Tuesday, 31 May 2011

ಇವತ್ತು ಒಂದು ಹೊಸ ಕವಿತೆ ಬರೆದಿದ್ದೇನೆ. ನಾವು ಏನನ್ನೋ ಮಾಡಬೇಕೆಂದು ಅಂದುಕೊಂಡಿರುತ್ತೇವೆ. ಆ ಕೆಲಸವನ್ನು ಮಾಡುತ್ತ ಅದರಲ್ಲೇ ಮುಳುಗಿಬಿಡುತ್ತೇವೆ. ಕೆಲವು ಕಾಲದ ನಂತರ ಹಿಂದಿರುಗಿ ನೋಡಿದರೆ ಆ ಕೆಲಸವೇ ನಮ್ಮನ್ನು ರೂಪಿಸಿಬಿಟ್ಟಿರುತ್ತದೆ. ಇದೊಂದು ಚೋದ್ಯ!


ಕೆತ್ತಲು ಹೋದೆ

ಕೆತ್ತಲು ಹೋದೆ
ಕೆತ್ತುತ್ತ ಕೆತ್ತುತ್ತ  ಏನು ಕೆತ್ತಬೇಕೆಂಬುದ ಮರೆತೆ
ಮೊದಲು ತಲೆ 
ಆಮೇಲೆ ಕಣ್ಣು ಮೂಗು ಕಿವಿ ಬಾಯಿ 
ಕುತ್ತಿಗೆ 
ಭುಜ ಹೊಟ್ಟೆ ಹೊಕ್ಕುಳ
ತೊಡೆ ಕಾಲು
ಕೊನೆಗೆ ಪಾದ 
ಗಟ್ಟಿಯಾಗಿ ನಿಲ್ಲಬೇಕು,  ಅದಕ್ಕೆ ಬೆನ್ನು
ಹೀಗೆ ಮಾಡುತ್ತ ಮಾಡುತ್ತ  ಇರುವಾಗ 
ಮೂರ್ತಿ ಕೇಳಿತು
ನೀನೇನು ಮಾಡುತ್ತಿರುವೆ?
ನಾನು ಒಂದು ಕ್ಷಣ ಸ್ತಬ್ಧ
ಅಪ್ಪನನ್ನೇ ಮಗು ಕೇಳಿದಂತೆ ಪ್ರಶ್ನೆ
ಮೂರ್ತಿ ಹೇಳಿತು
ನೀನು ಮಾಡುತ್ತಿಲ್ಲ ನನ್ನ
ನಾನು ಮೊದಲು ಇದ್ದೆ
ಈಗಲೂ ಇದ್ದೇನೆ
ನಾಳೆಯೂ ಇರುತ್ತೇನೆ
ನೀನು ಕೆತ್ತುತ್ತಿರುವೆ ನಿನ್ನನ್ನೆ
ಎಚ್ಚರ, 
ಒಂದೊಂದು ಪೆಟ್ಟನ್ನೂ ಜಾಗ್ರತೆಯಿಂದ ಹಾಕು!

Monday, 23 May 2011

ವರದಿ

    ಸಾಗರ ಹವಾಮಾನ ಮಾಹಿತಿ ಪ್ರಸಾರದ ಉದ್ಘಾಟನೆ

ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಸಾಗರ ಹವಾಮಾನ ಮಾಹಿತಿಯನ್ನು ಕಾರವಾರ ಆಕಾಶವಾಣಿ ಕೇಂದ್ರವು ಬಿತ್ತರಿಸಲು ತೊಡಗಿದೆ. ಈ ಮಾಹಿತಿಯಲ್ಲಿ ಗಾಳಿಯ ವೇಗ ಮತ್ತು ದಿಕ್ಕು, ಅಲೆಯ ಎತ್ತರ, ಉಬ್ಬರ ಇಳಿತ ಮತ್ತು ಮೀನಿನ ಲಭ್ಯತೆ ಬಗ್ಗೆ ಮಾಹಿತಿ ಇರುತ್ತದೆ. ಇದರಿಂದ ಬೆಸ್ತರಿಗೆ ಹಾಗೂ ಸಾಗರತಟದಲ್ಲಿ ವಾಸಿಸುವವರಿಗೆ ತುಂಬ ಅನುಕೂಲವಾಗಲಿದೆ. ಸಾಗರದಲ್ಲಿ ಭೂಮಿಯಂತೆ ತುಂಬ ಸಂಪನ್ಮೂಲ ಇರುವುದರಿಂದ ಬೆಸ್ತರು ತಮ್ಮ ಶ್ರಮ, ಸಮಯ ಮತ್ತು ಹಣವನ್ನು ಸಾರ್ಥಕವಾಗಿ ಹೂಡಬಹುದಾಗಿದ್ದು, ಈ ಮಾಹಿತಿಯಿಂದಾಗಿ ಅಧಿಕ ಮೀನುಬೆಳೆಯನ್ನು ಪಡೆಯಬಹುದಾಗಿದೆ. ಸೊತ್ತು ಮತ್ತು ಜೀವರಕ್ಷಣೆಗೂ ಅನುಕೂಲವಾಗಲಿದೆ.


ಪ್ರಸಾರ ಕಾರ್ಯಕ್ರಮವನ್ನು ಕಾರವಾರ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಡಾ. ವಸಂತಕುಮಾರ ಪೆರ್ಲ ಅವರು ದಿನಾಂಕ 20-5-2011 ರಂದು ಕಾರವಾರದಲ್ಲಿ  ವಿಧ್ಯುಕ್ತವಾಗಿ ಉದ್ಘಾಟಿಸಿದರು. ಚಿತ್ರದಲ್ಲಿ ಮೀನುಗಾರರ ಸಂಘದ ಅಧ್ಯಕ್ಷ ಪಿ.ಎಂ. ತಾಂಡೇಲ, ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ವಿ.ಎನ್. ನಾಯಕ್, ಸಾಗರ ಮಾಹಿತಿ ಸೇವಾ ಕೇಂದ್ರದ ಮುಖ್ಯಸ್ಥ ಡಾ. ಬಾಲಕೃಷ್ಣನ್ ನಾಯರ್ ಮತ್ತು ಮುಖ್ಯ ಸಂಶೋಧಕ ಡಾ.ಯು.ಜಿ. ಭಟ್ ಇದ್ದಾರೆ.

Wednesday, 18 May 2011

ಪ್ರಕೃತಿಯ ಮಡಿಲಲ್ಲಿ ಜ್ಯೋತಿಷ್ಯ ಸಂಶೋಧನೆ

ಸಕಲೇಶಪುರ ಬಳಿ ಮಾರನಹಳ್ಳಿ ಎಂಬಲ್ಲಿ ಪಶ್ಚಿಮ ಘಟ್ಟದ ಪ್ರಕೃತಿಯ ಮಡಿಲೊಳಗೆ ಸುಬ್ರಹ್ಮಣ್ಯ ಕುಳಮರ್ವ ಎಂಬವರು ಜ್ಯೋತಿಷ್ಯದ ಅಭ್ಯಾಸ ಮತ್ತು  ಸಂಶೋಧನಾ ಕೇಂದ್ರ ಒಂದನ್ನು ತೆರೆದಿದ್ದಾರೆ. ಸುಮಾರು ಇಪ್ಪತ್ತೈದು ಎಕರೆ ಪ್ರದೇಶದ ಈ ಎಸ್ಟೇಟ್ ನಲ್ಲಿ  ಸಮೃದ್ಧವಾದ ಕಾಡಿನೊಳಗೆ ಕಾಫಿ, ಅಡಿಕೆ, ಬಾಳೆ, ತೆಂಗು, ಏಲಕ್ಕಿ ಮೊದಲಾದ ಬೆಳೆಗಳಿವೆ. ಎರಡು ವರ್ಷಗಳ ಹಿಂದೆ ಪಂಚಾಯತನ ದೇವಸ್ಥಾನವನ್ನು ಕಟ್ಟಿಸಿ ಧಾರ್ಮಿಕ ಕೇಂದ್ರವೂ ಆಗಿ ಬೆಳೆಯುತ್ತಿದೆ; ಜೊತೆಗೆ ವರ್ಷಕ್ಕೊಮ್ಮೆ ಜಾತ್ರೆ. ಜಾತ್ರೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. 




ಸುಬ್ರಹ್ಮಣ್ಯ ಅವರಿಗೆ ಜ್ಯೋತಿಷ್ಯವು ವಂಶಪಾರಂಪರ್ಯವಾಗಿ ಒದಗಿ ಬಂದ ವಿದ್ಯೆ. ಬೆಂಗಳೂರಿನಲ್ಲಿ ಸರಕಾರಿ ಉದ್ಯೋಗದಲ್ಲಿರುವ ಅವರು ಸದ್ಯ ರಜಾದಿನ ಮತ್ತು ಬಿಡುವಿನ ಸಮಯದಲ್ಲಿ ಜ್ಯೋತಿಷ್ಯದ ಕೆಲಸ ಮಾಡುತ್ತಾರೆ. ನಿವೃತ್ತಿಯ ನಂತರ ಪೂರ್ಣಾವಧಿ ಜ್ಯೋತಿಷ್ಯದಲ್ಲಿ ನೆಲೆನಿಲ್ಲುವ ಯೋಚನೆ ಅವರದು. 




ಮಾರನಹಳ್ಳಿ ಕೇಂದ್ರವನ್ನು 'ತಪೋವನ ಎಸ್ಟೇಟ್-ಪಂಚತೀರ್ಥ ಮಠ' ಎಂದು ಕರೆದಿದ್ದಾರೆ. ಅತಿಥಿಗಳಿಗಾಗಿ ಅಲ್ಲಿ ವಾಸ್ತವ್ಯದ ಏರ್ಪಾಡು ಇದೆ. ಅಂದರೆ ಸುಮಾರು ಹದಿನೈದರಿಂದ ಇಪ್ಪತ್ತು ಮಂದಿ ಅಲ್ಲಿ ವಾಸ್ತವ್ಯ ಮಾಡಬಹುದು. ಕುಟುಂಬವಾದರೆ ನಾಲ್ಕು ಕುಟುಂಬಗಳಿಗೆ ವಸತಿಯ ಏರ್ಪಾಡು ಇದೆ. ನಾಲ್ಕು ದಿನ ಅಲ್ಲಿ ಹಾಯಾಗಿರಬಹುದು. ಮುಂದೆ ಈ ಸ್ಥಳವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಯೋಜನೆ ಅವರಿಗಿದೆ. ಅಲ್ಲಿ ಕೆಲವು ದಿನ ಉಳಿದು ಧ್ಯಾನ ಮಾಡಬಹುದು; ಹೋಮ-ಹವನ ಮಾಡಿಸಬಹುದು, ಪೂಜೆ ಮಾಡಿಸಬಹುದು. ಅಥವಾ ಪ್ರಕೃತಿಯ ಮಧ್ಯೆ ಹಾಯಾಗಿರಬಹುದು


ಎಸ್ಟೇಟ್ ನೊಳಗೆ ಹರಿಯುವ ಕಿರುತೊರೆ ಅಲ್ಲಿ ಪಂಚತೀರ್ಥಗಳನ್ನು (ಐದು ಕೆರೆಗಳನ್ನು) ನಿರ್ಮಿಸಿದ್ದು ನೋಡಲು ಸುಂದರವಾಗಿದೆ. 

Sunday, 15 May 2011

ಮುಂಡಾಸು ಮೂವತ್ತು ಮೊಳ!

ಈ ಟಿಪ್ಪಣಿ ಬರೆದು ಬಹುಶಃ ಹದಿನೈದು ವರ್ಷ ಮೇಲಾಗಿದೆ. ಮೊನ್ನೆ ಒಂದು ಪುಸ್ತಕ ಹುಡುಕುತ್ತಿದ್ದಾಗ  ಯಾವುದೋ ಪುಸ್ತಕದ ಎಡೆಯಿಂದ ಈ ಟಿಪ್ಪಣಿ ಹಾಳೆ ಕೆಳಗೆ ಬಿತ್ತು. ಸಣ್ಣ ವಿಷಯ ಎಂದು ಎಲ್ಲೂ  ಉಪಯೋಗಿಸಿರಲಿಲ್ಲ. ನನ್ನ ಬ್ಲಾಗ್ ಓದುಗರಿಗಾಗಿ ಈಗ ಇಲ್ಲಿ ನೀಡುತ್ತಿದ್ದೇನೆ:

 ರಾಜಸ್ತಾನದ ಜೈಪುರಕ್ಕೆ ಒಮ್ಮೆ ಒಂದು ವಾರದ ತರಬೇತಿ ಕಾರ್ಯಾಗಾರಕ್ಕೆ ಹೋಗಿದ್ದಾಗ ಜೈಸಲ್ಮೇರ್, ಅಂಬೇರ್ ಮೊದಲಾದೆಡೆ ಹೋಗಿದ್ದೆ. ಆಗ ಅಲ್ಲಿ ಬೇರೆ ಬೇರೆ ರೀತಿಯ ಮುಂಡಾಸು ಧರಿಸಿದವರನ್ನು ನೋಡಿ, ಕುತೂಹಲಗೊಂಡು ತಿಳಿದವರೊಬ್ಬರನ್ನು ವಿಚಾರಿಸಿದೆ. ಆಗ ಅವರು ನೀಡಿದ ಮಾಹಿತಿ ಆಶ್ಚರ್ಯ ಹುಟ್ಟಿಸಿತು. 

ರಾಜಸ್ತಾನದಲ್ಲಿ ಹನ್ನೆರಡು ವಿಧದ ಮುಂಡಾಸುಗಳಿವೆಯಂತೆ. ಅವುಗಳ ಹೆಸರುಗಳೆಂದರೆ- ಜಲೋರಿ, ಭಟ್ಟಿ, ಶಾಹಿ, ಪಗ್ಡಿ, ಪಾಗ್, ಕುರಿ ಕಾಯುವವರ ಮುಂಡಾಸು, ಅಲ್ವಾರ್, ದರ್ಬಾರಿ ಪಾಗ್, ಬೇಟೆಯಾಡುವವರ ಮುಂಡಾಸು, ಸಿರೋಹಿ, ಜೈಪುರಿ, ಜೋಧ್ಪುರಿ ಸಾಫಾ. 

ಉತ್ತರ ಭಾರತದಲ್ಲಿ ಇನ್ನೂ ಮುಂಡಾಸು ಬಳಕೆ ಮುಂದುವರಿದಿದೆ. ಅಲ್ಲಿ ಬಿಸಿಲು ಮತ್ತು ಚಳಿ ಎರಡೂ ಅಧಿಕ. ಅವುಗಳಿಂದ ರಕ್ಷಣೆ ಪಡೆಯುವುದು ಒಂದು ಕಾರಣವಾದರೆ, ಬಿರುಸುಗಾಳಿಗೆ ತೂರಿ ಬರುವ ಉಸುಕಿನಿಂದ ತಪ್ಪಿಸಿಕೊಳ್ಳುವುದು ಮುಂಡಾಸು ಧಾರಣೆಗೆ ಇನ್ನೊಂದು ಕಾರಣ. 

ಅವರವರ ಅಂತಸ್ತು ಮತ್ತು ಘನತೆಗೆ ತಕ್ಕಂತೆ ಮುಂಡಾಸಿನ ಉದ್ದ ಬಣ್ಣ ಮತ್ತು ಗಾತ್ರ ವ್ಯತ್ಯಾಸವಾಗುತ್ತದೆ. ಮುಂಡಾಸಿನ ಬಟ್ಟೆಯ ಉದ್ದ ಒಂಬತ್ತು ಮೀಟರಿನಿಂದ ಆರಂಭವಾಗಿ ಹದಿನೆಂಟು ಮೀಟರ್ ವರೆಗೆ ಇರುತ್ತದಂತೆ.  ಹೆಚ್ಚಾಗಿ ಕೇಸರಿ ಬಣ್ಣ ಇರುತ್ತದೆ. ಅಂತಸ್ತಿಗೆ ತಕ್ಕಂತೆ ಬಿಳಿ, ಕಡುನೀಲಿ, ಖಾಕಿ, ಕಡು ಕೆಂಪು, ಕಪ್ಪು, ಹೀಗೆ ಬೇರೆ ಬೇರೆ ಬಣ್ಣದವೂ ಇರುತ್ತವೆ. 

ಮುಂಡಾಸು ಗೌರವದ ಸಂಕೇತವಾಗಿ ಶಿರದಲ್ಲಿರುತ್ತದೆ. ಬೇರೆಯವರು ಅದನ್ನು ಕಿತ್ತೊಗೆದರೆ ಅವಮಾನವೆಂದು ಭಾವಿಸಲಾಗುತ್ತಿತ್ತು. ವಿರೋಧಿಯ ಪದತಲದಲ್ಲಿಟ್ಟರೆ ಶರಣಾಗತಿಯ ಸೂಚನೆ, ಹಿರಿಯರ-ವಿದ್ವಾಂಸರ ಕಾಲಬುಡದಲ್ಲಿಟ್ಟಾಗ ಗೌರವದ ಸಂಕೇತ, ಕೈ ಬದಲಾಯಿಸಿಕೊಂಡಾಗ ಸೋದರತ್ವದ ಭಾವ ಎಂದು ಭಾವಿಸಲಾಗುತ್ತಿತ್ತು. ಮಹಿಳೆಯೊಬ್ಬಳ ಕೈಗೆ ಮುಂಡಾಸು ಒಯ್ದು ಕೊಟ್ಟರೆ ಆಕೆಯ ಗಂಡ ತೀರಿಕೊಂಡಿದ್ದಾನೆ ಎಂದು ಅರ್ಥೈಸಿಕೊಳ್ಳಲಾಗುತ್ತಿತ್ತು. 

ಮುಂಡಾಸಿಗೆ ಸಂಬಂಧಿಸಿದಂತೆ ನಮ್ಮಲ್ಲಿ  ಕೆಲವು ಗಾದೆಗಳಿವೆ. "ಊಟ ಆಯಿತೇ ಎಂದು ಕೇಳಿದರೆ ಮುಂಡಾಸು ಮೂವತ್ತು ಮೊಳ" ಎಂದು ಒಬ್ಬಾತ ಉತ್ತರ ಕೊಟ್ಟನಂತೆ! ಪ್ರಶ್ನೆಯೊಂದಕ್ಕೆ ಅಸಂಬದ್ಧ ಉತ್ತರ ಕೊಟ್ಟರೆ ಈ ಗಾದೆ ಮಾತನ್ನು ಹೇಳಲಾಗುತ್ತಿತ್ತು. ಹುಡುಗಿಯ ಮದುವೆ ವಿಳಂಬವಾದರೆ "ಮುಂಡಾಸಿನವ ಬರುವುದಿಲ್ಲ; ಮುಟ್ಟಾಳೆಯವನಿಗೆ ಕೊಡುವುದಿಲ್ಲ". (ಶ್ರೀಮಂತ ವರ ಬರುವುದಿಲ್ಲ; ಬಡವನಿಗೆ ಕೊಡುವುದಿಲ್ಲ) ಎಂಬ ಗಾದೆ ಹೇಳುತ್ತಾರೆ.

ನಮಗೆ ಗೊತ್ತಿದ್ದುದು ಮೂವತ್ತು ಮೊಳದ ಮುಂಡಾಸು ಮಾತ್ರ. ಮೂವತ್ತು ಮೊಳ ಎಂದರೆ ಹೆಚ್ಚು ಕಡಿಮೆ ಹತ್ತು ಮೀಟರ್ ಉದ್ದ. ಆದರೆ ರಾಜಸ್ತಾನದವರ ಹದಿನೆಂಟು ಮೀಟರ್ ಉದ್ದದ ಮುಂಡಾಸಿನ ಮುಂದೆ ಈ ಹತ್ತು ಮೀಟರ್ ಉದ್ದದ ಮುಂಡಾಸು ಏನೇನೂ ಅಲ್ಲ. 

ಹಿಂದೆ ಮುಂಡಾಸು ಬಳಕೆ ದಕ್ಷಿಣ ಭಾರತದಲ್ಲಿಯೂ ಬಳಕೆಯಲ್ಲಿತ್ತು. ನಾನು ಚಿಕ್ಕವನಾಗಿದ್ದಾಗ ನನ್ನ ತಂದೆಯವರು ಮುಂಡಾಸು ಧರಿಸುತ್ತಿದ್ದುದನ್ನು ನಾನು ನೋಡಿದ್ದೇನೆ. ಹೊರಗೆ ಹೋಗುವಾಗ ಬಿಳಿಬಟ್ಟೆಯ ಮುಂಡಾಸನ್ನು ಒಪ್ಪ ಓರಣವಾಗಿ ತಲೆಗೆ ಸುತ್ತಿಕೊಳ್ಳುತ್ತಿದ್ದರು. ಮುಂಡಾಸು  ಕೇವಲ ತಲೆಯ ರಕ್ಷಣೆಗಾಗಿ ಅಲ್ಲ, ಅದರಿಂದ ಘನತೆಯೂ ಹೆಚ್ಚಾಗುತ್ತಿತ್ತು. 

ಈಗ ಮುಂಡಾಸು ಬಿಡಿ. ಇತ್ತೀಚೆಗೆ ಪಂಚೆ ತೊಡುವವರ ಸಂಖ್ಯೆಯೂ ಗಣನೀಯವಾಗಿ ಕುಸಿಯುತ್ತಿದೆ. ದಿರಿಸುಗಳ ಮೂಲಕವೇ ಇರಬಹುದು, ಜನಜೀವನ ಮತ್ತು ಸಂಸ್ಕೃತಿಯೊಂದು ಕಣ್ಣ ಮುಂದೆಯೇ ಹೇಗೆ ಬದಲಾಗುತ್ತಿದೆ, ಅಲ್ಲವೇ?

Friday, 6 May 2011

ಕನ್ನಡಕ್ಕೆ ಎಚ್ಚರಿಕೆಯ ಗಂಟೆ

ಮುಂದಿನ ಐವತ್ತು ವರ್ಷಗಳ ಅವಧಿಯಲ್ಲಿ ಕಣ್ಮರೆಯಾಗಲಿರುವ ಸಣ್ಣ ಭಾಷೆಗಳಲ್ಲಿ ತುಳು ಕೂಡ ಒಂದು ಎಂದು ಈಗ್ಗೆ ಎರಡು ವರ್ಷಗಳ ಹಿಂದೆ ಬಂದ ಯುನೆಸ್ಕೋದ ಅಧ್ಯಯನ ವರದಿಯೊಂದು ಎಚ್ಚರಿಕೆಯ ಗಂಟೆ ಬಾರಿಸಿತ್ತು. ಇದರಿಂದ ತುಳುವರಿಗೆ ಮತ್ತು ತುಳು ಭಾಷೆಯ ಬಗ್ಗೆ ಪ್ರೀತಿ ಹೊಂದಿದವರಿಗೆ ಗಾಬರಿ ಆಯಿತು. 

'ಊರಿಗೆ ಬಂದವಳು ನೀರಿಗೆ ಬಾರದಿದ್ದಾಳೆಯೇ?' ಎಂಬ ಗಾದೆಯಂತೆ, ಈ ಭವಿಷ್ಯವಾಣಿಯಿಂದ ನಿಜವಾಗಿ ಎಚ್ಚರಗೊಳ್ಳಬೇಕಾದವರು ಕನ್ನಡಿಗರು. ತುಳು, ಕನ್ನಡದ ಜನಪದವೇ ತಾನೆ? ತುಳು ಸೊರಗುವುದೆಂದರೆ ಕನ್ನಡವೂ ಸೊರಗಿದ ಹಾಗೆಯೇ. ತುಳುವಿನ ಜೊತೆಗೆ ಕನ್ನಡವೂ ನಿಧಾನವಾಗಿ ಸೊರಗುತ್ತಿರುವ ಸೂಚನೆ ಕಣ್ಣಮುಂದೆಯೇ ಸಿಗುತ್ತಿದೆ. 

ಇವತ್ತು ಪೇಟೆ-ಪಟ್ಟಣಗಳ ಮಕ್ಕಳಿಗೆ ಕನ್ನಡದಲ್ಲಿ ಸರಿಯಾಗಿ ವ್ಯವಹರಿಸಲು ಬರುವುದಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ, ಕಲಿಯುತ್ತಿರುವ ಈ ಮಕ್ಕಳಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ. ಮಾತಾಡುವ ಕನ್ನಡದಲ್ಲಿ ಅರ್ಧ ಭಾಗ ಇಂಗ್ಲಿಷ್ ತುಂಬಿ ಹೋಗಿದೆ. 

ನಾವು ಭಾಷೆ ಮತ್ತು ಕಲಿಕಾ ಮಾಧ್ಯಮಗಳ ನಡುವೆ ಸ್ಪಷ್ಟವಾದ ನೀತಿಯೊಂದನ್ನು ಕಲ್ಪಿಸದೇ ಹೋದರೆ ಮುಂದಿನ ತಲೆಮಾರುಗಳಲ್ಲಿ ಕನ್ನಡ ಎಂಬ ಸಂಪದ್ಭರಿತ ಭಾಷೆಯೊಂದನ್ನು ಕಳೆದುಕೊಳ್ಳಲಿದ್ದೇವೆ. 

ಇಂಗ್ಲಿಷ್ ಒಂದು ಭಾಷೆಯಾಗಿ ಇರಲಿ; ಕಲಿಕಾ ಮಾಧ್ಯಮವಾಗಿ ಬೇಡ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಒಂದನೇ ತರಗತಿಯಿಂದಲೇ ಕಲಿಸಲಿ. ಆದರೆ ಕಲಿಕಾಮಾಧ್ಯಮವಾಗಿ ಪ್ರೌಢಶಿಕ್ಷಣದ ವರೆಗೆ ಕನ್ನಡವೇ ಇರಲಿ. ಇದರಿಂದ ಮಕ್ಕಳಿಗೆ ತಮ್ಮ ಮಾತೃಭಾಷೆಯ ಬಗ್ಗೆ ಪ್ರೀತಿಯೂ ಅಭಿಮಾನವೂ ಮೂಡುತ್ತದೆ ಮತ್ತು ನಮ್ಮ ಪರಂಪರೆಯ ಸಾತತ್ಯ ಮುಂದುವರಿಯಲು ಸಾಧ್ಯವಾಗುತ್ತದೆ. ಬಹುದೊಡ್ಡ ಜ್ಙಾನನಿಧಿ ಅಡಗಿರುವ ಭಾಷೆಯೊಂದು  ಮುಂದುವರಿದುಕೊಂಡು ಹೋಗುತ್ತದೆ. 

ಇವತ್ತಿನ ಪ್ರಮುಖ ಸಂವಹನ ಮಾಧ್ಯಮವಾಗಿರುವ ಮೊಬೈಲ್ ಮತ್ತು ಕಂಪ್ಯೂಟರ್ ನಲ್ಲಿ ಕನ್ನಡದ ಬಳಕೆ ತುಂಬ ಹೆಚ್ಚಾಗಬೇಕು. ಇರುವ ತಾಂತ್ರಿಕತೆ ಸುಲಭವಾಗಿಲ್ಲ; ಕ್ಲಿಷ್ಟವಾಗಿದೆ. ಮುಂದಿನ ತಲೆಮಾರಿನವರ ಪ್ರಮುಖ ಮಾಧ್ಯಮವಾಗಲಿರುವ ಕಂಪ್ಯೂಟರ್ ಅನ್ನು ಕನ್ನಡಮಯ ಮಾಡದಿದ್ದರೆ ಕನ್ನಡಕ್ಕೆ ಅಪಾಯ ಕಾದಿದೆ ಎಂದೇ ಅರ್ಥ. ಇವತ್ತು ಸಾಫ್ಟ್ ವೇರ್ ತಂತ್ರಜ್ಙಾನ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕಂಪ್ಯೂಟರ್ ಮತ್ತು ಮೊಬೈಲ್ ನಲ್ಲಿ ಕನ್ನಡವನ್ನು ಸುಲಭವಾಗಿ ಬಳಸಲು ಬೇಕಾದ ತಾಂತ್ರಿಕತೆಯ ಕುರಿತು ತುರ್ತಾಗಿ ಗಮನ ಹರಿಸಬೇಕಾಗಿದೆ. 

ಹಳಗನ್ನಡವನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳುವ ಮತ್ತು ಅದರೊಂದಿಗೆ ಸಾವಯವ ಸಂಬಂಧ ಹೊಂದಿರುವವರ ಕಾಲ ಕಳೆದ ತಲೆಮಾರಿನೊಂದಿಗೆ ಆಗಿಹೋಯಿತು. ಈಗ ತೀರಾ ಆಸಕ್ತಿ ಇರುವ ಕೆಲವರು ಗ್ರಂಥಾಲಯದಲ್ಲಿ ಕುಳಿತು ಸಂಶೋಧನೆ ಮಾಡುವ ಹಂತಕ್ಕೆ ಹಳಗನ್ನಡ ಬಂದು ತಲಪಿದೆ.  ನಮ್ಮ ಪಾಠ-ಪಠ್ಯಗಳಿಂದ ಹಳಗನ್ನಡ ಕಾವ್ಯ ಭಾಗಗಳು ಮಾಯವಾಗಿ ಎಷ್ಟೋ ವರ್ಷ ಆಯಿತು. ವಿಶ್ವ ವಿದ್ಯಾಲಯಗಳಲ್ಲಿ ಹಳಗನ್ನಡ ಪಾಠ ಮಾಡುವ ಅಧ್ಯಾಪಕರೇ ಇಲ್ಲವಂತೆ. ಯಾವುದನ್ನು ಓದುವವರು ಬಳಸುವವರು ಇಲ್ಲವೋ ಆಗ ಅದಕ್ಕೆ ಸಂಶೋಧನೆಯ ದೃಷ್ಟಿಯಿಂದ 'ಶಾಸ್ತ್ರೀಯ ಭಾಷೆ'ಯ ಪಟ್ಟ ಬರುತ್ತದೆ! 

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಎಷ್ಟೊಂದು ಅರ್ಹವಾಗಿ ಸಿಕ್ಕಿದೆ, ಅಲ್ಲವೇ?

ಹಳಗನ್ನಡಕ್ಕೆ ಈಗಲೇ ಈ ಸ್ಥಿತಿಯಾದರೆ ಮುಂದಿನ ಮೂವತ್ತು ವರ್ಷಗಳಲ್ಲಿ ಅದು ಪ್ರಯೋಗಾಲಯದಲ್ಲಿ ಕುಳಿತುಕೊಳ್ಳುವುದು ಖಂಡಿತ. ಇನ್ನು ಈ ಆಧುನಿಕ ಕನ್ನಡದ ಸ್ಥಿತಿ ಹೇಗಿದ್ದೀತು? ಊಹಿಸಲೂ ಸಾಧ್ಯವಿಲ್ಲ. 

ಕನ್ನಡದ ಉದ್ಧಾರವಾಗಬೇಕಾದರೆ ಪ್ರತಿಯೊಂದು ಕುಟುಂಬವೂ ಮನೆಯಲ್ಲಿ ಮಕ್ಕಳಿಗೆ ಕನ್ನಡಪ್ರೀತಿಯನ್ನು ಕಲಿಸುವ ಆವಶ್ಯಕತೆ ಇದೆ. ಇದೊಂದು ಸಾಮೂಹಿಕ ಕೆಲಸ. ಕನ್ನಡ ಬಲ್ಲ ಕೆಲವರು ಸಾರ್ವಜನಿಕವಾಗಿ ವೇದಿಕೆಯಿಂದ 'ನನಗೆ ಸರಿಯಾಗಿ ಕನ್ನಡ ಮಾತಾಡಲು ಬರುವುದಿಲ್ಲ. ಇಂಗ್ಲಿಷ್ ನಲ್ಲಿ ಮಾತಾಡುತ್ತೇನೆ' ಎಂದು ಅರ್ಧಂಬರ್ಧ ಇಂಗ್ಲಿಷ್ ನಲ್ಲಿ ಮಾತಾಡುವುದನ್ನು ಕೇಳಿದ್ದೇನೆ! ಮಾತೃಭಾಷೆಯಲ್ಲಿ ಮತ್ತು ತಾನು ಬದುಕಿ ಬಾಳುತ್ತಿರುವ ಪರಿಸರದ ಭಾಷೆಯಲ್ಲಿ ಒಬ್ಬಮನುಷ್ಯನಿಗೆ ಮಾತಾಡಲಾಗದ ಇಂತಹ ಸ್ಥಿತಿ ಬರಬಾರದು. ಸಾರ್ವಜನಿಕವಾಗಿ ಕನ್ನಡವನ್ನು ಹೀಗೆ ನಮ್ಮ ಜನರೇ ಹೀನೈಸಿದರೆ ಗತಿ ಏನು?

ಕನ್ನಡವನ್ನು ಉಳಿಸುವುದು ಕೇವಲ ಕವಿ ಸಾಹಿತಿಗಳ ಕೆಲಸವಲ್ಲ. ಅದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಅನ್ನ-ನೀರಿನಷ್ಟೇ ಕನ್ನಡದ ದಾಹವೂ ಪ್ರತಿಯೊಬ್ಬನ ಆದ್ಯತೆ ಆಗಬೇಕು. ಇಲ್ಲದಿದ್ದರೆ ನಾಳೆ ಇನ್ನೊಬ್ಬರ ಮನೆಮುಂದೆ ಹೋಗಿ ಅಂಗಲಾಚುವ ದಯನೀಯ ಪರಿಸ್ಥಿತಿ ಬಂದೀತು.

***

Monday, 2 May 2011

ಓದುಗರಿಗೆ ನಮಸ್ಕಾರ. 

ಇವತ್ತು ನನ್ನ ಬ್ಲಾಗ್ ಓದುಗರಿಗಾಗಿ ಕವನ ಒಂದನ್ನು ನೀಡುತ್ತಿದ್ದೇನೆ. ಆಧುನಿಕ ಕಾಲದಲ್ಲಿ ಸಂಘರ್ಷ ಇರುವ ಯಾವ ರಾಷ್ಟ್ರದಲ್ಲೇ ಆಗಲಿ ಭಯೋತ್ಪಾದನೆ ಮಾಮೂಲಿಯಾಗಿಬಿಟ್ಟಿದೆ. ಭಯೋತ್ಪಾದನೆ ಅಂದ ಮೇಲೆ ಬಾಂಬ್ ಸ್ಫೋಟ ಇದ್ದದ್ದೇ. ಯಾವ ಸಮಯದಲ್ಲಿ ಎಲ್ಲಿ ಬಾಂಬ್ ಸ್ಫೋಟಗೊಂಡು ಯಾವ ಅನಾಹುತ ಸಂಭವಿಸಬಹುದು ಎಂಬುದನ್ನು ಹೇಳಬರುವಂತಿಲ್ಲ. ಇಲ್ಲಿ ಮಾರ್ಕೆಟ್ ನಲ್ಲಿ ಬಾಂಬ್ ಸ್ಫೋಟವಾಗಿದೆ. ಅಲ್ಲಿ ಆಗ ನಾನೇ ಇದ್ದೆ! ಏನೇನು ಆಯಿತು ಎಂಬುದನ್ನು ಓದಿ!

ಮಾರ್ಕೆಟ್ ನಲ್ಲಿ ಬಾಂಬ್ ಸ್ಫೋಟ

ಮಾರ್ಕೆಟ್ ತುಂಬ ಗಿಜಿಗಿಜಿ ಜನ 
ಇಕ್ಕಟ್ಟು, ಒತ್ತರಿಸಿದಂತೆ ಸಾಮಾನು ಸರಂಜಾಮು
ಆ ಮಹಿಳೆಯ ಸೊಂಟದಲ್ಲಿ ಪುಟ್ಟ
ವ್ಯಾನಿಟಿ ಬ್ಯಾಗು, ತರಕಾರಿ ಚೀಲ
ಕ್ಯಾರಿ ಬ್ಯಾಗ್ ತುಂಬ ಸ್ನೋ ಪೌಡರ್ ಸೋಪು ಇತ್ಯಾದಿ
ಪುಟ್ಟ ಮಗುವಿನ ಕೈಯಲ್ಲಿ ಆಟಿಕೆಯ ಚೀಲ 
ಚಾಕೋಲೆಟ್, ಚೂಯಿಂಗ್ ಗಮ್
ಕಾಯಿನ್ ಬಾಕ್ಸ್ ಬಳಿ ಕಿಲಕಿಲ ಜೋಡಿ 
ಸೊಂಟವ ಬಳಸಿ ಆರಾಮ ನಡೆಯುವ 
ಅಸಡ್ಡಾಳ ಗಂಡ, ಬಳಕುವುದನ್ನೇ ನೋಡುತ್ತ
ಕಬ್ಬು ಸೀಪುತ್ತಿರುವ ಪಡ್ಡೆ ಹುಡುಗರ ಅಡ್ಡೆ. 

ಸಂಜೆ ಐದರ ಸಮಯ 
ಧಾವಂತ ಗಡಿಬಿಡಿ
ಮನೆಗೆ ತೆರಳುವ ಮುನ್ನ ಹಿರಿದುಕೊಳ್ಳುವ ತುರುಸು
ಕಚೇರಿ ಬಿಟ್ಟವರು
ಕೆಲಸ ಮುಗಿಸಿದವರು
ಅಂಗಡಿ ಮುಂಗಟ್ಟು ಫಿಶ್ ಮಾರ್ಕೆಟ್
ಮಟನ್ ಸ್ಟಾಲ್ ಟೀ ಶಾಪ್
ಗುಲಾಬಿ ಹೂವಿನ ಅಂಗಡಿ
ಜನ...ಜನ...ಜನ...
ರಿಂಗಣಿಸುವ ಮೊಬೈಲ್ ಫೋನ್
ವಾಹನಗಳ ಹಾರ್ನ್ 
ಯಾರೋ ಅಡ್ಡ ದಾಟಿದರು 
ಸೀಟಿ ಊದುತ್ತ ಟ್ರಾಫಿಕ್ ಪೊಲೀಸ್...

ಇದ್ದಕ್ಕಿದ್ದಂತೆ ದೊಡ್ಡದೊಂದು ಶಬ್ದ
ಏನದು? ಪಟಾಕಿಯೊ, ಬಾಂಬೊ?
ಕಣ್ಣೆದುರೇ ಬೆಂಕಿಯ ಗೋಲ
ಚೂರು ಚೂರಾಗಿ ಉರಿದು ಹೋದ ಕಾರು
ಛಿದ್ರವಾದ ಬಸ್ಸು
ತುಂಡುತುಂಡಾದ ರುಂಡಮುಂಡ ಕೈಕಾಲು
ರಕ್ತದೋಕುಳಿ
ಅಯ್ಯೋ! ಬೊಬ್ಬೆ ಚೀರಾಟ
ಆಕ್ರಂದನ ಆರ್ತನಾದ  
ದಿಕ್ಕೆಟ್ಟು ಓಡುವ ರಕ್ತಸಿಕ್ತ ಜನ 

ಅಲ್ಲೇ ಕುಸಿದು ಕುಳಿತೆ
ಹಾರಿ ಬಂದು ಬಿದ್ದ ಒಂದು ಕೆಂಪು ಗುಲಾಬಿ ಹೂ
ನನ್ನ ಕಾಲ ಬುಡದಲ್ಲಿತ್ತು
ಹಾಗೇ ಕೈಗೆತ್ತಿಕೊಂಡೆ.

~*~

Sunday, 1 May 2011

ಮೌಲ್ಯಗಳ ಬದಲಾವಣೆ

ಸಮಾಜದಲ್ಲಿ ಕಾಲಕಾಲಕ್ಕೆ ಮೌಲ್ಯಗಳು ಬದಲಾಗುವುದು ಕುತೂಹಲದ ವಿಷಯ. ಹಿಂದೆ ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲಿ 'ವೀರ' ಎಂಬುದು ಒಂದು ಮೌಲ್ಯವಾಗಿತ್ತು. ಒಬ್ಬ ಯೋಧ ಯುದ್ಧಭೂಮಿಯಿಂದ ಓಡಿಬರುವುದು ಆತ್ಮಹತ್ಯೆಗೆ ಸಮಾನವಾಗಿತ್ತು; ಎಲ್ಲರೂ ಅವನನ್ನು ಹೀನೈಸುತ್ತಿದ್ದರು. ಆತ ಯುದ್ಧದಲ್ಲಿ ಗೆಲ್ಲಬೇಕಾಗಿತ್ತು ಇಲ್ಲವೇ ಯುದ್ಧ ಮಾಡುತ್ತ ಮಾಡುತ್ತ ವೀರಮರಣ ಹೊಂದಬೇಕಾಗಿತ್ತು. ರಾಜನಿಗೋಸ್ಕರ ಪ್ರಾಣಾರ್ಪಣೆ ಮಾಡುವ 'ಗರುಡ' ಎಂಬ ನಂಬಿಕಸ್ತ ಬಂಟರ ಒಂದು ಪಡೆಯೇ ಆಗ ಇರುತ್ತಿತ್ತು.


ಆದರೆ ಇಂದಿನದನ್ನು 'ಭೀರುಯುಗ' ಎಂದು ಕರೆಯಬಹುದು. ನಾಗರಿಕತೆ ಮುಂದುವರಿದಂತೆ ಶಿಕ್ಷಣ-ವ್ಯಾಪಾರ-ವಾಣಿಜ್ಯ ಮೇಲುಗೈ ಸಾಧಿಸಿದೆ. ವೀರತೆಯ ಲಕ್ಷಣಗಳಾದ ಧೀರತೆ, ಭವ್ಯತೆ, ನೇರತೆಗಳ ಬದಲು ಜನರು ನಾಜೂಕಯ್ಯರೂ ಮತ್ತು ಇದರ ಲಕ್ಷಣಗಳಾದ ಹುಸಿನಗು ಮತ್ತು  ತೋರಿಕೆಯ  ನಯವಿನಯ ಸಂಪನ್ನರೂ ಆಗಿದ್ದಾರೆ! ಸುಳ್ಳು, ಕಪಟ, ಮೋಸ, ವಂಚನೆ, ತಟವಟಗಳು ವ್ಯಕ್ತಿತ್ವದಲ್ಲಿ ತುಂಬಿ ಹಿಂಸೆಯೆಂಬುದು ದೈಹಿಕದ ಬದಲು ಮಾನಸಿಕವಾಗಿ ಪರಿವರ್ತನೆಯಾಗಿದೆ. ಬೇರೆಯವರ ಕಾಲೆಳೆಯುವುದು ಹೇಗೆ ಎಂಬುದರ ಕಡೆಗೇ ಲಕ್ಷ್ಯ ಇರುತ್ತದೆ. ಚುನಾವಣೆ ಎಂಬುದು ಮಾನಸಿಕ ಯುದ್ಧವಲ್ಲದೆ ಇನ್ನೇನು? 'ಬಾಯಲ್ಲಿ ಮಂತ್ರ ಕಂಕುಳಲ್ಲಿ ದೊಣ್ಣೆ' ಎಂಬಂತೆ ಇತರರಿಗೆ ಮಾನಸಿಕ ಹಿಂಸೆ ನೀಡುವ ಕಲೆಯನ್ನು ಆಧುನಿಕ ನಾಗರಿಕತೆ ತನ್ನ ಒಡಲಲ್ಲಿ ಇರಿಸಿಕೊಂಡಿದೆ. ತಮಗಾಗದವರ ವಿರುದ್ಧ ನಾನಾರೀತಿಯ ಒತ್ತಡ ಹೇರುವುದು, ಚಾರಿತ್ರ್ಯಹನನ ಮಾಡುವುದು, ಬೇರೆಯವರನ್ನು ಎತ್ತಿಕಟ್ಟಿ ಒಬ್ಬಂಟಿ ಮಾಡುವುದು- ಹೀಗೆ ನಾನಾರೀತಿಯ ತಂತ್ರಗಳನ್ನು ಈ ನಿಟ್ಟಿನಲ್ಲಿ ಅನುಸರಿಸಲಾಗುತ್ತದೆ. 


ಅಂದರೆ ನೇರವಾಗಿ ಕಾದಾಡದೆ ಸುತ್ತುಬಳಸಿನ ಭೀರುಗುಣಗಳನ್ನು ರಣತಂತ್ರವಾಗಿ ಅನುಸರಿಸಲಾಗುತ್ತದೆ. ಹೀಗೆ 'ವೀರ'ದ ಜಾಗವನ್ನು 'ಭೀರುತನ' ಆಕ್ರಮಿಸಿಕೊಂಡಿದೆ. 


ಈಗ್ಗೆ ಮೂವತ್ತು-ನಲವತ್ತು ವರ್ಷಗಳ ಹಿಂದೆ ಇದ್ದ ಸಮಾಜವ್ಯವಸ್ಥೆ ಇಂದು ಕಾಣಿಸುವುದಿಲ್ಲ. ಉದಾಹರಣೆಗೆ, ಕಳೆದ ತಲೆಮಾರಿನ ವರೆಗೆ ಮಾನವಿಕ ಶಾಸ್ತ್ರಗಳನ್ನು ಓದುವುದು ಸಂತೋಷದ ಮತ್ತು ಆಕರ್ಷಣೆಯ ವಿಚಾರವಾಗಿತ್ತು. ಸಾಹಿತಿಗಳು, ಕಲಾವಿದರು, ಕವಿಗಳು, ಸಂಸ್ಕೃತಿವೇತ್ತರು ಸಮಾಜಜೀವನದ ಮುನ್ನೆಲೆಯಲ್ಲಿ ಇರುತ್ತಿದ್ದರು. ಅವರು ಸಮಾಜವನ್ನು ಪ್ರಭಾವಿಸುತ್ತಿದ್ದರು. ಕೆನೆಪದರದಿಂದ ಬಂದ ವ್ಯಕ್ತಿಗಳು ಕಲಾವಿಷಯಗಳನ್ನು ಓದಿ ಜೀವನಸಾಧನೆಯ ಉತ್ತುಂಗಕ್ಕೇರುತ್ತಿದ್ದರು. ಸಮಾಜದ ಆಗುಹೋಗುಗಳನ್ನು ಅವರೇ ನಿಯಂತ್ರಿಸುತ್ತಿದ್ದರು. ಸಾಹಿತಿ-ಕಲಾವಿದರಿಗೆ ಸಮಾಜದಲ್ಲಿ ಗೌರವದ ಸ್ಥಾನಮಾನ ಇರುತ್ತಿತ್ತು.


ಇವತ್ತು ಆ ಜಾಗವನ್ನು ವಿಜ್ಞಾನ-ತಂತ್ರಜ್ಞಾನ-ವ್ಯಾಪಾರ-ವಾಣಿಜ್ಯ ವಿಷಯಗಳು ಆಕ್ರಮಿಸಿಕೊಂಡಿವೆ. ಇವುಗಳ ಆಧಿಕ್ಯದಿಂದ  ಕೊಳ್ಳುಬಾಕ ಸಂಸ್ಕೃತಿಯ ಉಪಭೋಗೀ ವ್ಯವಸ್ಥೆಯತ್ತ ದಾಪುಗಾಲು ಇಡುತ್ತಿದ್ದೇವೆ. ಕವಿ ಸಾಹಿತಿಗಳಿಗೆ, ಕಲಾವಿದರಿಗೆ ಇವತ್ತು ತಮ್ಮ ಕೃತಿಗಳನ್ನು ಹೆಮ್ಮೆಯಿಂದ ಅಭಿವ್ಯಕ್ತಿಸಿ, ಸಮಾಜಜೀವನದ ಪ್ರಭಾವೀ ಸ್ಥಾನವನ್ನು ಅಲಂಕರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,  ಅಥವಾ ಸಮಾಜ ಅವರನ್ನು ಹಾಗೆ ಕಡೆದು ರೂಪಿಸುತ್ತಿಲ್ಲ. ತಮ್ಮ ಜಾಗದಿಂದ ಅವರು ಕೆಳಗಿಳಿದುಬಿಟ್ಟಿದ್ದಾರೆ ಅನ್ನಿಸುತ್ತದೆ.


ಬುದ್ಧಿವಂತ ಮಕ್ಕಳು ಇವತ್ತು ಕಲಾವಿಷಯಗಳ ಕಡೆಗೆ ಆಸಕ್ತರಾಗದೆ, ವಿಜ್ಞಾನ-ತಂತ್ರಜ್ಞಾನ ವಿಷಯಗಳನ್ನು ಕಲಿಯಲು ಹೋಗುತ್ತಾರೆ. ಉಳಿದ ಕೆಲವರು ಮಾತ್ರವೇ ಕಲಾವಿಷಯಗಳತ್ತ ಬರುತ್ತಾರೆ ಎಂಬ ವಾತಾವರಣ ಇದೆ. ಅಂದಾಗ ಇವರು ಉತ್ಕೃಷ್ಟತೆ ಗಳಿಸಿ ಸಮಾಜವನ್ನು ಪ್ರಭಾವಿಸುವುದು ಹೇಗೆ?


ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಮೌಲ್ಯವು ಸಮಾಜದ ಮುನ್ನೆಲೆಗೆ ಬರುವುದು, ಅದು ಮರೆಯಾಗುವುದು, ಪಲ್ಲಟವಾಗುವುದು, ಹೊಸದಾದವು ಹುಟ್ಟಿ ಪ್ರಧಾನ ಭೂಮಿಕೆಗೆ ಬರುವುದು ಕುತೂಹಲದ ವಿಷಯವೇ ಸರಿ. ಯಾವುದು ಸರಿ, ಯಾವುದು ತಪ್ಪು ಎಂಬಂತಿಲ್ಲ. ಅವು ಬದಲಾಗುತ್ತಿರುತ್ತವೆ ಎಂಬುದು ಸರಿಯಾದ ಮಾತು. 


ಈಗ್ಗೆ ಕೆಲವರ್ಷಗಳ ಹಿಂದೆ ಕೃಷಿಗೆ ನಮ್ಮಲ್ಲಿ ತುಂಬ ಪ್ರಾಮುಖ್ಯತೆ ಇತ್ತು. 'ಕೃಷಿತೋ ನಾಸ್ತಿ ದುರ್ಭಿಕ್ಷಂ' ಎಂಬ ಮಾತು ಈ ಹಿನ್ನೆಲೆಯಲ್ಲಿ ಬಂದಿದೆ. ಕೃಷಿಗೆ ಸಾಕಷ್ಟು ಭೂಮಿ ಇರುವವರು ಉದ್ಯೋಗಕ್ಕೆ ಹೋಗದೆ ಕೃಷಿಯನ್ನೇ ಮುಂದುವರಿಸುತ್ತಿದ್ದರು. ಅಂತಹ ಪರಿಸ್ಥಿತಿ ಈಗೆಲ್ಲಿದೆ? ಈಗ ವ್ಯಾಪಾರ-ವಾಣಿಜ್ಯ ಮತ್ತು ಹಣಕಾಸು ಪ್ರಧಾನ ಸ್ಥಾನಕ್ಕೆ ಬಂದಿದೆ. 


ಅಜ್ಜ ನೆಟ್ಟ ಆಲದ ಮರಕ್ಕೆ ನೇಣು ಹಾಕಬೇಕೆಂದೇನಿಲ್ಲ. ಬದಲಾವಣೆಗಳು ಸಮಾಜಜೀವನದಲ್ಲಿ ಆಗುತ್ತಾ ಇರುತ್ತವೆ. ಅದು ಅನಿವಾರ್ಯ ಅಲ್ಲವೇ?