Thursday 14 April 2011

ಸೂರ್ಯನೇ ಸುಳ್ಳು!


ಈ ಬರಹವನ್ನು ಓದಿ ಖಂಡಿತ ನಗಬೇಡಿ! ಸೂರ್ಯನೇ ಸುಳ್ಳು ಎಂದರೆ, ಕಾಲದ ಹಿನ್ನೆಲೆಯಲ್ಲಿ, ಸೂರ್ಯ ಕೇವಲ ಕ್ಷಣಿಕ; ಆತನ ಅಸ್ತಿತ್ವವು ಶಾಶ್ವತವಲ್ಲ ಎಂಬುದು ಭಾವಾರ್ಥ.


ಆಕಾಶವೆಂದರೆ ಶಕ್ತಿಯ ಒಂದು ಮಹಾಮೇಳ. ನಿರಂತರ ಚಲನೆಯ ದೆಸೆಯಿಂದಾಗಿ ಆಕಾಶದಲ್ಲಿ ಅಲ್ಲಲ್ಲಿ ಶಕ್ತಿಯ ಕೆಲವು ಕೇಂದ್ರಬಿಂದುಗಳು ನಿರ್ಮಾಣವಾಗುತ್ತವೆ ಮತ್ತು ಶಕ್ತಿಸಂಚಯನವನ್ನು ತಡೆದುಕೊಳ್ಳಲಾರದೆ ಅವು ಸ್ಫೋಟಗೊಳ್ಳುತ್ತವೆ. ಇವು ನಕ್ಷತ್ರಗಳಾಗಿ ರೂಪುಗೊಳ್ಳುತ್ತವೆ. ಶಕ್ತಿಯ ಉಂಡೆಗಳಾಗಿರುವುದರಿಂದ ಬಹಳ ಕಾಲ ಅವು ಉರಿದು ಕ್ರಮೇಣ ನಂದಿ ಹೋಗಿ ಕತ್ತಲೆಯ ಕೂಪದಲ್ಲಿ ವಿಲೀನವಾಗಿಬಿಡುತ್ತವೆ. ಹಾಗಾಗಿ ಕತ್ತಲೆಯೇ ಶಾಶ್ವತ ಮತ್ತು ಸತ್ಯ!

ಕತ್ತಲೆಯೇ ಒಟ್ಟು ಮೊತ್ತವಾಗಿರುವ ಈ ವಿಶ್ವದಲ್ಲಿ ಕೇಂದ್ರಭಾಗದಿಂದ ಸ್ಫೋಟಿಸಿ ಚದುರಿಹೋದ ಶಕ್ತಿಗಳು ಉರಿದು ನಂದಿಹೋಗುತ್ತವೆ. ಅಂದರೆ ಟಾರ್ಚನ್ನು ನಾವು ಒತ್ತಿ ಹಿಡಿದಷ್ಟು ಹೊತ್ತು ಮಾತ್ರ ಬೆಳಕಿರುವಂತೆ ಮತ್ತು ಕೈಬಿಟ್ಟಾಗ ಬೆಳಕು ಆರಿಹೋಗುವಂತೆ ಸೂರ್ಯ ಕೂಡ (ಕಾಲದ ಹಿನ್ನೆಲೆಯಲ್ಲಿ) ಉರಿಯುವುದು ಕ್ಷಣ ಹೊತ್ತು ಮಾತ್ರ.


ಬೆಳಕು ಮತ್ತು ಶಾಖ ಇರುವಲ್ಲಿ ಮಾತ್ರ ಪ್ರಾಕೃತಿಕವಾದ  ಸೃಷ್ಟಿಕ್ರಿಯೆ ಇರುತ್ತದೆ. ಅದು ಕೂಡ, ಸೂರ್ಯ ಇರುವಷ್ಟು ಹೊತ್ತು ಮಾತ್ರ.

ಕತ್ತಲಾವರಿಸುವುದು, ಸ್ಫೋಟ ಸಂಭವಿಸಿ ಆ ಶಕ್ತಿಕೇಂದ್ರಗಳು ಕೆಲಕಾಲ ಉರಿಯುವುದು, ಮತ್ತೆ ನಂದಿ ಕತ್ತಲಾಗುವುದು - ಇದೊಂದು ನಿರಂತರ ಕ್ರಿಯೆ. ನಮ್ಮ ದೃಷ್ಟಿಯಲ್ಲಿ ಎಷ್ಟೋ ಕೋಟಿ ವರ್ಷಗಳಿಗೊಮ್ಮೆ ಈ ಕ್ರಿಯೆ ನಡೆಯುವುದಾಗಿರಬಹುದು, ಆದರೆ ಬೆಳಕು ಅಶಾಶ್ವತ ಮತ್ತು ಕತ್ತಲೆಯೇ ದೊಡ್ಡ ಮೊತ್ತ ಎನ್ನಬಹುದು. ಜಗತ್ತು ಮಿಥ್ಯೆ (ಜಗನ್ಮಿಥ್ಯಾ) ಎಂದು ಶಂಕರಾಚಾರ್ಯರು ಹೇಳಿದ್ದು ಈ ಅರ್ಥದಲ್ಲಿ.

ಕತ್ತಲಿನ ದೀರ್ಘತೆಗೆ ಮತ್ತು ಮಹಾಮೌನಕ್ಕೆ ಕೊನೆಮೊದಲಿಲ್ಲ. ಅಮಾವಾಸ್ಯೆಯ ಕಾರಿರುಳಲ್ಲಿ ಮಿಂಚುಹುಳಗಳನ್ನು ಕಲ್ಪಿಸಿಕೊಳ್ಳಿ. ಆ ಮಿಂಚುಹುಳಗಳ ಬೆಳಕು ಶಾಶ್ವತವೇ? 

No comments:

Post a Comment