ನನ್ನ ಬ್ಲಾಗ್ ಓದುಗರಿಗಾಗಿ ಇವತ್ತು ಒಂದು ಕವನ ಕೊಡ್ತಾ ಇದ್ದೇನೆ.
ಭೋಜರಾಜನ ಸಿಂಹಾಸನ
ಸಿದ್ಧವಾಗಿದೆ ಭೋಜರಾಜನ ಸಿಂಹಾಸನ
ಹಸ್ತಕ್ಕೆ ಪೂಸಿದ ಅತ್ತರು ಮೂಸುತ್ತ ಮಹಾರಾಜ
ಒಂದೊಂದೇ ಮೆಟ್ಟಲು ಹತ್ತಬೇಕು
ಸಾಲಂಕೃತ ಸಾಲಭಂಜಿಕೆಗಳು
ಬೆಳ್ಳಿಸತ್ತಿಗೆಯ ಹಿಂದೆ
ಇಂದ್ರ ಸೂರ್ಯ ಚಂದ್ರರು
ಜೀವಂತ ಇರುವ ಹಾಗೆ
ವಜ್ರ ವೈಡೂರ್ಯದ ಸಿಂಹಶರಭಗಳು
ಕಾಂಚನ ಮಿಣಿಮಿಣಿ ಕಣ್ಣು
ಕೋರೈಸುವ ಹಾಗೆ ಬೆಳಕು
ಇವತ್ತೇ ಪ್ರತಿಜ್ಞಾವಿಧಿ
ಕುಳಿತಿದ್ದಾರೆ ಮಂತ್ರಿಮಾನ್ಯರು
ಪುರೋಹಿತರು ಜ್ಯೋತಿಷಿಗಳು
ಮಾಟಜ್ಞರು ವಾಸ್ತುತಜ್ಞರು
ಖಾಸಾ ಅಂತರಂಗದ ದೋಸ್ತಿಗಳು
ಯಥೋಚಿತ ಸಭಾಸದರು
ಚಾಮರಸೇವೆಗೆ ಕಂಚುಕಿಯರು
ಉಘೇ ಉಘೇ ಎಂಬಂಥ ಹೊಗಳುಭಟರು
ಕಣ್ಣು ತೆರೆದಲ್ಲೆಲ್ಲ ವೈಭವದ ಭೋಗ
ಹಂಸತೂಲಿಕಾ ತಲ್ಪದ ತಂಪಾದ ಜಾಗ
ಸಿದ್ಧವಾಗಿದೆ ಸಿಂಹಾಸನ
ಆದರೆ ಏರುವುದು ಅಷ್ಟು ಸುಲಭವೇ?
ಸಜ್ಜುಗೊಳಿಸಬೇಕು ಸೇನಾಬಲ
ಘೋಷಿಸಬೇಕು ಯುದ್ಧ
ದಂಗೆ ಎದ್ದವರ ವಿರುದ್ಧ
ಹೊರಡಬೇಕು ಜೈತ್ರಯಾತ್ರೆ
ಸಾಮ್ರಾಜ್ಯಗಳ ಗೆಲ್ಲುತ್ತ
ಗೆಲ್ಲುವುದು ಹೇಗೆ-
ಹೊಗೆಯಾಡುವ ಭಿನ್ನಮತ
ಅರಮನೆಯೊಳಗೆ ವಿದ್ರೋಹ
ಅನನುಭವಿಯೆಂಬ ಗುಲ್ಲು
ವಿರೋಧಿಗಳು ಎತ್ತುತ್ತಾರೆ ವಿವಾದ
ತರುತ್ತಾರೆ ನಿಯೋಗ
ಆಗಾಗ
ಆಂತರಿಕ ಗಲಭೆ
ಅಲ್ಲಲ್ಲಿ ಸ್ಫೋಟ-
ಕಾರಕ ಪರಿಸ್ಥಿತಿ
ಮಧ್ಯೆ ಮಧ್ಯೆ ಸೈನಿಕರ ತಂಟೆ
ರೈತರ ಆತ್ಮಹತ್ಯೆ
ಜ್ಯೋತಿಷಿಗಳ ಭವಿಷ್ಯ:
ಗೃಹಿಣಿಯರಿಗೂ ತೊಂದರೆ!
ಮಳೆಯಿಲ್ಲ
ಹಾಗಾಗಿ ಬೆಳೆಯಿಲ್ಲ
ಹಣದುಬ್ಬರ, ಬೆಲೆಯೇರಿಕೆಯ ತಲೆಬಿಸಿ
ಇಂಥ ಪ್ರಸಂಗದಲ್ಲೇ ಇಂಧನಕ್ಷಾಮ
ಕುಲೋತ್ತುಂಗನಿಗೆ ಚಿತ್ತಭಂಗ
ಎಲ್ಲವನ್ನು ನಿಭಾಯಿಸುತ್ತ
ವಿರೋಧಗಳ ಸಹಿಸುತ್ತ
ಪ್ರಭುವಾಗುವ ಕಲೆ
ಕರಗತವಾಗಬೇಕು
ಪ್ರಜೆಗಳ ಕಷ್ಟಸುಖ ನೋಡುತ್ತ
ಸಿಂಹಾಸನ ಏರಿದರೆ ಮಹಾರಾಜ
ಹೃದಯಗೆದ್ದ ವಿಕ್ರಮಾದಿತ್ಯ.
ರಾಜ ಎಲ್ಲ ಗೆದ್ದ ಗಜದಂತೆ
ಸಿಂಹಾಸನದ ಬಳಿಗೆ ಬಂದ
ಆಹಾ! ಎಂಥ ಸುಗುಣ ಗಂಭೀರ ಸಿಂಹಾಸನ
ಐತಿಹಾಸಿಕ ಪರಂಪರೆಯ ತಾಣ!
ಪರಮ ಪಾವನ ಪಾವಟಿಗೆಗಳ ತುಟ್ಟತುದಿಯಲ್ಲಿ
ಕೆಂಪು ಮಕಮಲ್ಲ ಪುಟ್ಟ ಗಾದಿ
ಕಟಕಟೆಗೆ ಪುಟವಿಟ್ಟಂತೆ ಬಂಗಾರ
ಭಂಜಿಕೆಗಳ ಸಾಲು
ತೊಳೆದ ಪಾದವ ಆಹಾ! ಹಾಗೆ,
ಒಂದೊಂದೇ ನಿಧಾನ ಎತ್ತಿಟ್ಟರೆ
ಮೇಲೆ ಎತ್ತರದಲ್ಲಿ ಕಿರೀಟಪ್ರಾಯ
ರಾಜಪೀಟದಲ್ಲಿ ವಿರಾಜಮಾನ.
ರಾಜ ಒಂದೇ ಒಂದು ಹೆಜ್ಜೆ
ಇನ್ನೇನು ಎತ್ತಿಡಬೇಕು
ಅಷ್ಟರಲ್ಲಿ ಶತ್ರುಗಳು ದಾಳಿಯಿಟ್ಟ
ಸುದ್ದಿ ಬಂತು!
ನಮ್ಮ ರಾಜನಿಗೆ ಎದುರೇನಿದ್ದರೂ ಡೋಂಟ್ ಕೇರ್. ಸಕಲ ವೈಭೋಗವಿದ್ದರೂ ಅಳುಮುಂಜಿ ಮೋರೆ, ನಿಂತಲ್ಲಿ, ಕುಂತಲ್ಲಿ ಅವಳದೇ ಧ್ಯಾನ... ಅದು ರಾಜ್ಯಲಕ್ಷ್ಮಿಯೋ,, ಇನ್ನಾವುದೋ..
ReplyDeleteಮಳೆಯಿಲ್ಲ
ReplyDeleteಹಾಗಾಗಿ ಬೆಳೆಯಿಲ್ಲ
ಹಣದುಬ್ಬರ, ಬೆಲೆಯೇರಿಕೆಯ ತಲೆಬಿಸಿ
ಇಂಥ ಪ್ರಸಂಗದಲ್ಲೇ ಇಂಧನಕ್ಷಾಮ
ಕುಲೋತ್ತುಂಗನಿಗೆ ಚಿತ್ತಭಂಗ
...ಇಂದಿನ ಬೋಜರಾಜರಿಗೆ ಹಾಗೆಲ್ಲ ಚಿತ್ತಭಂಗ ಆಗೋದೇ ಇಲ್ಲ :)
ರಾಜಕೀಯವನ್ನು ಚೆನ್ನಾಗಿ ವಿಶ್ಲೇಷಿಸಿದೆ ಈ ಕವನ
ಸೊಗಸಾದ ಕವನ.
ReplyDelete