Sunday, 26 June 2011

ಪ್ರಕೃತಿವಿಶೇಷ

ಬ್ರಹ್ಮಕಮಲದ ಸೊಗಸು 

ನಮ್ಮ ಮನೆಯಲ್ಲಿರುವ ಬ್ರಹ್ಮಕಮಲದ ಗಿಡದಲ್ಲಿ  ಈ ಬಾರಿ ಹದಿನಾರು ಮೊಗ್ಗುಗಳು ಮೂಡಿದವು. 'ಅವು ಒಂದೇ ದಿನ ರಾತ್ರಿ ಹೊತ್ತು ಅರಳುತ್ತವೆ, ಈ ಬಾರಿ ತುಂಬಾ ಚೆನ್ನಾಗಿ ಕಾಣಬಹುದು' ಅಂದಿದ್ದಳು ನನ್ನ ಪತ್ನಿ. ಕೆಲವು ದಿನ ಹಿಂದೆ ನಾಲ್ಕೈದು ಎಳೆಯ ಮೊಗ್ಗುಗಳು ಉದುರಿದ್ದವು. ಕಳೆದ ವಾರ ಒಂದು ಮದುವೆ ನಿಮಿತ್ತ ನಾವು ಮೂರು ದಿನ ಮನೆಯಿಂದ ಹೊರಗಿದ್ದೆವು. ಮಳೆಯಿಲ್ಲದೆ ಬಿಸಿಲು ಬಿದ್ದಿತ್ತು. ಮೊನ್ನೆ ಜೋರಾಗಿ ಮಳೆ ಹೊಡೆಯಿತು. ಮರುದಿನ ಬೆಳಗ್ಗೆ ನೋಡಿದಾಗ ದೊಡ್ಡದಾದ ಐದಾರು ಮೊಗ್ಗುಗಳು ನೆಲಕ್ಕೆ ಉರುಳಿದ್ದವು. 



ಉಳಿದ ಮೊಗ್ಗುಗಳು ಇಂದು ಸಂಜೆ ಹೊತ್ತು ತೀರ ದೊಡ್ಡದಾಗಿದ್ದವು. ಈ ರಾತ್ರಿ ಅರಳುತ್ತವೆ ಅಂದೆ. ಹಾಗೇ ಆಯಿತು. ರಾತ್ರಿ ಎಂಟು ಗಂಟೆಗೆ ಆರು ಮೊಗ್ಗುಗಳು ಅರಳಿ ನಿಂತವು.  ಮಗ ಆಗಮನಿಗೆ ಸಂಭ್ರಮ. ವರ್ಷದಲ್ಲಿ ಒಂದು ದಿನ ಈ  ಗಿಡ ಹೂ ಬಿಡುತ್ತದೆ.  ಎಲೆಯಿಂದ ಮೊಗ್ಗಿನ ದಂಟೊಡೆದು ಹೂ ಮೂಡುವ ಪರಿ ಅದ್ಭುತವಾದದ್ದು. ಗಾತ್ರ, ಪರಿಮಳ, ತನ್ನ ಶುಭ್ರಶ್ವೇತ  ಬಣ್ಣ ಮತ್ತು ಸೌಂದರ‍್ಯಗಳಿಗಾಗಿ ಈ ಹೂ ಪ್ರಸಿದ್ಧವಾಗಿದೆ. ಅಷ್ಟೇ ಪ್ರಮಾಣದಲ್ಲಿ ಅದು ಕೀಟಗಳನ್ನೂ ಆಕರ್ಷಿಸುತ್ತದೆ. ಒಂದು ರಾತ್ರಿ ಮಾತ್ರ ಇದ್ದು ಮರುದಿನ  ಮುದುಡುತ್ತದೆ. ರಾತ್ರಿ ಅರಳುವುದರಿಂದ  ಇದಕ್ಕೆ  'ರಾತ್ರಿರಾಣಿ’ ಎಂಬ ಹೆಸರೂ ಇದೆ. ವರ್ಣಿಸಲು ಸಾಧ್ಯವಿಲ್ಲದಷ್ಟು ಪರಿಮಳದ ಹೂ ಇದು. ಹೂಗಳಲ್ಲಿ ಇದು ನಿಜವಾಗಿ ರಾತ್ರಿ ಹೊತ್ತಿನ ರಾಣಿಯೇ ಹೌದು.  

Friday, 10 June 2011

ಕವನ 


 ಒಡ್ಡೋಲಗ
                                                
                                    ಬದ್ಧಭ್ರಕುಟಿಗಳಾಗಿ ತೊಡೆತಟ್ಟಿ ನಿಂತ ಸೈನ್ಯದ ಮಧ್ಯೆ
ಈಗಷ್ಟೇ ಮುಗಿದಿದೆ ಯುದ್ಧ ಕುರುಕ್ಷೇತ್ರದಲ್ಲಿ 
ಮಸೆದ ಕತ್ತಿಗಳೆಲ್ಲ ನೆಲಕಚ್ಚಿ ಬಿದ್ದಿದ್ದಾವೆ ಎಲ್ಲೆಂದರಲ್ಲಿ 
ಹಸಿಹಸೀ ಕೆನ್ನೀರ ಕೆಸರಲದ್ದಿದ ತುಂಡು 
ಕೈಕಾಲುಗಳ ಅರೆಬರೆ ಸೈನ್ಯ, ದೈನೇಸಿ 
ಗೆದ್ದರೂ ಗೆಲವಿರದ ಕಡುರವದ ಹೊರೆ ಹೊತ್ತು 
ನಲುಗಿ ಹಣ್ಣಾಗಿ ಕಿತ್ತಿಟ್ಟು ಕುಸಿವ ವಜ್ಜೆ ಹೆಜ್ಜೆಯ-
ನೂರುತ್ತ ಮುರಿದ ಭರ್ಚಿ ಕಠಾರಿ ಖಡ್ಗ ಈಟಿಗಳನ್ನೆಲ್ಲ
ಗೋರಿ ಹೆಗಲಿಗೇರಿಸಿ ಹೊರಟಿದೆ ಛಲಬಿಡದೆ
ಪಂಚವಿಂಶತಿಯ ತ್ರಿವಿಕ್ರಮ ಸೈನ್ಯ 
ತೆವಳುತ್ತ ಬಸವಳಿಯುತ್ತ ಬಿಸುಸುಯ್ಯುತ್ತ 
ತದೇಕಚಿತ್ತವ ನೆಟ್ಟು ರಾಜಧಾನಿಯತ್ತ     

ಸೈನ್ಯಕ್ಕೆಲ್ಲ ವಿರಮಿಸಲು ಹೇಳಿ
ಅರಮನೆಗೆ ಬಂದಿದ್ದಾನೆ ಮಹಾರಾಜ 
ಮಂಗಲದ್ರವ್ಯದ ಮುತ್ತೈದೆಯರು ಎತ್ತಿದ್ದಾರೆ ಆರತಿ 
ನಗುತ್ತಿದೆ ಸಿಂಹಾಸನ ಮಂದಸ್ಮಿತ ಮಂದಾಸನದಲ್ಲಿ 
ಬಾರಯ್ಯ, ಬಾ! ದೊರೆಯೇ, ತೆಂಕಣಗಾಳಿ 
ಸೋಂಕಿದೊಡಂ ಒಳ್ನುಡಿಗೇಳ್ದೊಡಂ  ನೆನೆವುದೆನ್ನ ಮನಂ 
ಸದಾ ಪೀಠಸ್ಥನನ್! ಎಂದುಲಿಯುತಿದೆ ಗಿಳಿ 
ಮುಖಮಂಟಪದುದ್ದಕ್ಕೂ ಪೀಠಗಳ ಸರತಿ ಸಾಲು 
ಯಾರಿಗೆ ಯಾವ ಮಠ ಪೀಠ ವಾಸ್ತುಸಹಜದ ಕೋಣೆ
ಪೂಜೆ ಮಾಡಿಯೇ ಕೂರಬೇಕು ನಾಳೆ!

ನಾಳೆಯೇ ಒಡ್ಡೋಲಗ, ನೀವೆಲ್ಲ ಬರಬೇಕು 
ಅರಮನೆಯ ಗೋಡೆ ಬಲಪಡಿಸಬೇಕು 
ಗೆದ್ದ ಸೈನಿಕರೆಲ್ಲ ತುಂಬಿಕೊಂಡಿದ್ದಾರಿಲ್ಲಿ
ಅಂತಸ್ತಿಗೆ ತಕ್ಕಂಥ  ಖಾತೆಗಳ ನೀಡಬೇಕು!

ನಾಳೆ ಇನ್ನ್ಯಾವ ಕ್ಯಾತೆಯೋ ಏನೋ 
ಗೆಲುವಿನರಮನೆಗೆ ನೂರು ಹೆಬ್ಬಾಗಿಲು!

ಭಳಿರೆ! ಏನಂತೀರಿ ಭಾಗವತರೆ, ತರಿಸಿ ಉಚಿತಾಸನಗಳ 
ಹಾಕಿಸಿರಿ ಮೊಗಸಾಲೆ ಕೈಸಾಲೆ ಪಡಸಾಲೆಯಲ್ಲಿ 

ಸರಿ, ಮಹಾರಾಜ, ಸೇರಲಿ ಒಡ್ಡೋಲಗ 
ನೋಡೋಣ ಧರ್ಮರಾಯನ ರಾಜ್ಯಭಾರ!               
     

Thursday, 9 June 2011

ಚಿಂತನ 


'ಓದಿ!, ಕೆಲಸ ಮಾಡಬೇಡಿ!'

ಇತ್ತೀಚೆಗೆ ಸ್ನೇಹಿತರೊಬ್ಬರು ಮಾತಾಡುತ್ತಿದ್ದಾಗ, ಮಾತು ಇವತ್ತಿನ ಶಿಕ್ಷಣಕ್ರಮದ ಕಡೆಗೆ ಹರಿಯಿತು. ಅವರು ಹೇಳಿದರು: "ಹಿಂದಿನ ಕಾಲದಲ್ಲಿ ಶಿಕ್ಷಣದ ಜೊತೆಜೊತೆಗೆ ವೃತ್ತಿ  ತರಬೇತಿಯೂ  ಇರುತ್ತಿತ್ತು, ಜೀವನಕ್ಕೆ ಬೇಕಾಗುವ ವಿವಿಧ ವೃತ್ತಿಗಳನ್ನು ಕಲಿಯುವ ಅವಕಾಶ ಆಗ ಇತ್ತು, ಇವತ್ತಿನ ವಿದ್ಯಾರ್ಥಿಗಳಿಗೆ ಬದುಕಿಗೆ ಅನಿವಾರ್ಯವಾದ ವೃತ್ತಿಗಳ ಬಗ್ಗೆ ಮಾಹಿತಿ-ತಿಳಿವಳಿಕೆ ಇರುವುದಿಲ್ಲ, ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗುತ್ತದೆ, ಅಂದರೆ ವೃತ್ತಿ ಕಲಿಕೆಯಿಂದ ಸರಕಾರವೇ ಅವರನ್ನು ದೂರ ಇಟ್ಟಂತೆ ಆಗಿದೆ " ಎಂದು. 

ಅವರು ಹೇಳಿದ ಮಾತಿನಲ್ಲಿ ಸತ್ಯಾಂಶ ಇಲ್ಲದೆ ಇರಲಿಲ್ಲ. ಮಕ್ಕಳು ಚಿಕ್ಕಂದಿನಲ್ಲೇ ಅಪ್ಪ-ಅಮ್ಮ ಮಾಡುವ ಕೆಲಸಗಳಲ್ಲಿ ತೊಡಗಿಕೊಂಡರೆ ಮಾತ್ರ ಆ ವೃತ್ತಿಯಲ್ಲಿ ನೈಪುಣ್ಯ ಬರುತ್ತದೆ, ಪ್ರೀತಿ ಹುಟ್ಟುತ್ತದೆ. ಪ್ರಾಯಕ್ಕೆ ಬಂದ ಮೇಲೆ, ಅಂದರೆ ಹದಿನೆಂಟು ತುಂಬಿದ ಮೇಲೆ ಅವರಿಗೆ ಅಪ್ಪ-ಅಮ್ಮ ಮಾಡುವ ಕೆಲಸದ ಬಗ್ಗೆ ಪ್ರೀತಿ ಉಳಿಯುವುದಿಲ್ಲ, ಮಕ್ಕಳು ಹೇಳಿದ ಹಾಗೆ ಕೇಳುವುದೂ ಇಲ್ಲ. 

ಇವತ್ತು ಕೃಷಿ ಕೆಲಸಗಳಲ್ಲಿ  ಯಾರೂ ತೊಡಗಿಕೊಳ್ಳದೆ ಇರುವುದಕ್ಕೆ ಇದೂ ಒಂದು ಕಾರಣ. ಚಿಕ್ಕಂದಿನಲ್ಲೇ ತೋಟದಲ್ಲಿ, ಕೆಸರುಗದ್ದೆಯಲ್ಲಿ, ದನದ ಹಟ್ಟಿಯಲ್ಲಿ ಅಪ್ಪ-ಅಮ್ಮನ ಜೊತೆಗೆ ಕೆಲಸ ಮಾಡಿದರೆ ಅವರಿಗೆ  ಆ ಕೆಲಸದ ಬಗ್ಗೆ ಅನುಭವ ಬರುತ್ತದೆ. ನಮ್ಮ ಹಾಗೆ ಅವರು ಮೈ ಕೈಗೆ ಕೆಸರು ಮಾಡಿಕೊಳ್ಳುವುದು ಬೇಡ, ದೊಡ್ಡವರಾದ ಮೇಲೆ ಕಲಿಯಲಿ ಅಂದರೆ, 'ಶಾಲೆಶಿಕ್ಷಣ ಕಲಿತಮೇಲೆ' ಅವರಿಗೆ  ಆ ಕೆಲಸ ಕೀಳು ಅನ್ನಿಸುತ್ತದೆ! ಕೃಷಿ ಕೆಲಸ ಒಂದೇ ಅಲ್ಲ, ತಂದೆ ತಾಯಿಗಳು ಮಾಡುವ ವೃತ್ತಿಯಲ್ಲಿ ಮಕ್ಕಳನ್ನು ಚಿಕ್ಕಂದಿನಲ್ಲೇ ತೊಡಗಿಸಿಕೊಂಡಾಗ ಅವರಿಗೂ ಅನುಭವ ಬರುತ್ತದೆ. 

ಪುಸ್ತಕ ಓದುವ ಅಕ್ಷರಜ್ಞಾನ ಒಂದೇ ಬದುಕಿಗೆ ಬೇಕಾದ ಎಲ್ಲ ಜ್ಞಾನವೂ ಅಲ್ಲ. ದೋಣಿ ನಡೆಸುವುದು, ಬಡಗಿ ಕೆಲಸ, ಕಮ್ಮಾರಿಕೆ, ಚಿನ್ನದ ಕೆಲಸ, ಚಮ್ಮಾರಿಕೆ, ಕುಂಬಾರಿಕೆ, ಗೃಹನಿರ್ಮಾಣ ಮೊದಲಾದವು ವೃತ್ತಿ ಕಲಿಕೆಗಳೇ ಆಗಿವೆ . ಇತ್ತೀಚೆಗೆ ಕೇರಳದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕೆಸರು ಗದ್ದೆ ಮಡಿ ಮಾಡಿ ಬತ್ತ ನಾಟಿ ಮಾಡುವ ಕ್ರಮವನ್ನು ಪ್ರಾತ್ಯಕ್ಷಿಕೆ ಮೂಲಕ ಕಲಿಸಿ ಕೊಡಲಾಯಿತು ಎಂಬ ಪತ್ರಿಕಾ ವರದಿ ಓದಿದೆ. ಇದೇ ರೀತಿ ಬೇರೆ ಬೇರೆ ವೃತ್ತಿಗಳನ್ನು ಶಾಲೆಗಳು ಮತ್ತು ಸಂಘ ಸಂಸ್ಥೆಗಳು ಕಲಿಸಿಕೊಡಬೇಕಾದ ಪರಿಸ್ಥಿತಿ ಇವತ್ತು ಬಂದಿದೆ. ಪಾರಂಪರಿಕ ವಿದ್ಯೆಗಳನ್ನು ಮಕ್ಕಳಿಗೆ ಹೇಳಿ ಕೊಡದೆ, ಆಧುನಿಕ ವಿದ್ಯೆಯ  ಹೆಸರಲ್ಲಿ ಅವರನ್ನು ಕೃಷಿ ಕೆಲಸಗಳಿಂದ ಹಾಗೂ ಇತರೆ ನಾನಾ ವೃತ್ತಿಗಳಿಂದ ದೂರ ಇಟ್ಟು, ಈಗ ತೊಂದರೆಗೆ ಒಳಗಾದೆವು ಎಂದು ಹಳಹಳಿಸಿದರೆ ಏನು ಪ್ರಯೋಜನ?

ತಂದೆ ತಾಯಿಗಳ ಜೊತೆಗೆ ಮಕ್ಕಳು ಅದೇ ವೃತ್ತಿ ಮಾಡಿದಾಗ ಪ್ರಾಯೋಗಿಕ ತರಬೇತಿ ಸಿಗುತ್ತದೆ. ಮುಂದೆ ಅದು ಬದುಕುವ ವಿದ್ಯೆ ಆಗುತ್ತದೆ. ಹಿಂದೆ 'ಗುರುಕುಲ'ಗಳಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಇತರ ಕೆಲಸಗಳನ್ನೂ ಮಾಡಬೇಕಾಗಿತ್ತು. ಇವತ್ತು ನಾವು, ಮಕ್ಕಳು ಕೆಲಸ ಮಾಡಬಾರದು, ಶಿಕ್ಷಣ ಮಾತ್ರ ಕಲಿಯಬೇಕು (ಓದಬೇಕು!)ಎಂಬ ತತ್ತ್ವಕ್ಕೆ ಅಂಟಿ, ನಿಜವಾಗಿ ವೃತ್ತಿ ತರಬೇತಿ ಗಳಿಸುವ ಅವಕಾಶದಿಂದ ಅವರನ್ನು ವಂಚಿತರನ್ನಾಗಿ ಮಾಡುತ್ತಿದ್ದೇವೆ ಅನ್ನಿಸುತ್ತದೆ. 

ಇವತ್ತು ನಾವು ಮಕ್ಕಳಿಗೆ 'ಓದು' ಎನ್ನುತ್ತೇವೆ ಹೊರತು 'ಕೆಲಸ ಮಾಡು' ಎಂದು ಹೇಳುವುದಿಲ್ಲ! ಕೆಲಸ ಮಾಡುವುದು ಪ್ರಾಯೋಗಿಕ ತರಬೇತಿ. ಈ ತರಬೇತಿ ಸಿಗದ, ಕೇವಲ ಓದುವ  'ಅರೆಶಿಕ್ಷಣ' ಮುಂದೊಂದು ದಿನ ನಮಗೆ ಶಾಪವಾಗಿ ಪರಿಣಮಿಸಬಹುದೆಂದು ತೋರುತ್ತದೆ. 'ಬರೇ ಓದಿದ' ಆದರೆ 'ಕೆಲಸ ಮಾಡಲು' ತಿಳಿಯದ ಅಥವಾ 'ಕೆಲಸ ಮಾಡುವುದು ಕೀಳು' ಎಂಬ ಮನೋಭಾವದ ಜನಾಂಗವನ್ನು ನಾವು ಸೃಷ್ಟಿಸುತ್ತಿದ್ದೇವೆಯೇ? ಓದುವುದು ಮನಸ್ಸಿಗೆ ಮತ್ತು ಜ್ಞಾನ ವಿಕಾಸಕ್ಕೆ ಅಗತ್ಯವಾದರೆ ಕೆಲಸ ದೇಹದ ಆರೋಗ್ಯಕ್ಕೆ ತೀರ ಅವಶ್ಯ. ಅದು ವ್ಯಾಯಾಮ ಮಾಡಿದಂತೆಯೂ ಹೌದು. 

'ಕೆಲಸ ಮಾಡದವರ' ದೇಶ ಮುಂದೆ ಬರುವುದು ಹೇಗೆ?!         
     

Wednesday, 8 June 2011

ನನ್ನ ಬ್ಲಾಗ್ ಓದುಗರಿಗಾಗಿ ಇವತ್ತು ಒಂದು ಕವನ ಕೊಡ್ತಾ ಇದ್ದೇನೆ.

ಭೋಜರಾಜನ ಸಿಂಹಾಸನ 

ಸಿದ್ಧವಾಗಿದೆ ಭೋಜರಾಜನ ಸಿಂಹಾಸನ 
ಹಸ್ತಕ್ಕೆ ಪೂಸಿದ ಅತ್ತರು ಮೂಸುತ್ತ ಮಹಾರಾಜ 
ಒಂದೊಂದೇ ಮೆಟ್ಟಲು ಹತ್ತಬೇಕು 

ಸಾಲಂಕೃತ ಸಾಲಭಂಜಿಕೆಗಳು 
ಬೆಳ್ಳಿಸತ್ತಿಗೆಯ ಹಿಂದೆ 
ಇಂದ್ರ ಸೂರ್ಯ ಚಂದ್ರರು 
ಜೀವಂತ ಇರುವ ಹಾಗೆ 
ವಜ್ರ ವೈಡೂರ್ಯದ ಸಿಂಹಶರಭಗಳು 
ಕಾಂಚನ ಮಿಣಿಮಿಣಿ ಕಣ್ಣು 
ಕೋರೈಸುವ ಹಾಗೆ ಬೆಳಕು 

ಇವತ್ತೇ ಪ್ರತಿಜ್ಞಾವಿಧಿ 
ಕುಳಿತಿದ್ದಾರೆ ಮಂತ್ರಿಮಾನ್ಯರು 
ಪುರೋಹಿತರು ಜ್ಯೋತಿಷಿಗಳು 
ಮಾಟಜ್ಞರು ವಾಸ್ತುತಜ್ಞರು
ಖಾಸಾ ಅಂತರಂಗದ ದೋಸ್ತಿಗಳು 
ಯಥೋಚಿತ ಸಭಾಸದರು 

ಚಾಮರಸೇವೆಗೆ ಕಂಚುಕಿಯರು 
ಉಘೇ ಉಘೇ ಎಂಬಂಥ ಹೊಗಳುಭಟರು 
ಕಣ್ಣು ತೆರೆದಲ್ಲೆಲ್ಲ ವೈಭವದ ಭೋಗ 
ಹಂಸತೂಲಿಕಾ ತಲ್ಪದ ತಂಪಾದ ಜಾಗ
ಸಿದ್ಧವಾಗಿದೆ ಸಿಂಹಾಸನ 
ಆದರೆ ಏರುವುದು ಅಷ್ಟು ಸುಲಭವೇ?
ಸಜ್ಜುಗೊಳಿಸಬೇಕು ಸೇನಾಬಲ 
ಘೋಷಿಸಬೇಕು ಯುದ್ಧ 
ದಂಗೆ ಎದ್ದವರ ವಿರುದ್ಧ 
ಹೊರಡಬೇಕು ಜೈತ್ರಯಾತ್ರೆ 
ಸಾಮ್ರಾಜ್ಯಗಳ ಗೆಲ್ಲುತ್ತ 

ಗೆಲ್ಲುವುದು ಹೇಗೆ-
ಹೊಗೆಯಾಡುವ ಭಿನ್ನಮತ 
ಅರಮನೆಯೊಳಗೆ ವಿದ್ರೋಹ 
ಅನನುಭವಿಯೆಂಬ ಗುಲ್ಲು 

ವಿರೋಧಿಗಳು ಎತ್ತುತ್ತಾರೆ ವಿವಾದ 
ತರುತ್ತಾರೆ ನಿಯೋಗ 
ಆಗಾಗ 

ಆಂತರಿಕ ಗಲಭೆ 
ಅಲ್ಲಲ್ಲಿ ಸ್ಫೋಟ-
ಕಾರಕ ಪರಿಸ್ಥಿತಿ 
ಮಧ್ಯೆ ಮಧ್ಯೆ ಸೈನಿಕರ ತಂಟೆ 
ರೈತರ ಆತ್ಮಹತ್ಯೆ 
ಜ್ಯೋತಿಷಿಗಳ ಭವಿಷ್ಯ:
ಗೃಹಿಣಿಯರಿಗೂ  ತೊಂದರೆ! 

ಮಳೆಯಿಲ್ಲ  
ಹಾಗಾಗಿ ಬೆಳೆಯಿಲ್ಲ
ಹಣದುಬ್ಬರ, ಬೆಲೆಯೇರಿಕೆಯ ತಲೆಬಿಸಿ 
ಇಂಥ ಪ್ರಸಂಗದಲ್ಲೇ ಇಂಧನಕ್ಷಾಮ
ಕುಲೋತ್ತುಂಗನಿಗೆ ಚಿತ್ತಭಂಗ 

ಎಲ್ಲವನ್ನು ನಿಭಾಯಿಸುತ್ತ 
ವಿರೋಧಗಳ ಸಹಿಸುತ್ತ 
ಪ್ರಭುವಾಗುವ ಕಲೆ 
ಕರಗತವಾಗಬೇಕು 
ಪ್ರಜೆಗಳ ಕಷ್ಟಸುಖ ನೋಡುತ್ತ
ಸಿಂಹಾಸನ ಏರಿದರೆ ಮಹಾರಾಜ 
ಹೃದಯಗೆದ್ದ ವಿಕ್ರಮಾದಿತ್ಯ.

ರಾಜ ಎಲ್ಲ ಗೆದ್ದ ಗಜದಂತೆ 
ಸಿಂಹಾಸನದ ಬಳಿಗೆ ಬಂದ 
ಆಹಾ! ಎಂಥ ಸುಗುಣ ಗಂಭೀರ ಸಿಂಹಾಸನ 
ಐತಿಹಾಸಿಕ ಪರಂಪರೆಯ ತಾಣ! 
ಪರಮ ಪಾವನ ಪಾವಟಿಗೆಗಳ ತುಟ್ಟತುದಿಯಲ್ಲಿ 
ಕೆಂಪು ಮಕಮಲ್ಲ ಪುಟ್ಟ ಗಾದಿ
ಕಟಕಟೆಗೆ ಪುಟವಿಟ್ಟಂತೆ ಬಂಗಾರ 
ಭಂಜಿಕೆಗಳ ಸಾಲು 
ತೊಳೆದ ಪಾದವ ಆಹಾ! ಹಾಗೆ, 
ಒಂದೊಂದೇ ನಿಧಾನ ಎತ್ತಿಟ್ಟರೆ
ಮೇಲೆ ಎತ್ತರದಲ್ಲಿ ಕಿರೀಟಪ್ರಾಯ
ರಾಜಪೀಟದಲ್ಲಿ ವಿರಾಜಮಾನ.

ರಾಜ ಒಂದೇ ಒಂದು ಹೆಜ್ಜೆ 
ಇನ್ನೇನು ಎತ್ತಿಡಬೇಕು 
ಅಷ್ಟರಲ್ಲಿ ಶತ್ರುಗಳು ದಾಳಿಯಿಟ್ಟ 
ಸುದ್ದಿ ಬಂತು!  

  

Tuesday, 7 June 2011

ಚಿಂತನ 


ನಮ್ಮ  ಈ ನಾಗರಿಕತೆ  ಇನ್ನೆಷ್ಟು ವರ್ಷ ?

ಪೆಟ್ರೋಲ್ ಹಾಗೂ ಇತರೇ ಇಂಧನಗಳ ಬೆಲೆ ಸತತವಾಗಿ ಏರುತ್ತಿರುವುದನ್ನು  ನೋಡಿದರೆ ಅವುಗಳ ಲಭ್ಯತೆ  ಹಾಗು ದಾಸ್ತಾನು ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ತೋರುತ್ತದೆ.  ಓಡಾಟ ಮತ್ತು ಸಾಗಾಟಕ್ಕಾಗಿ ಅವುಗಳನ್ನೇ ಅವಲಂಬಿಸಿರುವ   ನಮ್ಮ ಈ ಆಧುನಿಕ ನಾಗರಿಕತೆ ಅವುಗಳು ಸಿಗದೇ ಹೋದಾಗ, ಇನ್ನು ಐವತ್ತು - ಅರವತ್ತು ವರ್ಷಗಳಲ್ಲಿ ದುರ್ಬಲವಾಗುತ್ತ ಆಗುತ್ತಾ  ಕುಸಿದು ಬೀಳಬಹುದು  ಅನ್ನಿಸುತ್ತದೆ. ಅಷ್ಟುಹೊತ್ತಿಗೆ ಭೂಮಿಯ ಆಳದಿಂದ ದೊರೆಯುವ ಇಂಧನ ಖಾಲಿಯಾಗುವುದಲ್ಲದೆ, ನಮ್ಮ ವಾಹನಗಳನ್ನು  ಮನೆ ಮುಂದೆ  ಅಲಂಕಾರ ವಸ್ತುವಿನಂತೆ  ಇಡುವ ದಿನ ಬರಬಹುದು.

ಜೈವಿಕ  ಇಂಧನ, ಸೌರಶಾಖ  ಇತ್ಯಾದಿ ಪರ್ಯಾಯ ಶಕ್ತಿ ಮೂಲಗಳು  ಈಗಿರುವ ವಾಹನಗಳಿಗೆ ಆಗುವುದಿಲ್ಲ ಅಲ್ಲದೆ ಅವುಗಳ ಲಭ್ಯತೆ  ತೀರಾ ಕಡಿಮೆ. ಅವುಗಳನ್ನು ಬಳಸಿದರೆ ವಾಹನಗಳಿಗೆ ಸಿಗುವ ವೇಗ ಕಡಿಮೆ. ಅಧಿಕ ಭಾರವನ್ನು ಎಳೆಯಲು ಅವುಗಳಿಂದ ಸಾಧ್ಯವಿಲ್ಲ. 

ಒಂದು ಕಡೆಯಿಂದ  ಇನ್ನೊಂದು ಕಡೆಗೆ ಜನರಿಗೆ ಹೋಗಲಾಗದಿದ್ದರೆ ಮತ್ತು ಸಾಮಾನು ಸರಂಜಾಮುಗಳ  ಸಾಗಾಟ ಸಾಧ್ಯವಾಗದಿದ್ದರೆ  ನಮ್ಮ ಈ ನಾಗರಿಕತೆ  ಉಳಿಯುವುದಾದರೂ  ಹೇಗೆ ?

ನಗರಗಳ ಧಾರಣಶಕ್ತಿ  ವರ್ಷದಿಂದ  ವರ್ಷಕ್ಕೆ ಕುಸಿಯುತ್ತಿರುವ  ಇನ್ನೊಂದು ತೊಂದರೆಯೂ ಇದೆ. ಉದ್ಯೋಗಾವಕಾಶ, ವಲಸೆ ಇತ್ಯಾದಿ ಕಾರಣಗಳಿಂದ  ನಗರಗಳು ಅಗಾಧವಾಗಿ  ಬೆಳೆಯುತ್ತಿವೆ  ಮತ್ತು  ಮೂಲ ಸೌಕರ್ಯಗಳಿಂದ ವಂಚಿತವಾಗುತ್ತಿವೆ. ಹಳ್ಳಿಗಳು  ಮತ್ತು ಕೃಷಿ ನಿರ್ಲಕ್ಷಿತವಾಗುತ್ತಿದೆ . ಇದರಿಂದಾಗಿ ನಮ್ಮ ಈಗಿನ  ಒಟ್ಟು ವ್ಯವಸ್ಥೆಯೇ  ಕುಸಿದು ಬೀಳಬಹುದು . 

ಯಾವುದೇ ನಾಗರಿಕತೆಗೆ ಒಂದು ಆಯುಸ್ಸು  ಎಂಬುದು ಇರುತ್ತದೆ. ವಿಕಾಸವು ಅದರ ಒಡಲಲ್ಲೇ  ನಾಶದ ಬೀಜವನ್ನೂ  ಅಡಗಿಸಿಕೊಂಡಿರುತ್ತದೆ. ಜಗತ್ತಿನಲ್ಲಿ ಈ ಹಿಂದೆ  ಆಗಿ ಹೋದ ಗ್ರೀಕ್ ನಾಗರಿಕತೆ, ಈಜಿಪ್ಟ್  ನಾಗರಿಕತೆ,  ಮೆಸಪೋಟೀಮಿಯ , ಹರಪ್ಪಾ ಮತ್ತು  ಮೊಹೆಂಜೊದಾರೋ ಮೊದಲಾದ ನಾಗರಿಕತೆಗಳೆಲ್ಲ ವಿಕಾಸ ಹೊಂದಿ ಅನಂತರ ಯಾವುದೋ ಕಾರಣಕ್ಕೆ ನಾಶವಾಗಿ ಕಾಲಗರ್ಭದಲ್ಲಿ ಲೀನವಾಗಿ ಹೋದವು. ನಮ್ಮ ಆಧುನಿಕ ಯಂತ್ರ ನಾಗರಿಕತೆ ಈಗ ಅದರ ಉತ್ತುಂಗ ಸ್ಥಿತಿಯಲ್ಲಿದೆ ..ಅದಕ್ಕೆ ಕಾರಣವಾದದ್ದು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿ. ಇದು ಪರಿಸರ ಸ್ನೇಹಿ ಆಗಿಲ್ಲದೇ ಇರುವುದು ಒಂದು ನಕಾರಾತ್ಮಕ ಅಂಶ. ನಾವು ಈಗ ಭೂಮಿಯ ಶಕ್ತಿ ಮೂಲಗಳನ್ನು ಬಳಸಿ ಬರಿದು ಮಾಡುತ್ತಿದ್ದೇವೆ. ಈಗಿನ ನಾಗರಿಕತೆಗೆ ಈ ಅತಿವೇಗ ಸಾಧ್ಯವಾದದ್ದು ಇಂಧನ ಶೋಧವಾದ ಬಳಿಕ, ಅಂದರೆ    ಕಳೆದ  ಸುಮಾರು ಇನ್ನೂರು ವರ್ಷಗಳಿಂದ ತಾನೇ ? ಇಷ್ಟು ಬೇಗ ಸಂಪನ್ಮೂಲಗಳನ್ನು ತಿಂದು ಮುಗಿಸಿರುವ ನಾವು,  ನಾಳೆಗೆ ಅದನ್ನು ಉಳಿಸಿ ನಮ್ಮ ನಂತರದ ತಲೆಮಾರಿಗೆ ಕೊಡುತ್ತೇವೆ ಎಂಬ ವಿಶ್ವಾಸ ನನಗಂತೂ ಇಲ್ಲ! 

ಇನ್ನು ಎರಡು ತಲೆಮಾರುಗಳಲ್ಲಿ (ಅಂದರೆ ಸುಮಾರು ಐವತ್ತು - ಅರವತ್ತು ವರ್ಷ ) ಈ ನಾಗರಿಕತೆ ತನ್ನ ಧಾರಣ ಶಕ್ತಿಯನ್ನು   ಪೂರ್ತಿಯಾಗಿ ಕಳೆದುಕೊಂಡು  ಅವಸಾನ ಹೊಂದಬಹುದು ಎಂಬುದು ನನ್ನ ಅನಿಸಿಕೆ.
ಈ ಊಹೆಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ .ಕೆಲವು ಕೋನಗಳಿಂದ ನನ್ನಷ್ಟಕ್ಕೆ  ಮಾಡಿಕೊಂಡಿರುವ ಊಹೆ. ನಮ್ಮ ಆಧುನಿಕ ನಾಗರಿಕತೆ ನಿಂತಿರುವುದು 'ಶಕ್ತಿ' (ಇಂಧನ,ವಿದ್ಯುತ್ತ್ ಶಕ್ತಿ ಇತ್ಯಾದಿ )ಯ ಅಸ್ತಿವಾರದ ಮೇಲೆ.  ಶಕ್ತಿ ಮೂಲಗಳನ್ನು ನಾವು ಬರಿದು ಮಾಡುತ್ತಾ ಬಂದಿದ್ದೇವೆ.ಇದಕ್ಕೆ ಪರ್ಯಾಯವಾದ ಬೇರೆ ಹಾದಿಗಳು ಕ್ಷೀಣವಾಗಿವೆ. ಇನ್ನೊಂದೆಡೆಯಿಂದ ಜನಸಂಖ್ಯೆಯು  ವಿಪರೀತವಾಗಿ ಏರುತ್ತ ಮೂಲಭೂತ ಸೌಕರ್ಯಗಳಿಗೂ  ಕೊರತೆಯಾಗಲಿದೆ. ಬೇಸಿಗೆಯಲ್ಲಿ ಕೃಷಿಗೆ ಬಿಡಿ, ಕುಡಿಯಲೂ ಶುದ್ಧ ನೀರಿನ ಅಭಾವ ಕಾಣಿಸಲಾರಂಭಿಸಿದೆ.  

ನಮ್ಮ ಈ ಆಧುನಿಕ  ವ್ಯವಸ್ಥೆ  ಪೂರ್ತಿಯಾಗಿ ಕುಸಿದು ಬಿದ್ದ ಬಳಿಕ ಪ್ರಾಕ್ತನ ಬುಡಕಟ್ಟು ಜನಾಂಗದ ಬದುಕನ್ನು ನಮ್ಮ ಮುಂದಿನ ತಲೆಮಾರಿನವರು  ಬಾಳಬೇಕಾದೀತೇ? ಮತ್ತೆ ಹಳ್ಳಿಗಳಿಗೆ ಹಿಂದಿರುಗಿ ಎತ್ತುಗಳನ್ನು ಬಳಸಿ ಕೃಷಿ ಮಾಡಬೇಕಾದೀತೇ? ನಮ್ಮ ಮೊಮ್ಮಕ್ಕಳ ನಂತರದ  ಕಾಲಕ್ಕೆ ಪರಿಸ್ಥಿತಿ ಪೂರ್ತಿಯಾಗಿ ಬದಲಾಗಿ ಹೋಗಬಹುದೆಂದು ತೋರುತ್ತದೆ, ಅಥವಾ ಈ ನಾಗರಿಕತೆ  ಸಂಪೂರ್ಣವಾಗಿ  ನೆಲಕಚ್ಚಿ ಹೋಗಲೂಬಹುದು. 

Sunday, 5 June 2011

ಒಂದು ಕವಿತೆ 
ಸುಮ್ಮನೆ ಒಮ್ಮೆ 


ನಕ್ಕು ಬಿಡು ಗೆಳತಿ  ಸುಮ್ಮನೆ ಒಮ್ಮೆ 
ಹೂವರಳಿದ ಹಾಗೆ, ಈ ಸುಖಕೆ 
ಮರಳಿ ಮಗುವಾಗುವೆ 

ನೇವರಿಸಿಬಿಡು  ಗೆಳತಿ ಸುಮ್ಮನೆ ಒಮ್ಮೆ
ನೋವು ನರಗಳ ಹೊರೆಯ 
ಇಳಿಸಿ ಹಗುರಾಗುವೆ 

ಮಾತಾಡಿಬಿಡು ಗೆಳತಿ, ಸುಮ್ಮನೆ ಒಮ್ಮೆ
ಹೃದಯ ಹೃದಯದ ಭಾವ 
ಬೆಸೆದು ಹಗುರಾಗುವೆ 

ಕಣ್ಣಲ್ಲಿ  ಕಣ್ಣಿಟ್ಟು ನೋಡೊಮ್ಮೆ ಸುಮ್ಮನೆ, ಗೆಳತಿ 
ಬೆಡಗು  ಬೆರಗಿನ ಬೆಳಕು 
ತುಂಬಿ ಹಗುರಾಗುವೆ 

ನೀರಿನಲೆಗಳ ಹಾಗೆ ಸುಮ್ಮನೆ ಹಾಡಿಬಿಡು ಗೆಳತಿ 
ನಾದಲೋಕಕ್ಕೆ ಕೊಳಲ 
ದನಿಯಾಗುವೆ 

ಗಾಳಿಯ ಹಾಗೊಮ್ಮೆ ತೀಡಿಬಿಡು ಗೆಳತಿ 
ಗಂಧವತೀ  ಪೃಥ್ವಿ 
ಎಂದು ಹಾಯಾಗುವೆ 
  


ನಾನು ಈ ಕವನ ಬರೆದು ಹತ್ತಿರ ಹತ್ತಿರ ಒಂದು ವರ್ಷ ಆಗಿರಬೇಕು. ಕೆಲಸದ ತುರ್ತಿನಲ್ಲಿ ಅನಂತರ ಮರೆತು ಬಿಟ್ಟಿದ್ದೆ. ಈಗ ಸುಮಾರು ಒಂದು ತಿಂಗಳ ಹಿಂದೆ ಕಣ್ಣಿಗೆ ಬಿದ್ದಾಗ ಅಲ್ಪಸ್ವಲ್ಪ ತಿದ್ದಿ  'ಕರ್ಮವೀರ'ಕ್ಕೆ ಕಳಿಸಿಕೊಟ್ಟಿದ್ದೆ. ಈ ವಾರದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಕನ್ನಡದಲ್ಲಿ  ಬರೆದ ಬಳಿಕ ತುಳುವಿಗೂ ನಾನೇ  ಅನುವಾದಿಸಿ ತುಳು ಸಾಹಿತ್ಯ ಅಕಾದಮಿಯ ತ್ರೈಮಾಸಿಕ 'ಮದಿಪು' ಸಂಚಿಕೆಗೆ ಕಳಿಸಿಕೊಟ್ಟಿದ್ದೆ. ಅದರಲ್ಲಿಯೂ ಪ್ರಕಟವಾಗಿ ಸಂಚಿಕೆ ಈ ವಾರ ಅಂಚೆಯಲ್ಲಿ  ಬಂದಿದೆ. ಇದೊಂದು ಆಕಸ್ಮಿಕವೇ ಸರಿ. ಈಗ ಕವಿತೆ  ಓದಿ. 

ಹೀಗೇ ಇರುವಾಗ 

ಹೀಗೇ ಇರುವಾಗ ನೀನು ಕೇಳಿದೆ 
ನಮ್ಮ ಮದುವೆ ಯಾವಾಗ?


ಮೂರು ತಿಂಗಳಾಯಿತು 
ಈ ಮಾತಿಗೆ 
ನನಗೆ ದಿಗಿಲಾಯಿತು 
ಸದ್ಯದಲ್ಲೇ ಮಳೆಗಾಲ ಆರಂಭವಾಗುತ್ತದೆ 
ಈ ವರ್ಷ ಹೊಸ ಪ್ರಸಂಗ 
ರಂಗಸ್ಥಳ ತುಂಬ ನಾನೇ ನಾನು 
ಸರಿ 
ರಾತ್ರಿ ಸರಿಯುತ್ತಿದ್ದಂತೆ 
ಕಥೆಯ ಉತ್ತುಂಗದಲ್ಲಿ 
ರಣಾಂಗಣದ ನಡುವೆ 
ನಾನೇ ಪತಾಕೆ ನೆಟ್ಟ ವೀರ! 

ರಾತ್ರಿಯಿಡೀ ಕುಣಿದು ಬಂದಾಗ 
ನಿನ್ನ ಕಣ್ಣಿನಲ್ಲಿ ಧಗ ಧಗ ಬೆಂಕಿ 
ಬಿಲ್ಲು ಬಾಣ ಮೂಲೆಗೆಸೆದು 
ಚಿತ್ರಾಂಗದೆಯನ್ನರಸುತ್ತ  ಹೊರಟ 
ಅರ್ಜುನನಂತೆ ನಾನು 

ಹತ್ತಿರದಲ್ಲೆಲ್ಲೋ ಹಕ್ಕಿಗಳ ಕೂಗು 
ನರಿಗಳ ಊಳು 
ನಾಯಿ ಬೊಗಳಿ ಬೆನ್ನಟ್ಟಿದ ಸದ್ದು 
ಈಗಂತು ಬೇಟೆ ನಿಷಿದ್ಧವಂತೆ

ನೀನೇನು ಹೆದರಬೇಡ 
ಈ ವೇಷ ಈ ಬಣ್ಣ ಈ ಕಿರೀಟ
ರಾತ್ರಿಯಲ್ಲಿ ಮಾತ್ರ 
ನಾನು ಕೇವಲ ನರಮನುಷ್ಯ 

ನಾಳೆ ನಾನೇ ರಾಮ 
ನೀನೆ ಸೀತೆ
ರಾಮನಿಗು ಸೀತೆಗು ನಾಳೆಯೇ ಮದುವೆ!

Friday, 3 June 2011

ವಿಚಾರ

ಬಾಗುವುದು

ಮೊನ್ನೆ ಒಂದು ಮದುವೆಗೆ ಹೋಗಿ ಬಂದ ಮೇಲೆ ಸುಮ್ಮನೆ ಹೀಗೊಂದು ಆಲೋಚನೆ ಬಂತು:

ಕಲ್ಯಾಣಮಂಟಪದಲ್ಲಿ ವಧು ಹಾರ ಹಾಕುವ ಸಂದರ್ಭದಲ್ಲಿ ವರಮಹಾಶಯ ತುಸುವೂ ಬಾಗದೆ ನೆಟ್ಟಗೆ ಸೆಡವಿಕೊಂಡು ನಿಂತಿದ್ದ. ಆತ ನಿಂತ ಭಂಗಿಯಲ್ಲಿ ಕೃತಕತೆ ಎದ್ದು ಕಾಣುತಿತ್ತು. ವಧು ಸ್ವಲ್ಪ ಕುಳ್ಳಗಿದ್ದುದರಿಂದ ವರನ ಕುತ್ತಿಗೆಗೆ ಹಾರ ಹಾಕಲು ಕಷ್ಟವಾಯಿತು. ತುದಿಗಾಲಲ್ಲಿ ನಿಂತು ಗುರಿಹಿಡಿದು ಪ್ರಯಾಸದಿಂದ ಹಾರ ಹಾಕಿದಳು. 'ಅಬ್ಬ! ಎಂತಹ ಧಿಮಾಕು ಕಣೋ!' ಅನ್ನುವ ಕೆಣಕುನೋಟವೊಂದು ವಧುವಿನ ಕಣ್ಣಿನಲ್ಲಿ ಕಂಡಂತಾಯಿತು.

'ವಧು ಮಾಲೆ ಹಾಕುವಾಗ ನೀನು ಬಗ್ಗಬೇಡ' ಎಂದು ವರನ ಕಡೆಯವರು ಅವನಿಗೆ ಮೊದಲೇ ಕಿವಿಯಲ್ಲಿ ಹೇಳಿರಬೇಕು. 'ಬಾಗಿದರೆ ನೀನು ಅವಳಿಗೆ ಸೋತೆ ಎಂದರ್ಥ. ಗಂಡಸಾದ ನೀನು ನೇರವಾಗಿ ನಿಂತಿರಬೇಕು! ಹೆಂಡತಿಗೆ ಬಾಗಿ ಅವಳು ಹೇಳಿದಂತೆ ಕೇಳಿಕೊಂಡು ಬಾಳುವವನಲ್ಲ ಎಂಬುದನ್ನು ಮದುವೆ ಮಂಟಪದಲ್ಲೇ ತೋರಿಸಿಕೊಡಬೇಕು' ಎಂದೆಲ್ಲ ಆತನ ಮೇಲ್ಮೆಯನ್ನು ಕೆಣಕಿ ವರನ ಕಡೆಯವರು ಅವನನ್ನು ಮೊದಲೇ ಸಿದ್ಧಗೊಳಿಸಿರಬೇಕು.

ಯಾರು ಮೇಲೆ, ಯಾರು ಕೆಳಗೆ? ಯಾರು ಯಾರಿಗೆ ಸೋಲುವುದು? ಮದುವೆಯೆಂದರೆ ಸೋಲು ಗೆಲುವಿನ ಸ್ಫರ್ಧೆಯೇ?

ಇರಲಿ, ಮುಖ್ಯ ವಿಷಯ ಅದಲ್ಲ; ಒಬ್ಬ ಮನುಷ್ಯನ ನಡೆ ಮತ್ತು ವರ್ತನೆ ಸಹಜ ಸ್ವಾಭಾವಿಕವಾಗಿರಬೇಕು. ಯೋಚನೆ ಮತ್ತು ದೇಹಭಾಷೆಗೆ ಹೊಂದಾಣಿಕೆ ಇರಬೇಕು. ಆಗ ಮಾತ್ರ ಅವನ ವ್ಯಕ್ತಿತ್ವ ಸಹಜವೂ ಸುಂದರವೂ ಆಗಿರುತ್ತದೆ. ಯಾರೋ ಹೇಳಿದರೆಂದು ಆರೋಪಿತ ವ್ಯಕ್ತಿತ್ವವನ್ನು ತೋರಿಸಿದರೆ ಹಾಸ್ಯಾಸ್ಪದವಾಗುತ್ತದೆ. ದೃಢತೆಯಾಗಿರಲಿ, ವಿನಯವಾಗಿರಲಿ, ಸೌಜನ್ಯವಾಗಿರಲಿ, ಭದ್ರತೆಯ ನಿಲುವಾಗಿರಲಿ ಅದು ಹೃದಯದಿಂದ ಬಂದು ಸ್ವಾಭಾವಿಕವಾಗಿ  ತನ್ನ ನಿಲುವಿನಲ್ಲಿ ಮೈದಾಳಿದಂತೆ ಇರಬೇಕು. ನಾಟಕೀಯವಾಗಿರದೆ ಸಹಜವಾಗಿರಬೇಕು. ತನ್ನ ಮೂಲ ವ್ಯಕ್ತಿತ್ವ ಹೂವರಳಿದಂತೆ ಪ್ರತಿಫಲಿತವಾಗಬೇಕೇ ಹೊರತು ಇತರರು ಹೇಳಿಕೊಟ್ಟುದನ್ನು ಒಪ್ಪಿಸುವ ಕೃತಕತೆ ಕಾಣಿಸಬಾರದು. ಸಹಜತೆಯೇ ಸೌಂದರ್ಯ, ಅಲ್ಲವೇ?

ಯಾರು ಬಾಗುವುದಿಲ್ಲವೆಂದು ಅಂದುಕೊಂಡಿರುತ್ತಾರೋ ಅವರು ಬಾಗುವುದನ್ನೂ, ಬಾಗಿದವರು ಸೆಟೆದು ನಿಂತುದನ್ನೂ  ನಾವು ನೋಡಿದ್ದೇವೆ. ಕಟ್ಟಿಕೊಟ್ಟ ಬುತ್ತಿಯೂ ಹೇಳಿಕೊಟ್ಟ ಬುದ್ಧಿಯೂ ಕೊನೆತನಕ ಉಳಿಯುವುದಿಲ್ಲ.

ಸರಿ, ಬಾಗುವುದಿಲ್ಲ ಎಂಬ ಬಾಹ್ಯ ತೋರ್ಪಡಿಸುವಿಕೆಯಿಂದ ಆಗಬೇಕಾದುದೇನು?  ಅದು ಧೀರತೆಯ, ವೀರತೆಯ, ಲೋಕೋತ್ತರಗಳನ್ನು ಗೆಲ್ಲುವ ಆತ್ಮವಿಶ್ವಾಸದ ಸಹಜ ನಿಲುವಾದರೆ ಒಪ್ಪಿಕೊಳ್ಳೋಣ, ಸಂತೋಷ. ಆನೆಯ ಹಾಗೆ, ವನರಾಜನ ಹಾಗೆ 'ನಾನಿರುವುದೇ ಹೀಗೆ' ಎಂಬ  ಸ್ವಯಮೇವ ಭಂಗಿ ಅದು. 

ಮದುವೆಯಾದ ಮೇಲೆ ಅವನು ಬಾಗಿದ್ದಾನೋ ಇಲ್ಲವೋ ಎಂಬುದನ್ನು ನೋಡಲು ಯಾರು ಹೋಗುತ್ತಾರೆ! ಬಾಗದಿದ್ದರೆ ವ್ಯಕ್ತಿತ್ವದಲ್ಲಿ ಅದೊಂದು ಊನವೇ ಸರಿ. ಬಾಗಿದರೆ 'ಅಮ್ಮಾವ್ರ ಗಂಡ' ಆಗಿರುತ್ತಾನೆಂದು ಅರ್ಥವಲ್ಲ. ಬಾಗದೇ ಇದ್ದರೆ ರಾಜನಾಗಿರುತ್ತಾನೆಂದೂ ಭಾವಿಸಬೇಕಾಗಿಲ್ಲ. 'ಸಮರಸವೇ ಜೀವನ; ವಿರಸ ಮರಣ'. 

ತಿಳಿದವರು ಹೇಳಲಿಲ್ಲವೇ 'ಹುಲ್ಲಾಗು ಬೆಟ್ಟದಡಿ; ಮನೆಗೆ ಮಲ್ಲಿಗೆಯಾಗು' ಎಂದು?  ಹಾಗೆ ಹುಲ್ಲಾಗುವುದು ಕೂಡ ನೆಲದ ಚೇತನ ಬನಿಯಾದಾಗಲಷ್ಟೇ ಸಾಧ್ಯ.

ಬಾಗುವುದು ಎಂದರೆ ಶರಣಾಗತಿ ಎಂದು ಅರ್ಥವಲ್ಲ. ಫಲ ತುಂಬಿದ ಹಣ್ಣಿನ ಗಿಡದ ಹಾಗೆ, ಮಹಾವೀರನ ಹಾಗೆ ನೆಲದ ಋಣಕ್ಕೆ ಕೃತಜ್ಞತೆ ಹೇಳುವುದೆಂದು ಅರ್ಥ.