ನಿಮ್ಮೊಂದಿಗೆ...
ನನ್ನ ಬ್ಲಾಗ್ ಗೆ ನಾಲ್ಕು ತಿಂಗಳು ಆಯಿತು. ಈಗ ನಿಮ್ಮೊಂದಿಗೆ ನಾಲ್ಕು ಮಾತು ಆಡಬೇಕು ಅನಿಸುತ್ತಿದೆ. ಹಾಳೆಯ ಬರವಣಿಗೆಯಿಂದ ಕಂಪ್ಯೂಟರ್ ಬರವಣಿಗೆಗೆ ಬಂದಿರುವುದು ನನಗೆ ಹೊಸ ಅನುಭವ. ಈ ಕಂಪ್ಯೂಟರ್ ಬರವಣಿಗೆಯನ್ನು ಯಾರು ಓದುತ್ತಾರೆ ಎಂಬ ಅಸಡ್ಡೆ ಮತ್ತು ಅನಾಸಕ್ತಿ ನನಗೆ ಆರಂಭದಲ್ಲಿ ಇತ್ತು. ಆ ಭಾವನೆ ತಪ್ಪು ಎಂಬುದು ಈಗ ಮನವರಿಕೆಯಾಗುತ್ತಿದೆ. ತುಂಬ ಮಂದಿ ಈಗ ಇದನ್ನು ಓದುತ್ತಿದ್ದಾರೆ ಎಂಬುದು ಅಂಕಿಸಂಖ್ಯೆ ಸಹಿತ ಗೊತ್ತಾಗುತ್ತಿದೆ. ಇದು ನಿಜವಾಗಿಯೂ ಸಂತೋಷ ಕೊಡುವ ಸಂಗತಿ.
ನನಗೆ ಬ್ಲಾಗ್ ಬಗ್ಗೆ ಮೊದಲು ಏನೂ ತಿಳಿದಿರಲಿಲ್ಲ. ಸ್ನೇಹಿತರು, ನಿಮಗೆ ಬ್ಲಾಗ್ ಇಲ್ಲವೇ, ಇ-ಮೇಲ್ ವಿಳಾಸ ಇಲ್ಲವೇ ಎಂದು ಕೇಳತೊಡಗಿದರು. ಈ ಪ್ರಶ್ನೆ ಹೆಚ್ಚು ಹೆಚ್ಚಾಗಿ ಕಿವಿಗೆ ಬೀಳತೊಡಗಿದಾಗ ನಾನು ಎಚ್ಚರಾದೆ, ಇದೇನು ನೋಡಿಯೇ ಬಿಡೋಣ ಎಂದು ನಾನೂ ಬ್ಲಾಗ್ ಪ್ರಪಂಚ ಪ್ರವೇಶಿಸಿದೆ.
ಪ್ರವೇಶಿಸಿದ ಬಳಿಕ ಇದರ ಸಾಧ್ಯತೆ ಮತ್ತು ಅಗಾಧತೆ ಕಂಡು ಆಶ್ಚರ್ಯಗೊಂಡೆ. ಇದುವರೆಗಿನ ನನ್ನ ಅಜ್ಞಾನಕ್ಕೆ ಮತ್ತು ವಿಳಂಬ ಮಾಡಿದ್ದಕ್ಕೆ ನಾನೇ ಮರುಕಪಡುವಂತಾಯಿತು. ಹಿಂದೆ ನಾವು ಅಕ್ಷರಸ್ಥರು, ಅನಕ್ಷರಸ್ಥರು ಎಂದು ಮಾತಾಡಿಕೊಳ್ಳುತ್ತಿದ್ದಂತೆ, ಬಹುಶಃ ಇನ್ನು ಮುಂದೆ ಕಂಪ್ಯೂಟರ್ ಜ್ಞಾನಿಗಳು, , ಕಂಪ್ಯೂಟರ್ ಅಜ್ಞಾನಿಗಳು ಎಂದು ಹೇಳುವ ದಿನ ಬರಬಹುದು. ಬರಬಹುದು ಏನು, ಈಗಾಗಲೇ ಬಂದಿದೆ. ಹಳ್ಳಿಗಳ ಪಾರಂಪರಿಕ ತಿಳಿವಳಿಕೆ ಮತ್ತು ಕೃಷಿ ಪಾಂಡಿತ್ಯ ಇಂದು ನಮಗೆಲ್ಲಿದೆ? ಒಬ್ಬ ವ್ಯಕ್ತಿ ಎಲ್ಲ ವಿಷಯಗಳಲ್ಲೂ ಪಂಡಿತನಾಗಿರಲು ಸಾಧ್ಯವಿಲ್ಲ. ಕೃಷಿಯಲ್ಲಿ ಆಳವಾದ ತಿಳಿವಳಿಕೆ ಇದೆ ಎಂದಾದರೆ ಆತ ಕೃಷಿಪಂಡಿತನೇ ಹೌದು. ನಮಗೆ ಗೊತ್ತಿರುವ ನಾಲ್ಕು ಅಕ್ಷರ ಹಿಡಿದುಕೊಂಡು ಇದೇ ಮಹಾಜ್ಞಾನ ಎಂಬಂತೆ ನಾವು ಮಾತಾಡುತ್ತೇವೆ ಮತ್ತು ಅಹಂಕಾರದಿಂದ ಎಲ್ಲಾ ವಿಷಯಗಳಿಗೂ ತಲೆಹಾಕುತ್ತೇವೆ! ಪಾಪ, ಅಷ್ಟೆಲ್ಲಾ ತಿಳಿದಿದ್ದರೂ ಹಳ್ಳಿಗರು, ನಾವು ನಾಲ್ಕಕ್ಷರ ಕಲಿತಿಲ್ಲವಲ್ಲ ಎಂದು ಹಳಹಳಿಸುತ್ತ ಕೀಳರಿಮೆ ಪಡುತ್ತಾರೆ. ಅದೇ ಕೀಳರಿಮೆ ಕಂಪ್ಯೂಟರ್ ಬಾರದ ನಮಗೂ ನಾಳೆ ಬಂದರೆ ಆಶ್ಚರ್ಯವೇನಿಲ್ಲ!
ಬ್ಯಾಂಕಿಂಗ್ ವ್ಯವಹಾರದಲ್ಲೇ ಎಷ್ಟು ಬದಲಾವಣೆ ಆಗಿದೆ, ನೋಡಿ. ಈಗ ನಮ್ಮ ಖಾತೆಯಲ್ಲಿ ಹಣ ಇದ್ದರೆ ಚೆಕ್ ಬರೆದು, ಕ್ಯೂ ನಿಂತು, ಹಣ ಪಡೆದು, ಎಣಿಸುತ್ತಾ ಕೂರಬೇಕಾಗಿಲ್ಲ. ಎಟಿಎಂನಿಂದ ಒಂದೇ ಕ್ಷಣದಲ್ಲಿ ಹಣ ಪಡೆಯಬಹುದು. ಮೊಬೈಲ್ ನಿಂದ ಪ್ರಪಂಚದಲ್ಲಿರುವ ಯಾರನ್ನು ಬೇಕಾದರೂ ಒಂದು ಕ್ಷಣದಲ್ಲಿ ಸಂಪರ್ಕಿಸಬಹುದು. ಸಂದೇಶಗಳ ಪ್ರಮಾಣ ಮತ್ತು ಪರಿಣಾಮಗಳನ್ನು ನಾವು ಈಗಾಗಲೇ ತಿಳಿದಿದ್ದೇವೆ.ನೀರಿನ ಬಿಲ್ , ಕರೆಂಟು ಬಿಲ್ಲು ಗಳ ಪಾವತಿ, ಪ್ರಯಾಣದ ಟಿಕೆಟ್ ಮುಂಗಡ ಕಾಯ್ದಿರಿಸುವುದು, ಹಣಕಾಸು ವ್ಯವಹಾರ ಮೊದಲಾದ ಕೆಲಸಗಳು ಕಂಪ್ಯೂಟರ್ ನೆರವಿನಿಂದ ಕುಳಿತಲ್ಲೇ ಆಗುತ್ತದೆ. ಒಂದು ಕಂಪ್ಯೂಟರ್ ನಿಂದ ದಾಖಲೆಗಳನ್ನು ಒಯ್ಯಲು ಪೆನ್ ಡ್ರೈವ್ ಅನ್ನು ಬಳಸುತ್ತೇವೆ.ಬಳಸಿದ ಬಳಿಕ ಅಲ್ಲಿ ಇಲ್ಲಿ ಮರೆತು ಹೋಗುತ್ತದೆ. ಹತ್ತಾರು ಪೆನ್ ಡ್ರೈವ್ ಗಳು ಒಂದು ರೀತಿಯಲ್ಲಿ ಕಿರಿಕಿರಿ ಅನ್ನಿಸಿದ್ದೂ ಉಂಟು. ಈಗ ಮಾಹಿತಿಗಳನ್ನು ತುಂಬಿಡಲು ಪ್ರತ್ಯೇಕ ಸೈಟ್ ಗಳು ಬಂದ ಬಳಿಕ ಪೆನ್ ಡ್ರೈವ್ ಕೂಡ ಅಸ್ತಿತ್ವ ಕಳೆದುಕೊಳ್ಳತೊಡಗಿದೆ.
ಇನ್ನು ಮೂವತ್ತು ನಲವತ್ತು ವರ್ಷಕ್ಕೆ ಪುಸ್ತಕಗಳು, ಪತ್ರಿಕೆಗಳು ಎರಡನೇ ಸ್ಥಾನಕ್ಕೆ ಹೋಗಬಹುದೆಂದು ತೋರುತ್ತದೆ. ಅದೇನು ಆಶ್ಚರ್ಯದ ಮಾತಲ್ಲ. ಯಾಕೆಂದರೆ ಮೊಟ್ಟಮೊದಲು ಶಿಲಾಲೇಖ ಇತ್ತು. ಅನಂತರ ತಾಮ್ರಪಟ, ತಾಳೆಗರಿಗಳ ಬರವಣಿಗೆ ಬಂತು. ಸುಮಾರು ಇನ್ನೂರು ವರ್ಷಗಳ ಹಿಂದಷ್ಟೇ ಹಾಳೆಗಳ ಬಳಕೆ ಬಂದದ್ದು. ಮುದ್ರಣತಾಂತ್ರಿಕತೆ ಬಂದ ಬಳಿಕ ಪುಸ್ತಕಗಳು, ಪತ್ರಿಕೆಗಳು ವ್ಯಾಪಕವಾದವು. ಇನ್ನೀಗ ಎಲೆಕ್ಟ್ರಾನಿಕ್ ಯುಗ. ಶಿಲೆ, ತಾಮ್ರ, ತಾಳೆಗರಿಗಳ ಬರವಣಿಗೆ ಮಾಯವಾದಂತೆ, ಕ್ರಮೇಣ ಹಾಳೆಗಳ ಮೇಲಿನ ಬರವಣಿಗೆಯೂ ಮಾಯವಾದರೆ ಖಂಡಿತ ಆಶ್ಚರ್ಯ ಪಡಬೇಕಿಲ್ಲ. ಈಗ ಪತ್ರ ಬರೆಯುವ ಕ್ರಮ ಎಲ್ಲಿದೆ? ನಾವು ಚಿಕ್ಕವರಾಗಿದ್ದಾಗ ಪತ್ರ ಬರೆದು ಒಬ್ಬರನ್ನೊಬ್ಬರು ಸಂಪರ್ಕಿಸಬೇಕಿದ್ದರೆ ಹತ್ತು-ಹದಿನೈದು ದಿನ ತಗಲುತ್ತಿತ್ತು. ಈಗ ಹತ್ತು-ಹದಿನೈದು ಸೆಕೆಂಡ್ ಕೂಡಾ ಬೇಕಾಗಿಲ್ಲ!
ತಾಂತ್ರಿಕತೆ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ನಾವು ಅದಕ್ಕೆ ಬೇಕಾದಂತೆ ಹೊಂದಿಕೊಳ್ಳದಿದ್ದರೆ ನಾವು ಅಪ್ರಸ್ತುತರಾಗಿಬಿಡುತ್ತೇವೆ. ನಾಗರಿಕತೆ ಎಂದರೆ ಅದೇ ಅಲ್ಲವೇ? ನಾವು ನಾಗರಿಕತೆಯನ್ನು ಟೀಕಿಸುತ್ತಾ ಟೀಕಿಸುತ್ತಾ ಅದರ ಒಂದು ಭಾಗವೇ ಆಗಿ ಬಿಡುವುದು ನಮಗೇ ಗೊತ್ತಾಗುವುದಿಲ್ಲ! ಹೆಚ್ಚು ಹೆಚ್ಚು ಟೀಕಿಸುವುದೆಂದರೆ ನಾವು ಹೆಚ್ಚು ಹೆಚ್ಚು ಅದರ ಸಮೀಪಕ್ಕೆ ಹೋಗುತ್ತಿದ್ದೇವೆಂದೇ ಅರ್ಥ.
ನಾನು ನನ್ನ ಸಾಹಿತ್ಯಕೃತಿಗಳನ್ನೆಲ್ಲ ಬ್ಲಾಗ್ ಗೆ ಹಾಕುವ ಉದ್ದೇಶವನ್ನು ಸದ್ಯಕ್ಕೆ ಹೊಂದಿಲ್ಲ. ಸಣ್ಣಪುಟ್ಟ ಅನಿಸಿಕೆಗಳನ್ನು, ಕೆಲವು ಚಿಂತನೆಗಳನ್ನು, ಆಗೀಗೊಮ್ಮೆ ಕೆಲವು ಕವನಗಳನ್ನು, ಕೆಲವು ಫೊಟೋ ವರದಿಗಳನ್ನು ಹಾಕುತ್ತಿದ್ದೇನೆ. ಇದು ಕೇವಲ ಪ್ರಾಯೋಗಿಕ. ಈ ವಿದ್ಯಮಾನ ನನ್ನನ್ನು ಹೇಗೆ ಒಳಗೆ ಎಳೆದುಕೊಳ್ಳುತ್ತದೋ ಹಾಗೆ ಕೆಲಸ ಮಾಡುತ್ತ ಹೋಗುವ ಮನಸ್ಸು ಮಾಡಿದ್ದೇನೆ.
ಪುಸ್ತಕಗಳಲ್ಲಿರುವ ಮಾಹಿತಿ ಙ್ಞಾನವೆಲ್ಲ ಹಾಗೆಹಾಗೆಯೇ ಕಂಪ್ಯೂಟರ್ ಗೆ ವರ್ಗಾವಣೆ ಆಗಬೇಕೆಂದೇನೂ ಇಲ್ಲ. ಅದು ಕಾರ್ಯಸಾಧ್ಯವೂ ಅಲ್ಲ. ಅಲ್ಲಿನ ಪ್ರಮುಖ ಸಾರ ಮತ್ತು ಮುಂದುವರಿಕೆಯ ಙ್ಞಾನ ಇಲ್ಲಿಗೆ ಬಂದರೆ ಆಯಿತು. ಹೊಳೆ ಹರಿಯುವ ಹಾಗೆ ಅದನ್ನೇ ತಾನೆ ನಿರಂತರತೆ ಅನ್ನುವುದು?
ಬ್ಲಾಗ್ ಬರವಣಿಗೆಯಿಂದಾಗಿ ಮುಂದಿನ ದಿನಗಳಲ್ಲಿ ಈಗ ನಾವು ವಿಭಾಗಿಸಿಕೊಂಡಿರುವ ಸಾಹಿತ್ಯ ಪ್ರಕಾರಗಳು ಹಾಗೆಯೇ ಮುಂದುವರಿಯುವುದೆಂಬ ಭರವಸೆಯಿಲ್ಲ. ಅಂದರೆ, ಈಗ ಕಾದಂಬರಿ, ಕಥಾ ಸಂಕಲನ, ಕವನ ಸಂಕಲನ, ಪ್ರಬಂಧ ಸಂಕಲನ ಎಂದು ಬೇರೆ ಬೇರೆಯಾಗಿ ನಾವು ತಿಳಿದುಕೊಂಡಿರುವಂತೆ ಬ್ಲಾಗ್ ನಲ್ಲಿ ಹಾಗೇನೂ ಇರಲಾರದು. ಈ ಪ್ರಕಾರಗಳೆಲ್ಲ ಆಧುನಿಕ ಸಾಹಿತ್ಯದ ವಿಭಾಗಕ್ರಮಗಳು. ಹಳಗನ್ನಡದ ಚಂಪೂ ಸಾಹಿತ್ಯದಲ್ಲಿ ಗದ್ಯ (ವಚನ), ಪದ್ಯ (ಕಾವ್ಯ) ಎರಡೂ ಇದ್ದವು. ಗದ್ಯದಲ್ಲಿರುವ ಕೆಂಪುನಾರಾಯಣನ 'ಮುದ್ರಾಮಂಜೂಷ'ವನ್ನು ನಾವು ಕಾವ್ಯಪ್ರಕಾರಕ್ಕೆ ಸೇರಿಸಿದ್ದೇವೆ. ವಚನಸಾಹಿತ್ಯವನ್ನಂತೂ (ಅದು ನಿಜವಾಗಿ ಗದ್ಯದಲ್ಲಿದೆ) ನಾವು ಕಾವ್ಯಪ್ರಕಾರಕ್ಕೆ ಸೇರಿಸಿಬಿಟ್ಟಿದ್ದೇವೆ. ಅಂದರೆ ಸಾಹಿತ್ಯಪ್ರಕಾರ ಎಂಬ ಪರಿಕಲ್ಪನೆಯು ಕೂಡ ಕಾಲಕಾಲಕ್ಕೆ ಬದಲಾಗುವಂಥದ್ದೇ ಆಗಿದೆ. ತಾಂತ್ರಿಕ ಆವಿಷ್ಕಾರವಾದ ಈ ಆಧುನಿಕೋತ್ತರ ಬ್ಲಾಗ್ ನಲ್ಲಿ, ಒಬ್ಬ ಲೇಖಕನಿಗೆ ಕಾಲಕಾಲಕ್ಕೆ ಹೊಳೆಯುವ ವಿಚಾರಗಳು ಬೇರೆಬೇರೆ ಪ್ರಕಾರಗಳಲ್ಲಿ ಪಡಿಮೂಡಿ ಬ್ಲಾಗಿನಲ್ಲಿ ರೂಪು ಪಡೆಯುತ್ತಾ ಪ್ರಕಾರನಿಷ್ಟೆಯೇ ಮಾಯವಾಗಿಬಿಡಬಹುದು. ಆದರೆ ಬರವಣಿಗೆಗೆ ಹೆಚ್ಚು ಸ್ವಾತಂತ್ತ್ರ್ಯ , ರುಚಿ, ತೀವ್ರತೆ ಮತ್ತು ವೈವಿಧ್ಯ ಒದಗಬಹುದು ಎಂಬುದೂ ಅಷ್ಟೇ ಸತ್ಯ.
ಮುಂದಿನ ತಲೆಮಾರುಗಳ ಜನರ ವ್ಯವಹಾರ, ಬರವಣಿಗೆಗಳು ಇಂಟರ್ ನೆಟ್ ಮತ್ತು ಬ್ಲಾಗ್ ಗಳ ಮೂಲಕ ಇರಬಹುದೆಂದು ತೋರುತ್ತದೆ.
ನನ್ನ ಬರವಣಿಗೆ ಬಗ್ಗೆ ಪ್ರತಿಕ್ರಿಯಿಸಲು ಮರೆಯಬೇಡಿ. ನಮಸ್ಕಾರ.
ಮನುಷ್ಯನನ್ನು ಭಾವರಹಿತವನ್ನಾಗಿ ಸೀಮಿತನನ್ನಾಗಿ ಮಾಡಿದ ಕುಖ್ಯಾತಿಯೊಂದಿದ್ದರೂ ಇನ್ನೊಂದು ಸೀಮೆಯಾಚೆಗೆ ವಿಸ್ತರಿಸಿದ ಗರಿಮೆಯೂ ಅಂತರ್ಜಾಲಕ್ಕಿದೆ...ಒಳಿತುಗಳನ್ನು ಸ್ವೀಕರಿಸಿಕೊಂಡು, ಕೆಡುಕನ್ನು ಒತ್ತಟ್ಟಿಗಿರಿಸಿ ಕಾಲಚಕ್ರದೊಂದಿಗೆ ಸುತ್ತುಹೊಡೆಯುವುದೇ ಕ್ಷೇಮ..
ReplyDeleteಬ್ಲಾಗ್ ಮಾಧ್ಯಮದಲ್ಲೂ ಗಟ್ಟಿಯಾಗಿ ನೆಲೆಯೂರುತ್ತಿರುವ ನಿಮಗೆ ಅಭಿನಂದನೆಗಳು...
-ವೇಣು