ಪ್ರಕೃತಿಯ ಮಡಿಲಲ್ಲಿ ಜ್ಯೋತಿಷ್ಯ ಸಂಶೋಧನೆ
ಸಕಲೇಶಪುರ ಬಳಿ ಮಾರನಹಳ್ಳಿ ಎಂಬಲ್ಲಿ ಪಶ್ಚಿಮ ಘಟ್ಟದ ಪ್ರಕೃತಿಯ ಮಡಿಲೊಳಗೆ ಸುಬ್ರಹ್ಮಣ್ಯ ಕುಳಮರ್ವ ಎಂಬವರು ಜ್ಯೋತಿಷ್ಯದ ಅಭ್ಯಾಸ ಮತ್ತು ಸಂಶೋಧನಾ ಕೇಂದ್ರ ಒಂದನ್ನು ತೆರೆದಿದ್ದಾರೆ. ಸುಮಾರು ಇಪ್ಪತ್ತೈದು ಎಕರೆ ಪ್ರದೇಶದ ಈ ಎಸ್ಟೇಟ್ ನಲ್ಲಿ ಸಮೃದ್ಧವಾದ ಕಾಡಿನೊಳಗೆ ಕಾಫಿ, ಅಡಿಕೆ, ಬಾಳೆ, ತೆಂಗು, ಏಲಕ್ಕಿ ಮೊದಲಾದ ಬೆಳೆಗಳಿವೆ. ಎರಡು ವರ್ಷಗಳ ಹಿಂದೆ ಪಂಚಾಯತನ ದೇವಸ್ಥಾನವನ್ನು ಕಟ್ಟಿಸಿ ಧಾರ್ಮಿಕ ಕೇಂದ್ರವೂ ಆಗಿ ಬೆಳೆಯುತ್ತಿದೆ; ಜೊತೆಗೆ ವರ್ಷಕ್ಕೊಮ್ಮೆ ಜಾತ್ರೆ. ಜಾತ್ರೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ.
ಸುಬ್ರಹ್ಮಣ್ಯ ಅವರಿಗೆ ಜ್ಯೋತಿಷ್ಯವು ವಂಶಪಾರಂಪರ್ಯವಾಗಿ ಒದಗಿ ಬಂದ ವಿದ್ಯೆ. ಬೆಂಗಳೂರಿನಲ್ಲಿ ಸರಕಾರಿ ಉದ್ಯೋಗದಲ್ಲಿರುವ ಅವರು ಸದ್ಯ ರಜಾದಿನ ಮತ್ತು ಬಿಡುವಿನ ಸಮಯದಲ್ಲಿ ಜ್ಯೋತಿಷ್ಯದ ಕೆಲಸ ಮಾಡುತ್ತಾರೆ. ನಿವೃತ್ತಿಯ ನಂತರ ಪೂರ್ಣಾವಧಿ ಜ್ಯೋತಿಷ್ಯದಲ್ಲಿ ನೆಲೆನಿಲ್ಲುವ ಯೋಚನೆ ಅವರದು.
ಮಾರನಹಳ್ಳಿ ಕೇಂದ್ರವನ್ನು 'ತಪೋವನ ಎಸ್ಟೇಟ್-ಪಂಚತೀರ್ಥ ಮಠ' ಎಂದು ಕರೆದಿದ್ದಾರೆ. ಅತಿಥಿಗಳಿಗಾಗಿ ಅಲ್ಲಿ ವಾಸ್ತವ್ಯದ ಏರ್ಪಾಡು ಇದೆ. ಅಂದರೆ ಸುಮಾರು ಹದಿನೈದರಿಂದ ಇಪ್ಪತ್ತು ಮಂದಿ ಅಲ್ಲಿ ವಾಸ್ತವ್ಯ ಮಾಡಬಹುದು. ಕುಟುಂಬವಾದರೆ ನಾಲ್ಕು ಕುಟುಂಬಗಳಿಗೆ ವಸತಿಯ ಏರ್ಪಾಡು ಇದೆ. ನಾಲ್ಕು ದಿನ ಅಲ್ಲಿ ಹಾಯಾಗಿರಬಹುದು. ಮುಂದೆ ಈ ಸ್ಥಳವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಯೋಜನೆ ಅವರಿಗಿದೆ. ಅಲ್ಲಿ ಕೆಲವು ದಿನ ಉಳಿದು ಧ್ಯಾನ ಮಾಡಬಹುದು; ಹೋಮ-ಹವನ ಮಾಡಿಸಬಹುದು, ಪೂಜೆ ಮಾಡಿಸಬಹುದು. ಅಥವಾ ಪ್ರಕೃತಿಯ ಮಧ್ಯೆ ಹಾಯಾಗಿರಬಹುದು.
ಎಸ್ಟೇಟ್ ನೊಳಗೆ ಹರಿಯುವ ಕಿರುತೊರೆ ಅಲ್ಲಿ ಪಂಚತೀರ್ಥಗಳನ್ನು (ಐದು ಕೆರೆಗಳನ್ನು) ನಿರ್ಮಿಸಿದ್ದು ನೋಡಲು ಸುಂದರವಾಗಿದೆ.
No comments:
Post a Comment