Saturday 16 April 2011

ನನ್ನ ಓದುಗರಿಗೆ ಇವತ್ತು ಒಂದು ಕವನವನ್ನು ಓದಲು ಕೊಡುತ್ತಿದ್ದೇನೆ. ಇದು ತೀರ ಹೊಸ ರಚನೆ ಅಲ್ಲ. ಹಾಗೆಂದು ಹಿಂದಿನ ಸಂಕಲನಗಳಲ್ಲಿ ಸೇರಿಲ್ಲ. ಬಾಹುಬಲಿ ಕಲ್ಲಿನಲ್ಲಿ ಅರಳಿದ್ದಾನೆ ಎಂಬುದು ನಮಗೆಲ್ಲ ಗೊತ್ತಿರುವ ಸಂಗತಿ. ಅವನನ್ನು ಸ್ಥಾವರಗೊಳಿಸಿ ನಾವು ರಾಗದ್ವೇಷಾದಿಗಳಲ್ಲಿ ಮುಳುಗಿದೆವು. ಅರಳಿ ನಿಂತಿರುವ ಅವನು, ಲೋಗರಾದ ನಮ್ಮನ್ನು ತಿದ್ದುವ ಉದ್ದೇಶದಿಂದ ಮಾತಾಡಿಸುತ್ತಿದ್ದಾನೆ, ಆದರೆ ನಾವು ಕಲ್ಲಾಗಿದ್ದೇವೆ ಎಂಬುದು ಇಲ್ಲಿನ ವ್ಯಂಗ್ಯ.

ಬಾಹುಬಲಿ

ಬಲಶಾಲಿ ಬಾಹುಬಲಿ
ಕಲ್ಲರಳಿ ಹೂವಾಗಿದ್ದಾನೆ
ಬೆಟ್ಟದ ಮೇಲೆ ಅಚಲವಾಗಿದ್ದಾನೆ
ಗಗನದೆತ್ತರದಲ್ಲಿ
ಬೆತ್ತಲಾಗಿದ್ದಾನೆ

ಜಗವ ಜಯಿಸಿ
ನಿರಾಯುಧನಾಗಿದ್ದಾನೆ
ಹಗುರವಾಗಿದ್ದಾನೆ
ಆತ್ಮೋನ್ನತಿಯ ನರುಗಂಪು ಸೂಸುತ್ತ
ನಸುನಗುತ್ತಿದ್ದಾನೆ

ಮಹಾಬಲಿ ಬಾಹುಬಲಿ
ಗೆದ್ದಿದ್ದಾನೆ ತನ್ನನ್ನು ಹೀಗೆ
ಶಿಖರದುತ್ತುಂಗದಲ್ಲಿ ನಿಂತಿದ್ದರೂ
ಇಳಿದು ಬರುವಂತಿದ್ದಾನೆ
ಕಲ್ಲಾಗಿರುವ ನಮ್ಮನ್ನು ಕಡೆಯುವಂತಿದ್ದಾನೆ

ಬಾಹುಬಲಿ
ಒಲವಿನಲಿ
ಹೀಗೆ ಬರುವಂತಿದ್ದರೂ
ನಾವು ಕಲ್ಲಾಗಿದ್ದೇವೆ
ಕಣ್ಣು ಮುಚ್ಚಿದ್ದೇವೆ
ಒಳಗೊಳಗೆ ಕುದಿಯುತ್ತ
ಮುಷ್ಟಿ ಹಿಡಿದಿದ್ದೇವೆ!

1 comment:

  1. ಸರಳ, ಸುಂದರ ಹಾಗೂ ಅರ್ಥಗರ್ಭಿತ...
    ಬಾಹುಬಲಿಯ ಮೂರ್ತಿ ವಿಶಾಲ ಅರ್ಥಗಳನ್ನು ತೆರೆದುಕೊಂಡು ಮಾನವತೆಯನ್ನು ಸಾರಿದರೆ, ದೇಹದಲ್ಲಿ ಜೀವವಿದ್ದೂ ನಾವು ನಿರ್ಜೀವಿಗಳಂತೆ, ಅಮಾನವೀಯರಾಗಿದ್ದೇವೆ ಎಂಬ ಸುಳುಹು ಕವನದಲ್ಲಿದೆ...

    ReplyDelete