Sunday 15 May 2011

ಮುಂಡಾಸು ಮೂವತ್ತು ಮೊಳ!

ಈ ಟಿಪ್ಪಣಿ ಬರೆದು ಬಹುಶಃ ಹದಿನೈದು ವರ್ಷ ಮೇಲಾಗಿದೆ. ಮೊನ್ನೆ ಒಂದು ಪುಸ್ತಕ ಹುಡುಕುತ್ತಿದ್ದಾಗ  ಯಾವುದೋ ಪುಸ್ತಕದ ಎಡೆಯಿಂದ ಈ ಟಿಪ್ಪಣಿ ಹಾಳೆ ಕೆಳಗೆ ಬಿತ್ತು. ಸಣ್ಣ ವಿಷಯ ಎಂದು ಎಲ್ಲೂ  ಉಪಯೋಗಿಸಿರಲಿಲ್ಲ. ನನ್ನ ಬ್ಲಾಗ್ ಓದುಗರಿಗಾಗಿ ಈಗ ಇಲ್ಲಿ ನೀಡುತ್ತಿದ್ದೇನೆ:

 ರಾಜಸ್ತಾನದ ಜೈಪುರಕ್ಕೆ ಒಮ್ಮೆ ಒಂದು ವಾರದ ತರಬೇತಿ ಕಾರ್ಯಾಗಾರಕ್ಕೆ ಹೋಗಿದ್ದಾಗ ಜೈಸಲ್ಮೇರ್, ಅಂಬೇರ್ ಮೊದಲಾದೆಡೆ ಹೋಗಿದ್ದೆ. ಆಗ ಅಲ್ಲಿ ಬೇರೆ ಬೇರೆ ರೀತಿಯ ಮುಂಡಾಸು ಧರಿಸಿದವರನ್ನು ನೋಡಿ, ಕುತೂಹಲಗೊಂಡು ತಿಳಿದವರೊಬ್ಬರನ್ನು ವಿಚಾರಿಸಿದೆ. ಆಗ ಅವರು ನೀಡಿದ ಮಾಹಿತಿ ಆಶ್ಚರ್ಯ ಹುಟ್ಟಿಸಿತು. 

ರಾಜಸ್ತಾನದಲ್ಲಿ ಹನ್ನೆರಡು ವಿಧದ ಮುಂಡಾಸುಗಳಿವೆಯಂತೆ. ಅವುಗಳ ಹೆಸರುಗಳೆಂದರೆ- ಜಲೋರಿ, ಭಟ್ಟಿ, ಶಾಹಿ, ಪಗ್ಡಿ, ಪಾಗ್, ಕುರಿ ಕಾಯುವವರ ಮುಂಡಾಸು, ಅಲ್ವಾರ್, ದರ್ಬಾರಿ ಪಾಗ್, ಬೇಟೆಯಾಡುವವರ ಮುಂಡಾಸು, ಸಿರೋಹಿ, ಜೈಪುರಿ, ಜೋಧ್ಪುರಿ ಸಾಫಾ. 

ಉತ್ತರ ಭಾರತದಲ್ಲಿ ಇನ್ನೂ ಮುಂಡಾಸು ಬಳಕೆ ಮುಂದುವರಿದಿದೆ. ಅಲ್ಲಿ ಬಿಸಿಲು ಮತ್ತು ಚಳಿ ಎರಡೂ ಅಧಿಕ. ಅವುಗಳಿಂದ ರಕ್ಷಣೆ ಪಡೆಯುವುದು ಒಂದು ಕಾರಣವಾದರೆ, ಬಿರುಸುಗಾಳಿಗೆ ತೂರಿ ಬರುವ ಉಸುಕಿನಿಂದ ತಪ್ಪಿಸಿಕೊಳ್ಳುವುದು ಮುಂಡಾಸು ಧಾರಣೆಗೆ ಇನ್ನೊಂದು ಕಾರಣ. 

ಅವರವರ ಅಂತಸ್ತು ಮತ್ತು ಘನತೆಗೆ ತಕ್ಕಂತೆ ಮುಂಡಾಸಿನ ಉದ್ದ ಬಣ್ಣ ಮತ್ತು ಗಾತ್ರ ವ್ಯತ್ಯಾಸವಾಗುತ್ತದೆ. ಮುಂಡಾಸಿನ ಬಟ್ಟೆಯ ಉದ್ದ ಒಂಬತ್ತು ಮೀಟರಿನಿಂದ ಆರಂಭವಾಗಿ ಹದಿನೆಂಟು ಮೀಟರ್ ವರೆಗೆ ಇರುತ್ತದಂತೆ.  ಹೆಚ್ಚಾಗಿ ಕೇಸರಿ ಬಣ್ಣ ಇರುತ್ತದೆ. ಅಂತಸ್ತಿಗೆ ತಕ್ಕಂತೆ ಬಿಳಿ, ಕಡುನೀಲಿ, ಖಾಕಿ, ಕಡು ಕೆಂಪು, ಕಪ್ಪು, ಹೀಗೆ ಬೇರೆ ಬೇರೆ ಬಣ್ಣದವೂ ಇರುತ್ತವೆ. 

ಮುಂಡಾಸು ಗೌರವದ ಸಂಕೇತವಾಗಿ ಶಿರದಲ್ಲಿರುತ್ತದೆ. ಬೇರೆಯವರು ಅದನ್ನು ಕಿತ್ತೊಗೆದರೆ ಅವಮಾನವೆಂದು ಭಾವಿಸಲಾಗುತ್ತಿತ್ತು. ವಿರೋಧಿಯ ಪದತಲದಲ್ಲಿಟ್ಟರೆ ಶರಣಾಗತಿಯ ಸೂಚನೆ, ಹಿರಿಯರ-ವಿದ್ವಾಂಸರ ಕಾಲಬುಡದಲ್ಲಿಟ್ಟಾಗ ಗೌರವದ ಸಂಕೇತ, ಕೈ ಬದಲಾಯಿಸಿಕೊಂಡಾಗ ಸೋದರತ್ವದ ಭಾವ ಎಂದು ಭಾವಿಸಲಾಗುತ್ತಿತ್ತು. ಮಹಿಳೆಯೊಬ್ಬಳ ಕೈಗೆ ಮುಂಡಾಸು ಒಯ್ದು ಕೊಟ್ಟರೆ ಆಕೆಯ ಗಂಡ ತೀರಿಕೊಂಡಿದ್ದಾನೆ ಎಂದು ಅರ್ಥೈಸಿಕೊಳ್ಳಲಾಗುತ್ತಿತ್ತು. 

ಮುಂಡಾಸಿಗೆ ಸಂಬಂಧಿಸಿದಂತೆ ನಮ್ಮಲ್ಲಿ  ಕೆಲವು ಗಾದೆಗಳಿವೆ. "ಊಟ ಆಯಿತೇ ಎಂದು ಕೇಳಿದರೆ ಮುಂಡಾಸು ಮೂವತ್ತು ಮೊಳ" ಎಂದು ಒಬ್ಬಾತ ಉತ್ತರ ಕೊಟ್ಟನಂತೆ! ಪ್ರಶ್ನೆಯೊಂದಕ್ಕೆ ಅಸಂಬದ್ಧ ಉತ್ತರ ಕೊಟ್ಟರೆ ಈ ಗಾದೆ ಮಾತನ್ನು ಹೇಳಲಾಗುತ್ತಿತ್ತು. ಹುಡುಗಿಯ ಮದುವೆ ವಿಳಂಬವಾದರೆ "ಮುಂಡಾಸಿನವ ಬರುವುದಿಲ್ಲ; ಮುಟ್ಟಾಳೆಯವನಿಗೆ ಕೊಡುವುದಿಲ್ಲ". (ಶ್ರೀಮಂತ ವರ ಬರುವುದಿಲ್ಲ; ಬಡವನಿಗೆ ಕೊಡುವುದಿಲ್ಲ) ಎಂಬ ಗಾದೆ ಹೇಳುತ್ತಾರೆ.

ನಮಗೆ ಗೊತ್ತಿದ್ದುದು ಮೂವತ್ತು ಮೊಳದ ಮುಂಡಾಸು ಮಾತ್ರ. ಮೂವತ್ತು ಮೊಳ ಎಂದರೆ ಹೆಚ್ಚು ಕಡಿಮೆ ಹತ್ತು ಮೀಟರ್ ಉದ್ದ. ಆದರೆ ರಾಜಸ್ತಾನದವರ ಹದಿನೆಂಟು ಮೀಟರ್ ಉದ್ದದ ಮುಂಡಾಸಿನ ಮುಂದೆ ಈ ಹತ್ತು ಮೀಟರ್ ಉದ್ದದ ಮುಂಡಾಸು ಏನೇನೂ ಅಲ್ಲ. 

ಹಿಂದೆ ಮುಂಡಾಸು ಬಳಕೆ ದಕ್ಷಿಣ ಭಾರತದಲ್ಲಿಯೂ ಬಳಕೆಯಲ್ಲಿತ್ತು. ನಾನು ಚಿಕ್ಕವನಾಗಿದ್ದಾಗ ನನ್ನ ತಂದೆಯವರು ಮುಂಡಾಸು ಧರಿಸುತ್ತಿದ್ದುದನ್ನು ನಾನು ನೋಡಿದ್ದೇನೆ. ಹೊರಗೆ ಹೋಗುವಾಗ ಬಿಳಿಬಟ್ಟೆಯ ಮುಂಡಾಸನ್ನು ಒಪ್ಪ ಓರಣವಾಗಿ ತಲೆಗೆ ಸುತ್ತಿಕೊಳ್ಳುತ್ತಿದ್ದರು. ಮುಂಡಾಸು  ಕೇವಲ ತಲೆಯ ರಕ್ಷಣೆಗಾಗಿ ಅಲ್ಲ, ಅದರಿಂದ ಘನತೆಯೂ ಹೆಚ್ಚಾಗುತ್ತಿತ್ತು. 

ಈಗ ಮುಂಡಾಸು ಬಿಡಿ. ಇತ್ತೀಚೆಗೆ ಪಂಚೆ ತೊಡುವವರ ಸಂಖ್ಯೆಯೂ ಗಣನೀಯವಾಗಿ ಕುಸಿಯುತ್ತಿದೆ. ದಿರಿಸುಗಳ ಮೂಲಕವೇ ಇರಬಹುದು, ಜನಜೀವನ ಮತ್ತು ಸಂಸ್ಕೃತಿಯೊಂದು ಕಣ್ಣ ಮುಂದೆಯೇ ಹೇಗೆ ಬದಲಾಗುತ್ತಿದೆ, ಅಲ್ಲವೇ?

No comments:

Post a Comment