ನಾನು ಈ ಕವನ ಬರೆದು ಹತ್ತಿರ ಹತ್ತಿರ ಒಂದು ವರ್ಷ ಆಗಿರಬೇಕು. ಕೆಲಸದ ತುರ್ತಿನಲ್ಲಿ ಅನಂತರ ಮರೆತು ಬಿಟ್ಟಿದ್ದೆ. ಈಗ ಸುಮಾರು ಒಂದು ತಿಂಗಳ ಹಿಂದೆ ಕಣ್ಣಿಗೆ ಬಿದ್ದಾಗ ಅಲ್ಪಸ್ವಲ್ಪ ತಿದ್ದಿ 'ಕರ್ಮವೀರ'ಕ್ಕೆ ಕಳಿಸಿಕೊಟ್ಟಿದ್ದೆ. ಈ ವಾರದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಕನ್ನಡದಲ್ಲಿ ಬರೆದ ಬಳಿಕ ತುಳುವಿಗೂ ನಾನೇ ಅನುವಾದಿಸಿ ತುಳು ಸಾಹಿತ್ಯ ಅಕಾದಮಿಯ ತ್ರೈಮಾಸಿಕ 'ಮದಿಪು' ಸಂಚಿಕೆಗೆ ಕಳಿಸಿಕೊಟ್ಟಿದ್ದೆ. ಅದರಲ್ಲಿಯೂ ಪ್ರಕಟವಾಗಿ ಸಂಚಿಕೆ ಈ ವಾರ ಅಂಚೆಯಲ್ಲಿ ಬಂದಿದೆ. ಇದೊಂದು ಆಕಸ್ಮಿಕವೇ ಸರಿ. ಈಗ ಕವಿತೆ ಓದಿ.
ಹೀಗೇ ಇರುವಾಗ
ಹೀಗೇ ಇರುವಾಗ ನೀನು ಕೇಳಿದೆ
ನಮ್ಮ ಮದುವೆ ಯಾವಾಗ?
ಮೂರು ತಿಂಗಳಾಯಿತು
ಈ ಮಾತಿಗೆ
ನನಗೆ ದಿಗಿಲಾಯಿತು
ಸದ್ಯದಲ್ಲೇ ಮಳೆಗಾಲ ಆರಂಭವಾಗುತ್ತದೆ
ಈ ವರ್ಷ ಹೊಸ ಪ್ರಸಂಗ
ರಂಗಸ್ಥಳ ತುಂಬ ನಾನೇ ನಾನು
ಸರಿ
ರಾತ್ರಿ ಸರಿಯುತ್ತಿದ್ದಂತೆ
ಕಥೆಯ ಉತ್ತುಂಗದಲ್ಲಿ
ರಣಾಂಗಣದ ನಡುವೆ
ನಾನೇ ಪತಾಕೆ ನೆಟ್ಟ ವೀರ!
ರಾತ್ರಿಯಿಡೀ ಕುಣಿದು ಬಂದಾಗ
ನಿನ್ನ ಕಣ್ಣಿನಲ್ಲಿ ಧಗ ಧಗ ಬೆಂಕಿ
ಬಿಲ್ಲು ಬಾಣ ಮೂಲೆಗೆಸೆದು
ಚಿತ್ರಾಂಗದೆಯನ್ನರಸುತ್ತ ಹೊರಟ
ಅರ್ಜುನನಂತೆ ನಾನು
ಹತ್ತಿರದಲ್ಲೆಲ್ಲೋ ಹಕ್ಕಿಗಳ ಕೂಗು
ನರಿಗಳ ಊಳು
ನಾಯಿ ಬೊಗಳಿ ಬೆನ್ನಟ್ಟಿದ ಸದ್ದು
ಈಗಂತು ಬೇಟೆ ನಿಷಿದ್ಧವಂತೆ
ನೀನೇನು ಹೆದರಬೇಡ
ಈ ವೇಷ ಈ ಬಣ್ಣ ಈ ಕಿರೀಟ
ರಾತ್ರಿಯಲ್ಲಿ ಮಾತ್ರ
ನಾನು ಕೇವಲ ನರಮನುಷ್ಯ
ನಾಳೆ ನಾನೇ ರಾಮ
ನೀನೆ ಸೀತೆ
ರಾಮನಿಗು ಸೀತೆಗು ನಾಳೆಯೇ ಮದುವೆ!
ಆಪ್ತ ಸ್ವಗತದಂತೆ ಬೆಳೆಯುತ್ತಾ ಹೋಗುವ ಕವನ ತನ್ನ ಸೂಕ್ಷ್ಮ ಪ್ರತಿಮೆಗಳ ಮೂಲಕ ಮುದ ನೀಡಿತು.
ReplyDeleteರಣಾಂಗಣದ ನಡುವೆ
ನಾನೇ ಪತಾಕೆ ನೆಟ್ಟ ವೀರ!
ರಾತ್ರಿಯಿಡೀ ಕುಣಿದು ಬಂದಾಗ
ನಿನ್ನ ಕಣ್ಣಿನಲ್ಲಿ ಧಗ ಧಗ ಬೆಂಕಿ
Nice lines.