ಕೊಂಕಣ ಸುತ್ತಿ ಮೈಲಾರಕ್ಕೆ
ಸುತ್ತಿ ಬಳಸಿ ಹೇಳುವುದಕ್ಕೆ 'ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಹಾಗೆ' ಎಂಬ ಮಾತನ್ನು ಬಳಸಲಾಗುತ್ತದೆ. ಎತ್ತಣ ಮಾಮರ, ಎತ್ತಣ ಕೋಗಿಲೆ ಎಂದಂತೆ ಕೊಂಕಣ ನಮ್ಮ ಉತ್ತರ ದಿಕ್ಕಿಗಾದರೆ, ಮೈಲಾರಲಿಂಗ ಇರುವುದು ಪೂರ್ವ ದಿಕ್ಕಿನಲ್ಲಿ. ಇಂತಹ ಪೂರ್ವ ದಿಕ್ಕಿನಲ್ಲಿ ನೇರವಾಗಿ ಸಾಗದೆ ಸಮುದ್ರದ ಕಡೆಗೆ ಮೈಚಾಚಿಕೊಂಡಿರುವ ಕೊಂಕಣ ಸೀಮೆಯ ಕಡೆಗೆ ಸಾಗಿದರೆ ವ್ಯರ್ಥವಾಗಿ ಸಮಯ ಹಾಳು ಮತ್ತು ಬರಿದೇ ಓಡಾಟ. ಒಟ್ಟಿನಲ್ಲಿ ಕೊಂಕಣ ಸೀಮೆಯಲ್ಲಿ ಓಡಾಡಬೇಕಾದರೆ ಸುತ್ತಿ ಬಳಸಿ ಹೋಗಬೇಕಾಗುತ್ತದೆ ಎಂಬುದು ಈ ಮಾತಿನ ತಾತ್ಪರ್ಯ.
ತೆಂಕಣ (ದಕ್ಷಿಣ) ಎಂಬುದು ದಿಕ್ಕನ್ನು ಸೂಚಿಸುವ ಪದವಾದರೆ ಕೊಂಕಣ ಎಂಬುದು ಭೌಗೋಳಿಕ ಸ್ಥಿತಿಗತಿಯನ್ನು ವಿವರಿಸುವ ಶಬ್ದ. ಕೊಂಕು ಎಂದರೆ ಓರೆ ಅಥವಾ ವಕ್ರ ಎಂದರ್ಥ. ಕೊಂಕಣ ಸೀಮೆ ಗುಡ್ಡ ಪರ್ವತಗಳ ಮುಂಚಾಚು, ಸಮುದ್ರದ ಹಿನ್ನೀರು, ಹೊಳೆ-ಹಳ್ಳಗಳು ಸಮುದ್ರ ಸೇರುವ ಕೊರಕಲುಗಳಿಂದಾಗಿ ಕೊಂಕು ಕೊಂಕಾಗಿದೆ. ಆದ್ದರಿಂದಲೇ ಈ ಪ್ರದೇಶ ಕೊಂಕಣಸೀಮೆ ಎಂದು ಹೆಸರಾಗಿದೆ.
ಕೊಂಕಣಿ ಎಂಬುದು ಒಂದು ಜಾತಿ ಸೂಚಕ ಪದ ಅಲ್ಲ. ಯಾರು ಕೊಂಕಣ ಸೀಮೆಯಲ್ಲಿ ವಾಸ ಮಾಡುತ್ತಾರೋ ಅವರೆಲ್ಲರೂ ಕೊಂಕಣಿಗರೇ. ಕಿಣಿ, ಕಾಯ್ಕಿಣಿ, ಕೇಣಿ, ಕೋಣಿ, ವೆರಣೆ, ರೇವಣ, ಕೆಂಕಣಿ, ನೀಲೇಕಣಿ, ಹಣಕೋಣ, ಕಾಣಕೋಣ ಮೊದಲಾದ ಕಿಂಕಿಣಿಯ ತಾಣಗಳೆಲ್ಲ ಈ ಕೊಂಕಣದ ಸ್ಥಳಗಳೇ ಆಗಿವೆ. ಜೀವನದಲ್ಲಿ ಒಮ್ಮೆಯಾದರೂ ಪ್ರಕೃತಿ ರಮಣೀಯ ಕೊಂಕಣ ಪ್ರಾಂತದಲ್ಲಿ ಪ್ರಯಾಣ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ, ಕೊಂಕಣ ರೈಲು, ಹಡಗು ಪ್ರಯಾಣ ಅಥವಾ ವಿಮಾನ ಮೂಲಕ ಪ್ರಯಾಣ ಮಾಡಿದರೂ ಸಾಕು, ಅರಬ್ಬಿ ಸಮುದ್ರತೀರ ಮತ್ತು ಪಶ್ಚಿಮ ಘಟ್ಟಸಾಲಿನ ಮನೋಹರ ರಮ್ಯತೆ ಮನಸ್ಸನ್ನು ಸೆರೆ ಹಿಡಿಯುತ್ತದೆ.
ಎಲ್ಲಿ ನೋಡಿದರಲ್ಲಿ ಹಸುರು ಕಾಡು, ತೆಂಗು ಕಂಗಿನ ಮರಗಳು, ಏರು ತಗ್ಗಿನ ತೆವರಿನಂಥ ಜಾಗಗಳಲ್ಲಿ ಪುಟ್ಟ ಪುಟ್ಟ ಬತ್ತದ ಗದ್ದೆಗಳು, ಬಿಳಿ ಹಾಲಿನಂಥ ನೊರೆನೀರ ಹರಿಸುವ ನೀರಿನ ಝರಿಗಳು. ಇಲ್ಲಿರುವಷ್ಟು 'ಬೀಚ್'ಗಳು, ದೇವಸ್ಥಾನಗಳು, ಜಲಪಾತಗಳು, ಕಾಡೊಳಗಿನ ಪ್ರವಾಸೀ ಧಾಮಗಳು, ಮುಗಿಲು ಮುಟ್ಟುವ ಪರ್ವತಾಗ್ರಗಳ ಚಾರಣ ತಾಣಗಳು ಬೇರೆಲ್ಲೂ ಇರಲಾರವು.
ಹಿಂದಿನ ಕಾಲದಲ್ಲಿ ಸೇತುವೆಗಳಾಗುವ ಮೊದಲು ಕೊಂಕಣ ಸುತ್ತುವುದು ಪ್ರಯಾಸದ ಕೆಲಸವಾಗಿತ್ತಾದರೂ ಇಂದು ಅದೊಂದು ಸುಖಾನುಭವದ ಮೋಜು ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರವಾಸ ಮಾಡುವವರಿಗೆ ಕೊಂಕಣ ಪ್ರದೇಶವೆಂಬುದು ರಮ್ಯ ತಾಣವೇ ಸರಿ. ಕಳೆದ ಹತ್ತು ವರ್ಷಗಳಿಂದ ಈ ಭಾಗದಲ್ಲಿ ನಾನು ಹತ್ತಾರು ಚಾರಣಪ್ರವಾಸ ಮಾಡಿದ್ದೇನೆ. ಒಂದೊಂದೂ ರಮ್ಯಾದ್ಭುತ. ಇಲ್ಲಿನ ಕಾಡು ನೋಡುತ್ತಿದ್ದರೆ ಪಾಡು ಹಾಡಾಗುತ್ತದೆ. ಕಷ್ಟ ಮರೆತು ಸುಖ ಮೂಡುತ್ತದೆ.
No comments:
Post a Comment