Saturday, 17 December 2011

ಒಂದು ಸಂದರ್ಶನ 

ಪ್ರಸ್ತುತ ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿ ಮತ್ತು ಸಂಸದರಾಗಿ  ಮಂಗಳೂರು ಲೋಕಸಭಾ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಶ್ರೀ ವಿ. ಧನಂಜಯಕುಮಾರ್ ಅವರು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ವೇನೂರಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿಗಾಗಿ ಅವರನ್ನು ಸಂದರ್ಶಿಸಿದೆ. ಪಕ್ಕದಲ್ಲಿ ನನ್ನ ಸಹೋದ್ಯೋಗಿ ಕೆ.ಅಶೋಕ್ ಧ್ವನಿಮುದ್ರಿಸುತ್ತಿದ್ದಾರೆ.

Monday, 12 December 2011

ಗಂಗಾವತಿಯಲ್ಲಿ ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ 

"ರಾಜ ಎಲ್ಲ ಗೆದ್ದ ಗಜದಂತೆ ಸಿಂಹಾಸನದ ಬಳಿಗೆ ಬಂದ..."
ಅಖಿಲ ಭಾರತ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೊನ್ನೆ ದಿನಾಂಕ ೯,೧೦ ಹಾಗೂ ೧೧ ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್ ಅವರ ಅಧ್ಯಕ್ಷತೆಯಲ್ಲಿ  ಜರುಗಿತು.  ೧೧ ರಂದು ಬೆಳಗ್ಗೆ ೯.೩೦ ಕ್ಕೆ ಪ್ರಧಾನ ಕವಿಗೋಷ್ಠಿ ಏರ್ಪಾಟಾಗಿತ್ತು. ಕವಿಗೋಷ್ಠಿಯಲ್ಲಿ ಭಾಗವಹಿಸಲು ನಾನು ಆಹ್ವಾನಿತನಾಗಿದ್ದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಡಾ. ಬುದ್ದಣ್ಣ  ಹಿಂಗಮಿರೆ ವಹಿಸಿದ್ದರು. ನಾನು ನನ್ನ "ಭೋಜರಾಜನ ಸಿಂಹಾಸನ" ಎಂಬ ಕವಿತೆ ಓದಿದೆ. ಪ್ರೇಕ್ಷಕರಿಗೆ ಅದು ತಲಪಿತು ಎಂಬುದು ಕರತಾಡನದಿಂದ ತಿಳಿಯಿತು. ಕವಿತೆ ಓದುತ್ತಿರುವ ಎರಡು ದೃಶ್ಯಗಳನ್ನು ನನ್ನ ಬ್ಲಾಗ್ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇನೆ.

"ರಾಜ ಒಂದೇ ಒಂದು ಹೆಜ್ಜೆ ಸಿಂಹಾಸನದತ್ತ ಎತ್ತಿಡಬೇಕು... ಅಷ್ಟರಲ್ಲಿ ಶತ್ರುಗಳು ದಾಳಿಯಿಟ್ಟ ಸುದ್ದಿ ಬಂತು!"

Friday, 9 December 2011

ನನ್ನ ಬ್ಲಾಗ್ ಓದುಗರಿಗಾಗಿ ಇವತ್ತು ಒಂದು ಕವನ ಕೊಡ್ತಾ ಇದೇನೆ. ಕೆತ್ತುವುದರಲ್ಲೇ ತಲ್ಲೀನನಾದ ನನ್ನ ಕುರಿತು ಶಿಲೆ ನನ್ನನ್ನೇ ಮಾತಾಡಿಸಿತು. 

                                                            ಕೆತ್ತಲು ಹೋದೆ 

ಕೆತ್ತಲು ಹೋದೆ 
ಕೆತ್ತುತ್ತ ಕೆತ್ತುತ್ತ ಕೆತ್ತುತ್ತಲೇ ಕುಳಿತೆ 
ಮೊದಲು ತಲೆ 
ಆಮೇಲೆ ಕಣ್ಣು ಮೂಗು ಕಿವಿ ಬಾಯಿ 
ಕುತ್ತಿಗೆ 
ಭುಜ ಹೊಟ್ಟೆ ಹೊಕ್ಕುಳ 
ತೊಡೆ ಕಾಲು 
ಕೊನೆಗೆ ಪಾದ 
ತಲೆಯೆತ್ತಿ ನಿಲ್ಲಬೇಕು 
ಅದಕ್ಕೆ ಬೆಂಬಲಕ್ಕಾಗಿ ಬೆನ್ನು 
ಹೀಗೆ ಮಾಡುತ್ತಾ ಮಾಡುತ್ತಾ ಇರುವಾಗ 

ಮೂರ್ತಿ ಕೇಳಿತು:
ನೀನೇನು ಮಾಡುತ್ತಿರುವೆ?
ನಾನು ಒಂದು ಕ್ಷಣ ಸ್ತಬ್ಧ 
ಅಪ್ಪನನ್ನೇ ಮಗು ಕೇಳಿದಂತೆ ಪ್ರಶ್ನೆ 
ಮೂರ್ತಿ ಹೇಳಿತು- 
ನೀನು ಮಾಡುತ್ತಿಲ್ಲ ನನ್ನ 
ನಾನು ಮೊದಲು ಇದ್ದೆ 
ಈಗಲೂ ಇದ್ದೇನೆ 
ನಾಳೆಯೂ ಇರುತ್ತೇನೆ 
ನೀನು ಮಾಡುತ್ತಿರುವೆ ನಿನ್ನನ್ನೆ
ಎಚ್ಚರ,
ಒಂದೊಂದು ಪೆಟ್ಟನ್ನು ಜಾಗ್ರತೆಯಿಂದ ಹಾಕು!

Sunday, 4 December 2011

ಸೀಮಾ ಸುಂಕ ಇಲಾಖೆಯ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ



ಮಂಗಳೂರಿನ ಪಣಂಬೂರಿನಲ್ಲಿರುವ ಸೀಮಾ ಸುಂಕ (ಕಸ್ಟಮ್ಸ್) ಕಛೇರಿಯಲ್ಲಿ ನವೆಂಬರ‍್ ದಿನಾಂಕ ೩೦ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಆಯುಕ್ತರಾದ ವಿ.ಎಸ್.ಎನ್.ಚೌಧರಿ ಅಧ್ಯಕ್ಷತೆ ವಹಿಸಿದ್ದರು. ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕನ್ನಡ ಭಾಷೆಯ ಚರಿತ್ರೆ ಮತ್ತು ಅದರ ಇವತ್ತಿನ ಸ್ಥಿತಿಗತಿಯ ಬಗ್ಗೆ ಮಾತನಾಡಿದೆ. ಕನ್ನಡಿಗರು ಸಾರ್ವಜನಿಕ ಸಭೆಸಮಾರಂಭಗಳಲ್ಲಿ ಮಾತಾಡುವಾಗ ನಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತಾಡುತ್ತಾರೆ ಅಲ್ಲದೆ ಇತರ ಭಾಷಿಕರೊಂದಿಗೆ ಹೋಲಿಸಿ ನಮ್ಮ ದೌರ್ಬಲ್ಯಗಳನ್ನು ಎತ್ತಿ ಆಡುತ್ತಾರೆ. ಇದರಿಂದ ಕನ್ನಡಿಗರ ನೈತಿಕತೆ ಕುಂದುವುದಲ್ಲದೆ ಇತರ ಭಾಷಿಕರ ಮುಂದೆ ಹಾಸ್ಯಾಸ್ಪದವಾಗಬೇಕಾಗುತ್ತದೆ. ಈ ಪರಿಸ್ಥಿತಿ ತಪ್ಪಬೇಕು, ನಾವು ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಎತ್ತಿ ಆಡುವಂತಾಗಬೇಕು ಎಂದು ನಾನು ಉಪನ್ಯಾಸದಲ್ಲಿ ಹೇಳಿದೆ.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವಿತ್ತು. ಶ್ರೀ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಶ್ರೀ ಮಹೇಶ ಭಟ್ ಕಾರ್ಯಕ್ರಮ ನಿರೂಪಿಸಿದರು. ಮನೋರಂಜನಾ ಸಂಘದ ಕಾರ್ಯದರ್ಶಿ ಎಚ್.ಎನ್. ರವಿಶಂಕರ್ ವಂದನಾರ್ಪಣೆಗೈದರು. 
ಉಡುಪಿಯಲ್ಲಿ ಮಕ್ಕಳ ಗಮಕ ಸಮ್ಮೇಳನ

ಮೊನ್ನೆ ನವಂಬರ‍್ ದಿನಾಂಕ ೨೬ ಹಾಗು ೨೭ರಂದು ಉಡುಪಿಯ ರಾಜಾಂಗಣದಲ್ಲಿ ಅಖಿಲ ಕರ್ನಾಟಕ ಎರಡನೆಯ ಮಕ್ಕಳ ಗಮಕ ಸಮ್ಮೇಳನ ಜರುಗಿತು. ಸಮಾರೋಪ ಸಮಾರಂಭಕ್ಕೆ ನನ್ನನ್ನು ಮುಖ್ಯಅತಿಥಿಯಾಗಿ ಆಹ್ವಾನಿಸಿದ್ದರು. ಸಮಾರಂಭದ ಮೂರು ದೃಶ್ಯಗಳನ್ನು ಕಾಣಬಹುದು...

ಕರ್ನಾಟಕ ಗಮಕಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಆರ‍್. ಸತ್ಯನಾರಾಯಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ  ಅಧ್ಯ ಕ್ಷರಾದ
ಶ್ರೀ ಪ್ರದೀಪ್ ಕುಮಾರ‍್ ಕಲ್ಕೂರ ಸ್ಮರಣಿಕೆಯನ್ನು ನೀಡುತ್ತಿದ್ದಾರೆ.

Wednesday, 16 November 2011

ಮಕ್ಕಳ ದಿನಾಚರಣೆಯ ಅಂಗವಾಗಿ

ಆಗಮನ ಶಾಲೆಯಲ್ಲಿ ಛದ್ಮವೇಷ ಸ್ಫರ್ಧೆ




ಆಗಮನ ಶಾಲೆಯಲ್ಲಿ ನಿನ್ನೆ ಛದ್ಮವೇಷ ಸ್ಪರ್ಧೆ ಜರುಗಿತು. ಸುಮಾರು ನಲವತ್ತೈದು ಮಂದಿ ಮಕ್ಕಳು ಭಾಗವಹಿಸಿದ್ದರು. ಆಗಮ ಪುರೋಹಿತರ ವೇಷ ಧರಿಸಿ ಪೂಜೆ ಮಾಡಿ ಪ್ರಸಾದ ವಿತರಣೆಯನ್ನೂ ಮಾಡಿದ. ಕೊನೆಯಲ್ಲಿ ಫಲಿತಾಂಶ ಘೋಷಿಸಿದಾಗ ಅವನಿಗೆ ಮೊದಲ ಸ್ಥಾನ ಬಂದಿತ್ತು. ಈ ಎರಡು ಭಾವಚಿತ್ರಗಳು ಛದ್ಮವೇಷ ಸ್ಫರ್ಧೆಯ ಸನ್ನಿವೇಶಗಳನ್ನು ತೋರಿಸುತ್ತವೆ.

Friday, 11 November 2011

"ಮಂಗಳೂರು" ಸ್ಥಳನಾಮದ ವ್ಯುತ್ಪತ್ತಿ

"ಮಂಗಳೂರು" ಎನ್ನುವ ಸ್ಥಳನಾಮ ಮೇರ್ಕಳ ಎನ್ನುವ ಶಬ್ದದಿಂದ ನಿಷ್ಪನ್ನಗೊಂಡಿರಬೇಕೆಂದು ತೋರುತ್ತದೆ. ಮೇರರ+ಕಳ ಮೇರ್ಕಳ. ಮೇರರು ವಾಸಿಸುತ್ತಿದ್ದ ಸ್ಥಳ ಎಂದು ಇದರ ಅರ್ಥ (ಭಟ್ಟರ+ಕಳ>ಭಟ್ಕಳ ಆದಂತೆ). ಕರಾವಳಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಬ್ಯಾರಿಗಳು ಮಂಗಳೂರನ್ನು ಇವತ್ತಿಗೂ ತಮ್ಮ ಬ್ಯಾರಿ ಭಾಷೆಯಲ್ಲಿ ’ಮೈಕ್ಕಲ’ ಎಂದೇ ಕರೆಯುತ್ತಾರೆ. ಮೇರ್ಕಳ ಎಂಬುದು ಬ್ಯಾರಿ ಭಾಷೆಯಲ್ಲಿ ಅಪಭ್ರಂಶಗೊಂಡು ಮೈಕ್ಕಲ ಆಗಿರಬೇಕು : ಮೇರ್ಕಳ>ಮೈಕ್ಕಲ.

ಕರಾವಳಿಯಲ್ಲಿ ಕನ್ನಡದ ಪ್ರಾದುರ್ಭಾವದ ಬಳಿಕ ಮೇರ್ಕಳ ಅಥವಾ ಮೈಕ್ಕಲ ಸಂಸ್ಕೃತೀಕರಣಗೊಂಡು ’ಮಂಗಲ’ ಆಗಿರುವ ಸಾಧ್ಯತೆ ಇದೆ : ಮೇರ್ಕಳ>ಮೈಕ್ಕಲ>ಮಂಗಲ. ಕ್ರಮೇಣ ಮಂಗಲಕ್ಕೆ ’ಊರು’ ಸೇರಿ ಮಂಗಳೂರು ಆಗಿರಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೈರ್ಕಳ, ಕುಡಾಲ ಮೇರ್ಕಳ ಎಂಬ ಊರುಗಳು ಇವತ್ತಿಗೂ ಇವೆ. ಪರಿಶಿಷ್ಟ ಜಾತಿಯ ಮೇರರು ಕರಾವಳಿಯ ಮೂಲನಿವಾಸಿಗರೂ ಆಗಿದ್ದಾರೆ.

Saturday, 20 August 2011

ರಾಷ್ಟ್ರೀಯ ಕವಿಗೋಷ್ಟಿ



ರವೀಂದ್ರನಾಥ ಟಾಗೋರರ ೧೫೦ ನೇ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಇದೇ ದಿನಾಂಕ ೮ರ ಸೋಮವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಸಭಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಸರ್ವಭಾಷಾ ಕವಿಸಮ್ಮೇಳನ ಏರ‍್ಪಡಿಸಿತ್ತು. ತುಳು ಭಾಷೆಯನ್ನು ಪ್ರತಿನಿಧಿಸಿ ನಾನು, ತುಳುಭಾಷೆ, ಸಾಹಿತ್ಯದ ಸಂಕ್ಷಿಪ್ತ ಚರಿತ್ರೆಯನ್ನು ತಿಳಿಸಿ ಸುಮಾರು ಹತ್ತು ನಿಮಿಷ ಸ್ವರಚಿತ ಕವನಗಳನ್ನು ವಾಚಿಸಿದೆ. ಹಿರಿಯ ಕನ್ನಡ ಕವಿಗಳಾದ ಪ್ರೊ| ಜಿ. ಎಸ್. ಸಿದ್ಧಲಿಂಗಯ್ಯ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು.


Tuesday, 16 August 2011

ಕಾಸರಗೋಡಿನಲ್ಲಿ ಅರ್ಥಾಳ ಸಂಗೀತ ಕಛೇರಿ


ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೋತ್ಸವದ ಅಂಗವಾಗಿ ದಿನಾಂಕ ೧೫ರ ಸೋಮವಾರದಂದು  ಕಾಸರಗೋಡಿನ ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯುವ ಕಲಾವಿದೆ ಅರ್ಥಾ ಪೆರ್ಲ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ಜರುಗಿತು. ಪಕ್ಕವಾದ್ಯದಲ್ಲಿ ಬಳ್ಳಪದವು ವಿದ್ವಾನ್ ಶ್ರೀ ಯೋಗೀಶ ಶರ್ಮ (ಮೃದಂಗ) ಹಾಗೂ ಶ್ರೀ ಪ್ರಭಾಕರ ಕುಂಜಾರು (ಪಿಟೀಲು) ಸಹಕರಿಸಿದರು.

ಉಡುಪಿ ಪರ‍್ಯಾಯ ಸ್ವಾಮೀಜಿಯವರ ಸಂದರ್ಶನ


ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿ ಪರ‍್ಯಾಯ ಮಠಾಧೀಶರ ಚಿಂತನವನ್ನು ಮಂಗಳೂರು ಆಕಾಶವಾಣಿಯು ಪ್ರಸಾರ ಮಾಡುತ್ತ ಬಂದಿದೆ. ನಾಡಿದ್ದು ದಿನಾಂಕ ೨೨ರ ಸೋಮವಾರದಂದು ಶ್ರೀಕೃಷ್ಣ ಜನ್ಮಾಷ್ಟಮಿ. ಪರ‍್ಯಾಯ ಶಿರೂರು ಮಾಠಾಧೀಶರ ಸಂದೇಶವನ್ನು ಧ್ವನಿಮುದ್ರಿಸಲು ಇಂದು ಉಡುಪಿಗೆ ಹೋಗಿದ್ದೆವು. ಧ್ವನಿಮುದ್ರಣದ ಬಳಿಕ ಸ್ವಾಮೀಜಿ ಫಲಮಂತ್ರಾಕ್ಷತೆ ನೀಡಿ ನಮ್ನನ್ನು ಹರಸಿದರು. ಪಕ್ಕದಲ್ಲಿ ಪ್ರಸಾರ ನಿರ್ವಾಹಕ ಡಾ|| ಬಿ. ಎಂ. ಶರಭೇಂದ್ರಸ್ವಾಮಿ ಇದ್ದಾರೆ.

Tuesday, 19 July 2011

ವರದಿ

ಬೆಳಗಾವಿಯಲ್ಲಿ ಸಾಹಿತ್ಯ ವಿಚಾರ ಸಂಕಿರಣ

ಜಿನದತ್ತ ದೇಸಾಯಿಯವರು ಕನ್ನಡದ ಹಿರಿಯ ಕವಿಗಳಲ್ಲಿ ಒಬ್ಬರು. ಸುಮಾರು ೬೦ ವರ್ಷಗಳಿಂದ ಕಾವ್ಯ ವ್ಯವಸಾಯ ಮಾಡುತ್ತ ಬಂದಿರುವ ಅವರು ಜಿ ಎಸ್ ಎಸ್, ಕಣವಿ ಮೊದಲಾದವರ ಸಮಕಾಲೀನರು. ಅವರ ಮೊದಲ ಕವನ ಸಂಕಲನ "ನೀಲಾಂಜನ" ೧೯೫೪ರಲ್ಲಿ ಪ್ರಕಟವಾಯಿತು. ಅವರ ಸಾಹಿತ್ಯ ಗುರುಗಳಾದ ವಿ.ಕೃ.ಗೋಕಾಕರು ಆ ಸಂಕಲನಕ್ಕೆ ಮುನ್ನುಡಿ ಬರೆದಿದ್ದರು.

ಕಾರಣಾಂತರದಿಂದ ಕನ್ನಡ ಸಾಹಿತ್ಯ ಅಧ್ಯಯನ ಕೈಬಿಟ್ಟು, ಅವರು ಕಾನೂನು ಪದವಿ ಓದಬೇಕಾಯಿತು. ಅನಂತರ ವಕೀಲಿ ವೃತ್ತಿ ಕೈಗೊಂಡು, ಬಳಿಕ ನ್ಯಾಯಾಧೀಶರಾದರು. ಹೀಗಾಗಿ ಅವರ ಸಾಹಿತ್ಯ ವ್ಯವಸಾಯ ಹಿಂದೆ ಬಿತ್ತು. ಆದರೂ ಅವರ ಆಂತರ‍್ಯದೊಳಗೆ ಒಬ್ಬ ಕವಿ ತುಡಿಯುತ್ತಲೇ ಇದ್ದ.

ಈ ಬ್ಲಾಗಿಗ ಉಪನ್ಯಾಸ ನೀಡುತ್ತಿರುವುದು.

ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ ನಿವೃತ್ತರಾಗಿ, ಮತ್ತೆ ಕಾವ್ಯ ವ್ಯವಸಾಯಕ್ಕೆ ಇಳಿದರು. ಇದುವರೆಗೆ ಆರು ಸಂಕಲನಗಳನ್ನು ತಂದಿರುವ ಅವರ "ಸಮಗ್ರ ಕಾವ್ಯ"ವು ಇತ್ತೀಚೆಗೆ ಬಿಡುಗಡೆಯಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮೊನ್ನೆ ದಿನಾಂಕ ೧೭ರಂದು ಬೆಳಗಾವಿಯ ಸಾಹಿತ್ಯ ಭವನದಲ್ಲಿ ದೇಸಾಯರ ಸಾಹಿತ್ಯದ ಕುರಿತು ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಿತ್ತು. "ಜಿನದತ್ತ ದೇಸಾಯಿಯವರ ಕಾವ್ಯದಲ್ಲಿ ಪ್ರತಿಮಾ ವಿನ್ಯಾಸ" ಎಂಬ ವಿಷಯದ ಕುರಿತು ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದರು. ಕಾರ್ಯಕ್ರಮ ತುಂಬ ಚೆನ್ನಾಗಿ, ಅಚ್ಚುಕಟ್ಟಾಗಿ ನಡೆಯಿತು. ಚಂದ್ರಕಾಂತ ಕುಸನೂರ, ನಾ.ಮೊಗಸಾಲೆ, ಬಸವರಾಜ ವಕ್ಕುಂದ, ಸರಜೂ ಕಾಟ್ಕರ‍್, ರಾಮಕೃಷ್ಣ ಮರಾಠೆ, ಎಚ್. ಬಿ. ಕೋಲ್ಕಾರ‍್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿನದತ್ತ ದೇಸಾಯಿಯವರು ಕಾರ್ಯಕ್ರಮ ಪೂರ್ತಿ ಉಪಸ್ಥಿತರಿದ್ದು ಆನಂದಿಸಿದರು.

Friday, 15 July 2011

ಕವಿ ಎಚ್. ಎಸ್. ವಿ. ಅವರೊಂದಿಗೆ ಒಂದು ಸಂಜೆ

ಹಿರಿಯ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ದಾಸ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದರು. ಬಹುಕಾಲದ ಆತ್ಮೀಯ ಗೆಳೆಯ ಎಂಬ ಪ್ರೀತಿಯಿಂದ ಕರೆದ ಕೂಡಲೇ ಆಕಾಶವಾಣಿಗೆ ಬಂದರು. ನಮ್ಮೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸಾಹಿತ್ಯ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಆಕಾಶವಾಣಿಗಾಗಿ ಮಾತಾಡಿಸುವ ಆಲೋಚನೆ ಬಂದಿತು. ನೇರವಾಗಿ ಅವರನ್ನು ಸ್ಟುಡಿಯೋಗೆ ಆಹ್ವಾನಿಸಿದೆವು. ಸಮಕಾಲೀನ ಸಾಹಿತ್ಯ, ಕಾವ್ಯ ಮತ್ತು ಕಾವ್ಯವನ್ನು ಬಗೆವ ಬಗೆ ಮುಂತಾದವುಗಳ ಕುರಿತು ಅರ್ಧ ಗಂಟೆ ಗಂಭೀರ ಚರ್ಚೆ ಸಾಗಿತು.

"  ಕಾವ್ಯವೆಂದರೆ ಒಂದು ನದಿಯ ಹಾಗೆ. ನದಿಯಲ್ಲಿ ಬೆರಳಿಟ್ಟರೆ  ಇಡೀ ನದಿ ಅನುಭವಕ್ಕೆ ಬರುವ ಹಾಗೆ ಒಂದು ಕವಿತೆ ಓದಿದರೆ ಕಾವ್ಯಚರಿತ್ರೆಯೇ ಅನಾವರಣವಾಗಬೇಕು. ಈ ಸಾತತ್ಯ ಕಂಡು ಬಂದರೆ ಮಾತ್ರ ಕಾವ್ಯದ  ಭಾರ ಮನವರಿಕೆಯಾಗುವುದು"
(ಚಿತ್ರದಲ್ಲಿ ಡಾ. ವಸಂತಕುಮಾರ ಪೆರ್ಲ ಮತ್ತು ಡಾ. ಎಚ್. ಎಸ್. ವಿ.)
ವಾರದ ಅತಿಥಿಯಾಗಿ ಶ್ರೀ ಆಸ್ಕರ‍್  ಫೆರ್ನಾಂಡಿಸ್

ಮಂಗಳೂರು ಆಕಾಶವಾಣಿಯಲ್ಲಿ "ವಾರದ ಅತಿಥಿ" ಎಂಬ ಕಾರ್ಯಕ್ರಮವೊಂದನ್ನು ನಾವು ಪ್ರಸಾರ ಮಾಡುತ್ತಿದ್ದು, ಈ ವಾರ ನಮ್ಮ ಅತಿಥಿಯಾಗಿ ಆಗಮಿಸಿದವರು ರಾಜ್ಯ ಸಭಾ ಸದಸ್ಯರಾದ ಶ್ರೀ ಆಸ್ಕರ‍್ ‌ಫೆರ್ನಾಂಡಿಸ್ ಅವರು.  ಅವರ ಬದುಕು ಮತ್ತು ಸಾಧನೆಯ ಕುರಿತು ಸುಮಾರು ಒಂದು ಗಂಟೆ ಅವಧಿಯ ಸಂದರ್ಶನ ಧ್ವನಿಮುದ್ರಿಸಿಕೊಂಡೆವು. ತಮ್ಮ ಬಾಲ್ಯ , ಶಿಕ್ಷಣ ಹಾಗೂ ಸಾಧನೆಯ ಕುರಿತು ಅವರು ಮಾತಾಡಿದರು. ಅವರು ನಿಲಯಕ್ಕೆ ಬಂದಾಗಿನ ಕೆಲವು ಸನ್ನಿವೇಶಗಳನ್ನು ಸಹೋದ್ಯೋಗಿ ಗೆಳೆಯ ಕೆ. ಅಶೋಕ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು.

ಶ್ರೀ ಆಸ್ಕರ‍್ ಫೆರ್ನಾಂಡಿಸ್, ಡಾ. ಸದಾನಂದ ಪೆರ್ಲ, ಶ್ರೀ ಸದಾನಂದ ಹೊಳ್ಳ ಹಾಗೂ ಡಾ. ವಸಂತಕುಮಾರ ಪೆರ್ಲ

ಸ್ಟುಡಿಯೋದಲ್ಲಿ ಶ್ರೀ ಆಸ್ಕರ‍್  ಅವರನ್ನು ಸಂದರ್ಶಿಸುತ್ತಿರುವ ಈ ಬ್ಲಾಗಿಗ 

ಸಂದರ್ಶನದ ಇನ್ನೊಂದು ಸನ್ನಿವೇಶ

Sunday, 3 July 2011

ಸಂದರ್ಶನ

                           ನೃತ್ಯಗುರುಗಳೊಂದಿಗೆ ಅರ್ಧ ದಿನ 

ಮಾಸ್ಟರ್ ವಿಠಲ್ ಕರಾವಳಿ ಕರ್ನಾಟಕದ ಹಿರಿಯ ನೃತ್ಯಗುರುಗಳಲ್ಲಿ ಒಬ್ಬರು. ೮೪ ವರ್ಷ ವಯಸ್ಸಿನ ಅವರು ಈಗ ರಂಗದಿಂದ ಹಿಂದೆ ಸರಿದಿದ್ದರೂ, ಭರತನಾಟ್ಯವೆಂದರೆ ಇವತ್ತಿಗೂ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಭರತನಾಟ್ಯದ ಶಾಸ್ತ್ರೀಯತೆ ಮತ್ತು ಪ್ರದರ್ಶನದ ವಿಚಾರ ಬಂದಾಗ ಉದಾಹರಣೆ ಮತ್ತು ಪ್ರಾತ್ಯಕ್ಷಿಕೆ ಸಹಿತ ವಿವರಿಸುತ್ತಾರೆ. ಶುದ್ಧ ಶಾಸ್ತ್ರೀಯವಾದ ಈ ಕಲೆ ಅದರ ಸಂವಿಧಾನದಲ್ಲೇ ಇರಬೇಕು, ಆದರೆ ಕಾಲಿಕವಾದ ಕೆಲವು ಪ್ರಭಾವಗಳು ತಲೆದೋರಿದರೆ ಅದರಿಂದ ತಪ್ಪೇನೂ ಇಲ್ಲ ಎನ್ನುತ್ತಾರೆ.  ಬಹುಶ: ಅವರ ಮಾತಿನಲ್ಲಿ ಇದನ್ನು 'ಶೈಲಿ' ಎಂದು ಕರೆಯಬಹುದು.    

ಅರ್ಥಾ ಪೆರ್ಲ, ಮಾಸ್ಟರ್ ವಿಠಲ್ ಮತ್ತು ಈ ಬ್ಲಾಗಿಗ 

ಕರ್ನಾಟಕ ಕಲಾಶ್ರೀ, ನಾಟ್ಯ ಚಕ್ರವರ್ತಿ, ನಾಟ್ಯ ಕಲಾನಿಧಿ, ನಾಟ್ಯ ಕಲಾವಿಶಾರದ, ನಾಟ್ಯ ಕಲಾಸಿಂಧು, ನಾಟ್ಯಕೌಸ್ತುಭ ಮೊದಲಾದ ಪ್ರಶಸ್ತಿ-ಬಿರುದುಗಳು ಅವರಿಗೆ ಸಂದಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಭರತನೃತ್ಯ ಕಲಿಸಿ ಸಾರ್ಥಕತೆ ಅನುಭವಿಸಿದ್ದಾರೆ ('ಭರತ' ಎಂಬ ಶಬ್ದವು  ಭಾವ, ರಾಗ, ತಾಳ ಎಂಬ ಮೂರು ಶಬ್ದಗಳಿಂದ ವ್ಯುತ್ಪನ್ನಗೊಂಡಿದೆ ಎನ್ನುತ್ತಾರೆ ಅವರು).  ಚಲನಚಿತ್ರ ಅಭಿನೇತ್ರಿ ದಿ.ಕಲ್ಪನಾ, ಮೂಡಬಿದ್ರೆಯ ಡಾ. ಎಂ.ಮೋಹನ ಆಳ್ವ ಮೊದಲಾದವರು ವಿಠಲ್  ಅವರ ಶಿಷ್ಯರಲ್ಲಿ ಕೆಲವರು. ನೃತ್ಯರೂಪಕಗಳ ರಚನೆ ಮತ್ತು ಪ್ರದರ್ಶನಗಳಿಗಾಗಿ ಹೆಸರಾಗಿರುವ ಅವರು ೧೯೮೧ರಲ್ಲಿ ಸ್ವೀಡನ್ ದೇಶಕ್ಕೆ ಹೋಗಿ ಸುಮಾರು ಮೂರು ತಿಂಗಳ ಕಾಲ ಅಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿ ದೇಶಕ್ಕೆ ಕೀರ್ತಿ ತಂದರು. 

ಮಾಸ್ಟರ್ ವಿಠಲ್ ಅವರನ್ನು ಸಂದರ್ಶಿಸುತ್ತಿರುವ ಅರ್ಥಾ ಪೆರ್ಲ 

ಇವತ್ತು ನನ್ನ ಮಗಳು ಅರ್ಥಾಳೊಂದಿಗೆ ಮಂಗಳೂರಿನ ಕಾವೂರಿನಲ್ಲಿರುವ ವಿಠಲ್ ಅವರ ಮನೆಗೆ ಹೋಗಿದ್ದೆ. ಮಗಳು ಪತ್ರಿಕೆಯೊಂದಕ್ಕೆ ಅವರ ಸಂದರ್ಶನ ನಡೆಸಬೇಕಾಗಿತ್ತು. ಅವಳು ಭರತನಾಟ್ಯದಲ್ಲಿ ವಿದ್ವತ್ ಮಾಡುತ್ತಿದ್ದಾಳೆ (ಬೇರೆ ಗುರುಗಳ ಬಳಿ).  ಇಬ್ಬರೂ ಭರತನಾಟ್ಯದ ಕುರಿತು ಮಾತಾಡುವಾಗ ನನಗೇನು ಕೆಲಸ? ಸುಮ್ಮನೆ ಕುಳಿತು ಕೇಳುತ್ತಿದ್ದೆ.  ಸುಮಾರು ಎರಡು ಗಂಟೆ ಹೊತ್ತು ವಿಠಲ್ ಅವರು ಶಾಸ್ತ್ರೀಯ ನೃತ್ಯದ ಆಳ ಅಗಲಗಳ ಕುರಿತು  ಮಾತಾಡುವಾಗ ನೃತ್ಯಲೋಕಕ್ಕೆ ಹೋದ ಅನುಭವ ಆಯಿತು.
   
 (ಚಿತ್ರಗಳು: ಕೆ.ಎಸ್.ವೇಣುವಿನೋದ).

Sunday, 26 June 2011

ಪ್ರಕೃತಿವಿಶೇಷ

ಬ್ರಹ್ಮಕಮಲದ ಸೊಗಸು 

ನಮ್ಮ ಮನೆಯಲ್ಲಿರುವ ಬ್ರಹ್ಮಕಮಲದ ಗಿಡದಲ್ಲಿ  ಈ ಬಾರಿ ಹದಿನಾರು ಮೊಗ್ಗುಗಳು ಮೂಡಿದವು. 'ಅವು ಒಂದೇ ದಿನ ರಾತ್ರಿ ಹೊತ್ತು ಅರಳುತ್ತವೆ, ಈ ಬಾರಿ ತುಂಬಾ ಚೆನ್ನಾಗಿ ಕಾಣಬಹುದು' ಅಂದಿದ್ದಳು ನನ್ನ ಪತ್ನಿ. ಕೆಲವು ದಿನ ಹಿಂದೆ ನಾಲ್ಕೈದು ಎಳೆಯ ಮೊಗ್ಗುಗಳು ಉದುರಿದ್ದವು. ಕಳೆದ ವಾರ ಒಂದು ಮದುವೆ ನಿಮಿತ್ತ ನಾವು ಮೂರು ದಿನ ಮನೆಯಿಂದ ಹೊರಗಿದ್ದೆವು. ಮಳೆಯಿಲ್ಲದೆ ಬಿಸಿಲು ಬಿದ್ದಿತ್ತು. ಮೊನ್ನೆ ಜೋರಾಗಿ ಮಳೆ ಹೊಡೆಯಿತು. ಮರುದಿನ ಬೆಳಗ್ಗೆ ನೋಡಿದಾಗ ದೊಡ್ಡದಾದ ಐದಾರು ಮೊಗ್ಗುಗಳು ನೆಲಕ್ಕೆ ಉರುಳಿದ್ದವು. 



ಉಳಿದ ಮೊಗ್ಗುಗಳು ಇಂದು ಸಂಜೆ ಹೊತ್ತು ತೀರ ದೊಡ್ಡದಾಗಿದ್ದವು. ಈ ರಾತ್ರಿ ಅರಳುತ್ತವೆ ಅಂದೆ. ಹಾಗೇ ಆಯಿತು. ರಾತ್ರಿ ಎಂಟು ಗಂಟೆಗೆ ಆರು ಮೊಗ್ಗುಗಳು ಅರಳಿ ನಿಂತವು.  ಮಗ ಆಗಮನಿಗೆ ಸಂಭ್ರಮ. ವರ್ಷದಲ್ಲಿ ಒಂದು ದಿನ ಈ  ಗಿಡ ಹೂ ಬಿಡುತ್ತದೆ.  ಎಲೆಯಿಂದ ಮೊಗ್ಗಿನ ದಂಟೊಡೆದು ಹೂ ಮೂಡುವ ಪರಿ ಅದ್ಭುತವಾದದ್ದು. ಗಾತ್ರ, ಪರಿಮಳ, ತನ್ನ ಶುಭ್ರಶ್ವೇತ  ಬಣ್ಣ ಮತ್ತು ಸೌಂದರ‍್ಯಗಳಿಗಾಗಿ ಈ ಹೂ ಪ್ರಸಿದ್ಧವಾಗಿದೆ. ಅಷ್ಟೇ ಪ್ರಮಾಣದಲ್ಲಿ ಅದು ಕೀಟಗಳನ್ನೂ ಆಕರ್ಷಿಸುತ್ತದೆ. ಒಂದು ರಾತ್ರಿ ಮಾತ್ರ ಇದ್ದು ಮರುದಿನ  ಮುದುಡುತ್ತದೆ. ರಾತ್ರಿ ಅರಳುವುದರಿಂದ  ಇದಕ್ಕೆ  'ರಾತ್ರಿರಾಣಿ’ ಎಂಬ ಹೆಸರೂ ಇದೆ. ವರ್ಣಿಸಲು ಸಾಧ್ಯವಿಲ್ಲದಷ್ಟು ಪರಿಮಳದ ಹೂ ಇದು. ಹೂಗಳಲ್ಲಿ ಇದು ನಿಜವಾಗಿ ರಾತ್ರಿ ಹೊತ್ತಿನ ರಾಣಿಯೇ ಹೌದು.  

Friday, 10 June 2011

ಕವನ 


 ಒಡ್ಡೋಲಗ
                                                
                                    ಬದ್ಧಭ್ರಕುಟಿಗಳಾಗಿ ತೊಡೆತಟ್ಟಿ ನಿಂತ ಸೈನ್ಯದ ಮಧ್ಯೆ
ಈಗಷ್ಟೇ ಮುಗಿದಿದೆ ಯುದ್ಧ ಕುರುಕ್ಷೇತ್ರದಲ್ಲಿ 
ಮಸೆದ ಕತ್ತಿಗಳೆಲ್ಲ ನೆಲಕಚ್ಚಿ ಬಿದ್ದಿದ್ದಾವೆ ಎಲ್ಲೆಂದರಲ್ಲಿ 
ಹಸಿಹಸೀ ಕೆನ್ನೀರ ಕೆಸರಲದ್ದಿದ ತುಂಡು 
ಕೈಕಾಲುಗಳ ಅರೆಬರೆ ಸೈನ್ಯ, ದೈನೇಸಿ 
ಗೆದ್ದರೂ ಗೆಲವಿರದ ಕಡುರವದ ಹೊರೆ ಹೊತ್ತು 
ನಲುಗಿ ಹಣ್ಣಾಗಿ ಕಿತ್ತಿಟ್ಟು ಕುಸಿವ ವಜ್ಜೆ ಹೆಜ್ಜೆಯ-
ನೂರುತ್ತ ಮುರಿದ ಭರ್ಚಿ ಕಠಾರಿ ಖಡ್ಗ ಈಟಿಗಳನ್ನೆಲ್ಲ
ಗೋರಿ ಹೆಗಲಿಗೇರಿಸಿ ಹೊರಟಿದೆ ಛಲಬಿಡದೆ
ಪಂಚವಿಂಶತಿಯ ತ್ರಿವಿಕ್ರಮ ಸೈನ್ಯ 
ತೆವಳುತ್ತ ಬಸವಳಿಯುತ್ತ ಬಿಸುಸುಯ್ಯುತ್ತ 
ತದೇಕಚಿತ್ತವ ನೆಟ್ಟು ರಾಜಧಾನಿಯತ್ತ     

ಸೈನ್ಯಕ್ಕೆಲ್ಲ ವಿರಮಿಸಲು ಹೇಳಿ
ಅರಮನೆಗೆ ಬಂದಿದ್ದಾನೆ ಮಹಾರಾಜ 
ಮಂಗಲದ್ರವ್ಯದ ಮುತ್ತೈದೆಯರು ಎತ್ತಿದ್ದಾರೆ ಆರತಿ 
ನಗುತ್ತಿದೆ ಸಿಂಹಾಸನ ಮಂದಸ್ಮಿತ ಮಂದಾಸನದಲ್ಲಿ 
ಬಾರಯ್ಯ, ಬಾ! ದೊರೆಯೇ, ತೆಂಕಣಗಾಳಿ 
ಸೋಂಕಿದೊಡಂ ಒಳ್ನುಡಿಗೇಳ್ದೊಡಂ  ನೆನೆವುದೆನ್ನ ಮನಂ 
ಸದಾ ಪೀಠಸ್ಥನನ್! ಎಂದುಲಿಯುತಿದೆ ಗಿಳಿ 
ಮುಖಮಂಟಪದುದ್ದಕ್ಕೂ ಪೀಠಗಳ ಸರತಿ ಸಾಲು 
ಯಾರಿಗೆ ಯಾವ ಮಠ ಪೀಠ ವಾಸ್ತುಸಹಜದ ಕೋಣೆ
ಪೂಜೆ ಮಾಡಿಯೇ ಕೂರಬೇಕು ನಾಳೆ!

ನಾಳೆಯೇ ಒಡ್ಡೋಲಗ, ನೀವೆಲ್ಲ ಬರಬೇಕು 
ಅರಮನೆಯ ಗೋಡೆ ಬಲಪಡಿಸಬೇಕು 
ಗೆದ್ದ ಸೈನಿಕರೆಲ್ಲ ತುಂಬಿಕೊಂಡಿದ್ದಾರಿಲ್ಲಿ
ಅಂತಸ್ತಿಗೆ ತಕ್ಕಂಥ  ಖಾತೆಗಳ ನೀಡಬೇಕು!

ನಾಳೆ ಇನ್ನ್ಯಾವ ಕ್ಯಾತೆಯೋ ಏನೋ 
ಗೆಲುವಿನರಮನೆಗೆ ನೂರು ಹೆಬ್ಬಾಗಿಲು!

ಭಳಿರೆ! ಏನಂತೀರಿ ಭಾಗವತರೆ, ತರಿಸಿ ಉಚಿತಾಸನಗಳ 
ಹಾಕಿಸಿರಿ ಮೊಗಸಾಲೆ ಕೈಸಾಲೆ ಪಡಸಾಲೆಯಲ್ಲಿ 

ಸರಿ, ಮಹಾರಾಜ, ಸೇರಲಿ ಒಡ್ಡೋಲಗ 
ನೋಡೋಣ ಧರ್ಮರಾಯನ ರಾಜ್ಯಭಾರ!               
     

Thursday, 9 June 2011

ಚಿಂತನ 


'ಓದಿ!, ಕೆಲಸ ಮಾಡಬೇಡಿ!'

ಇತ್ತೀಚೆಗೆ ಸ್ನೇಹಿತರೊಬ್ಬರು ಮಾತಾಡುತ್ತಿದ್ದಾಗ, ಮಾತು ಇವತ್ತಿನ ಶಿಕ್ಷಣಕ್ರಮದ ಕಡೆಗೆ ಹರಿಯಿತು. ಅವರು ಹೇಳಿದರು: "ಹಿಂದಿನ ಕಾಲದಲ್ಲಿ ಶಿಕ್ಷಣದ ಜೊತೆಜೊತೆಗೆ ವೃತ್ತಿ  ತರಬೇತಿಯೂ  ಇರುತ್ತಿತ್ತು, ಜೀವನಕ್ಕೆ ಬೇಕಾಗುವ ವಿವಿಧ ವೃತ್ತಿಗಳನ್ನು ಕಲಿಯುವ ಅವಕಾಶ ಆಗ ಇತ್ತು, ಇವತ್ತಿನ ವಿದ್ಯಾರ್ಥಿಗಳಿಗೆ ಬದುಕಿಗೆ ಅನಿವಾರ್ಯವಾದ ವೃತ್ತಿಗಳ ಬಗ್ಗೆ ಮಾಹಿತಿ-ತಿಳಿವಳಿಕೆ ಇರುವುದಿಲ್ಲ, ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗುತ್ತದೆ, ಅಂದರೆ ವೃತ್ತಿ ಕಲಿಕೆಯಿಂದ ಸರಕಾರವೇ ಅವರನ್ನು ದೂರ ಇಟ್ಟಂತೆ ಆಗಿದೆ " ಎಂದು. 

ಅವರು ಹೇಳಿದ ಮಾತಿನಲ್ಲಿ ಸತ್ಯಾಂಶ ಇಲ್ಲದೆ ಇರಲಿಲ್ಲ. ಮಕ್ಕಳು ಚಿಕ್ಕಂದಿನಲ್ಲೇ ಅಪ್ಪ-ಅಮ್ಮ ಮಾಡುವ ಕೆಲಸಗಳಲ್ಲಿ ತೊಡಗಿಕೊಂಡರೆ ಮಾತ್ರ ಆ ವೃತ್ತಿಯಲ್ಲಿ ನೈಪುಣ್ಯ ಬರುತ್ತದೆ, ಪ್ರೀತಿ ಹುಟ್ಟುತ್ತದೆ. ಪ್ರಾಯಕ್ಕೆ ಬಂದ ಮೇಲೆ, ಅಂದರೆ ಹದಿನೆಂಟು ತುಂಬಿದ ಮೇಲೆ ಅವರಿಗೆ ಅಪ್ಪ-ಅಮ್ಮ ಮಾಡುವ ಕೆಲಸದ ಬಗ್ಗೆ ಪ್ರೀತಿ ಉಳಿಯುವುದಿಲ್ಲ, ಮಕ್ಕಳು ಹೇಳಿದ ಹಾಗೆ ಕೇಳುವುದೂ ಇಲ್ಲ. 

ಇವತ್ತು ಕೃಷಿ ಕೆಲಸಗಳಲ್ಲಿ  ಯಾರೂ ತೊಡಗಿಕೊಳ್ಳದೆ ಇರುವುದಕ್ಕೆ ಇದೂ ಒಂದು ಕಾರಣ. ಚಿಕ್ಕಂದಿನಲ್ಲೇ ತೋಟದಲ್ಲಿ, ಕೆಸರುಗದ್ದೆಯಲ್ಲಿ, ದನದ ಹಟ್ಟಿಯಲ್ಲಿ ಅಪ್ಪ-ಅಮ್ಮನ ಜೊತೆಗೆ ಕೆಲಸ ಮಾಡಿದರೆ ಅವರಿಗೆ  ಆ ಕೆಲಸದ ಬಗ್ಗೆ ಅನುಭವ ಬರುತ್ತದೆ. ನಮ್ಮ ಹಾಗೆ ಅವರು ಮೈ ಕೈಗೆ ಕೆಸರು ಮಾಡಿಕೊಳ್ಳುವುದು ಬೇಡ, ದೊಡ್ಡವರಾದ ಮೇಲೆ ಕಲಿಯಲಿ ಅಂದರೆ, 'ಶಾಲೆಶಿಕ್ಷಣ ಕಲಿತಮೇಲೆ' ಅವರಿಗೆ  ಆ ಕೆಲಸ ಕೀಳು ಅನ್ನಿಸುತ್ತದೆ! ಕೃಷಿ ಕೆಲಸ ಒಂದೇ ಅಲ್ಲ, ತಂದೆ ತಾಯಿಗಳು ಮಾಡುವ ವೃತ್ತಿಯಲ್ಲಿ ಮಕ್ಕಳನ್ನು ಚಿಕ್ಕಂದಿನಲ್ಲೇ ತೊಡಗಿಸಿಕೊಂಡಾಗ ಅವರಿಗೂ ಅನುಭವ ಬರುತ್ತದೆ. 

ಪುಸ್ತಕ ಓದುವ ಅಕ್ಷರಜ್ಞಾನ ಒಂದೇ ಬದುಕಿಗೆ ಬೇಕಾದ ಎಲ್ಲ ಜ್ಞಾನವೂ ಅಲ್ಲ. ದೋಣಿ ನಡೆಸುವುದು, ಬಡಗಿ ಕೆಲಸ, ಕಮ್ಮಾರಿಕೆ, ಚಿನ್ನದ ಕೆಲಸ, ಚಮ್ಮಾರಿಕೆ, ಕುಂಬಾರಿಕೆ, ಗೃಹನಿರ್ಮಾಣ ಮೊದಲಾದವು ವೃತ್ತಿ ಕಲಿಕೆಗಳೇ ಆಗಿವೆ . ಇತ್ತೀಚೆಗೆ ಕೇರಳದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕೆಸರು ಗದ್ದೆ ಮಡಿ ಮಾಡಿ ಬತ್ತ ನಾಟಿ ಮಾಡುವ ಕ್ರಮವನ್ನು ಪ್ರಾತ್ಯಕ್ಷಿಕೆ ಮೂಲಕ ಕಲಿಸಿ ಕೊಡಲಾಯಿತು ಎಂಬ ಪತ್ರಿಕಾ ವರದಿ ಓದಿದೆ. ಇದೇ ರೀತಿ ಬೇರೆ ಬೇರೆ ವೃತ್ತಿಗಳನ್ನು ಶಾಲೆಗಳು ಮತ್ತು ಸಂಘ ಸಂಸ್ಥೆಗಳು ಕಲಿಸಿಕೊಡಬೇಕಾದ ಪರಿಸ್ಥಿತಿ ಇವತ್ತು ಬಂದಿದೆ. ಪಾರಂಪರಿಕ ವಿದ್ಯೆಗಳನ್ನು ಮಕ್ಕಳಿಗೆ ಹೇಳಿ ಕೊಡದೆ, ಆಧುನಿಕ ವಿದ್ಯೆಯ  ಹೆಸರಲ್ಲಿ ಅವರನ್ನು ಕೃಷಿ ಕೆಲಸಗಳಿಂದ ಹಾಗೂ ಇತರೆ ನಾನಾ ವೃತ್ತಿಗಳಿಂದ ದೂರ ಇಟ್ಟು, ಈಗ ತೊಂದರೆಗೆ ಒಳಗಾದೆವು ಎಂದು ಹಳಹಳಿಸಿದರೆ ಏನು ಪ್ರಯೋಜನ?

ತಂದೆ ತಾಯಿಗಳ ಜೊತೆಗೆ ಮಕ್ಕಳು ಅದೇ ವೃತ್ತಿ ಮಾಡಿದಾಗ ಪ್ರಾಯೋಗಿಕ ತರಬೇತಿ ಸಿಗುತ್ತದೆ. ಮುಂದೆ ಅದು ಬದುಕುವ ವಿದ್ಯೆ ಆಗುತ್ತದೆ. ಹಿಂದೆ 'ಗುರುಕುಲ'ಗಳಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಇತರ ಕೆಲಸಗಳನ್ನೂ ಮಾಡಬೇಕಾಗಿತ್ತು. ಇವತ್ತು ನಾವು, ಮಕ್ಕಳು ಕೆಲಸ ಮಾಡಬಾರದು, ಶಿಕ್ಷಣ ಮಾತ್ರ ಕಲಿಯಬೇಕು (ಓದಬೇಕು!)ಎಂಬ ತತ್ತ್ವಕ್ಕೆ ಅಂಟಿ, ನಿಜವಾಗಿ ವೃತ್ತಿ ತರಬೇತಿ ಗಳಿಸುವ ಅವಕಾಶದಿಂದ ಅವರನ್ನು ವಂಚಿತರನ್ನಾಗಿ ಮಾಡುತ್ತಿದ್ದೇವೆ ಅನ್ನಿಸುತ್ತದೆ. 

ಇವತ್ತು ನಾವು ಮಕ್ಕಳಿಗೆ 'ಓದು' ಎನ್ನುತ್ತೇವೆ ಹೊರತು 'ಕೆಲಸ ಮಾಡು' ಎಂದು ಹೇಳುವುದಿಲ್ಲ! ಕೆಲಸ ಮಾಡುವುದು ಪ್ರಾಯೋಗಿಕ ತರಬೇತಿ. ಈ ತರಬೇತಿ ಸಿಗದ, ಕೇವಲ ಓದುವ  'ಅರೆಶಿಕ್ಷಣ' ಮುಂದೊಂದು ದಿನ ನಮಗೆ ಶಾಪವಾಗಿ ಪರಿಣಮಿಸಬಹುದೆಂದು ತೋರುತ್ತದೆ. 'ಬರೇ ಓದಿದ' ಆದರೆ 'ಕೆಲಸ ಮಾಡಲು' ತಿಳಿಯದ ಅಥವಾ 'ಕೆಲಸ ಮಾಡುವುದು ಕೀಳು' ಎಂಬ ಮನೋಭಾವದ ಜನಾಂಗವನ್ನು ನಾವು ಸೃಷ್ಟಿಸುತ್ತಿದ್ದೇವೆಯೇ? ಓದುವುದು ಮನಸ್ಸಿಗೆ ಮತ್ತು ಜ್ಞಾನ ವಿಕಾಸಕ್ಕೆ ಅಗತ್ಯವಾದರೆ ಕೆಲಸ ದೇಹದ ಆರೋಗ್ಯಕ್ಕೆ ತೀರ ಅವಶ್ಯ. ಅದು ವ್ಯಾಯಾಮ ಮಾಡಿದಂತೆಯೂ ಹೌದು. 

'ಕೆಲಸ ಮಾಡದವರ' ದೇಶ ಮುಂದೆ ಬರುವುದು ಹೇಗೆ?!         
     

Wednesday, 8 June 2011

ನನ್ನ ಬ್ಲಾಗ್ ಓದುಗರಿಗಾಗಿ ಇವತ್ತು ಒಂದು ಕವನ ಕೊಡ್ತಾ ಇದ್ದೇನೆ.

ಭೋಜರಾಜನ ಸಿಂಹಾಸನ 

ಸಿದ್ಧವಾಗಿದೆ ಭೋಜರಾಜನ ಸಿಂಹಾಸನ 
ಹಸ್ತಕ್ಕೆ ಪೂಸಿದ ಅತ್ತರು ಮೂಸುತ್ತ ಮಹಾರಾಜ 
ಒಂದೊಂದೇ ಮೆಟ್ಟಲು ಹತ್ತಬೇಕು 

ಸಾಲಂಕೃತ ಸಾಲಭಂಜಿಕೆಗಳು 
ಬೆಳ್ಳಿಸತ್ತಿಗೆಯ ಹಿಂದೆ 
ಇಂದ್ರ ಸೂರ್ಯ ಚಂದ್ರರು 
ಜೀವಂತ ಇರುವ ಹಾಗೆ 
ವಜ್ರ ವೈಡೂರ್ಯದ ಸಿಂಹಶರಭಗಳು 
ಕಾಂಚನ ಮಿಣಿಮಿಣಿ ಕಣ್ಣು 
ಕೋರೈಸುವ ಹಾಗೆ ಬೆಳಕು 

ಇವತ್ತೇ ಪ್ರತಿಜ್ಞಾವಿಧಿ 
ಕುಳಿತಿದ್ದಾರೆ ಮಂತ್ರಿಮಾನ್ಯರು 
ಪುರೋಹಿತರು ಜ್ಯೋತಿಷಿಗಳು 
ಮಾಟಜ್ಞರು ವಾಸ್ತುತಜ್ಞರು
ಖಾಸಾ ಅಂತರಂಗದ ದೋಸ್ತಿಗಳು 
ಯಥೋಚಿತ ಸಭಾಸದರು 

ಚಾಮರಸೇವೆಗೆ ಕಂಚುಕಿಯರು 
ಉಘೇ ಉಘೇ ಎಂಬಂಥ ಹೊಗಳುಭಟರು 
ಕಣ್ಣು ತೆರೆದಲ್ಲೆಲ್ಲ ವೈಭವದ ಭೋಗ 
ಹಂಸತೂಲಿಕಾ ತಲ್ಪದ ತಂಪಾದ ಜಾಗ
ಸಿದ್ಧವಾಗಿದೆ ಸಿಂಹಾಸನ 
ಆದರೆ ಏರುವುದು ಅಷ್ಟು ಸುಲಭವೇ?
ಸಜ್ಜುಗೊಳಿಸಬೇಕು ಸೇನಾಬಲ 
ಘೋಷಿಸಬೇಕು ಯುದ್ಧ 
ದಂಗೆ ಎದ್ದವರ ವಿರುದ್ಧ 
ಹೊರಡಬೇಕು ಜೈತ್ರಯಾತ್ರೆ 
ಸಾಮ್ರಾಜ್ಯಗಳ ಗೆಲ್ಲುತ್ತ 

ಗೆಲ್ಲುವುದು ಹೇಗೆ-
ಹೊಗೆಯಾಡುವ ಭಿನ್ನಮತ 
ಅರಮನೆಯೊಳಗೆ ವಿದ್ರೋಹ 
ಅನನುಭವಿಯೆಂಬ ಗುಲ್ಲು 

ವಿರೋಧಿಗಳು ಎತ್ತುತ್ತಾರೆ ವಿವಾದ 
ತರುತ್ತಾರೆ ನಿಯೋಗ 
ಆಗಾಗ 

ಆಂತರಿಕ ಗಲಭೆ 
ಅಲ್ಲಲ್ಲಿ ಸ್ಫೋಟ-
ಕಾರಕ ಪರಿಸ್ಥಿತಿ 
ಮಧ್ಯೆ ಮಧ್ಯೆ ಸೈನಿಕರ ತಂಟೆ 
ರೈತರ ಆತ್ಮಹತ್ಯೆ 
ಜ್ಯೋತಿಷಿಗಳ ಭವಿಷ್ಯ:
ಗೃಹಿಣಿಯರಿಗೂ  ತೊಂದರೆ! 

ಮಳೆಯಿಲ್ಲ  
ಹಾಗಾಗಿ ಬೆಳೆಯಿಲ್ಲ
ಹಣದುಬ್ಬರ, ಬೆಲೆಯೇರಿಕೆಯ ತಲೆಬಿಸಿ 
ಇಂಥ ಪ್ರಸಂಗದಲ್ಲೇ ಇಂಧನಕ್ಷಾಮ
ಕುಲೋತ್ತುಂಗನಿಗೆ ಚಿತ್ತಭಂಗ 

ಎಲ್ಲವನ್ನು ನಿಭಾಯಿಸುತ್ತ 
ವಿರೋಧಗಳ ಸಹಿಸುತ್ತ 
ಪ್ರಭುವಾಗುವ ಕಲೆ 
ಕರಗತವಾಗಬೇಕು 
ಪ್ರಜೆಗಳ ಕಷ್ಟಸುಖ ನೋಡುತ್ತ
ಸಿಂಹಾಸನ ಏರಿದರೆ ಮಹಾರಾಜ 
ಹೃದಯಗೆದ್ದ ವಿಕ್ರಮಾದಿತ್ಯ.

ರಾಜ ಎಲ್ಲ ಗೆದ್ದ ಗಜದಂತೆ 
ಸಿಂಹಾಸನದ ಬಳಿಗೆ ಬಂದ 
ಆಹಾ! ಎಂಥ ಸುಗುಣ ಗಂಭೀರ ಸಿಂಹಾಸನ 
ಐತಿಹಾಸಿಕ ಪರಂಪರೆಯ ತಾಣ! 
ಪರಮ ಪಾವನ ಪಾವಟಿಗೆಗಳ ತುಟ್ಟತುದಿಯಲ್ಲಿ 
ಕೆಂಪು ಮಕಮಲ್ಲ ಪುಟ್ಟ ಗಾದಿ
ಕಟಕಟೆಗೆ ಪುಟವಿಟ್ಟಂತೆ ಬಂಗಾರ 
ಭಂಜಿಕೆಗಳ ಸಾಲು 
ತೊಳೆದ ಪಾದವ ಆಹಾ! ಹಾಗೆ, 
ಒಂದೊಂದೇ ನಿಧಾನ ಎತ್ತಿಟ್ಟರೆ
ಮೇಲೆ ಎತ್ತರದಲ್ಲಿ ಕಿರೀಟಪ್ರಾಯ
ರಾಜಪೀಟದಲ್ಲಿ ವಿರಾಜಮಾನ.

ರಾಜ ಒಂದೇ ಒಂದು ಹೆಜ್ಜೆ 
ಇನ್ನೇನು ಎತ್ತಿಡಬೇಕು 
ಅಷ್ಟರಲ್ಲಿ ಶತ್ರುಗಳು ದಾಳಿಯಿಟ್ಟ 
ಸುದ್ದಿ ಬಂತು!  

  

Tuesday, 7 June 2011

ಚಿಂತನ 


ನಮ್ಮ  ಈ ನಾಗರಿಕತೆ  ಇನ್ನೆಷ್ಟು ವರ್ಷ ?

ಪೆಟ್ರೋಲ್ ಹಾಗೂ ಇತರೇ ಇಂಧನಗಳ ಬೆಲೆ ಸತತವಾಗಿ ಏರುತ್ತಿರುವುದನ್ನು  ನೋಡಿದರೆ ಅವುಗಳ ಲಭ್ಯತೆ  ಹಾಗು ದಾಸ್ತಾನು ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ತೋರುತ್ತದೆ.  ಓಡಾಟ ಮತ್ತು ಸಾಗಾಟಕ್ಕಾಗಿ ಅವುಗಳನ್ನೇ ಅವಲಂಬಿಸಿರುವ   ನಮ್ಮ ಈ ಆಧುನಿಕ ನಾಗರಿಕತೆ ಅವುಗಳು ಸಿಗದೇ ಹೋದಾಗ, ಇನ್ನು ಐವತ್ತು - ಅರವತ್ತು ವರ್ಷಗಳಲ್ಲಿ ದುರ್ಬಲವಾಗುತ್ತ ಆಗುತ್ತಾ  ಕುಸಿದು ಬೀಳಬಹುದು  ಅನ್ನಿಸುತ್ತದೆ. ಅಷ್ಟುಹೊತ್ತಿಗೆ ಭೂಮಿಯ ಆಳದಿಂದ ದೊರೆಯುವ ಇಂಧನ ಖಾಲಿಯಾಗುವುದಲ್ಲದೆ, ನಮ್ಮ ವಾಹನಗಳನ್ನು  ಮನೆ ಮುಂದೆ  ಅಲಂಕಾರ ವಸ್ತುವಿನಂತೆ  ಇಡುವ ದಿನ ಬರಬಹುದು.

ಜೈವಿಕ  ಇಂಧನ, ಸೌರಶಾಖ  ಇತ್ಯಾದಿ ಪರ್ಯಾಯ ಶಕ್ತಿ ಮೂಲಗಳು  ಈಗಿರುವ ವಾಹನಗಳಿಗೆ ಆಗುವುದಿಲ್ಲ ಅಲ್ಲದೆ ಅವುಗಳ ಲಭ್ಯತೆ  ತೀರಾ ಕಡಿಮೆ. ಅವುಗಳನ್ನು ಬಳಸಿದರೆ ವಾಹನಗಳಿಗೆ ಸಿಗುವ ವೇಗ ಕಡಿಮೆ. ಅಧಿಕ ಭಾರವನ್ನು ಎಳೆಯಲು ಅವುಗಳಿಂದ ಸಾಧ್ಯವಿಲ್ಲ. 

ಒಂದು ಕಡೆಯಿಂದ  ಇನ್ನೊಂದು ಕಡೆಗೆ ಜನರಿಗೆ ಹೋಗಲಾಗದಿದ್ದರೆ ಮತ್ತು ಸಾಮಾನು ಸರಂಜಾಮುಗಳ  ಸಾಗಾಟ ಸಾಧ್ಯವಾಗದಿದ್ದರೆ  ನಮ್ಮ ಈ ನಾಗರಿಕತೆ  ಉಳಿಯುವುದಾದರೂ  ಹೇಗೆ ?

ನಗರಗಳ ಧಾರಣಶಕ್ತಿ  ವರ್ಷದಿಂದ  ವರ್ಷಕ್ಕೆ ಕುಸಿಯುತ್ತಿರುವ  ಇನ್ನೊಂದು ತೊಂದರೆಯೂ ಇದೆ. ಉದ್ಯೋಗಾವಕಾಶ, ವಲಸೆ ಇತ್ಯಾದಿ ಕಾರಣಗಳಿಂದ  ನಗರಗಳು ಅಗಾಧವಾಗಿ  ಬೆಳೆಯುತ್ತಿವೆ  ಮತ್ತು  ಮೂಲ ಸೌಕರ್ಯಗಳಿಂದ ವಂಚಿತವಾಗುತ್ತಿವೆ. ಹಳ್ಳಿಗಳು  ಮತ್ತು ಕೃಷಿ ನಿರ್ಲಕ್ಷಿತವಾಗುತ್ತಿದೆ . ಇದರಿಂದಾಗಿ ನಮ್ಮ ಈಗಿನ  ಒಟ್ಟು ವ್ಯವಸ್ಥೆಯೇ  ಕುಸಿದು ಬೀಳಬಹುದು . 

ಯಾವುದೇ ನಾಗರಿಕತೆಗೆ ಒಂದು ಆಯುಸ್ಸು  ಎಂಬುದು ಇರುತ್ತದೆ. ವಿಕಾಸವು ಅದರ ಒಡಲಲ್ಲೇ  ನಾಶದ ಬೀಜವನ್ನೂ  ಅಡಗಿಸಿಕೊಂಡಿರುತ್ತದೆ. ಜಗತ್ತಿನಲ್ಲಿ ಈ ಹಿಂದೆ  ಆಗಿ ಹೋದ ಗ್ರೀಕ್ ನಾಗರಿಕತೆ, ಈಜಿಪ್ಟ್  ನಾಗರಿಕತೆ,  ಮೆಸಪೋಟೀಮಿಯ , ಹರಪ್ಪಾ ಮತ್ತು  ಮೊಹೆಂಜೊದಾರೋ ಮೊದಲಾದ ನಾಗರಿಕತೆಗಳೆಲ್ಲ ವಿಕಾಸ ಹೊಂದಿ ಅನಂತರ ಯಾವುದೋ ಕಾರಣಕ್ಕೆ ನಾಶವಾಗಿ ಕಾಲಗರ್ಭದಲ್ಲಿ ಲೀನವಾಗಿ ಹೋದವು. ನಮ್ಮ ಆಧುನಿಕ ಯಂತ್ರ ನಾಗರಿಕತೆ ಈಗ ಅದರ ಉತ್ತುಂಗ ಸ್ಥಿತಿಯಲ್ಲಿದೆ ..ಅದಕ್ಕೆ ಕಾರಣವಾದದ್ದು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿ. ಇದು ಪರಿಸರ ಸ್ನೇಹಿ ಆಗಿಲ್ಲದೇ ಇರುವುದು ಒಂದು ನಕಾರಾತ್ಮಕ ಅಂಶ. ನಾವು ಈಗ ಭೂಮಿಯ ಶಕ್ತಿ ಮೂಲಗಳನ್ನು ಬಳಸಿ ಬರಿದು ಮಾಡುತ್ತಿದ್ದೇವೆ. ಈಗಿನ ನಾಗರಿಕತೆಗೆ ಈ ಅತಿವೇಗ ಸಾಧ್ಯವಾದದ್ದು ಇಂಧನ ಶೋಧವಾದ ಬಳಿಕ, ಅಂದರೆ    ಕಳೆದ  ಸುಮಾರು ಇನ್ನೂರು ವರ್ಷಗಳಿಂದ ತಾನೇ ? ಇಷ್ಟು ಬೇಗ ಸಂಪನ್ಮೂಲಗಳನ್ನು ತಿಂದು ಮುಗಿಸಿರುವ ನಾವು,  ನಾಳೆಗೆ ಅದನ್ನು ಉಳಿಸಿ ನಮ್ಮ ನಂತರದ ತಲೆಮಾರಿಗೆ ಕೊಡುತ್ತೇವೆ ಎಂಬ ವಿಶ್ವಾಸ ನನಗಂತೂ ಇಲ್ಲ! 

ಇನ್ನು ಎರಡು ತಲೆಮಾರುಗಳಲ್ಲಿ (ಅಂದರೆ ಸುಮಾರು ಐವತ್ತು - ಅರವತ್ತು ವರ್ಷ ) ಈ ನಾಗರಿಕತೆ ತನ್ನ ಧಾರಣ ಶಕ್ತಿಯನ್ನು   ಪೂರ್ತಿಯಾಗಿ ಕಳೆದುಕೊಂಡು  ಅವಸಾನ ಹೊಂದಬಹುದು ಎಂಬುದು ನನ್ನ ಅನಿಸಿಕೆ.
ಈ ಊಹೆಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ .ಕೆಲವು ಕೋನಗಳಿಂದ ನನ್ನಷ್ಟಕ್ಕೆ  ಮಾಡಿಕೊಂಡಿರುವ ಊಹೆ. ನಮ್ಮ ಆಧುನಿಕ ನಾಗರಿಕತೆ ನಿಂತಿರುವುದು 'ಶಕ್ತಿ' (ಇಂಧನ,ವಿದ್ಯುತ್ತ್ ಶಕ್ತಿ ಇತ್ಯಾದಿ )ಯ ಅಸ್ತಿವಾರದ ಮೇಲೆ.  ಶಕ್ತಿ ಮೂಲಗಳನ್ನು ನಾವು ಬರಿದು ಮಾಡುತ್ತಾ ಬಂದಿದ್ದೇವೆ.ಇದಕ್ಕೆ ಪರ್ಯಾಯವಾದ ಬೇರೆ ಹಾದಿಗಳು ಕ್ಷೀಣವಾಗಿವೆ. ಇನ್ನೊಂದೆಡೆಯಿಂದ ಜನಸಂಖ್ಯೆಯು  ವಿಪರೀತವಾಗಿ ಏರುತ್ತ ಮೂಲಭೂತ ಸೌಕರ್ಯಗಳಿಗೂ  ಕೊರತೆಯಾಗಲಿದೆ. ಬೇಸಿಗೆಯಲ್ಲಿ ಕೃಷಿಗೆ ಬಿಡಿ, ಕುಡಿಯಲೂ ಶುದ್ಧ ನೀರಿನ ಅಭಾವ ಕಾಣಿಸಲಾರಂಭಿಸಿದೆ.  

ನಮ್ಮ ಈ ಆಧುನಿಕ  ವ್ಯವಸ್ಥೆ  ಪೂರ್ತಿಯಾಗಿ ಕುಸಿದು ಬಿದ್ದ ಬಳಿಕ ಪ್ರಾಕ್ತನ ಬುಡಕಟ್ಟು ಜನಾಂಗದ ಬದುಕನ್ನು ನಮ್ಮ ಮುಂದಿನ ತಲೆಮಾರಿನವರು  ಬಾಳಬೇಕಾದೀತೇ? ಮತ್ತೆ ಹಳ್ಳಿಗಳಿಗೆ ಹಿಂದಿರುಗಿ ಎತ್ತುಗಳನ್ನು ಬಳಸಿ ಕೃಷಿ ಮಾಡಬೇಕಾದೀತೇ? ನಮ್ಮ ಮೊಮ್ಮಕ್ಕಳ ನಂತರದ  ಕಾಲಕ್ಕೆ ಪರಿಸ್ಥಿತಿ ಪೂರ್ತಿಯಾಗಿ ಬದಲಾಗಿ ಹೋಗಬಹುದೆಂದು ತೋರುತ್ತದೆ, ಅಥವಾ ಈ ನಾಗರಿಕತೆ  ಸಂಪೂರ್ಣವಾಗಿ  ನೆಲಕಚ್ಚಿ ಹೋಗಲೂಬಹುದು. 

Sunday, 5 June 2011

ಒಂದು ಕವಿತೆ 
ಸುಮ್ಮನೆ ಒಮ್ಮೆ 


ನಕ್ಕು ಬಿಡು ಗೆಳತಿ  ಸುಮ್ಮನೆ ಒಮ್ಮೆ 
ಹೂವರಳಿದ ಹಾಗೆ, ಈ ಸುಖಕೆ 
ಮರಳಿ ಮಗುವಾಗುವೆ 

ನೇವರಿಸಿಬಿಡು  ಗೆಳತಿ ಸುಮ್ಮನೆ ಒಮ್ಮೆ
ನೋವು ನರಗಳ ಹೊರೆಯ 
ಇಳಿಸಿ ಹಗುರಾಗುವೆ 

ಮಾತಾಡಿಬಿಡು ಗೆಳತಿ, ಸುಮ್ಮನೆ ಒಮ್ಮೆ
ಹೃದಯ ಹೃದಯದ ಭಾವ 
ಬೆಸೆದು ಹಗುರಾಗುವೆ 

ಕಣ್ಣಲ್ಲಿ  ಕಣ್ಣಿಟ್ಟು ನೋಡೊಮ್ಮೆ ಸುಮ್ಮನೆ, ಗೆಳತಿ 
ಬೆಡಗು  ಬೆರಗಿನ ಬೆಳಕು 
ತುಂಬಿ ಹಗುರಾಗುವೆ 

ನೀರಿನಲೆಗಳ ಹಾಗೆ ಸುಮ್ಮನೆ ಹಾಡಿಬಿಡು ಗೆಳತಿ 
ನಾದಲೋಕಕ್ಕೆ ಕೊಳಲ 
ದನಿಯಾಗುವೆ 

ಗಾಳಿಯ ಹಾಗೊಮ್ಮೆ ತೀಡಿಬಿಡು ಗೆಳತಿ 
ಗಂಧವತೀ  ಪೃಥ್ವಿ 
ಎಂದು ಹಾಯಾಗುವೆ 
  


ನಾನು ಈ ಕವನ ಬರೆದು ಹತ್ತಿರ ಹತ್ತಿರ ಒಂದು ವರ್ಷ ಆಗಿರಬೇಕು. ಕೆಲಸದ ತುರ್ತಿನಲ್ಲಿ ಅನಂತರ ಮರೆತು ಬಿಟ್ಟಿದ್ದೆ. ಈಗ ಸುಮಾರು ಒಂದು ತಿಂಗಳ ಹಿಂದೆ ಕಣ್ಣಿಗೆ ಬಿದ್ದಾಗ ಅಲ್ಪಸ್ವಲ್ಪ ತಿದ್ದಿ  'ಕರ್ಮವೀರ'ಕ್ಕೆ ಕಳಿಸಿಕೊಟ್ಟಿದ್ದೆ. ಈ ವಾರದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಕನ್ನಡದಲ್ಲಿ  ಬರೆದ ಬಳಿಕ ತುಳುವಿಗೂ ನಾನೇ  ಅನುವಾದಿಸಿ ತುಳು ಸಾಹಿತ್ಯ ಅಕಾದಮಿಯ ತ್ರೈಮಾಸಿಕ 'ಮದಿಪು' ಸಂಚಿಕೆಗೆ ಕಳಿಸಿಕೊಟ್ಟಿದ್ದೆ. ಅದರಲ್ಲಿಯೂ ಪ್ರಕಟವಾಗಿ ಸಂಚಿಕೆ ಈ ವಾರ ಅಂಚೆಯಲ್ಲಿ  ಬಂದಿದೆ. ಇದೊಂದು ಆಕಸ್ಮಿಕವೇ ಸರಿ. ಈಗ ಕವಿತೆ  ಓದಿ. 

ಹೀಗೇ ಇರುವಾಗ 

ಹೀಗೇ ಇರುವಾಗ ನೀನು ಕೇಳಿದೆ 
ನಮ್ಮ ಮದುವೆ ಯಾವಾಗ?


ಮೂರು ತಿಂಗಳಾಯಿತು 
ಈ ಮಾತಿಗೆ 
ನನಗೆ ದಿಗಿಲಾಯಿತು 
ಸದ್ಯದಲ್ಲೇ ಮಳೆಗಾಲ ಆರಂಭವಾಗುತ್ತದೆ 
ಈ ವರ್ಷ ಹೊಸ ಪ್ರಸಂಗ 
ರಂಗಸ್ಥಳ ತುಂಬ ನಾನೇ ನಾನು 
ಸರಿ 
ರಾತ್ರಿ ಸರಿಯುತ್ತಿದ್ದಂತೆ 
ಕಥೆಯ ಉತ್ತುಂಗದಲ್ಲಿ 
ರಣಾಂಗಣದ ನಡುವೆ 
ನಾನೇ ಪತಾಕೆ ನೆಟ್ಟ ವೀರ! 

ರಾತ್ರಿಯಿಡೀ ಕುಣಿದು ಬಂದಾಗ 
ನಿನ್ನ ಕಣ್ಣಿನಲ್ಲಿ ಧಗ ಧಗ ಬೆಂಕಿ 
ಬಿಲ್ಲು ಬಾಣ ಮೂಲೆಗೆಸೆದು 
ಚಿತ್ರಾಂಗದೆಯನ್ನರಸುತ್ತ  ಹೊರಟ 
ಅರ್ಜುನನಂತೆ ನಾನು 

ಹತ್ತಿರದಲ್ಲೆಲ್ಲೋ ಹಕ್ಕಿಗಳ ಕೂಗು 
ನರಿಗಳ ಊಳು 
ನಾಯಿ ಬೊಗಳಿ ಬೆನ್ನಟ್ಟಿದ ಸದ್ದು 
ಈಗಂತು ಬೇಟೆ ನಿಷಿದ್ಧವಂತೆ

ನೀನೇನು ಹೆದರಬೇಡ 
ಈ ವೇಷ ಈ ಬಣ್ಣ ಈ ಕಿರೀಟ
ರಾತ್ರಿಯಲ್ಲಿ ಮಾತ್ರ 
ನಾನು ಕೇವಲ ನರಮನುಷ್ಯ 

ನಾಳೆ ನಾನೇ ರಾಮ 
ನೀನೆ ಸೀತೆ
ರಾಮನಿಗು ಸೀತೆಗು ನಾಳೆಯೇ ಮದುವೆ!

Friday, 3 June 2011

ವಿಚಾರ

ಬಾಗುವುದು

ಮೊನ್ನೆ ಒಂದು ಮದುವೆಗೆ ಹೋಗಿ ಬಂದ ಮೇಲೆ ಸುಮ್ಮನೆ ಹೀಗೊಂದು ಆಲೋಚನೆ ಬಂತು:

ಕಲ್ಯಾಣಮಂಟಪದಲ್ಲಿ ವಧು ಹಾರ ಹಾಕುವ ಸಂದರ್ಭದಲ್ಲಿ ವರಮಹಾಶಯ ತುಸುವೂ ಬಾಗದೆ ನೆಟ್ಟಗೆ ಸೆಡವಿಕೊಂಡು ನಿಂತಿದ್ದ. ಆತ ನಿಂತ ಭಂಗಿಯಲ್ಲಿ ಕೃತಕತೆ ಎದ್ದು ಕಾಣುತಿತ್ತು. ವಧು ಸ್ವಲ್ಪ ಕುಳ್ಳಗಿದ್ದುದರಿಂದ ವರನ ಕುತ್ತಿಗೆಗೆ ಹಾರ ಹಾಕಲು ಕಷ್ಟವಾಯಿತು. ತುದಿಗಾಲಲ್ಲಿ ನಿಂತು ಗುರಿಹಿಡಿದು ಪ್ರಯಾಸದಿಂದ ಹಾರ ಹಾಕಿದಳು. 'ಅಬ್ಬ! ಎಂತಹ ಧಿಮಾಕು ಕಣೋ!' ಅನ್ನುವ ಕೆಣಕುನೋಟವೊಂದು ವಧುವಿನ ಕಣ್ಣಿನಲ್ಲಿ ಕಂಡಂತಾಯಿತು.

'ವಧು ಮಾಲೆ ಹಾಕುವಾಗ ನೀನು ಬಗ್ಗಬೇಡ' ಎಂದು ವರನ ಕಡೆಯವರು ಅವನಿಗೆ ಮೊದಲೇ ಕಿವಿಯಲ್ಲಿ ಹೇಳಿರಬೇಕು. 'ಬಾಗಿದರೆ ನೀನು ಅವಳಿಗೆ ಸೋತೆ ಎಂದರ್ಥ. ಗಂಡಸಾದ ನೀನು ನೇರವಾಗಿ ನಿಂತಿರಬೇಕು! ಹೆಂಡತಿಗೆ ಬಾಗಿ ಅವಳು ಹೇಳಿದಂತೆ ಕೇಳಿಕೊಂಡು ಬಾಳುವವನಲ್ಲ ಎಂಬುದನ್ನು ಮದುವೆ ಮಂಟಪದಲ್ಲೇ ತೋರಿಸಿಕೊಡಬೇಕು' ಎಂದೆಲ್ಲ ಆತನ ಮೇಲ್ಮೆಯನ್ನು ಕೆಣಕಿ ವರನ ಕಡೆಯವರು ಅವನನ್ನು ಮೊದಲೇ ಸಿದ್ಧಗೊಳಿಸಿರಬೇಕು.

ಯಾರು ಮೇಲೆ, ಯಾರು ಕೆಳಗೆ? ಯಾರು ಯಾರಿಗೆ ಸೋಲುವುದು? ಮದುವೆಯೆಂದರೆ ಸೋಲು ಗೆಲುವಿನ ಸ್ಫರ್ಧೆಯೇ?

ಇರಲಿ, ಮುಖ್ಯ ವಿಷಯ ಅದಲ್ಲ; ಒಬ್ಬ ಮನುಷ್ಯನ ನಡೆ ಮತ್ತು ವರ್ತನೆ ಸಹಜ ಸ್ವಾಭಾವಿಕವಾಗಿರಬೇಕು. ಯೋಚನೆ ಮತ್ತು ದೇಹಭಾಷೆಗೆ ಹೊಂದಾಣಿಕೆ ಇರಬೇಕು. ಆಗ ಮಾತ್ರ ಅವನ ವ್ಯಕ್ತಿತ್ವ ಸಹಜವೂ ಸುಂದರವೂ ಆಗಿರುತ್ತದೆ. ಯಾರೋ ಹೇಳಿದರೆಂದು ಆರೋಪಿತ ವ್ಯಕ್ತಿತ್ವವನ್ನು ತೋರಿಸಿದರೆ ಹಾಸ್ಯಾಸ್ಪದವಾಗುತ್ತದೆ. ದೃಢತೆಯಾಗಿರಲಿ, ವಿನಯವಾಗಿರಲಿ, ಸೌಜನ್ಯವಾಗಿರಲಿ, ಭದ್ರತೆಯ ನಿಲುವಾಗಿರಲಿ ಅದು ಹೃದಯದಿಂದ ಬಂದು ಸ್ವಾಭಾವಿಕವಾಗಿ  ತನ್ನ ನಿಲುವಿನಲ್ಲಿ ಮೈದಾಳಿದಂತೆ ಇರಬೇಕು. ನಾಟಕೀಯವಾಗಿರದೆ ಸಹಜವಾಗಿರಬೇಕು. ತನ್ನ ಮೂಲ ವ್ಯಕ್ತಿತ್ವ ಹೂವರಳಿದಂತೆ ಪ್ರತಿಫಲಿತವಾಗಬೇಕೇ ಹೊರತು ಇತರರು ಹೇಳಿಕೊಟ್ಟುದನ್ನು ಒಪ್ಪಿಸುವ ಕೃತಕತೆ ಕಾಣಿಸಬಾರದು. ಸಹಜತೆಯೇ ಸೌಂದರ್ಯ, ಅಲ್ಲವೇ?

ಯಾರು ಬಾಗುವುದಿಲ್ಲವೆಂದು ಅಂದುಕೊಂಡಿರುತ್ತಾರೋ ಅವರು ಬಾಗುವುದನ್ನೂ, ಬಾಗಿದವರು ಸೆಟೆದು ನಿಂತುದನ್ನೂ  ನಾವು ನೋಡಿದ್ದೇವೆ. ಕಟ್ಟಿಕೊಟ್ಟ ಬುತ್ತಿಯೂ ಹೇಳಿಕೊಟ್ಟ ಬುದ್ಧಿಯೂ ಕೊನೆತನಕ ಉಳಿಯುವುದಿಲ್ಲ.

ಸರಿ, ಬಾಗುವುದಿಲ್ಲ ಎಂಬ ಬಾಹ್ಯ ತೋರ್ಪಡಿಸುವಿಕೆಯಿಂದ ಆಗಬೇಕಾದುದೇನು?  ಅದು ಧೀರತೆಯ, ವೀರತೆಯ, ಲೋಕೋತ್ತರಗಳನ್ನು ಗೆಲ್ಲುವ ಆತ್ಮವಿಶ್ವಾಸದ ಸಹಜ ನಿಲುವಾದರೆ ಒಪ್ಪಿಕೊಳ್ಳೋಣ, ಸಂತೋಷ. ಆನೆಯ ಹಾಗೆ, ವನರಾಜನ ಹಾಗೆ 'ನಾನಿರುವುದೇ ಹೀಗೆ' ಎಂಬ  ಸ್ವಯಮೇವ ಭಂಗಿ ಅದು. 

ಮದುವೆಯಾದ ಮೇಲೆ ಅವನು ಬಾಗಿದ್ದಾನೋ ಇಲ್ಲವೋ ಎಂಬುದನ್ನು ನೋಡಲು ಯಾರು ಹೋಗುತ್ತಾರೆ! ಬಾಗದಿದ್ದರೆ ವ್ಯಕ್ತಿತ್ವದಲ್ಲಿ ಅದೊಂದು ಊನವೇ ಸರಿ. ಬಾಗಿದರೆ 'ಅಮ್ಮಾವ್ರ ಗಂಡ' ಆಗಿರುತ್ತಾನೆಂದು ಅರ್ಥವಲ್ಲ. ಬಾಗದೇ ಇದ್ದರೆ ರಾಜನಾಗಿರುತ್ತಾನೆಂದೂ ಭಾವಿಸಬೇಕಾಗಿಲ್ಲ. 'ಸಮರಸವೇ ಜೀವನ; ವಿರಸ ಮರಣ'. 

ತಿಳಿದವರು ಹೇಳಲಿಲ್ಲವೇ 'ಹುಲ್ಲಾಗು ಬೆಟ್ಟದಡಿ; ಮನೆಗೆ ಮಲ್ಲಿಗೆಯಾಗು' ಎಂದು?  ಹಾಗೆ ಹುಲ್ಲಾಗುವುದು ಕೂಡ ನೆಲದ ಚೇತನ ಬನಿಯಾದಾಗಲಷ್ಟೇ ಸಾಧ್ಯ.

ಬಾಗುವುದು ಎಂದರೆ ಶರಣಾಗತಿ ಎಂದು ಅರ್ಥವಲ್ಲ. ಫಲ ತುಂಬಿದ ಹಣ್ಣಿನ ಗಿಡದ ಹಾಗೆ, ಮಹಾವೀರನ ಹಾಗೆ ನೆಲದ ಋಣಕ್ಕೆ ಕೃತಜ್ಞತೆ ಹೇಳುವುದೆಂದು ಅರ್ಥ.

Tuesday, 31 May 2011

ಇವತ್ತು ಒಂದು ಹೊಸ ಕವಿತೆ ಬರೆದಿದ್ದೇನೆ. ನಾವು ಏನನ್ನೋ ಮಾಡಬೇಕೆಂದು ಅಂದುಕೊಂಡಿರುತ್ತೇವೆ. ಆ ಕೆಲಸವನ್ನು ಮಾಡುತ್ತ ಅದರಲ್ಲೇ ಮುಳುಗಿಬಿಡುತ್ತೇವೆ. ಕೆಲವು ಕಾಲದ ನಂತರ ಹಿಂದಿರುಗಿ ನೋಡಿದರೆ ಆ ಕೆಲಸವೇ ನಮ್ಮನ್ನು ರೂಪಿಸಿಬಿಟ್ಟಿರುತ್ತದೆ. ಇದೊಂದು ಚೋದ್ಯ!


ಕೆತ್ತಲು ಹೋದೆ

ಕೆತ್ತಲು ಹೋದೆ
ಕೆತ್ತುತ್ತ ಕೆತ್ತುತ್ತ  ಏನು ಕೆತ್ತಬೇಕೆಂಬುದ ಮರೆತೆ
ಮೊದಲು ತಲೆ 
ಆಮೇಲೆ ಕಣ್ಣು ಮೂಗು ಕಿವಿ ಬಾಯಿ 
ಕುತ್ತಿಗೆ 
ಭುಜ ಹೊಟ್ಟೆ ಹೊಕ್ಕುಳ
ತೊಡೆ ಕಾಲು
ಕೊನೆಗೆ ಪಾದ 
ಗಟ್ಟಿಯಾಗಿ ನಿಲ್ಲಬೇಕು,  ಅದಕ್ಕೆ ಬೆನ್ನು
ಹೀಗೆ ಮಾಡುತ್ತ ಮಾಡುತ್ತ  ಇರುವಾಗ 
ಮೂರ್ತಿ ಕೇಳಿತು
ನೀನೇನು ಮಾಡುತ್ತಿರುವೆ?
ನಾನು ಒಂದು ಕ್ಷಣ ಸ್ತಬ್ಧ
ಅಪ್ಪನನ್ನೇ ಮಗು ಕೇಳಿದಂತೆ ಪ್ರಶ್ನೆ
ಮೂರ್ತಿ ಹೇಳಿತು
ನೀನು ಮಾಡುತ್ತಿಲ್ಲ ನನ್ನ
ನಾನು ಮೊದಲು ಇದ್ದೆ
ಈಗಲೂ ಇದ್ದೇನೆ
ನಾಳೆಯೂ ಇರುತ್ತೇನೆ
ನೀನು ಕೆತ್ತುತ್ತಿರುವೆ ನಿನ್ನನ್ನೆ
ಎಚ್ಚರ, 
ಒಂದೊಂದು ಪೆಟ್ಟನ್ನೂ ಜಾಗ್ರತೆಯಿಂದ ಹಾಕು!

Monday, 23 May 2011

ವರದಿ

    ಸಾಗರ ಹವಾಮಾನ ಮಾಹಿತಿ ಪ್ರಸಾರದ ಉದ್ಘಾಟನೆ

ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಸಾಗರ ಹವಾಮಾನ ಮಾಹಿತಿಯನ್ನು ಕಾರವಾರ ಆಕಾಶವಾಣಿ ಕೇಂದ್ರವು ಬಿತ್ತರಿಸಲು ತೊಡಗಿದೆ. ಈ ಮಾಹಿತಿಯಲ್ಲಿ ಗಾಳಿಯ ವೇಗ ಮತ್ತು ದಿಕ್ಕು, ಅಲೆಯ ಎತ್ತರ, ಉಬ್ಬರ ಇಳಿತ ಮತ್ತು ಮೀನಿನ ಲಭ್ಯತೆ ಬಗ್ಗೆ ಮಾಹಿತಿ ಇರುತ್ತದೆ. ಇದರಿಂದ ಬೆಸ್ತರಿಗೆ ಹಾಗೂ ಸಾಗರತಟದಲ್ಲಿ ವಾಸಿಸುವವರಿಗೆ ತುಂಬ ಅನುಕೂಲವಾಗಲಿದೆ. ಸಾಗರದಲ್ಲಿ ಭೂಮಿಯಂತೆ ತುಂಬ ಸಂಪನ್ಮೂಲ ಇರುವುದರಿಂದ ಬೆಸ್ತರು ತಮ್ಮ ಶ್ರಮ, ಸಮಯ ಮತ್ತು ಹಣವನ್ನು ಸಾರ್ಥಕವಾಗಿ ಹೂಡಬಹುದಾಗಿದ್ದು, ಈ ಮಾಹಿತಿಯಿಂದಾಗಿ ಅಧಿಕ ಮೀನುಬೆಳೆಯನ್ನು ಪಡೆಯಬಹುದಾಗಿದೆ. ಸೊತ್ತು ಮತ್ತು ಜೀವರಕ್ಷಣೆಗೂ ಅನುಕೂಲವಾಗಲಿದೆ.


ಪ್ರಸಾರ ಕಾರ್ಯಕ್ರಮವನ್ನು ಕಾರವಾರ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಡಾ. ವಸಂತಕುಮಾರ ಪೆರ್ಲ ಅವರು ದಿನಾಂಕ 20-5-2011 ರಂದು ಕಾರವಾರದಲ್ಲಿ  ವಿಧ್ಯುಕ್ತವಾಗಿ ಉದ್ಘಾಟಿಸಿದರು. ಚಿತ್ರದಲ್ಲಿ ಮೀನುಗಾರರ ಸಂಘದ ಅಧ್ಯಕ್ಷ ಪಿ.ಎಂ. ತಾಂಡೇಲ, ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ವಿ.ಎನ್. ನಾಯಕ್, ಸಾಗರ ಮಾಹಿತಿ ಸೇವಾ ಕೇಂದ್ರದ ಮುಖ್ಯಸ್ಥ ಡಾ. ಬಾಲಕೃಷ್ಣನ್ ನಾಯರ್ ಮತ್ತು ಮುಖ್ಯ ಸಂಶೋಧಕ ಡಾ.ಯು.ಜಿ. ಭಟ್ ಇದ್ದಾರೆ.

Wednesday, 18 May 2011

ಪ್ರಕೃತಿಯ ಮಡಿಲಲ್ಲಿ ಜ್ಯೋತಿಷ್ಯ ಸಂಶೋಧನೆ

ಸಕಲೇಶಪುರ ಬಳಿ ಮಾರನಹಳ್ಳಿ ಎಂಬಲ್ಲಿ ಪಶ್ಚಿಮ ಘಟ್ಟದ ಪ್ರಕೃತಿಯ ಮಡಿಲೊಳಗೆ ಸುಬ್ರಹ್ಮಣ್ಯ ಕುಳಮರ್ವ ಎಂಬವರು ಜ್ಯೋತಿಷ್ಯದ ಅಭ್ಯಾಸ ಮತ್ತು  ಸಂಶೋಧನಾ ಕೇಂದ್ರ ಒಂದನ್ನು ತೆರೆದಿದ್ದಾರೆ. ಸುಮಾರು ಇಪ್ಪತ್ತೈದು ಎಕರೆ ಪ್ರದೇಶದ ಈ ಎಸ್ಟೇಟ್ ನಲ್ಲಿ  ಸಮೃದ್ಧವಾದ ಕಾಡಿನೊಳಗೆ ಕಾಫಿ, ಅಡಿಕೆ, ಬಾಳೆ, ತೆಂಗು, ಏಲಕ್ಕಿ ಮೊದಲಾದ ಬೆಳೆಗಳಿವೆ. ಎರಡು ವರ್ಷಗಳ ಹಿಂದೆ ಪಂಚಾಯತನ ದೇವಸ್ಥಾನವನ್ನು ಕಟ್ಟಿಸಿ ಧಾರ್ಮಿಕ ಕೇಂದ್ರವೂ ಆಗಿ ಬೆಳೆಯುತ್ತಿದೆ; ಜೊತೆಗೆ ವರ್ಷಕ್ಕೊಮ್ಮೆ ಜಾತ್ರೆ. ಜಾತ್ರೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. 




ಸುಬ್ರಹ್ಮಣ್ಯ ಅವರಿಗೆ ಜ್ಯೋತಿಷ್ಯವು ವಂಶಪಾರಂಪರ್ಯವಾಗಿ ಒದಗಿ ಬಂದ ವಿದ್ಯೆ. ಬೆಂಗಳೂರಿನಲ್ಲಿ ಸರಕಾರಿ ಉದ್ಯೋಗದಲ್ಲಿರುವ ಅವರು ಸದ್ಯ ರಜಾದಿನ ಮತ್ತು ಬಿಡುವಿನ ಸಮಯದಲ್ಲಿ ಜ್ಯೋತಿಷ್ಯದ ಕೆಲಸ ಮಾಡುತ್ತಾರೆ. ನಿವೃತ್ತಿಯ ನಂತರ ಪೂರ್ಣಾವಧಿ ಜ್ಯೋತಿಷ್ಯದಲ್ಲಿ ನೆಲೆನಿಲ್ಲುವ ಯೋಚನೆ ಅವರದು. 




ಮಾರನಹಳ್ಳಿ ಕೇಂದ್ರವನ್ನು 'ತಪೋವನ ಎಸ್ಟೇಟ್-ಪಂಚತೀರ್ಥ ಮಠ' ಎಂದು ಕರೆದಿದ್ದಾರೆ. ಅತಿಥಿಗಳಿಗಾಗಿ ಅಲ್ಲಿ ವಾಸ್ತವ್ಯದ ಏರ್ಪಾಡು ಇದೆ. ಅಂದರೆ ಸುಮಾರು ಹದಿನೈದರಿಂದ ಇಪ್ಪತ್ತು ಮಂದಿ ಅಲ್ಲಿ ವಾಸ್ತವ್ಯ ಮಾಡಬಹುದು. ಕುಟುಂಬವಾದರೆ ನಾಲ್ಕು ಕುಟುಂಬಗಳಿಗೆ ವಸತಿಯ ಏರ್ಪಾಡು ಇದೆ. ನಾಲ್ಕು ದಿನ ಅಲ್ಲಿ ಹಾಯಾಗಿರಬಹುದು. ಮುಂದೆ ಈ ಸ್ಥಳವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಯೋಜನೆ ಅವರಿಗಿದೆ. ಅಲ್ಲಿ ಕೆಲವು ದಿನ ಉಳಿದು ಧ್ಯಾನ ಮಾಡಬಹುದು; ಹೋಮ-ಹವನ ಮಾಡಿಸಬಹುದು, ಪೂಜೆ ಮಾಡಿಸಬಹುದು. ಅಥವಾ ಪ್ರಕೃತಿಯ ಮಧ್ಯೆ ಹಾಯಾಗಿರಬಹುದು


ಎಸ್ಟೇಟ್ ನೊಳಗೆ ಹರಿಯುವ ಕಿರುತೊರೆ ಅಲ್ಲಿ ಪಂಚತೀರ್ಥಗಳನ್ನು (ಐದು ಕೆರೆಗಳನ್ನು) ನಿರ್ಮಿಸಿದ್ದು ನೋಡಲು ಸುಂದರವಾಗಿದೆ. 

Sunday, 15 May 2011

ಮುಂಡಾಸು ಮೂವತ್ತು ಮೊಳ!

ಈ ಟಿಪ್ಪಣಿ ಬರೆದು ಬಹುಶಃ ಹದಿನೈದು ವರ್ಷ ಮೇಲಾಗಿದೆ. ಮೊನ್ನೆ ಒಂದು ಪುಸ್ತಕ ಹುಡುಕುತ್ತಿದ್ದಾಗ  ಯಾವುದೋ ಪುಸ್ತಕದ ಎಡೆಯಿಂದ ಈ ಟಿಪ್ಪಣಿ ಹಾಳೆ ಕೆಳಗೆ ಬಿತ್ತು. ಸಣ್ಣ ವಿಷಯ ಎಂದು ಎಲ್ಲೂ  ಉಪಯೋಗಿಸಿರಲಿಲ್ಲ. ನನ್ನ ಬ್ಲಾಗ್ ಓದುಗರಿಗಾಗಿ ಈಗ ಇಲ್ಲಿ ನೀಡುತ್ತಿದ್ದೇನೆ:

 ರಾಜಸ್ತಾನದ ಜೈಪುರಕ್ಕೆ ಒಮ್ಮೆ ಒಂದು ವಾರದ ತರಬೇತಿ ಕಾರ್ಯಾಗಾರಕ್ಕೆ ಹೋಗಿದ್ದಾಗ ಜೈಸಲ್ಮೇರ್, ಅಂಬೇರ್ ಮೊದಲಾದೆಡೆ ಹೋಗಿದ್ದೆ. ಆಗ ಅಲ್ಲಿ ಬೇರೆ ಬೇರೆ ರೀತಿಯ ಮುಂಡಾಸು ಧರಿಸಿದವರನ್ನು ನೋಡಿ, ಕುತೂಹಲಗೊಂಡು ತಿಳಿದವರೊಬ್ಬರನ್ನು ವಿಚಾರಿಸಿದೆ. ಆಗ ಅವರು ನೀಡಿದ ಮಾಹಿತಿ ಆಶ್ಚರ್ಯ ಹುಟ್ಟಿಸಿತು. 

ರಾಜಸ್ತಾನದಲ್ಲಿ ಹನ್ನೆರಡು ವಿಧದ ಮುಂಡಾಸುಗಳಿವೆಯಂತೆ. ಅವುಗಳ ಹೆಸರುಗಳೆಂದರೆ- ಜಲೋರಿ, ಭಟ್ಟಿ, ಶಾಹಿ, ಪಗ್ಡಿ, ಪಾಗ್, ಕುರಿ ಕಾಯುವವರ ಮುಂಡಾಸು, ಅಲ್ವಾರ್, ದರ್ಬಾರಿ ಪಾಗ್, ಬೇಟೆಯಾಡುವವರ ಮುಂಡಾಸು, ಸಿರೋಹಿ, ಜೈಪುರಿ, ಜೋಧ್ಪುರಿ ಸಾಫಾ. 

ಉತ್ತರ ಭಾರತದಲ್ಲಿ ಇನ್ನೂ ಮುಂಡಾಸು ಬಳಕೆ ಮುಂದುವರಿದಿದೆ. ಅಲ್ಲಿ ಬಿಸಿಲು ಮತ್ತು ಚಳಿ ಎರಡೂ ಅಧಿಕ. ಅವುಗಳಿಂದ ರಕ್ಷಣೆ ಪಡೆಯುವುದು ಒಂದು ಕಾರಣವಾದರೆ, ಬಿರುಸುಗಾಳಿಗೆ ತೂರಿ ಬರುವ ಉಸುಕಿನಿಂದ ತಪ್ಪಿಸಿಕೊಳ್ಳುವುದು ಮುಂಡಾಸು ಧಾರಣೆಗೆ ಇನ್ನೊಂದು ಕಾರಣ. 

ಅವರವರ ಅಂತಸ್ತು ಮತ್ತು ಘನತೆಗೆ ತಕ್ಕಂತೆ ಮುಂಡಾಸಿನ ಉದ್ದ ಬಣ್ಣ ಮತ್ತು ಗಾತ್ರ ವ್ಯತ್ಯಾಸವಾಗುತ್ತದೆ. ಮುಂಡಾಸಿನ ಬಟ್ಟೆಯ ಉದ್ದ ಒಂಬತ್ತು ಮೀಟರಿನಿಂದ ಆರಂಭವಾಗಿ ಹದಿನೆಂಟು ಮೀಟರ್ ವರೆಗೆ ಇರುತ್ತದಂತೆ.  ಹೆಚ್ಚಾಗಿ ಕೇಸರಿ ಬಣ್ಣ ಇರುತ್ತದೆ. ಅಂತಸ್ತಿಗೆ ತಕ್ಕಂತೆ ಬಿಳಿ, ಕಡುನೀಲಿ, ಖಾಕಿ, ಕಡು ಕೆಂಪು, ಕಪ್ಪು, ಹೀಗೆ ಬೇರೆ ಬೇರೆ ಬಣ್ಣದವೂ ಇರುತ್ತವೆ. 

ಮುಂಡಾಸು ಗೌರವದ ಸಂಕೇತವಾಗಿ ಶಿರದಲ್ಲಿರುತ್ತದೆ. ಬೇರೆಯವರು ಅದನ್ನು ಕಿತ್ತೊಗೆದರೆ ಅವಮಾನವೆಂದು ಭಾವಿಸಲಾಗುತ್ತಿತ್ತು. ವಿರೋಧಿಯ ಪದತಲದಲ್ಲಿಟ್ಟರೆ ಶರಣಾಗತಿಯ ಸೂಚನೆ, ಹಿರಿಯರ-ವಿದ್ವಾಂಸರ ಕಾಲಬುಡದಲ್ಲಿಟ್ಟಾಗ ಗೌರವದ ಸಂಕೇತ, ಕೈ ಬದಲಾಯಿಸಿಕೊಂಡಾಗ ಸೋದರತ್ವದ ಭಾವ ಎಂದು ಭಾವಿಸಲಾಗುತ್ತಿತ್ತು. ಮಹಿಳೆಯೊಬ್ಬಳ ಕೈಗೆ ಮುಂಡಾಸು ಒಯ್ದು ಕೊಟ್ಟರೆ ಆಕೆಯ ಗಂಡ ತೀರಿಕೊಂಡಿದ್ದಾನೆ ಎಂದು ಅರ್ಥೈಸಿಕೊಳ್ಳಲಾಗುತ್ತಿತ್ತು. 

ಮುಂಡಾಸಿಗೆ ಸಂಬಂಧಿಸಿದಂತೆ ನಮ್ಮಲ್ಲಿ  ಕೆಲವು ಗಾದೆಗಳಿವೆ. "ಊಟ ಆಯಿತೇ ಎಂದು ಕೇಳಿದರೆ ಮುಂಡಾಸು ಮೂವತ್ತು ಮೊಳ" ಎಂದು ಒಬ್ಬಾತ ಉತ್ತರ ಕೊಟ್ಟನಂತೆ! ಪ್ರಶ್ನೆಯೊಂದಕ್ಕೆ ಅಸಂಬದ್ಧ ಉತ್ತರ ಕೊಟ್ಟರೆ ಈ ಗಾದೆ ಮಾತನ್ನು ಹೇಳಲಾಗುತ್ತಿತ್ತು. ಹುಡುಗಿಯ ಮದುವೆ ವಿಳಂಬವಾದರೆ "ಮುಂಡಾಸಿನವ ಬರುವುದಿಲ್ಲ; ಮುಟ್ಟಾಳೆಯವನಿಗೆ ಕೊಡುವುದಿಲ್ಲ". (ಶ್ರೀಮಂತ ವರ ಬರುವುದಿಲ್ಲ; ಬಡವನಿಗೆ ಕೊಡುವುದಿಲ್ಲ) ಎಂಬ ಗಾದೆ ಹೇಳುತ್ತಾರೆ.

ನಮಗೆ ಗೊತ್ತಿದ್ದುದು ಮೂವತ್ತು ಮೊಳದ ಮುಂಡಾಸು ಮಾತ್ರ. ಮೂವತ್ತು ಮೊಳ ಎಂದರೆ ಹೆಚ್ಚು ಕಡಿಮೆ ಹತ್ತು ಮೀಟರ್ ಉದ್ದ. ಆದರೆ ರಾಜಸ್ತಾನದವರ ಹದಿನೆಂಟು ಮೀಟರ್ ಉದ್ದದ ಮುಂಡಾಸಿನ ಮುಂದೆ ಈ ಹತ್ತು ಮೀಟರ್ ಉದ್ದದ ಮುಂಡಾಸು ಏನೇನೂ ಅಲ್ಲ. 

ಹಿಂದೆ ಮುಂಡಾಸು ಬಳಕೆ ದಕ್ಷಿಣ ಭಾರತದಲ್ಲಿಯೂ ಬಳಕೆಯಲ್ಲಿತ್ತು. ನಾನು ಚಿಕ್ಕವನಾಗಿದ್ದಾಗ ನನ್ನ ತಂದೆಯವರು ಮುಂಡಾಸು ಧರಿಸುತ್ತಿದ್ದುದನ್ನು ನಾನು ನೋಡಿದ್ದೇನೆ. ಹೊರಗೆ ಹೋಗುವಾಗ ಬಿಳಿಬಟ್ಟೆಯ ಮುಂಡಾಸನ್ನು ಒಪ್ಪ ಓರಣವಾಗಿ ತಲೆಗೆ ಸುತ್ತಿಕೊಳ್ಳುತ್ತಿದ್ದರು. ಮುಂಡಾಸು  ಕೇವಲ ತಲೆಯ ರಕ್ಷಣೆಗಾಗಿ ಅಲ್ಲ, ಅದರಿಂದ ಘನತೆಯೂ ಹೆಚ್ಚಾಗುತ್ತಿತ್ತು. 

ಈಗ ಮುಂಡಾಸು ಬಿಡಿ. ಇತ್ತೀಚೆಗೆ ಪಂಚೆ ತೊಡುವವರ ಸಂಖ್ಯೆಯೂ ಗಣನೀಯವಾಗಿ ಕುಸಿಯುತ್ತಿದೆ. ದಿರಿಸುಗಳ ಮೂಲಕವೇ ಇರಬಹುದು, ಜನಜೀವನ ಮತ್ತು ಸಂಸ್ಕೃತಿಯೊಂದು ಕಣ್ಣ ಮುಂದೆಯೇ ಹೇಗೆ ಬದಲಾಗುತ್ತಿದೆ, ಅಲ್ಲವೇ?

Friday, 6 May 2011

ಕನ್ನಡಕ್ಕೆ ಎಚ್ಚರಿಕೆಯ ಗಂಟೆ

ಮುಂದಿನ ಐವತ್ತು ವರ್ಷಗಳ ಅವಧಿಯಲ್ಲಿ ಕಣ್ಮರೆಯಾಗಲಿರುವ ಸಣ್ಣ ಭಾಷೆಗಳಲ್ಲಿ ತುಳು ಕೂಡ ಒಂದು ಎಂದು ಈಗ್ಗೆ ಎರಡು ವರ್ಷಗಳ ಹಿಂದೆ ಬಂದ ಯುನೆಸ್ಕೋದ ಅಧ್ಯಯನ ವರದಿಯೊಂದು ಎಚ್ಚರಿಕೆಯ ಗಂಟೆ ಬಾರಿಸಿತ್ತು. ಇದರಿಂದ ತುಳುವರಿಗೆ ಮತ್ತು ತುಳು ಭಾಷೆಯ ಬಗ್ಗೆ ಪ್ರೀತಿ ಹೊಂದಿದವರಿಗೆ ಗಾಬರಿ ಆಯಿತು. 

'ಊರಿಗೆ ಬಂದವಳು ನೀರಿಗೆ ಬಾರದಿದ್ದಾಳೆಯೇ?' ಎಂಬ ಗಾದೆಯಂತೆ, ಈ ಭವಿಷ್ಯವಾಣಿಯಿಂದ ನಿಜವಾಗಿ ಎಚ್ಚರಗೊಳ್ಳಬೇಕಾದವರು ಕನ್ನಡಿಗರು. ತುಳು, ಕನ್ನಡದ ಜನಪದವೇ ತಾನೆ? ತುಳು ಸೊರಗುವುದೆಂದರೆ ಕನ್ನಡವೂ ಸೊರಗಿದ ಹಾಗೆಯೇ. ತುಳುವಿನ ಜೊತೆಗೆ ಕನ್ನಡವೂ ನಿಧಾನವಾಗಿ ಸೊರಗುತ್ತಿರುವ ಸೂಚನೆ ಕಣ್ಣಮುಂದೆಯೇ ಸಿಗುತ್ತಿದೆ. 

ಇವತ್ತು ಪೇಟೆ-ಪಟ್ಟಣಗಳ ಮಕ್ಕಳಿಗೆ ಕನ್ನಡದಲ್ಲಿ ಸರಿಯಾಗಿ ವ್ಯವಹರಿಸಲು ಬರುವುದಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ, ಕಲಿಯುತ್ತಿರುವ ಈ ಮಕ್ಕಳಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ. ಮಾತಾಡುವ ಕನ್ನಡದಲ್ಲಿ ಅರ್ಧ ಭಾಗ ಇಂಗ್ಲಿಷ್ ತುಂಬಿ ಹೋಗಿದೆ. 

ನಾವು ಭಾಷೆ ಮತ್ತು ಕಲಿಕಾ ಮಾಧ್ಯಮಗಳ ನಡುವೆ ಸ್ಪಷ್ಟವಾದ ನೀತಿಯೊಂದನ್ನು ಕಲ್ಪಿಸದೇ ಹೋದರೆ ಮುಂದಿನ ತಲೆಮಾರುಗಳಲ್ಲಿ ಕನ್ನಡ ಎಂಬ ಸಂಪದ್ಭರಿತ ಭಾಷೆಯೊಂದನ್ನು ಕಳೆದುಕೊಳ್ಳಲಿದ್ದೇವೆ. 

ಇಂಗ್ಲಿಷ್ ಒಂದು ಭಾಷೆಯಾಗಿ ಇರಲಿ; ಕಲಿಕಾ ಮಾಧ್ಯಮವಾಗಿ ಬೇಡ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಒಂದನೇ ತರಗತಿಯಿಂದಲೇ ಕಲಿಸಲಿ. ಆದರೆ ಕಲಿಕಾಮಾಧ್ಯಮವಾಗಿ ಪ್ರೌಢಶಿಕ್ಷಣದ ವರೆಗೆ ಕನ್ನಡವೇ ಇರಲಿ. ಇದರಿಂದ ಮಕ್ಕಳಿಗೆ ತಮ್ಮ ಮಾತೃಭಾಷೆಯ ಬಗ್ಗೆ ಪ್ರೀತಿಯೂ ಅಭಿಮಾನವೂ ಮೂಡುತ್ತದೆ ಮತ್ತು ನಮ್ಮ ಪರಂಪರೆಯ ಸಾತತ್ಯ ಮುಂದುವರಿಯಲು ಸಾಧ್ಯವಾಗುತ್ತದೆ. ಬಹುದೊಡ್ಡ ಜ್ಙಾನನಿಧಿ ಅಡಗಿರುವ ಭಾಷೆಯೊಂದು  ಮುಂದುವರಿದುಕೊಂಡು ಹೋಗುತ್ತದೆ. 

ಇವತ್ತಿನ ಪ್ರಮುಖ ಸಂವಹನ ಮಾಧ್ಯಮವಾಗಿರುವ ಮೊಬೈಲ್ ಮತ್ತು ಕಂಪ್ಯೂಟರ್ ನಲ್ಲಿ ಕನ್ನಡದ ಬಳಕೆ ತುಂಬ ಹೆಚ್ಚಾಗಬೇಕು. ಇರುವ ತಾಂತ್ರಿಕತೆ ಸುಲಭವಾಗಿಲ್ಲ; ಕ್ಲಿಷ್ಟವಾಗಿದೆ. ಮುಂದಿನ ತಲೆಮಾರಿನವರ ಪ್ರಮುಖ ಮಾಧ್ಯಮವಾಗಲಿರುವ ಕಂಪ್ಯೂಟರ್ ಅನ್ನು ಕನ್ನಡಮಯ ಮಾಡದಿದ್ದರೆ ಕನ್ನಡಕ್ಕೆ ಅಪಾಯ ಕಾದಿದೆ ಎಂದೇ ಅರ್ಥ. ಇವತ್ತು ಸಾಫ್ಟ್ ವೇರ್ ತಂತ್ರಜ್ಙಾನ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕಂಪ್ಯೂಟರ್ ಮತ್ತು ಮೊಬೈಲ್ ನಲ್ಲಿ ಕನ್ನಡವನ್ನು ಸುಲಭವಾಗಿ ಬಳಸಲು ಬೇಕಾದ ತಾಂತ್ರಿಕತೆಯ ಕುರಿತು ತುರ್ತಾಗಿ ಗಮನ ಹರಿಸಬೇಕಾಗಿದೆ. 

ಹಳಗನ್ನಡವನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳುವ ಮತ್ತು ಅದರೊಂದಿಗೆ ಸಾವಯವ ಸಂಬಂಧ ಹೊಂದಿರುವವರ ಕಾಲ ಕಳೆದ ತಲೆಮಾರಿನೊಂದಿಗೆ ಆಗಿಹೋಯಿತು. ಈಗ ತೀರಾ ಆಸಕ್ತಿ ಇರುವ ಕೆಲವರು ಗ್ರಂಥಾಲಯದಲ್ಲಿ ಕುಳಿತು ಸಂಶೋಧನೆ ಮಾಡುವ ಹಂತಕ್ಕೆ ಹಳಗನ್ನಡ ಬಂದು ತಲಪಿದೆ.  ನಮ್ಮ ಪಾಠ-ಪಠ್ಯಗಳಿಂದ ಹಳಗನ್ನಡ ಕಾವ್ಯ ಭಾಗಗಳು ಮಾಯವಾಗಿ ಎಷ್ಟೋ ವರ್ಷ ಆಯಿತು. ವಿಶ್ವ ವಿದ್ಯಾಲಯಗಳಲ್ಲಿ ಹಳಗನ್ನಡ ಪಾಠ ಮಾಡುವ ಅಧ್ಯಾಪಕರೇ ಇಲ್ಲವಂತೆ. ಯಾವುದನ್ನು ಓದುವವರು ಬಳಸುವವರು ಇಲ್ಲವೋ ಆಗ ಅದಕ್ಕೆ ಸಂಶೋಧನೆಯ ದೃಷ್ಟಿಯಿಂದ 'ಶಾಸ್ತ್ರೀಯ ಭಾಷೆ'ಯ ಪಟ್ಟ ಬರುತ್ತದೆ! 

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಎಷ್ಟೊಂದು ಅರ್ಹವಾಗಿ ಸಿಕ್ಕಿದೆ, ಅಲ್ಲವೇ?

ಹಳಗನ್ನಡಕ್ಕೆ ಈಗಲೇ ಈ ಸ್ಥಿತಿಯಾದರೆ ಮುಂದಿನ ಮೂವತ್ತು ವರ್ಷಗಳಲ್ಲಿ ಅದು ಪ್ರಯೋಗಾಲಯದಲ್ಲಿ ಕುಳಿತುಕೊಳ್ಳುವುದು ಖಂಡಿತ. ಇನ್ನು ಈ ಆಧುನಿಕ ಕನ್ನಡದ ಸ್ಥಿತಿ ಹೇಗಿದ್ದೀತು? ಊಹಿಸಲೂ ಸಾಧ್ಯವಿಲ್ಲ. 

ಕನ್ನಡದ ಉದ್ಧಾರವಾಗಬೇಕಾದರೆ ಪ್ರತಿಯೊಂದು ಕುಟುಂಬವೂ ಮನೆಯಲ್ಲಿ ಮಕ್ಕಳಿಗೆ ಕನ್ನಡಪ್ರೀತಿಯನ್ನು ಕಲಿಸುವ ಆವಶ್ಯಕತೆ ಇದೆ. ಇದೊಂದು ಸಾಮೂಹಿಕ ಕೆಲಸ. ಕನ್ನಡ ಬಲ್ಲ ಕೆಲವರು ಸಾರ್ವಜನಿಕವಾಗಿ ವೇದಿಕೆಯಿಂದ 'ನನಗೆ ಸರಿಯಾಗಿ ಕನ್ನಡ ಮಾತಾಡಲು ಬರುವುದಿಲ್ಲ. ಇಂಗ್ಲಿಷ್ ನಲ್ಲಿ ಮಾತಾಡುತ್ತೇನೆ' ಎಂದು ಅರ್ಧಂಬರ್ಧ ಇಂಗ್ಲಿಷ್ ನಲ್ಲಿ ಮಾತಾಡುವುದನ್ನು ಕೇಳಿದ್ದೇನೆ! ಮಾತೃಭಾಷೆಯಲ್ಲಿ ಮತ್ತು ತಾನು ಬದುಕಿ ಬಾಳುತ್ತಿರುವ ಪರಿಸರದ ಭಾಷೆಯಲ್ಲಿ ಒಬ್ಬಮನುಷ್ಯನಿಗೆ ಮಾತಾಡಲಾಗದ ಇಂತಹ ಸ್ಥಿತಿ ಬರಬಾರದು. ಸಾರ್ವಜನಿಕವಾಗಿ ಕನ್ನಡವನ್ನು ಹೀಗೆ ನಮ್ಮ ಜನರೇ ಹೀನೈಸಿದರೆ ಗತಿ ಏನು?

ಕನ್ನಡವನ್ನು ಉಳಿಸುವುದು ಕೇವಲ ಕವಿ ಸಾಹಿತಿಗಳ ಕೆಲಸವಲ್ಲ. ಅದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಅನ್ನ-ನೀರಿನಷ್ಟೇ ಕನ್ನಡದ ದಾಹವೂ ಪ್ರತಿಯೊಬ್ಬನ ಆದ್ಯತೆ ಆಗಬೇಕು. ಇಲ್ಲದಿದ್ದರೆ ನಾಳೆ ಇನ್ನೊಬ್ಬರ ಮನೆಮುಂದೆ ಹೋಗಿ ಅಂಗಲಾಚುವ ದಯನೀಯ ಪರಿಸ್ಥಿತಿ ಬಂದೀತು.

***

Monday, 2 May 2011

ಓದುಗರಿಗೆ ನಮಸ್ಕಾರ. 

ಇವತ್ತು ನನ್ನ ಬ್ಲಾಗ್ ಓದುಗರಿಗಾಗಿ ಕವನ ಒಂದನ್ನು ನೀಡುತ್ತಿದ್ದೇನೆ. ಆಧುನಿಕ ಕಾಲದಲ್ಲಿ ಸಂಘರ್ಷ ಇರುವ ಯಾವ ರಾಷ್ಟ್ರದಲ್ಲೇ ಆಗಲಿ ಭಯೋತ್ಪಾದನೆ ಮಾಮೂಲಿಯಾಗಿಬಿಟ್ಟಿದೆ. ಭಯೋತ್ಪಾದನೆ ಅಂದ ಮೇಲೆ ಬಾಂಬ್ ಸ್ಫೋಟ ಇದ್ದದ್ದೇ. ಯಾವ ಸಮಯದಲ್ಲಿ ಎಲ್ಲಿ ಬಾಂಬ್ ಸ್ಫೋಟಗೊಂಡು ಯಾವ ಅನಾಹುತ ಸಂಭವಿಸಬಹುದು ಎಂಬುದನ್ನು ಹೇಳಬರುವಂತಿಲ್ಲ. ಇಲ್ಲಿ ಮಾರ್ಕೆಟ್ ನಲ್ಲಿ ಬಾಂಬ್ ಸ್ಫೋಟವಾಗಿದೆ. ಅಲ್ಲಿ ಆಗ ನಾನೇ ಇದ್ದೆ! ಏನೇನು ಆಯಿತು ಎಂಬುದನ್ನು ಓದಿ!

ಮಾರ್ಕೆಟ್ ನಲ್ಲಿ ಬಾಂಬ್ ಸ್ಫೋಟ

ಮಾರ್ಕೆಟ್ ತುಂಬ ಗಿಜಿಗಿಜಿ ಜನ 
ಇಕ್ಕಟ್ಟು, ಒತ್ತರಿಸಿದಂತೆ ಸಾಮಾನು ಸರಂಜಾಮು
ಆ ಮಹಿಳೆಯ ಸೊಂಟದಲ್ಲಿ ಪುಟ್ಟ
ವ್ಯಾನಿಟಿ ಬ್ಯಾಗು, ತರಕಾರಿ ಚೀಲ
ಕ್ಯಾರಿ ಬ್ಯಾಗ್ ತುಂಬ ಸ್ನೋ ಪೌಡರ್ ಸೋಪು ಇತ್ಯಾದಿ
ಪುಟ್ಟ ಮಗುವಿನ ಕೈಯಲ್ಲಿ ಆಟಿಕೆಯ ಚೀಲ 
ಚಾಕೋಲೆಟ್, ಚೂಯಿಂಗ್ ಗಮ್
ಕಾಯಿನ್ ಬಾಕ್ಸ್ ಬಳಿ ಕಿಲಕಿಲ ಜೋಡಿ 
ಸೊಂಟವ ಬಳಸಿ ಆರಾಮ ನಡೆಯುವ 
ಅಸಡ್ಡಾಳ ಗಂಡ, ಬಳಕುವುದನ್ನೇ ನೋಡುತ್ತ
ಕಬ್ಬು ಸೀಪುತ್ತಿರುವ ಪಡ್ಡೆ ಹುಡುಗರ ಅಡ್ಡೆ. 

ಸಂಜೆ ಐದರ ಸಮಯ 
ಧಾವಂತ ಗಡಿಬಿಡಿ
ಮನೆಗೆ ತೆರಳುವ ಮುನ್ನ ಹಿರಿದುಕೊಳ್ಳುವ ತುರುಸು
ಕಚೇರಿ ಬಿಟ್ಟವರು
ಕೆಲಸ ಮುಗಿಸಿದವರು
ಅಂಗಡಿ ಮುಂಗಟ್ಟು ಫಿಶ್ ಮಾರ್ಕೆಟ್
ಮಟನ್ ಸ್ಟಾಲ್ ಟೀ ಶಾಪ್
ಗುಲಾಬಿ ಹೂವಿನ ಅಂಗಡಿ
ಜನ...ಜನ...ಜನ...
ರಿಂಗಣಿಸುವ ಮೊಬೈಲ್ ಫೋನ್
ವಾಹನಗಳ ಹಾರ್ನ್ 
ಯಾರೋ ಅಡ್ಡ ದಾಟಿದರು 
ಸೀಟಿ ಊದುತ್ತ ಟ್ರಾಫಿಕ್ ಪೊಲೀಸ್...

ಇದ್ದಕ್ಕಿದ್ದಂತೆ ದೊಡ್ಡದೊಂದು ಶಬ್ದ
ಏನದು? ಪಟಾಕಿಯೊ, ಬಾಂಬೊ?
ಕಣ್ಣೆದುರೇ ಬೆಂಕಿಯ ಗೋಲ
ಚೂರು ಚೂರಾಗಿ ಉರಿದು ಹೋದ ಕಾರು
ಛಿದ್ರವಾದ ಬಸ್ಸು
ತುಂಡುತುಂಡಾದ ರುಂಡಮುಂಡ ಕೈಕಾಲು
ರಕ್ತದೋಕುಳಿ
ಅಯ್ಯೋ! ಬೊಬ್ಬೆ ಚೀರಾಟ
ಆಕ್ರಂದನ ಆರ್ತನಾದ  
ದಿಕ್ಕೆಟ್ಟು ಓಡುವ ರಕ್ತಸಿಕ್ತ ಜನ 

ಅಲ್ಲೇ ಕುಸಿದು ಕುಳಿತೆ
ಹಾರಿ ಬಂದು ಬಿದ್ದ ಒಂದು ಕೆಂಪು ಗುಲಾಬಿ ಹೂ
ನನ್ನ ಕಾಲ ಬುಡದಲ್ಲಿತ್ತು
ಹಾಗೇ ಕೈಗೆತ್ತಿಕೊಂಡೆ.

~*~

Sunday, 1 May 2011

ಮೌಲ್ಯಗಳ ಬದಲಾವಣೆ

ಸಮಾಜದಲ್ಲಿ ಕಾಲಕಾಲಕ್ಕೆ ಮೌಲ್ಯಗಳು ಬದಲಾಗುವುದು ಕುತೂಹಲದ ವಿಷಯ. ಹಿಂದೆ ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲಿ 'ವೀರ' ಎಂಬುದು ಒಂದು ಮೌಲ್ಯವಾಗಿತ್ತು. ಒಬ್ಬ ಯೋಧ ಯುದ್ಧಭೂಮಿಯಿಂದ ಓಡಿಬರುವುದು ಆತ್ಮಹತ್ಯೆಗೆ ಸಮಾನವಾಗಿತ್ತು; ಎಲ್ಲರೂ ಅವನನ್ನು ಹೀನೈಸುತ್ತಿದ್ದರು. ಆತ ಯುದ್ಧದಲ್ಲಿ ಗೆಲ್ಲಬೇಕಾಗಿತ್ತು ಇಲ್ಲವೇ ಯುದ್ಧ ಮಾಡುತ್ತ ಮಾಡುತ್ತ ವೀರಮರಣ ಹೊಂದಬೇಕಾಗಿತ್ತು. ರಾಜನಿಗೋಸ್ಕರ ಪ್ರಾಣಾರ್ಪಣೆ ಮಾಡುವ 'ಗರುಡ' ಎಂಬ ನಂಬಿಕಸ್ತ ಬಂಟರ ಒಂದು ಪಡೆಯೇ ಆಗ ಇರುತ್ತಿತ್ತು.


ಆದರೆ ಇಂದಿನದನ್ನು 'ಭೀರುಯುಗ' ಎಂದು ಕರೆಯಬಹುದು. ನಾಗರಿಕತೆ ಮುಂದುವರಿದಂತೆ ಶಿಕ್ಷಣ-ವ್ಯಾಪಾರ-ವಾಣಿಜ್ಯ ಮೇಲುಗೈ ಸಾಧಿಸಿದೆ. ವೀರತೆಯ ಲಕ್ಷಣಗಳಾದ ಧೀರತೆ, ಭವ್ಯತೆ, ನೇರತೆಗಳ ಬದಲು ಜನರು ನಾಜೂಕಯ್ಯರೂ ಮತ್ತು ಇದರ ಲಕ್ಷಣಗಳಾದ ಹುಸಿನಗು ಮತ್ತು  ತೋರಿಕೆಯ  ನಯವಿನಯ ಸಂಪನ್ನರೂ ಆಗಿದ್ದಾರೆ! ಸುಳ್ಳು, ಕಪಟ, ಮೋಸ, ವಂಚನೆ, ತಟವಟಗಳು ವ್ಯಕ್ತಿತ್ವದಲ್ಲಿ ತುಂಬಿ ಹಿಂಸೆಯೆಂಬುದು ದೈಹಿಕದ ಬದಲು ಮಾನಸಿಕವಾಗಿ ಪರಿವರ್ತನೆಯಾಗಿದೆ. ಬೇರೆಯವರ ಕಾಲೆಳೆಯುವುದು ಹೇಗೆ ಎಂಬುದರ ಕಡೆಗೇ ಲಕ್ಷ್ಯ ಇರುತ್ತದೆ. ಚುನಾವಣೆ ಎಂಬುದು ಮಾನಸಿಕ ಯುದ್ಧವಲ್ಲದೆ ಇನ್ನೇನು? 'ಬಾಯಲ್ಲಿ ಮಂತ್ರ ಕಂಕುಳಲ್ಲಿ ದೊಣ್ಣೆ' ಎಂಬಂತೆ ಇತರರಿಗೆ ಮಾನಸಿಕ ಹಿಂಸೆ ನೀಡುವ ಕಲೆಯನ್ನು ಆಧುನಿಕ ನಾಗರಿಕತೆ ತನ್ನ ಒಡಲಲ್ಲಿ ಇರಿಸಿಕೊಂಡಿದೆ. ತಮಗಾಗದವರ ವಿರುದ್ಧ ನಾನಾರೀತಿಯ ಒತ್ತಡ ಹೇರುವುದು, ಚಾರಿತ್ರ್ಯಹನನ ಮಾಡುವುದು, ಬೇರೆಯವರನ್ನು ಎತ್ತಿಕಟ್ಟಿ ಒಬ್ಬಂಟಿ ಮಾಡುವುದು- ಹೀಗೆ ನಾನಾರೀತಿಯ ತಂತ್ರಗಳನ್ನು ಈ ನಿಟ್ಟಿನಲ್ಲಿ ಅನುಸರಿಸಲಾಗುತ್ತದೆ. 


ಅಂದರೆ ನೇರವಾಗಿ ಕಾದಾಡದೆ ಸುತ್ತುಬಳಸಿನ ಭೀರುಗುಣಗಳನ್ನು ರಣತಂತ್ರವಾಗಿ ಅನುಸರಿಸಲಾಗುತ್ತದೆ. ಹೀಗೆ 'ವೀರ'ದ ಜಾಗವನ್ನು 'ಭೀರುತನ' ಆಕ್ರಮಿಸಿಕೊಂಡಿದೆ. 


ಈಗ್ಗೆ ಮೂವತ್ತು-ನಲವತ್ತು ವರ್ಷಗಳ ಹಿಂದೆ ಇದ್ದ ಸಮಾಜವ್ಯವಸ್ಥೆ ಇಂದು ಕಾಣಿಸುವುದಿಲ್ಲ. ಉದಾಹರಣೆಗೆ, ಕಳೆದ ತಲೆಮಾರಿನ ವರೆಗೆ ಮಾನವಿಕ ಶಾಸ್ತ್ರಗಳನ್ನು ಓದುವುದು ಸಂತೋಷದ ಮತ್ತು ಆಕರ್ಷಣೆಯ ವಿಚಾರವಾಗಿತ್ತು. ಸಾಹಿತಿಗಳು, ಕಲಾವಿದರು, ಕವಿಗಳು, ಸಂಸ್ಕೃತಿವೇತ್ತರು ಸಮಾಜಜೀವನದ ಮುನ್ನೆಲೆಯಲ್ಲಿ ಇರುತ್ತಿದ್ದರು. ಅವರು ಸಮಾಜವನ್ನು ಪ್ರಭಾವಿಸುತ್ತಿದ್ದರು. ಕೆನೆಪದರದಿಂದ ಬಂದ ವ್ಯಕ್ತಿಗಳು ಕಲಾವಿಷಯಗಳನ್ನು ಓದಿ ಜೀವನಸಾಧನೆಯ ಉತ್ತುಂಗಕ್ಕೇರುತ್ತಿದ್ದರು. ಸಮಾಜದ ಆಗುಹೋಗುಗಳನ್ನು ಅವರೇ ನಿಯಂತ್ರಿಸುತ್ತಿದ್ದರು. ಸಾಹಿತಿ-ಕಲಾವಿದರಿಗೆ ಸಮಾಜದಲ್ಲಿ ಗೌರವದ ಸ್ಥಾನಮಾನ ಇರುತ್ತಿತ್ತು.


ಇವತ್ತು ಆ ಜಾಗವನ್ನು ವಿಜ್ಞಾನ-ತಂತ್ರಜ್ಞಾನ-ವ್ಯಾಪಾರ-ವಾಣಿಜ್ಯ ವಿಷಯಗಳು ಆಕ್ರಮಿಸಿಕೊಂಡಿವೆ. ಇವುಗಳ ಆಧಿಕ್ಯದಿಂದ  ಕೊಳ್ಳುಬಾಕ ಸಂಸ್ಕೃತಿಯ ಉಪಭೋಗೀ ವ್ಯವಸ್ಥೆಯತ್ತ ದಾಪುಗಾಲು ಇಡುತ್ತಿದ್ದೇವೆ. ಕವಿ ಸಾಹಿತಿಗಳಿಗೆ, ಕಲಾವಿದರಿಗೆ ಇವತ್ತು ತಮ್ಮ ಕೃತಿಗಳನ್ನು ಹೆಮ್ಮೆಯಿಂದ ಅಭಿವ್ಯಕ್ತಿಸಿ, ಸಮಾಜಜೀವನದ ಪ್ರಭಾವೀ ಸ್ಥಾನವನ್ನು ಅಲಂಕರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,  ಅಥವಾ ಸಮಾಜ ಅವರನ್ನು ಹಾಗೆ ಕಡೆದು ರೂಪಿಸುತ್ತಿಲ್ಲ. ತಮ್ಮ ಜಾಗದಿಂದ ಅವರು ಕೆಳಗಿಳಿದುಬಿಟ್ಟಿದ್ದಾರೆ ಅನ್ನಿಸುತ್ತದೆ.


ಬುದ್ಧಿವಂತ ಮಕ್ಕಳು ಇವತ್ತು ಕಲಾವಿಷಯಗಳ ಕಡೆಗೆ ಆಸಕ್ತರಾಗದೆ, ವಿಜ್ಞಾನ-ತಂತ್ರಜ್ಞಾನ ವಿಷಯಗಳನ್ನು ಕಲಿಯಲು ಹೋಗುತ್ತಾರೆ. ಉಳಿದ ಕೆಲವರು ಮಾತ್ರವೇ ಕಲಾವಿಷಯಗಳತ್ತ ಬರುತ್ತಾರೆ ಎಂಬ ವಾತಾವರಣ ಇದೆ. ಅಂದಾಗ ಇವರು ಉತ್ಕೃಷ್ಟತೆ ಗಳಿಸಿ ಸಮಾಜವನ್ನು ಪ್ರಭಾವಿಸುವುದು ಹೇಗೆ?


ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಮೌಲ್ಯವು ಸಮಾಜದ ಮುನ್ನೆಲೆಗೆ ಬರುವುದು, ಅದು ಮರೆಯಾಗುವುದು, ಪಲ್ಲಟವಾಗುವುದು, ಹೊಸದಾದವು ಹುಟ್ಟಿ ಪ್ರಧಾನ ಭೂಮಿಕೆಗೆ ಬರುವುದು ಕುತೂಹಲದ ವಿಷಯವೇ ಸರಿ. ಯಾವುದು ಸರಿ, ಯಾವುದು ತಪ್ಪು ಎಂಬಂತಿಲ್ಲ. ಅವು ಬದಲಾಗುತ್ತಿರುತ್ತವೆ ಎಂಬುದು ಸರಿಯಾದ ಮಾತು. 


ಈಗ್ಗೆ ಕೆಲವರ್ಷಗಳ ಹಿಂದೆ ಕೃಷಿಗೆ ನಮ್ಮಲ್ಲಿ ತುಂಬ ಪ್ರಾಮುಖ್ಯತೆ ಇತ್ತು. 'ಕೃಷಿತೋ ನಾಸ್ತಿ ದುರ್ಭಿಕ್ಷಂ' ಎಂಬ ಮಾತು ಈ ಹಿನ್ನೆಲೆಯಲ್ಲಿ ಬಂದಿದೆ. ಕೃಷಿಗೆ ಸಾಕಷ್ಟು ಭೂಮಿ ಇರುವವರು ಉದ್ಯೋಗಕ್ಕೆ ಹೋಗದೆ ಕೃಷಿಯನ್ನೇ ಮುಂದುವರಿಸುತ್ತಿದ್ದರು. ಅಂತಹ ಪರಿಸ್ಥಿತಿ ಈಗೆಲ್ಲಿದೆ? ಈಗ ವ್ಯಾಪಾರ-ವಾಣಿಜ್ಯ ಮತ್ತು ಹಣಕಾಸು ಪ್ರಧಾನ ಸ್ಥಾನಕ್ಕೆ ಬಂದಿದೆ. 


ಅಜ್ಜ ನೆಟ್ಟ ಆಲದ ಮರಕ್ಕೆ ನೇಣು ಹಾಕಬೇಕೆಂದೇನಿಲ್ಲ. ಬದಲಾವಣೆಗಳು ಸಮಾಜಜೀವನದಲ್ಲಿ ಆಗುತ್ತಾ ಇರುತ್ತವೆ. ಅದು ಅನಿವಾರ್ಯ ಅಲ್ಲವೇ?

Sunday, 24 April 2011

ಪೆರ್ಲರಿಗೆ "ರಂಗಸ್ವರೂಪ ಪ್ರಶಸ್ತಿ"


ಮಂಗಳೂರಿನ "ರಂಗಸ್ವರೂಪ-ರಂಗ ಅಧ್ಯಯನ ಕೇಂದ್ರ"ವು ಸ್ಥಾಪಿಸಿದ "ರಂಗಸ್ವರೂಪ ಪ್ರಶಸ್ತಿ"ಯನ್ನು ಸಾಹಿತ್ಯ-ಕಲೆ-ಸಂಸ್ಕೃತಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಡಾ.ವಸಂತಕುಮಾರ ಪೆರ್ಲ ಅವರಿಗೆ ದಿನಾಂಕ 23-4-2011ರಂದು ರಂಗಸ್ವರೂಪ ಪ್ರತಿಭಾಸಂಗಮ-2011ರ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.




ಸನ್ಮಾನ ಸ್ವೀಕರಿಸಿ ಡಾ.ವಸಂತಕುಮಾರ ಪೆರ್ಲ ಅವರು ಮಾತನಾಡುತ್ತಿರುವುದು. ವೇದಿಕೆಯಲ್ಲಿ 'ರಂಗಸ್ವರೂಪ'ದ ಅಧ್ಯಕ್ಷ ಪ್ರೇಮನಾಥ ಮರ್ಣೆ, ಗೌರವ ಸಲಹೆಗಾರ ಆದಮ್ ಖಾನ್, ಶಿಬಿರ ನಿರ್ದೇಶಕ ರೆಹಮಾನ್, ಶಿಕ್ಷಕಿ ಶ್ರೀಮತಿ ನಂದಿನಿ, ಉದ್ಯಮಿ ಬದ್ರುದ್ದೀನ್ ಕುಳೂರು ಹಾಗೂ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ತಿಪ್ಪೇಶ್ ಅವರನ್ನು ಕಾಣಬಹುದು.



Friday, 22 April 2011

ಕೊಂಕಣ ಸುತ್ತಿ ಮೈಲಾರಕ್ಕೆ

ಸುತ್ತಿ ಬಳಸಿ ಹೇಳುವುದಕ್ಕೆ 'ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಹಾಗೆ' ಎಂಬ ಮಾತನ್ನು ಬಳಸಲಾಗುತ್ತದೆ. ಎತ್ತಣ ಮಾಮರ, ಎತ್ತಣ ಕೋಗಿಲೆ ಎಂದಂತೆ ಕೊಂಕಣ ನಮ್ಮ ಉತ್ತರ ದಿಕ್ಕಿಗಾದರೆ, ಮೈಲಾರಲಿಂಗ ಇರುವುದು ಪೂರ್ವ ದಿಕ್ಕಿನಲ್ಲಿ. ಇಂತಹ ಪೂರ್ವ ದಿಕ್ಕಿನಲ್ಲಿ ನೇರವಾಗಿ ಸಾಗದೆ ಸಮುದ್ರದ ಕಡೆಗೆ ಮೈಚಾಚಿಕೊಂಡಿರುವ ಕೊಂಕಣ ಸೀಮೆಯ ಕಡೆಗೆ ಸಾಗಿದರೆ ವ್ಯರ್ಥವಾಗಿ ಸಮಯ ಹಾಳು ಮತ್ತು ಬರಿದೇ ಓಡಾಟ. ಒಟ್ಟಿನಲ್ಲಿ ಕೊಂಕಣ ಸೀಮೆಯಲ್ಲಿ ಓಡಾಡಬೇಕಾದರೆ ಸುತ್ತಿ ಬಳಸಿ ಹೋಗಬೇಕಾಗುತ್ತದೆ ಎಂಬುದು ಈ ಮಾತಿನ ತಾತ್ಪರ್ಯ. 

ತೆಂಕಣ (ದಕ್ಷಿಣ) ಎಂಬುದು ದಿಕ್ಕನ್ನು ಸೂಚಿಸುವ ಪದವಾದರೆ ಕೊಂಕಣ ಎಂಬುದು ಭೌಗೋಳಿಕ ಸ್ಥಿತಿಗತಿಯನ್ನು ವಿವರಿಸುವ ಶಬ್ದ. ಕೊಂಕು ಎಂದರೆ ಓರೆ ಅಥವಾ ವಕ್ರ ಎಂದರ್ಥ. ಕೊಂಕಣ ಸೀಮೆ ಗುಡ್ಡ ಪರ್ವತಗಳ ಮುಂಚಾಚು, ಸಮುದ್ರದ ಹಿನ್ನೀರು, ಹೊಳೆ-ಹಳ್ಳಗಳು ಸಮುದ್ರ ಸೇರುವ ಕೊರಕಲುಗಳಿಂದಾಗಿ ಕೊಂಕು ಕೊಂಕಾಗಿದೆ. ಆದ್ದರಿಂದಲೇ ಈ ಪ್ರದೇಶ ಕೊಂಕಣಸೀಮೆ ಎಂದು ಹೆಸರಾಗಿದೆ.

ಕೊಂಕಣಿ ಎಂಬುದು ಒಂದು ಜಾತಿ ಸೂಚಕ ಪದ ಅಲ್ಲ. ಯಾರು ಕೊಂಕಣ ಸೀಮೆಯಲ್ಲಿ ವಾಸ ಮಾಡುತ್ತಾರೋ ಅವರೆಲ್ಲರೂ ಕೊಂಕಣಿಗರೇ. ಕಿಣಿ, ಕಾಯ್ಕಿಣಿ, ಕೇಣಿ,  ಕೋಣಿ, ವೆರಣೆ, ರೇವಣ, ಕೆಂಕಣಿ, ನೀಲೇಕಣಿ, ಹಣಕೋಣ, ಕಾಣಕೋಣ ಮೊದಲಾದ ಕಿಂಕಿಣಿಯ ತಾಣಗಳೆಲ್ಲ ಈ ಕೊಂಕಣದ ಸ್ಥಳಗಳೇ ಆಗಿವೆ. ಜೀವನದಲ್ಲಿ ಒಮ್ಮೆಯಾದರೂ ಪ್ರಕೃತಿ ರಮಣೀಯ ಕೊಂಕಣ ಪ್ರಾಂತದಲ್ಲಿ ಪ್ರಯಾಣ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ, ಕೊಂಕಣ ರೈಲು, ಹಡಗು ಪ್ರಯಾಣ ಅಥವಾ ವಿಮಾನ ಮೂಲಕ ಪ್ರಯಾಣ ಮಾಡಿದರೂ ಸಾಕು, ಅರಬ್ಬಿ ಸಮುದ್ರತೀರ ಮತ್ತು ಪಶ್ಚಿಮ ಘಟ್ಟಸಾಲಿನ ಮನೋಹರ ರಮ್ಯತೆ ಮನಸ್ಸನ್ನು ಸೆರೆ ಹಿಡಿಯುತ್ತದೆ. 

ಎಲ್ಲಿ ನೋಡಿದರಲ್ಲಿ ಹಸುರು ಕಾಡು, ತೆಂಗು ಕಂಗಿನ ಮರಗಳು, ಏರು ತಗ್ಗಿನ ತೆವರಿನಂಥ ಜಾಗಗಳಲ್ಲಿ ಪುಟ್ಟ ಪುಟ್ಟ ಬತ್ತದ ಗದ್ದೆಗಳು, ಬಿಳಿ ಹಾಲಿನಂಥ ನೊರೆನೀರ ಹರಿಸುವ ನೀರಿನ ಝರಿಗಳು. ಇಲ್ಲಿರುವಷ್ಟು 'ಬೀಚ್'ಗಳು, ದೇವಸ್ಥಾನಗಳು, ಜಲಪಾತಗಳು, ಕಾಡೊಳಗಿನ ಪ್ರವಾಸೀ ಧಾಮಗಳು, ಮುಗಿಲು ಮುಟ್ಟುವ ಪರ್ವತಾಗ್ರಗಳ ಚಾರಣ ತಾಣಗಳು ಬೇರೆಲ್ಲೂ ಇರಲಾರವು. 

ಹಿಂದಿನ ಕಾಲದಲ್ಲಿ ಸೇತುವೆಗಳಾಗುವ ಮೊದಲು ಕೊಂಕಣ ಸುತ್ತುವುದು ಪ್ರಯಾಸದ ಕೆಲಸವಾಗಿತ್ತಾದರೂ ಇಂದು ಅದೊಂದು ಸುಖಾನುಭವದ ಮೋಜು  ಎನ್ನುವುದರಲ್ಲಿ ಎರಡು ಮಾತಿಲ್ಲ.  ಪ್ರವಾಸ ಮಾಡುವವರಿಗೆ ಕೊಂಕಣ ಪ್ರದೇಶವೆಂಬುದು ರಮ್ಯ ತಾಣವೇ ಸರಿ. ಕಳೆದ ಹತ್ತು ವರ್ಷಗಳಿಂದ ಈ ಭಾಗದಲ್ಲಿ ನಾನು ಹತ್ತಾರು ಚಾರಣಪ್ರವಾಸ ಮಾಡಿದ್ದೇನೆ. ಒಂದೊಂದೂ ರಮ್ಯಾದ್ಭುತ. ಇಲ್ಲಿನ ಕಾಡು ನೋಡುತ್ತಿದ್ದರೆ ಪಾಡು ಹಾಡಾಗುತ್ತದೆ. ಕಷ್ಟ ಮರೆತು ಸುಖ ಮೂಡುತ್ತದೆ.

Thursday, 21 April 2011

ಆಭರಣ ಸಂಹಿತೆ


ಆಭರಣ ತೊಡಲು ಹಿಂದಿನವರು ಶಾಸ್ತ್ರವನ್ನು ವಿಧಿಸಿದ್ದಾರೆ. ಚಿನ್ನದ ಆಭರಣಗಳನ್ನು ಸೊಂಟದಿಂದ ಮೇಲ್ಭಾಗದಲ್ಲಿ ಧರಿಸಬೇಕು ಮತ್ತು ಬೆಳ್ಳಿಯ ಆಭರಣಗಳನ್ನು ಸೊಂಟದಿಂದ ಕೆಳಗೆ ಧರಿಸಬೇಕು. ಕಾರಣ ಇಷ್ಟೆ : ಆಭರಣ ಸೌಂದರ್ಯವರ್ಧಕ. ಅದರಲ್ಲೂ ಚಿನ್ನವು ಶ್ರೇಷ್ಠವಾದ ಲೋಹ; ಕುಸುರಿ ಕೆಲಸಕ್ಕೆ ಅವಕಾಶ ಹೆಚ್ಚು ಮತ್ತು ಅದು ದುಬಾರಿಯಾದ ಲೋಹ ಕೂಡ. ಸೊಂಟದಿಂದ  ಕೆಳಗೆ ಚಿನ್ನದ ಆಭರಣ ಧರಿಸಿದರೆ ಸೌಂದರ್ಯ ಹೆಚ್ಚಾಗುವುದಿಲ್ಲ (ಅಥವಾ  ಹೆಚ್ಚಾದದ್ದು  ಯಾರಿಗೂ ಕಾಣುವುದಿಲ್ಲ!). ಒಂದು ವೇಳೆ ಬೆಲೆಬಾಳುವ ಆಭರಣ ಕಳೆದುಹೋದರೆ ನಮ್ಮ ಗಮನಕ್ಕೆ ಬರುವ ಸಂಭವ ಕಡಿಮೆ. ಅಲ್ಲದೇ 'ಶ್ರೇಷ್ಠತ್ವ' ಎಂಬುದು ಸೊಂಟದಿಂದ ಕೆಳಗೆ ಇಳಿಯಬಾರದು ಎಂಬುದು ಸಾಂಕೇತಿಕತೆ. 'ಶ್ರೇಷ್ಠತ್ವ'ಕ್ಕೆ ಉನ್ನತ ಸ್ಥಾನ ನೀಡಬೇಕು.


ಹೆಣ್ಣನ್ನು ಗಂಡು ಕಣ್ಣೆತ್ತಿ ನೋಡುವುದು ಸಭ್ಯತೆಯ ಲಕ್ಷಣವಲ್ಲ. ಆಕೆ ಸೀರೆ ಉಟ್ಟಿರುತ್ತಾಳೆ. ನಡೆಯುವಾಗ ಪಾದ ಮಾತ್ರ ಕಾಣುತ್ತದೆ. ಆಗ ಕಾಲುಬೆರಳಲ್ಲಿ ಬೆಳ್ಳಿಯ ಕಾಲುಂಗುರ ಧರಿಸಿದ್ದರೆ( ಚಿನ್ನದ ಕಾಲುಂಗುರ ಯಾರೂ ಧರಿಸುವುದಿಲ್ಲ!) ಆಕೆಗೆ ಮದುವೆಯಾಗಿದೆ ಎಂಬುದು ಸಿದ್ಧ. ಪವಿತ್ರಬೆರಳಿಗೆ ಬೆಳ್ಳಿಯ ಕಾಲುಂಗುರ ಧರಿಸುವ ಪದ್ಧತಿ ಬಂದುದು ಈ ಕಾರಣಕ್ಕೆ. ಕಾಲಿಗೆ ಬೆಳ್ಳಿಯ ಕಾಲ್ಗೆಜ್ಜೆ ತೊಡುವುದು ಸೌಂದರ್ಯವೃದ್ಧಿಯ ಒಂದು ಕಾರಣಕ್ಕಾದರೆ, ನಡೆದುಕೊಂಡು ಬರುವಾಗ ಉಂಟಾಗುವ ಕಾಲ್ಗೆಜ್ಜೆಯ ನಾದವು ಮಹಿಳೆಯ ಆಗಮನವನ್ನು ಸೂಚಿಸುತ್ತದೆ.


ಇತ್ತೀಚೆಗೆ ಕೆಲವು ತರುಣಿಯರು ಕಾಲಿಗೆ ಚಿನ್ನದ ಕಾಲ್ಗೆಜ್ಜೆ ತೊಟ್ಟುಕೊಳ್ಳುವುದನ್ನು  ಕಾಣಬಹುದು. ಕೆಲವರ ಕಾಲಿನಲ್ಲಿ ಚಿನ್ನದ ಕಾಲುಂಗುರ ಇರುವುದನ್ನೂ ಗಮನಿಸಬಹುದು. ಇದು ಸರಿಯಲ್ಲ; ಚಿನ್ನದ ಆಭರಣಗಳನ್ನು ಸೊಂಟದಿಂದ ಕೆಳಗೆ ಧರಿಸುವುದು ಶಾಸ್ತ್ರ ಸಮ್ಮತವಲ್ಲ. ಶ್ರೀಮಂತಿಕೆಯ ಅಹಮಿಕೆ, ಪ್ರದರ್ಶನ ಚಾಪಲ್ಯ, ತಿಳಿವಳಿಕೆಯ ಕೊರತೆ  ಅಥವಾ 'ಶ್ರೇಷ್ಠತ್ವವನ್ನು ಕಾಲಿನಷ್ಟು ಕೆಳಗೆ' ತಳ್ಳುವ ಮನೋಭಾವ ಅದರ ಹಿಂದೆ ಇರಬಹುದು.


ದೇವಸ್ಥಾನದ ಕಲಶವನ್ನು ಗೋಪುರದ ಬದಲು ಮೆಟ್ಟಲಿಗೆ ಯಾರಾದರೂ ಇಡುತ್ತಾರೆಯೆ?

Sunday, 17 April 2011

ಕವನ ನನ್ನ ಇಷ್ಟದ ಪ್ರಕಾರ. ಕಳೆದ ಮೂವತ್ತೈದು ವರ್ಷಗಳಿಂದಲೂ ಕವನಗಳನ್ನು ಬರೆಯುತ್ತಾ ಬಂದಿದ್ದೇನೆ. ಆಯ್ದ ಹಲವು ಕವನಗಳು ಐದು ಸಂಕಲನಗಳಲ್ಲಿ ಮುದ್ರಣವಾಗಿವೆ. ನನ್ನ ಬ್ಲಾಗ್ ಓದುಗರಿಗಾಗಿ ಇವತ್ತು ಇನ್ನೊಂದು ಕವನವನ್ನು ನೀಡುತ್ತಿದ್ದೇನೆ. ಇದು ಯಾವುದೇ ಸಂಕಲನದಲ್ಲಿ ಸೇರಿಲ್ಲ.


ಈ ಗಂಗೆಯಲ್ಲಿ

ಈ ಗಂಗೆಯಲ್ಲಿ
ಕಿರು ದೋಣಿಯಲ್ಲಿ
ಹೀಗೆ ತೇಲುತ್ತಿದ್ದರೆ-
ಅಶ್ವತ್ಥ ಎಲೆಯಲ್ಲಿ ಮಲಗಿದ
ಯುಗದಾದಿಯ ಶಿಶುವಿನ ಹಾಗೆ
ಕಾಣುವುದು ಕಣ್ಣತುಂಬ ಬಯಲಬೆಡಗು!

ತೀಡುವುದು ಯೋಜನಗಂಧ
ಸೌಗಂಧಿಕದ ಹಾಗೆ
ಅಡರುವುದು ಮಂಜು 
ತಾಡುವುದು ಕಿರು ಅಲೆಅಲೆಯಂತೆ
ಶಿವಿನ ಜಟೆಯಿಂದ ನೆಗೆದ ಭಗೀರಥ ಜಲಧಿ
ತೊಳೆಯುವುದು ಮನಸ್ಸನ್ನು
ಪರಮಪಾವನೆ ಹರಿಯುತ್ತಿದೆ
ಯುಗಾಂತರದಿಂದ ಈ ನದಿ
ಪಯೋನಿಧಿ

ಗಂಗೆಯೊಡಲಲ್ಲಿ ಹೀಗೆ ತೇಲುತ್ತಿದ್ದರೆ
ಮೇಲೆ ಕಾಣುವುದು ನಿಗಿನಿಗಿ ಉರಿವ 
ಸೂರ್ಯಮಂಡಲ
ಹಿತವಾಗಿ ಬೀಸುವುದು ತಂಗಾಳಿ

ಆಗ ಜಗದ ಜಂಜಡ
ಕಷ್ಟನಷ್ಟಗಳೆಲ್ಲ ಮಂಜಿನಬೆಟ್ಟ-
ದಂತೆ ಕರಗಿ ನೀರಾಗಿ ಹರಿಯುವುದು
ಪಾಪಗಳೆಲ್ಲ ಕರಗುವುದು
ಸ್ವರ್ಗವೇ ಧರೆಗಿಳಿಯುವುದು

ಹೀಗೆ ನೆಲಮುಗಿಲು ಬೆಸೆಯುವ ಈ ಗಂಗೆ
ನಮಗೆಲ್ಲ ಹಿರೇಗಂಗೆ
ಉತ್ತರದಲ್ಲಿ ಉತ್ತುಂಗೆ.

Saturday, 16 April 2011

ದಂಡಯಾತ್ರೆ

ದಂಡಯಾತ್ರೆ ಮಾಡುತ್ತ ಮಾಡುತ್ತ
ಮುಂದೊತ್ತಿ ಬಂದ ಅಲೆಗ್ಸಾಂಡರ
ಕ್ಷಣ ಹೊತ್ತು ಚಕಿತನಾಗಿ ನಿಂತ

ಹಿಂದೆ ಭೋರ್ಗರೆಯುವ ಸೈನ್ಯ
ಮುಂದೆ ಭೋ-
ರೆಂದು ತಣ್ಣಗೆ ಹರಿಯುವ ಸಿಂಧು

ಹೆಜ್ಜೆ ಹಿಂದಿಡದ ರಣೋತ್ಸಾಹಿ
ಸೈನ್ಯಕ್ಕೆ ಕಟ್ಟಾಙ್ಞೆ ವಿಧಿಸಿದ: 
ಮುಂದೊತ್ತಿ ಮುಂದೊತ್ತಿ
ಆಚೆ ಕಡೆಗಿದೆ ನಮ್ಮ ನೆತ್ತಿ

ಯುದ್ಧನಿಷ್ಣಾತ ಸೈನ್ಯ
ಸೋತು ಸುಣ್ಣ
ಸಣ್ಣನೆಯ ಸೊಲ್ಲು:
ನಾನೊಲ್ಲೆ ನಾನೊಲ್ಲೆ

ಎದುರಿಗೆ ಸಪ್ತಸಿಂಧೂ
ಕಣ್ಣಾಚೆ ನೆಟ್ಟ ಅಲೆಗ್ಸಾಂಡರನ ಕಾಲಿಗೆ
ಅಪ್ಪಳಿಸುತ್ತಿತ್ತು ಗೆಲುವಿನಲೆ
ಅಲೆಅಲೆಯಾಗಿ

ಅಲೆಗ್ಸಾಂಡರ ಅಬ್ಬರಿಸಿದ
ನಾನಾರು ಗೊತ್ತೇ
ಸೋಲೇ ಅರಿಯದ ಸರದಾರ
ಜಗದೇಕವೀರ!

ಅಲೆ ತಣ್ಣಗೆ ಹೇಳಿತು:
ಇರಬಹುದು ವೀರ
ಈಗಿಲ್ಲಿ ಬರೆ ನಿನ್ನ ಹೆಸರ
ಆಮೇಲೆ ಹೇಳುವೆ
ನೀನೇ ಲೋಕೋತ್ತರ ವೀರ!

ಅಲೆಗ್ಸಾಂಡರ ನಿರುತ್ತರ
ಅವುಡುಗಚ್ಚಿ ಹಿಂದೆ ತಿರುಗಿದ-
ರೆ, ತಿರುಗಿ ನಿಂತ ಸೈನ್ಯ
ಅಲೆಗ್ಸಾಂಡರನಿಗೆ ಥರಥರ ಜ್ವರ.