Friday 3 June 2011

ವಿಚಾರ

ಬಾಗುವುದು

ಮೊನ್ನೆ ಒಂದು ಮದುವೆಗೆ ಹೋಗಿ ಬಂದ ಮೇಲೆ ಸುಮ್ಮನೆ ಹೀಗೊಂದು ಆಲೋಚನೆ ಬಂತು:

ಕಲ್ಯಾಣಮಂಟಪದಲ್ಲಿ ವಧು ಹಾರ ಹಾಕುವ ಸಂದರ್ಭದಲ್ಲಿ ವರಮಹಾಶಯ ತುಸುವೂ ಬಾಗದೆ ನೆಟ್ಟಗೆ ಸೆಡವಿಕೊಂಡು ನಿಂತಿದ್ದ. ಆತ ನಿಂತ ಭಂಗಿಯಲ್ಲಿ ಕೃತಕತೆ ಎದ್ದು ಕಾಣುತಿತ್ತು. ವಧು ಸ್ವಲ್ಪ ಕುಳ್ಳಗಿದ್ದುದರಿಂದ ವರನ ಕುತ್ತಿಗೆಗೆ ಹಾರ ಹಾಕಲು ಕಷ್ಟವಾಯಿತು. ತುದಿಗಾಲಲ್ಲಿ ನಿಂತು ಗುರಿಹಿಡಿದು ಪ್ರಯಾಸದಿಂದ ಹಾರ ಹಾಕಿದಳು. 'ಅಬ್ಬ! ಎಂತಹ ಧಿಮಾಕು ಕಣೋ!' ಅನ್ನುವ ಕೆಣಕುನೋಟವೊಂದು ವಧುವಿನ ಕಣ್ಣಿನಲ್ಲಿ ಕಂಡಂತಾಯಿತು.

'ವಧು ಮಾಲೆ ಹಾಕುವಾಗ ನೀನು ಬಗ್ಗಬೇಡ' ಎಂದು ವರನ ಕಡೆಯವರು ಅವನಿಗೆ ಮೊದಲೇ ಕಿವಿಯಲ್ಲಿ ಹೇಳಿರಬೇಕು. 'ಬಾಗಿದರೆ ನೀನು ಅವಳಿಗೆ ಸೋತೆ ಎಂದರ್ಥ. ಗಂಡಸಾದ ನೀನು ನೇರವಾಗಿ ನಿಂತಿರಬೇಕು! ಹೆಂಡತಿಗೆ ಬಾಗಿ ಅವಳು ಹೇಳಿದಂತೆ ಕೇಳಿಕೊಂಡು ಬಾಳುವವನಲ್ಲ ಎಂಬುದನ್ನು ಮದುವೆ ಮಂಟಪದಲ್ಲೇ ತೋರಿಸಿಕೊಡಬೇಕು' ಎಂದೆಲ್ಲ ಆತನ ಮೇಲ್ಮೆಯನ್ನು ಕೆಣಕಿ ವರನ ಕಡೆಯವರು ಅವನನ್ನು ಮೊದಲೇ ಸಿದ್ಧಗೊಳಿಸಿರಬೇಕು.

ಯಾರು ಮೇಲೆ, ಯಾರು ಕೆಳಗೆ? ಯಾರು ಯಾರಿಗೆ ಸೋಲುವುದು? ಮದುವೆಯೆಂದರೆ ಸೋಲು ಗೆಲುವಿನ ಸ್ಫರ್ಧೆಯೇ?

ಇರಲಿ, ಮುಖ್ಯ ವಿಷಯ ಅದಲ್ಲ; ಒಬ್ಬ ಮನುಷ್ಯನ ನಡೆ ಮತ್ತು ವರ್ತನೆ ಸಹಜ ಸ್ವಾಭಾವಿಕವಾಗಿರಬೇಕು. ಯೋಚನೆ ಮತ್ತು ದೇಹಭಾಷೆಗೆ ಹೊಂದಾಣಿಕೆ ಇರಬೇಕು. ಆಗ ಮಾತ್ರ ಅವನ ವ್ಯಕ್ತಿತ್ವ ಸಹಜವೂ ಸುಂದರವೂ ಆಗಿರುತ್ತದೆ. ಯಾರೋ ಹೇಳಿದರೆಂದು ಆರೋಪಿತ ವ್ಯಕ್ತಿತ್ವವನ್ನು ತೋರಿಸಿದರೆ ಹಾಸ್ಯಾಸ್ಪದವಾಗುತ್ತದೆ. ದೃಢತೆಯಾಗಿರಲಿ, ವಿನಯವಾಗಿರಲಿ, ಸೌಜನ್ಯವಾಗಿರಲಿ, ಭದ್ರತೆಯ ನಿಲುವಾಗಿರಲಿ ಅದು ಹೃದಯದಿಂದ ಬಂದು ಸ್ವಾಭಾವಿಕವಾಗಿ  ತನ್ನ ನಿಲುವಿನಲ್ಲಿ ಮೈದಾಳಿದಂತೆ ಇರಬೇಕು. ನಾಟಕೀಯವಾಗಿರದೆ ಸಹಜವಾಗಿರಬೇಕು. ತನ್ನ ಮೂಲ ವ್ಯಕ್ತಿತ್ವ ಹೂವರಳಿದಂತೆ ಪ್ರತಿಫಲಿತವಾಗಬೇಕೇ ಹೊರತು ಇತರರು ಹೇಳಿಕೊಟ್ಟುದನ್ನು ಒಪ್ಪಿಸುವ ಕೃತಕತೆ ಕಾಣಿಸಬಾರದು. ಸಹಜತೆಯೇ ಸೌಂದರ್ಯ, ಅಲ್ಲವೇ?

ಯಾರು ಬಾಗುವುದಿಲ್ಲವೆಂದು ಅಂದುಕೊಂಡಿರುತ್ತಾರೋ ಅವರು ಬಾಗುವುದನ್ನೂ, ಬಾಗಿದವರು ಸೆಟೆದು ನಿಂತುದನ್ನೂ  ನಾವು ನೋಡಿದ್ದೇವೆ. ಕಟ್ಟಿಕೊಟ್ಟ ಬುತ್ತಿಯೂ ಹೇಳಿಕೊಟ್ಟ ಬುದ್ಧಿಯೂ ಕೊನೆತನಕ ಉಳಿಯುವುದಿಲ್ಲ.

ಸರಿ, ಬಾಗುವುದಿಲ್ಲ ಎಂಬ ಬಾಹ್ಯ ತೋರ್ಪಡಿಸುವಿಕೆಯಿಂದ ಆಗಬೇಕಾದುದೇನು?  ಅದು ಧೀರತೆಯ, ವೀರತೆಯ, ಲೋಕೋತ್ತರಗಳನ್ನು ಗೆಲ್ಲುವ ಆತ್ಮವಿಶ್ವಾಸದ ಸಹಜ ನಿಲುವಾದರೆ ಒಪ್ಪಿಕೊಳ್ಳೋಣ, ಸಂತೋಷ. ಆನೆಯ ಹಾಗೆ, ವನರಾಜನ ಹಾಗೆ 'ನಾನಿರುವುದೇ ಹೀಗೆ' ಎಂಬ  ಸ್ವಯಮೇವ ಭಂಗಿ ಅದು. 

ಮದುವೆಯಾದ ಮೇಲೆ ಅವನು ಬಾಗಿದ್ದಾನೋ ಇಲ್ಲವೋ ಎಂಬುದನ್ನು ನೋಡಲು ಯಾರು ಹೋಗುತ್ತಾರೆ! ಬಾಗದಿದ್ದರೆ ವ್ಯಕ್ತಿತ್ವದಲ್ಲಿ ಅದೊಂದು ಊನವೇ ಸರಿ. ಬಾಗಿದರೆ 'ಅಮ್ಮಾವ್ರ ಗಂಡ' ಆಗಿರುತ್ತಾನೆಂದು ಅರ್ಥವಲ್ಲ. ಬಾಗದೇ ಇದ್ದರೆ ರಾಜನಾಗಿರುತ್ತಾನೆಂದೂ ಭಾವಿಸಬೇಕಾಗಿಲ್ಲ. 'ಸಮರಸವೇ ಜೀವನ; ವಿರಸ ಮರಣ'. 

ತಿಳಿದವರು ಹೇಳಲಿಲ್ಲವೇ 'ಹುಲ್ಲಾಗು ಬೆಟ್ಟದಡಿ; ಮನೆಗೆ ಮಲ್ಲಿಗೆಯಾಗು' ಎಂದು?  ಹಾಗೆ ಹುಲ್ಲಾಗುವುದು ಕೂಡ ನೆಲದ ಚೇತನ ಬನಿಯಾದಾಗಲಷ್ಟೇ ಸಾಧ್ಯ.

ಬಾಗುವುದು ಎಂದರೆ ಶರಣಾಗತಿ ಎಂದು ಅರ್ಥವಲ್ಲ. ಫಲ ತುಂಬಿದ ಹಣ್ಣಿನ ಗಿಡದ ಹಾಗೆ, ಮಹಾವೀರನ ಹಾಗೆ ನೆಲದ ಋಣಕ್ಕೆ ಕೃತಜ್ಞತೆ ಹೇಳುವುದೆಂದು ಅರ್ಥ.

No comments:

Post a Comment