***
No comments:
Post a Comment