ಮೌಲ್ಯಗಳ ಬದಲಾವಣೆ
ಸಮಾಜದಲ್ಲಿ ಕಾಲಕಾಲಕ್ಕೆ ಮೌಲ್ಯಗಳು ಬದಲಾಗುವುದು ಕುತೂಹಲದ ವಿಷಯ. ಹಿಂದೆ ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲಿ 'ವೀರ' ಎಂಬುದು ಒಂದು ಮೌಲ್ಯವಾಗಿತ್ತು. ಒಬ್ಬ ಯೋಧ ಯುದ್ಧಭೂಮಿಯಿಂದ ಓಡಿಬರುವುದು ಆತ್ಮಹತ್ಯೆಗೆ ಸಮಾನವಾಗಿತ್ತು; ಎಲ್ಲರೂ ಅವನನ್ನು ಹೀನೈಸುತ್ತಿದ್ದರು. ಆತ ಯುದ್ಧದಲ್ಲಿ ಗೆಲ್ಲಬೇಕಾಗಿತ್ತು ಇಲ್ಲವೇ ಯುದ್ಧ ಮಾಡುತ್ತ ಮಾಡುತ್ತ ವೀರಮರಣ ಹೊಂದಬೇಕಾಗಿತ್ತು. ರಾಜನಿಗೋಸ್ಕರ ಪ್ರಾಣಾರ್ಪಣೆ ಮಾಡುವ 'ಗರುಡ' ಎಂಬ ನಂಬಿಕಸ್ತ ಬಂಟರ ಒಂದು ಪಡೆಯೇ ಆಗ ಇರುತ್ತಿತ್ತು.
ಆದರೆ ಇಂದಿನದನ್ನು 'ಭೀರುಯುಗ' ಎಂದು ಕರೆಯಬಹುದು. ನಾಗರಿಕತೆ ಮುಂದುವರಿದಂತೆ ಶಿಕ್ಷಣ-ವ್ಯಾಪಾರ-ವಾಣಿಜ್ಯ ಮೇಲುಗೈ ಸಾಧಿಸಿದೆ. ವೀರತೆಯ ಲಕ್ಷಣಗಳಾದ ಧೀರತೆ, ಭವ್ಯತೆ, ನೇರತೆಗಳ ಬದಲು ಜನರು ನಾಜೂಕಯ್ಯರೂ ಮತ್ತು ಇದರ ಲಕ್ಷಣಗಳಾದ ಹುಸಿನಗು ಮತ್ತು ತೋರಿಕೆಯ ನಯವಿನಯ ಸಂಪನ್ನರೂ ಆಗಿದ್ದಾರೆ! ಸುಳ್ಳು, ಕಪಟ, ಮೋಸ, ವಂಚನೆ, ತಟವಟಗಳು ವ್ಯಕ್ತಿತ್ವದಲ್ಲಿ ತುಂಬಿ ಹಿಂಸೆಯೆಂಬುದು ದೈಹಿಕದ ಬದಲು ಮಾನಸಿಕವಾಗಿ ಪರಿವರ್ತನೆಯಾಗಿದೆ. ಬೇರೆಯವರ ಕಾಲೆಳೆಯುವುದು ಹೇಗೆ ಎಂಬುದರ ಕಡೆಗೇ ಲಕ್ಷ್ಯ ಇರುತ್ತದೆ. ಚುನಾವಣೆ ಎಂಬುದು ಮಾನಸಿಕ ಯುದ್ಧವಲ್ಲದೆ ಇನ್ನೇನು? 'ಬಾಯಲ್ಲಿ ಮಂತ್ರ ಕಂಕುಳಲ್ಲಿ ದೊಣ್ಣೆ' ಎಂಬಂತೆ ಇತರರಿಗೆ ಮಾನಸಿಕ ಹಿಂಸೆ ನೀಡುವ ಕಲೆಯನ್ನು ಆಧುನಿಕ ನಾಗರಿಕತೆ ತನ್ನ ಒಡಲಲ್ಲಿ ಇರಿಸಿಕೊಂಡಿದೆ. ತಮಗಾಗದವರ ವಿರುದ್ಧ ನಾನಾರೀತಿಯ ಒತ್ತಡ ಹೇರುವುದು, ಚಾರಿತ್ರ್ಯಹನನ ಮಾಡುವುದು, ಬೇರೆಯವರನ್ನು ಎತ್ತಿಕಟ್ಟಿ ಒಬ್ಬಂಟಿ ಮಾಡುವುದು- ಹೀಗೆ ನಾನಾರೀತಿಯ ತಂತ್ರಗಳನ್ನು ಈ ನಿಟ್ಟಿನಲ್ಲಿ ಅನುಸರಿಸಲಾಗುತ್ತದೆ.
ಅಂದರೆ ನೇರವಾಗಿ ಕಾದಾಡದೆ ಸುತ್ತುಬಳಸಿನ ಭೀರುಗುಣಗಳನ್ನು ರಣತಂತ್ರವಾಗಿ ಅನುಸರಿಸಲಾಗುತ್ತದೆ. ಹೀಗೆ 'ವೀರ'ದ ಜಾಗವನ್ನು 'ಭೀರುತನ' ಆಕ್ರಮಿಸಿಕೊಂಡಿದೆ.
ಈಗ್ಗೆ ಮೂವತ್ತು-ನಲವತ್ತು ವರ್ಷಗಳ ಹಿಂದೆ ಇದ್ದ ಸಮಾಜವ್ಯವಸ್ಥೆ ಇಂದು ಕಾಣಿಸುವುದಿಲ್ಲ. ಉದಾಹರಣೆಗೆ, ಕಳೆದ ತಲೆಮಾರಿನ ವರೆಗೆ ಮಾನವಿಕ ಶಾಸ್ತ್ರಗಳನ್ನು ಓದುವುದು ಸಂತೋಷದ ಮತ್ತು ಆಕರ್ಷಣೆಯ ವಿಚಾರವಾಗಿತ್ತು. ಸಾಹಿತಿಗಳು, ಕಲಾವಿದರು, ಕವಿಗಳು, ಸಂಸ್ಕೃತಿವೇತ್ತರು ಸಮಾಜಜೀವನದ ಮುನ್ನೆಲೆಯಲ್ಲಿ ಇರುತ್ತಿದ್ದರು. ಅವರು ಸಮಾಜವನ್ನು ಪ್ರಭಾವಿಸುತ್ತಿದ್ದರು. ಕೆನೆಪದರದಿಂದ ಬಂದ ವ್ಯಕ್ತಿಗಳು ಕಲಾವಿಷಯಗಳನ್ನು ಓದಿ ಜೀವನಸಾಧನೆಯ ಉತ್ತುಂಗಕ್ಕೇರುತ್ತಿದ್ದರು. ಸಮಾಜದ ಆಗುಹೋಗುಗಳನ್ನು ಅವರೇ ನಿಯಂತ್ರಿಸುತ್ತಿದ್ದರು. ಸಾಹಿತಿ-ಕಲಾವಿದರಿಗೆ ಸಮಾಜದಲ್ಲಿ ಗೌರವದ ಸ್ಥಾನಮಾನ ಇರುತ್ತಿತ್ತು.
ಇವತ್ತು ಆ ಜಾಗವನ್ನು ವಿಜ್ಞಾನ-ತಂತ್ರಜ್ಞಾನ-ವ್ಯಾಪಾರ-ವಾಣಿಜ್ಯ ವಿಷಯಗಳು ಆಕ್ರಮಿಸಿಕೊಂಡಿವೆ. ಇವುಗಳ ಆಧಿಕ್ಯದಿಂದ ಕೊಳ್ಳುಬಾಕ ಸಂಸ್ಕೃತಿಯ ಉಪಭೋಗೀ ವ್ಯವಸ್ಥೆಯತ್ತ ದಾಪುಗಾಲು ಇಡುತ್ತಿದ್ದೇವೆ. ಕವಿ ಸಾಹಿತಿಗಳಿಗೆ, ಕಲಾವಿದರಿಗೆ ಇವತ್ತು ತಮ್ಮ ಕೃತಿಗಳನ್ನು ಹೆಮ್ಮೆಯಿಂದ ಅಭಿವ್ಯಕ್ತಿಸಿ, ಸಮಾಜಜೀವನದ ಪ್ರಭಾವೀ ಸ್ಥಾನವನ್ನು ಅಲಂಕರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅಥವಾ ಸಮಾಜ ಅವರನ್ನು ಹಾಗೆ ಕಡೆದು ರೂಪಿಸುತ್ತಿಲ್ಲ. ತಮ್ಮ ಜಾಗದಿಂದ ಅವರು ಕೆಳಗಿಳಿದುಬಿಟ್ಟಿದ್ದಾರೆ ಅನ್ನಿಸುತ್ತದೆ.
ಬುದ್ಧಿವಂತ ಮಕ್ಕಳು ಇವತ್ತು ಕಲಾವಿಷಯಗಳ ಕಡೆಗೆ ಆಸಕ್ತರಾಗದೆ, ವಿಜ್ಞಾನ-ತಂತ್ರಜ್ಞಾನ ವಿಷಯಗಳನ್ನು ಕಲಿಯಲು ಹೋಗುತ್ತಾರೆ. ಉಳಿದ ಕೆಲವರು ಮಾತ್ರವೇ ಕಲಾವಿಷಯಗಳತ್ತ ಬರುತ್ತಾರೆ ಎಂಬ ವಾತಾವರಣ ಇದೆ. ಅಂದಾಗ ಇವರು ಉತ್ಕೃಷ್ಟತೆ ಗಳಿಸಿ ಸಮಾಜವನ್ನು ಪ್ರಭಾವಿಸುವುದು ಹೇಗೆ?
ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಮೌಲ್ಯವು ಸಮಾಜದ ಮುನ್ನೆಲೆಗೆ ಬರುವುದು, ಅದು ಮರೆಯಾಗುವುದು, ಪಲ್ಲಟವಾಗುವುದು, ಹೊಸದಾದವು ಹುಟ್ಟಿ ಪ್ರಧಾನ ಭೂಮಿಕೆಗೆ ಬರುವುದು ಕುತೂಹಲದ ವಿಷಯವೇ ಸರಿ. ಯಾವುದು ಸರಿ, ಯಾವುದು ತಪ್ಪು ಎಂಬಂತಿಲ್ಲ. ಅವು ಬದಲಾಗುತ್ತಿರುತ್ತವೆ ಎಂಬುದು ಸರಿಯಾದ ಮಾತು.
ಈಗ್ಗೆ ಕೆಲವರ್ಷಗಳ ಹಿಂದೆ ಕೃಷಿಗೆ ನಮ್ಮಲ್ಲಿ ತುಂಬ ಪ್ರಾಮುಖ್ಯತೆ ಇತ್ತು. 'ಕೃಷಿತೋ ನಾಸ್ತಿ ದುರ್ಭಿಕ್ಷಂ' ಎಂಬ ಮಾತು ಈ ಹಿನ್ನೆಲೆಯಲ್ಲಿ ಬಂದಿದೆ. ಕೃಷಿಗೆ ಸಾಕಷ್ಟು ಭೂಮಿ ಇರುವವರು ಉದ್ಯೋಗಕ್ಕೆ ಹೋಗದೆ ಕೃಷಿಯನ್ನೇ ಮುಂದುವರಿಸುತ್ತಿದ್ದರು. ಅಂತಹ ಪರಿಸ್ಥಿತಿ ಈಗೆಲ್ಲಿದೆ? ಈಗ ವ್ಯಾಪಾರ-ವಾಣಿಜ್ಯ ಮತ್ತು ಹಣಕಾಸು ಪ್ರಧಾನ ಸ್ಥಾನಕ್ಕೆ ಬಂದಿದೆ.
ಅಜ್ಜ ನೆಟ್ಟ ಆಲದ ಮರಕ್ಕೆ ನೇಣು ಹಾಕಬೇಕೆಂದೇನಿಲ್ಲ. ಬದಲಾವಣೆಗಳು ಸಮಾಜಜೀವನದಲ್ಲಿ ಆಗುತ್ತಾ ಇರುತ್ತವೆ. ಅದು ಅನಿವಾರ್ಯ ಅಲ್ಲವೇ?
No comments:
Post a Comment